ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 15 ರಂದು ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಬಹಳ ಪ್ರಮುಖವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ಅಜೆಂಡಾಗಳನ್ನು ಇಟ್ಟುಕೊಳ್ಳಲಾಗಿತ್ತು, ಅದೆಂದರೆ- ನೀರಿನ ನಿರ್ವಹಣೆ, ಕೃಷಿ ಸುಧಾರಣೆಗಳು, ಎಡಪಂಥೀಯ ಉಗ್ರವಾದ ಪೀಡಿತ ಜಿಲ್ಲೆಗಳಲ್ಲಿನ ಭದ್ರತೆ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆ ಕಾರ್ಯಕ್ರಮದ ಸಾಧನೆಗಳು / ಸವಾಲುಗಳು.
ಕಳೆದ ಒಂದು ವರ್ಷದಲ್ಲಿ ಅನೇಕ ಜಿಲ್ಲೆಗಳು ಭಾರಿ ಪರಿವರ್ತನೆ ಕಂಡಿವೆ ಎಂಬ ಅಂಶವನ್ನು ಸಭೆಯಲ್ಲಿ ಮೋದಿಯವರು ಉಲ್ಲೇಖ ಮಾಡಿದ್ದರು. ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಬದಲಾವಣೆಯ ಹರಿಕಾರ ( ‘ಚಾಂಪಿಯನ್ಸ್ ಆಫ್ ಚೇಂಜ್’) ರಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡ ಸ್ಥಳೀಯ ತಂಡಗಳ ಕಾರ್ಯವನ್ನು ಅವರು ಬಹಳವಾಗಿ ಶ್ಲಾಘಿಸಿದ್ದರು.
ಪ್ರಧಾನ ಮೋದಿಯವರು ಎರಡನೇ ಅವಧಿಯ ಸರ್ಕಾರದ ಮೊದಲ ಸಭೆಗೆ ನೀತಿ ಆಯೋಗವು ಈ ಐದು ಅಜೆಂಡಾಗಳನ್ನು ಕೈಗೆತ್ತಿಕೊಂಡ ಹಿಂದಿನ ವಿಶೇಷತೆ ಏನು ಎಂದರೆ ತಳಮಟ್ಟದಿಂದಲೇ ದೇಶದಲ್ಲಿ ಸುಧಾರಣೆಯನ್ನು ತರುವುದು. ಪಿಎಂ ಆಸ್ಪಿರೇಷನಲ್ ಡಿಸ್ಟ್ರಿಕ್ಟ್ (ಪಿಎಂಎಡಿ-ಮಹತ್ವಾಕಾಂಕ್ಷೆಯ ಜಿಲ್ಲೆ ಯೋಜನೆ) ಪ್ರಾಜೆಕ್ಟ್ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಹಿಂದುಳಿದ ಜಿಲ್ಲೆಗಳನ್ನು ಮೇಲಕ್ಕೆತ್ತುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಕೊಅಪರೇಟಿವ್ ಫೆಡರಲಿಸಂ ಅನ್ನು ನಿಜವಾದ ಅರ್ಥದಲ್ಲಿ ಮತ್ತು ಮನೋಭಾವದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಈ ಯೋಜನೆ ಮಾಡಲಿದೆ. ತಳಮಟ್ಟದಲ್ಲಿ ಬದಲಾವಣೆಯನ್ನು ತರಲು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳ ಸಮನ್ವಯ ಅಗತ್ಯವಾಗಿದ್ದು, ಈ ಯೋಜನೆಯು ಸಮನ್ವಯವನ್ನು ತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ.
ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮೂಲಸೌಕರ್ಯ, ಆರೋಗ್ಯ, ಪೋಷಣೆ, ಕೃಷಿ ಸಂಪನ್ಮೂಲಗಳು, ಹಣಕಾಸು ಮುಂತಾದ ಅಭಿವೃದ್ಧಿಗಳ ಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಭಾರತದ 115 ಅತ್ಯಂತ ಹಿಂದುಳಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆಯುಕ್ತರ ಸಭೆಯಲ್ಲಿ ಪ್ರಧಾನಿಮೋದಿ ಅವರು ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ಸಭೆಯು ಕಳೆದ ಜನವರಿಯಲ್ಲಿ ನಡೆದಿತ್ತು.
ಪ್ರಧಾನ ಮಂತ್ರಿಯವರು ಈ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ರಾಜಕೀಯವಾಗಿ ಸರಿಯಾದ ಪರಿಭಾಷೆಯನ್ನು ಬಳಸುವ ತಮ್ಮ ಸರ್ಕಾರದ ವಿಧಾನಕ್ಕೆ ಅನುಗುಣವಾಗಿ ಹಿಂದುಳಿದ ಜಿಲ್ಲೆಗಳಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ಕರೆಯುವ ಅಗತ್ಯವನ್ನು ಪ್ರತಿಪಾದಿಸಿದರು. (ಉದಾಹರಣೆಗೆ, ವಿಕಲಾಂಗ ಈಗ ಅಧಿಕೃತವಾಗಿ ದಿವ್ಯಾಂಗ ಆಗಿದೆ) ಕೆಳಗಿನ ಮಟ್ಟದಲ್ಲಿ ಇರುವ ಜಿಲ್ಲೆಗಳ ಬಗೆಗಿನ ಮನಸ್ಥಿತಿಯನ್ನು ಬದಲಿಸುವ ಸಲುವಾಗಿ “ಹಿಂದುಳಿದ” ಎಂಬ ಪದವನ್ನು ಬಳಸುವ ಬದಲಾಗಿ “ಮಹತ್ವಾಕಾಂಕ್ಷೆಯ” ಎಂದು ಬಳಸುವ ಅಗತ್ಯವನ್ನು ಒತ್ತಿ ಅವರು ಹೇಳಿದರು. ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಆಯ್ಕೆ ಮಾಡಿದ ನಂತರ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಕೃಷಿ ಎಂಬ ಐದು ವಿಷಯಗಳ ಅಡಿಯಲ್ಲಿ 49 ಕಾರ್ಯಕ್ಷಮತೆ ಸೂಚಕಗಳನ್ನು ಆಧರಿಸಿ ಇವುಗಳಿಗೆ ಬೇಸ್ಲೈನ್ ಸ್ಕೋರ್ಗಳನ್ನು ನೀಡಲಾಯಿತು. ಈ ಜಿಲ್ಲೆಗಳ ಜಲ ಸಂಪನ್ಮೂಲಗಳು, ಮೂಲ ಮೂಲಸೌಕರ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಹಣಕಾಸು ಸೇರ್ಪಡೆಗಳನ್ನೂ ಬೇಸ್ಲೈನ್ ಸ್ಕೋರ್ ನೀಡುವ ವೇಳೆ ಪರಿಗಣನೆಗೆ ತೆಗೆದುಕೊಳ್ಳಲಾಯಿತು.
ಏಪ್ರಿಲ್ ತಿಂಗಳಲ್ಲಿ, ಜಿಲ್ಲೆಗಳು ಡಾಟಾವನ್ನು ನಮೂದಿಸಲು ಪ್ರಾರಂಭಿಸಿದವು. ಮೇ ತಿಂಗಳಲ್ಲಿ, ಬೇಸ್ಲೈನ್ ಸ್ಕೋರ್ಗಳನ್ನು ‘ಚಾಂಪಿಯನ್ಸ್ ಆಫ್ ಚೇಂಜ್’ ರಿಯಲ್ ಟೈಮ್ ಮಾನಿಟರಿಂಗ್ ಆನ್ಲೈನ್ ಡ್ಯಾಶ್ಬೋರ್ಡ್ನಲ್ಲಿ ಇರಿಸಲಾಯಿತು. ಜೂನ್ ತಿಂಗಳಲ್ಲಿ ಬೇಸ್ ಸ್ಕೋರ್ ಘೋಷಿಸಲಾಯಿತು. ಜೂನ್ನಲ್ಲಿ, ಮೊದಲ ಡೆಲ್ಟಾ ರ್ಯಾಂಕಿಂಗ್ ಅನ್ನು ಪ್ರಕಟಿಸಲಾಯಿತು. ಎರಡನೇ ಡೆಲ್ಟಾ ರ್ಯಾಂಕಿಂಗ್ ಅಕ್ಟೋಬರ್ನಲ್ಲಿ ಹೊರಬರಲಿದೆ.
ಈ ಕಾರ್ಯಕ್ರಮ ಸಾಕ್ಷ್ಯ ಆಧಾರಿತವಾದ್ದರಿಂದ, ಅಧಿಕೃತ ಮತ್ತು ವಿಶ್ವಾಸಾರ್ಹ ಡಾಟಾ ಲಭ್ಯತೆಯು ಅದರ ಯಶಸ್ಸಿನ ಕೇಂದ್ರವಾಗಲಿದೆ. ಅನೇಕ ಸೂಚಕಗಳ ಬಗ್ಗೆ ಡಾಟಾವನ್ನು ನಮೂದಿಸಲು ಜಿಲ್ಲೆಗಳನ್ನು ಅವಲಂಬಿಸಬೇಕಾದರೂ, ಕೆಲವು ಪ್ರದೇಶಗಳನ್ನು ಪ್ರತಿ ಕೆಲವು ವರ್ಷಗಳಿಗೊಮ್ಮೆ ಸಮೀಕ್ಷೆ ಮಾಡಲಾಗುತ್ತದೆ. ಈ ನಿರ್ದಿಷ್ಟ ಪಾಯಿಂಟರ್ಗಳ ಬಗ್ಗೆ ನಿಯಮಿತ ಮತ್ತು ಸಮಯೋಚಿತ ಡಾಟಾವನ್ನು ಪಡೆಯಲು, ಸರ್ಕಾರವು ಟಾಟಾ ಟ್ರಸ್ಟ್ಗಳು, ಪಿರಮಾಲ್ ಫೌಂಡೇಶನ್ ಮತ್ತು ಐಡಿನ್ಸೈಟ್ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಇವುಗಳು ಜಿಲ್ಲಾಡಳಿತವು ನಮೂದಿಸಿದ ಡಾಟಾದ ಬಗ್ಗೆ ಥರ್ಡ್ ಪಾರ್ಟ್ ಮೌಲ್ಯಮಾಪನಕ್ಕೆ ಸಹಕರಿಸುತ್ತವೆ. ಇದು ‘ಡ್ಯಾಶ್ಬೋರ್ಡ್ಗೆ ನಮೂದಿಸಿದ ಡೇಟಾದ ವಿಶ್ವಾಸಾರ್ಹತೆ ಮತ್ತು ಸಮಗ್ರತೆಯನ್ನು’ ಸ್ಥಾಪಿಸಲು ಸಹಾಯ ಮಾಡುತ್ತದೆ. ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ಜಿಲ್ಲಾ ಆಡಳಿತಗಳಿಗೆ ‘ತಮ್ಮದೇ ಆದ ದತ್ತಾಂಶ ಸಂಗ್ರಹಣೆ ಮತ್ತು ಮೌಲ್ಯಮಾಪನ ತಂತ್ರಗಳನ್ನು ಸುಧಾರಿಸಲು ಅಗತ್ಯ ಕೌಶಲ್ಯ ಮತ್ತು ಅನುಭವವನ್ನು ಪಡೆಯಲು’ ಸಹಾಯ ಮಾಡುತ್ತದೆ.
ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರ ನಡುವಿನ ಸಮನ್ವಯದಲ್ಲಿನ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಜಂಟಿ ಕಾರ್ಯದರ್ಶಿ / ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಈ ಜಿಲ್ಲೆಗಳ ‘ರಕ್ಷಕರಾಗಿ’ ನೇಮಕ ಮಾಡಿದೆ, ಅವರು ತಮ್ಮ ನಾಗರಿಕ ಸೇವಾ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಾರೆ. ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮತ್ತು ಇತರ ಹಲವು ಇಲಾಖೆಗಳ ಒಳಗೊಳ್ಳುವಿಕೆಯಿಂದಾಗಿ ಜಿಲ್ಲಾ ಮಟ್ಟದಲ್ಲಿ ಮತ್ತು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ
ವಿಶೇಷವಾಗಿ, ಕೇವಲ ಒಂದು ವರ್ಷದಲ್ಲಿ ಈ ಜಿಲ್ಲೆಗಳ ಸಾಧನೆಗಳು ಶ್ಲಾಘನೀಯವಾಗಿದೆ. 101 ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ, 97 ಜಿಲ್ಲೆಗಳು ತಮ್ಮ ಅಂಕಗಳನ್ನು ಶೇ.10ರಷ್ಟು ಸುಧಾರಿಸಿವೆ, 67 ಜಿಲ್ಲೆಗಳು ಶೇ.15ರಷ್ಟು ಅಂಕಗಳನ್ನು ಸುಧಾರಿಸಿಕೊಂಡಿವೆ ಮತ್ತು 27 ಜಿಲ್ಲೆಗಳು ಶೇಕಡಾ 20 ಕ್ಕಿಂತ ಹೆಚ್ಚು ಅಂಕಗಳನ್ನು ಸುಧಾರಿಸಿವೆ.
ನಾಗಾಲ್ಯಾಂಡ್ನ ಕಫೈರ್ ರ್ಯಾಂಕಿಂಗ್ನಲ್ಲಿ ಕೆಳಗಿನ ಸ್ಥಾನದಲ್ಲಿದೆ ಮತ್ತು ಇದು ಶೇ. 5.16ರಷ್ಟು ಅಂಕಗಳ ಸುಧಾರಣೆಯನ್ನು ಕಂಡಿದೆ. ಉತ್ತರಪ್ರದೇಶದ ಬಲರಾಂಪುರ ಪ್ರಸ್ತುತ ಉನ್ನತ ಪ್ರದರ್ಶನವನ್ನು ನೀಡುತ್ತಿದ್ದು, ಅದು ತನ್ನ ಪ್ರದರ್ಶನವನ್ನು ಶೇ.29.41 ರಿಂದ 58.9 ಕ್ಕೆ ಸುಧಾರಿಸಿದೆ, ಇದು ಕೇವಲ ಒಂದು ವರ್ಷದಲ್ಲಿ ಶೇಕಡಾ 29.49 ರಷ್ಟು ಸ್ಪೂರ್ತಿದಾಯಕ ಸುಧಾರಣೆಯಾಗಿದೆ. . ಇದರ ರ್ಯಾಂಕಿಂಗ್ ಕಳೆದ ವರ್ಷದ ಮೇ ತಿಂಗಳಲ್ಲಿ 94 ಆಗಿತ್ತು, ಈಗ ಅದು 19 ಆಗಿದೆ.
ಪೂರ್ವ ಭಾರತವು ದೇಶದ ಇತರ ಭಾಗಗಳಿಗಿಂತ ತುಲನಾತ್ಮಕವಾಗಿ ಹೆಚ್ಚು ಬಡತನದಿಂದ ಕೂಡಿರುವುದರಿಂದ, ಇದು ಹಿಂದುಳಿದ ಅಥವಾ “ಮಹತ್ವಾಕಾಂಕ್ಷೆಯ” ಜಿಲ್ಲೆಗಳ ಪೈಕಿ ಗರಿಷ್ಠ ಪಾಲನ್ನು ಹೊಂದಿದೆ. ಒಂದು ರೀತಿಯಲ್ಲಿ, ಇದು ಸರ್ಕಾರಕ್ಕೆ ತನ್ನ ಪ್ರಯತ್ನಗಳನ್ನು ಉತ್ತಮ ರೀತಿಯಲ್ಲಿ ಕೇಂದ್ರೀಕರಿಸಲು ಸಹಾಯ ಮಾಡಿದೆ. ಮತ್ತೊಂದು ಪ್ರಮುಖ ಅಂಶವೆಂದರೆ, ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ (ಇದು ಈ ಯೋಜನೆಯ ಭಾಗವಾಗಲು ನಿರಾಕರಿಸಿದೆ)ಪೂರ್ವ ಭಾರತದ ಬಹುತೇಕ ರಾಜ್ಯಗಳು ಈಗ ಬಿಜೆಪಿಯ ಸರ್ಕಾರಗಳನ್ನು ಹೊಂದಿದೆ.
101 ಜಿಲ್ಲೆಗಳ ಪೈಕಿ, ಜಾರ್ಖಂಡ್ 19 ಜಿಲ್ಲೆಗಳನ್ನು ಹೊಂದಿದೆ. ಈ ಮೂಲಕ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪ್ರಮಾಣದಲ್ಲಿ ಹೆಚ್ಚಿನವನ್ನು ಹೊಂದಿದೆ. ಎರಡನ್ನು ಹೊರತುಪಡಿಸಿ, ಎಲ್ಲಾ ಜಿಲ್ಲೆಗಳು ತಮ್ಮ ಅಂಕಗಳನ್ನು ಶೇಕಡಾ 15 ಕ್ಕಿಂತ ಹೆಚ್ಚಿಸಿವೆ. ಸಿಮ್ಡೆಗಾ ತನ್ನ ಸ್ಕೋರ್ ಅನ್ನು ಶೇ.27 ಅಂಕಗಳಿಗೆ ಹೆಚ್ಚಿಸಿ, 2018 ರ ಮೇನಲ್ಲಿ 74 ರಿಂದ 2019 ರ ಮೇನಲ್ಲಿ ಟಾಪ್ 10 ಕ್ಕೆ ಏರಿದೆ. ಗುಮ್ಲಾ ಈ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದ್ದು, ಶೇ. 8.48 ರಷ್ಟು ಸುಧಾರಣೆಯನ್ನು ಕಂಡಿದೆ.
ಇನ್ನು 101 ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ 13 ಜಿಲ್ಲೆಗಳನ್ನು ಹೊಂದಿದೆ ಬಿಹಾರ. ಅದರಲ್ಲಿ ಏಳು ತಮ್ಮ ರ್ಯಾಕಿಂಗ್ಗಳನ್ನು ಸುಧಾರಿಸಿದೆ. ಒಂಬತ್ತು ಜಿಲ್ಲೆಗಳು ತಮ್ಮ ಅಂಕಗಳನ್ನು ಶೇ.15ಕ್ಕಿಂತ ಹೆಚ್ಚು ಅಂಕಗಳಿಂದ ಸುಧಾರಿಸಿದೆ ಮತ್ತು ಇವೆಲ್ಲವೂ ಕನಿಷ್ಠ 10 ಶೇಕಡಾ ಸುಧಾರಣೆಯನ್ನು ದಾಖಲಿಸಿದೆ.
ಇತರ ರಾಜ್ಯಗಳಂತೆ ಛತ್ತೀಸ್ಗಢ ಉತ್ತಮ ಪ್ರದರ್ಶನವನ್ನು ನೀಡಿಲ್ಲ. 10 ಜಿಲ್ಲೆಗಳಲ್ಲಿ, ಯಾವುದೂ ಶೇಕಡಾ 20 ಕ್ಕಿಂತ ಹೆಚ್ಚು ಸುಧಾರಣೆಯನ್ನು ತೋರಿಸಿಲ್ಲ ಮತ್ತು ಕೇವಲ ಎರಡು ಮಾತ್ರ ತಮ್ಮ ಶ್ರೇಣಿಯನ್ನು ಸುಧಾರಿಸಿದೆ, ಅದೂ ಕೆಲವೇ ಸ್ಥಾನಗಳಿಂದ. ಇನ್ನೂ, ಪ್ರತಿ ಜಿಲ್ಲೆಯು ತನ್ನ ಸ್ಕೋರ್ ಅನ್ನು ಶೇಕಡಾ 10 ಕ್ಕಿಂತ ಹೆಚ್ಚು ಸುಧಾರಿಸಿದೆ. ಆದ್ದರಿಂದ, ಹೊರಗಿನವರು ಇಲ್ಲದಿದ್ದರೂ, ಮೇಲಿನಿಂದ ಅಥವಾ ಕೆಳಗಿನಿಂದ, ಸರಾಸರಿ, ಅದು ಯೋಗ್ಯವಾದ ಪ್ರಗತಿಯನ್ನು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ತಲಾ ಎಂಟು ಜಿಲ್ಲೆಗಳನ್ನು ಹೊಂದಿವೆ. ಯುಪಿಯಲ್ಲಿ, ಏಳು ತಮ್ಮ ಶ್ರೇಣಿಯನ್ನು ಸುಧಾರಿಸಿಕೊಂಡಿವೆ, ಅವರಲ್ಲಿ ನಾಲ್ಕು 25 ಕ್ಕೂ ಹೆಚ್ಚು ಅಂಕಗಳಿಂದ. ಉತ್ತಮ ಪ್ರದರ್ಶನ ನೀಡಿದ ಜಿಲ್ಲೆಯೆಂದರೆ ಬಲರಾಂಪುರ, ಶೇಕಡಾ 29.49 ರಷ್ಟು ಸ್ಕೋರ್ (75 ಸ್ಥಾನಗಳಿಂದ ಸುಧಾರಿತ ಶ್ರೇಣಿ)ದಾಖಲಿಸಿದೆ ಮತ್ತು ಚಂಡೌಲಿ ಶೇ.17.9 ರಷ್ಟು ಕಡಿಮೆ ಪ್ರದರ್ಶನವನ್ನು ದಾಖಲಿಸಿದೆ.
ಮಧ್ಯಪ್ರದೇಶದಲ್ಲಿ, ಸಿಂಗ್ರೌಲಿ ಜಿಲ್ಲೆಯು ಶೇಕಡಾ 26 ರಷ್ಟು ಸುಧಾರಿತ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಗುನಾ ಎಲ್ಲಕ್ಕಿಂತ ಕನಿಷ್ಠ ಪ್ರದರ್ಶನವನ್ನು ತೋರಿಸಿದೆ ಆದರೆ ಅದರ ಸ್ಕೋರ್ ಅನ್ನು ಶೇಕಡಾ 11.93 ರಷ್ಟು ಸುಧಾರಿಸುವಲ್ಲಿ ಯಶಸ್ವಿಯಾಗಿದೆ.
ಕೊನೆಯದಾಗಿ, 101ರ ಪಟ್ಟಿಯಲ್ಲಿ ಕೆಳಗಿನ ಐದು ಅಥವಾ ಹೆಚ್ಚಿನ ಜಿಲ್ಲೆಗಳನ್ನು ಹೊಂದಿರುವ ಏಕೈಕ ರಾಜ್ಯ ರಾಜಸ್ಥಾನ. ಜೈಸಲ್ಮೇರ್ ಶೇ.24.75 ಪಾಯಿಂಟ್ಗಳ ಹೆಚ್ಚಿನ ಸುಧಾರಣೆಯನ್ನು ದಾಖಲಿಸಿದರೆ, ಧೋಲ್ಪುರ್ ತನ್ನ ಸ್ಕೋರ್ಗೆ ಕನಿಷ್ಠ ಶೇ.13 ಅನ್ನು ಸೇರಿಸಿದೆ.
ಸಂಯೋಜಿತ ಸ್ಕೋರ್ಗಳು ಆ ಪ್ರದೇಶದ ನೈಜತೆಯನ್ನು ಪ್ರತಿಬಿಂಬಿಸಿವೆ ಮತ್ತು ಡಾಟಾವನ್ನು ಥರ್ಡ್ ಪಾರ್ಟಿ ಮೌಲ್ಯೀಕರಿಸಿದೆ. ಹೀಗಾಗಿ ಈ ಕಾರ್ಯಕ್ರಮದ ಅಡಿಯಲ್ಲಿ ಹಿಂದುಳಿದ ಜಿಲ್ಲೆಗಳ ಪ್ರಗತಿಯು ನಿಜಕ್ಕೂ ಪ್ರಶಂಸನೀಯವಾಗಿದೆ.
ಸಂಯೋಜಿತ ಅಂಕಗಳಲ್ಲಿ ಒಟ್ಟಾರೆ ಸುಧಾರಣೆಯ ಹೊರತಾಗಿ, ಕೆಲವು ಜಿಲ್ಲೆಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಿವೆ. ರಾಷ್ಟ್ರೀಯ ಮೌಲ್ಯಮಾಪನ ಸಮೀಕ್ಷೆ (ಎನ್ಎಎಸ್ 2017) ಮತ್ತು ಪಿಎಂಎಡಿ ಕಾರ್ಯಕ್ರಮದಡಿಯಲ್ಲಿ ನಡೆಸಿದ ಮನೆ ಮನೆ ಸಮೀಕ್ಷೆಯು ಕಲಿಕೆಯ ಫಲಿತಾಂಶಗಳಲ್ಲಿನ ವ್ಯತ್ಯಾಸವನ್ನು ಪರಿಗಣಿಸಿ.
ಎರಡನೇ ಡೆಲ್ಟಾ ಶ್ರೇಯಾಂಕದ ಪಿಎಂಎಡಿ ಡಾಕ್ಯುಮೆಂಟ್ ಗಮನಿಸಿದರೆ, ಗಣಿತ ಮತ್ತು ಐಚ್ಛಿಕ ಭಾಷೆ ಎರಡರಲ್ಲೂ ಎನ್ಎಎಸ್ 2017 ರ ಸಮೀಕ್ಷೆಗೆ ಹೋಲಿಸಿದರೆ ಹಲವಾರು ಜಿಲ್ಲೆಗಳ ವಿದ್ಯಾರ್ಥಿಗಳ ಸರಾಸರಿ ಕಾರ್ಯಕ್ಷಮತೆ ಸುಧಾರಿಸಿದೆ, ವಿಶೇಷವಾಗಿ 50 ನೇ ಜಿಲ್ಲೆಗಳು ಗಣಿತದಲ್ಲಿ ತಮ್ಮ ಅಂಕಗಳನ್ನು ಮತ್ತು 71 ಜಿಲ್ಲೆಗಳು ಭಾಷೆಯಲ್ಲಿ ತಮ್ಮ ಅಂಕಗಳನ್ನು ಸುಧಾರಿಸಿವೆ.
ಅಂತೆಯೇ, ಅನೇಕ ಜಿಲ್ಲೆಗಳು ಆರೋಗ್ಯ ಮತ್ತು ಪೋಷಣೆ, ಆರ್ಥಿಕ ಸೇರ್ಪಡೆ, ಮೂಲಸೌಕರ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡಿವೆ. ‘ಚಾಂಪಿಯನ್ಸ್ ಆಫ್ ಚೇಂಜ್’ ಡ್ಯಾಶ್ಬೋರ್ಡ್ ಪ್ರಮುಖ ಸೂಚಕಗಳ ವಿವರವಾದ ತಿಂಗಳುವಾರು, ಜಿಲ್ಲಾವಾರು ಮಾಹಿತಿಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿವೆ.
ಉನ್ನತ ಸಾಧನೆ ಮಾಡುವ ಜಿಲ್ಲೆಗಳಿಗೆ ಬಹುಮಾನವಾಗಿ ಎರಡು ವರ್ಷಗಳ ಕಾಲ ಸುಮಾರು 1,000 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ನೀಡುವುದಾಗಿ ನೀತಿ ಆಯೋಗ ಇತ್ತೀಚೆಗೆ ಘೋಷಿಸಿತು. ಹೆಚ್ಚುವರಿಯಾಗಿ, ಆರೋಗ್ಯ, ಪೋಷಣೆ ಮತ್ತು ಶಿಕ್ಷಣದ ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಸಿಎಸ್ಆರ್ ಹಂಚಿಕೆಯ ಶೇಕಡಾ 60 ರಷ್ಟು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಯೋಜನೆಗಳಿಗೆ ಖರ್ಚು ಮಾಡಬೇಕೆಂದು ಸರ್ಕಾರವು ಆದೇಶಿಸಿದೆ.
ಪಿಎಂಎಡಿ ಯೋಜನೆಯು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಬದಲಾಯಿಸುತ್ತಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳು, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆಗಳ ಸುಧಾರಣೆಗೆ ಈ ಜಿಲ್ಲೆಗಳತ್ತ ಗಮನ ಹರಿಸುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತವು ತನ್ನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ತೀವ್ರವಾಗಿ ಹೆಚ್ಚಿಸಲು ಸಹಾಯವಾಗಲಿದೆ. ಅಲ್ಲದೇ ಈ ಜಿಲ್ಲೆಗಳಲ್ಲಿ ವಾಸಿಸುವವರಿಗೆ ಹೊಸ ಭರವಸೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ.
ಪ್ರಧಾನಮಂತ್ರಿಯ ಈ ಯೋಜನೆಯ ಹಿಂದಿನ ಆಶಯವು ಶ್ಲಾಘನೀಯ. ಇದರ ಯಶಸ್ಸು ಕೇಂದ್ರ, ರಾಜ್ಯ, ಜಿಲ್ಲಾ ಮಟ್ಟಗಳು ಮತ್ತು ಅನೇಕ ಸಚಿವಾಲಯಗಳ ಬಡವರ ಬಗೆಗಿನ ಬದ್ಧತೆಯನ್ನು ಸಾಂಕೇತಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.