ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಚಾಲನೆ ದೊರೆತಿದೆ. ಡಿಜಿಟಲೀಕರಣದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುವುದು ನಮ್ಮ ಪ್ರಧಾನಿಯ ಗುರಿ. ಆಡಳಿತ ಮತ್ತು ಸರ್ಕಾರಿ ಸೇವೆಗಳು ದೇಶದ ನಾಗರಿಕರಿಗೆ ಡಿಜಿಟಲ್ ಮೂಲಕ ಲಭ್ಯವಾಗುವಂತೆ ಮಾಡುವುದು. ಗ್ರಾಮೀಣ ಭಾಗದ ಜನರನ್ನೂ ಡಿಜಿಟಲ್ಗೆ ಹತ್ತಿರ ಮಾಡುವ ಅಭಿಲಾಷೆಯನ್ನೂ ಮೋದಿ ಹೊಂದಿದ್ದಾರೆ.
ಡಿಜಿಟಲ್ ಇಂಡಿಯಾ ಯೋಜನೆಯು ಡಿಜಿಟಲ್ ಲಾಕರ್, ಡಿಜಿಟಲ್ ಹೈವೇ, ಸ್ಕಾಲರ್ಶಿಪ್ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ. 2019ರೊಳಗೆ ದೇಶದ ಎಲ್ಲ ಗ್ರಾಮಪಂಚಾಯ್ತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ, ಎಲ್ಲ ಶಾಲೆಗಳು ಹಾಗೂ ವಿ.ವಿಗಳಿಗೆ ವೈಫೈ, ಪ್ರಮುಖ ನಗರಗಳಲ್ಲಿ ಸಾರ್ವಜನಿಕ ವೈಫೈ ವಲಯ ನಿರ್ಮಿಸುವುದು ಈ ಯೋಜನೆ ಉದ್ದೇಶ.
ಡಿಜಿಟಲ್ ಕ್ರಾಂತಿಯ ಫಲ 2019ರೊಳಗೆ ದೇಶದ ಪ್ರತಿಯೊಬ್ಬನನ್ನೂ ತಲುಪಬೇಕೆಂಬ ಗುರಿಯನ್ನೂ ಸರ್ಕಾರ ಹೊಂದಿದೆ. ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ರೂ.4.50 ಲಕ್ಷ ಕೋಟಿ ಬಂಡಾವಾಳ ಹೂಡಿಕೆ ಮಾಡಲಾಗಿದೆ. ಯೋಜನೆಯಿಂದ 18 ಲಕ್ಷ ಜನರಿಗೆ ಉದ್ಯೋಗವಕಾಶ ಸಿಗುವ ಭರವಸೆಯೂ ಇದೆ.
ಈ ಯೋಜನೆಯ ಪ್ರಮುಖ ಅಂಶಗಳೆಂದರೆ
ಡಿಜಿಟಲ್ ಲಾಕರ್ ಸಿಸ್ಟಮ್ : ಕಡತಗಳು, ಮುಖ್ಯ ದಾಖಲೆಗಳೆಲ್ಲವನ್ನೂ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ಗಳನ್ನಾಗಿ ಮಾಡುವುದೇ ಡಿಜಿಟಲ್ ಲಾಕರ್. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ www.digitallocker.gov.in.ಗೆ ಲಾಗ್ಇನ್ ಆಗಿ, 10, 12ನೇ ತರಗತಿ ಮಾರ್ಕ್ಶೀಟ್, ಡ್ರೈವಿಂಗ್ ಲೈಸೆನ್ಸ್, ಪದವಿ ಪ್ರಮಾಣಪತ್ರ, ವಿದ್ಯುತ್ ಬಿಲ್, ಪಾಸ್ ಪೋರ್ಟ್ ಮುಂತಾದುವುಗಳ ಸ್ಕ್ಯಾನ್ಡ್ ಕಾಪಿಗಳನ್ನು ಅಪ್ಲೋಡ್ ಮಾಡಬಹುದು. ಅಗತ್ಯಬಿದ್ದಾಗ ಅಥವಾ ಯಾವುದೇ ಸೇವೆಗಳಿಗೆ ಅರ್ಜಿ ಸಲ್ಲಿಸುವ ವೇಳೆ ಈ ಲಾಕರ್ನ ನಂಬರನ್ನು ನೇರವಾಗಿ ನೀಡಿದರೆ ಸಾಕು. ನಮ್ಮ ಪೇಜ್ಗಟ್ಟಲೆ ದಾಖಲೆಗಳನ್ನು ಅಥವಾ ಅದರ ಫೋಟೋಕಾಪಿಗಳನ್ನು ಹೊತ್ತೊಯ್ಯಬೇಕಾದ ಅಗತ್ಯ ಬೀಳುವುದಿಲ್ಲ.
ಮೈ ಗವರ್ನೆನ್ಸ್ ವೆಬ್ಸೈಟ್: ಆಡಳಿತದಲ್ಲಿ ಜನರನ್ನು ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ MyGov.in ವೆಬ್ಸೈಟ್ ಆರಂಭಿಸಲಾಗಿದೆ. ಇಲ್ಲಿ ಆಡಳಿತಕ್ಕೆ ಸಂಬಂಧಪಟ್ಟಂತೆ ಜನರು ತಮ್ಮ ಸಲಹೆ ಸೂಚನೆಗಳನ್ನು ನೇರವಾಗಿ ನೀಡಬಹುದು. ಮೊಬೈಲ್ ಆಪ್ ಆಗಿಯೂ ಇದು ಲಭ್ಯವಿದೆ.
ಸ್ವಚ್ಛ್ ಭಾರತ್ ಮಿಷನ್ ಆಪ್: ಕೇಂದ್ರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ವಚ್ಛ್ ಭಾರತ್ಗೆ ಸಂಬಂಧಿಸಿದ ಆಪ್ ಇದಾಗಿದ್ದು, ಇದರ ಮೂಲಕ ಜನರು ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.
ಎಲೆಕ್ಟ್ರಾನಿಕ್ ಹಸ್ತಾಕ್ಷರ: ಆಧಾರ್ ಕಾರ್ಡ್ ಆಧಾರದಲ್ಲಿ ಎಲ್ಲಾ ವ್ಯವಹಾರಗಳನ್ನು ಆನ್ಲೈನ್ ಮುಖಾಂತರ ನಡೆಸಲು ಸಾಧ್ಯವಾಗುವಂತೆ ಇ ಸಹಿ ಮಾಡುವ ವ್ಯವಸ್ಥೆ ಇದಾಗಿದೆ.
ಓಆರ್ಎಸ್: ಆಸ್ಪತ್ರೆ ವ್ಯವಸೆನ್ನು ಉತ್ತಮಪಡಿಸುವ ಉದ್ದೇಶದಿಂದ ಅಂತರ್ಜಾಲ ನೊಂದಣಿ ವ್ಯವಸ್ಥೆ ಅಥವಾ ಆನ್’ಲೈನ್ ರಿಜಿಸ್ಟ್ರೇಶನ್ ಸಿಸ್ಟಮ್(ಓಆರ್ಎಸ್) ಪ್ರಾರಂಭಿಸಲಾಗಿದೆ. ಆನ್’ಲೈನ್ ರಿಜಿಸ್ಟ್ರೇಶನ್, ಶುಲ್ಕ ಪಾವತಿ, ನೇಮಕಾತಿ, ತಪಾಸಣೆ ವರದಿ, ರಕ್ತ ಲಭ್ಯತೆ ಇತ್ಯಾದಿಗಳು ಆನ್ಲೈನ್ ಮುಖಾಂತರವೇ ಪಡೆಯಬಹುದು,
ಬಿಪಿಓ: ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಾಗೂ ಇತರ ರಾಜ್ಯಗಳ ಸಣ್ಣಪುಟ್ಟ ಪಟ್ಟಣಗಳಲ್ಲಿ ಬಿಪಿಓ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.
ಸ್ಕಾಲರ್ಶಿಪ್: ವಿದ್ಯಾರ್ಥಿಗಳು ಅಪ್ಲಿಕೇಶನ್ ಸಲ್ಲಿಕೆ, ವೆರಿಫಿಕೇಶನ್ ಇತ್ಯಾದಿ ಪ್ರಕ್ರಿಯೆಗಳು ಆನ್’ಲೈನ್ ಮುಖಾಂತರವೇ ನಡೆಸಿ ಸ್ಕಾಲರ್ಶಿಪ್ ಪಡೆಯುವ ವಿಧಾನ ಇದಾಗಿದೆ.
ಡಿಜಿಟಲ್ ಹೈವೇ: ದೇಶದ ಎರಡೂವರೆ ಲಕ್ಷ ಗ್ರಾಮ ಪಂಚಾಯತಿಗಳಿಗೆ ಕನೆಕ್ಟ್ ಮಾಡುವ “ಭಾರತ್ ನೆಟ್” ಎಂಬ ಹೈ ಸ್ಪೀಡ್ ಡಿಜಿಟಲ್ ಹೈವೇ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆಪ್ಟಿಕಲ್ ಫೈಬರ್ ಕೇಬಲ್ ಬಳಸಿ ಎಲ್ಲ ಕಡೆಯೂ ಅತ್ಯುತ್ತಮ ವೇಗದ ಇಂಟರ್ನೆಟ್ ನೀಡಲಾಗುತ್ತದೆ. ಇದು ವಿಶ್ವದ ಅತೀ ದೊಡ್ಡ ಗ್ರಾಮೀಣ ಬ್ರಾಡ್’ಬ್ಯಾಂಡ್ ಕನೆಕ್ಟಿವಿಟಿ ಯೋಜನೆ ಎನಿಸಿದೆ.
ಓಪನ್ ಸೋರ್ಸ್: ಇ-ಆಡಳಿತದಲ್ಲಿ ಓಪನ್ ಸೋರ್ಸ್ ಸಾಫ್ಟ್’ವೇರ್’ಗಳ ಬಳಕೆಗೆ ಹೆಚ್ಚು ಒತ್ತುಕೊಡಲು ನಿರ್ಧರಿಸಲಾಗಿದೆ.
ವೈಫೈ: ಸರಕಾರಿ ಸ್ವಾಮ್ಯದ ಬಿಎಸ್ಎನ್ನೆಲ್ ಸಂಸ್ಥೆಯು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವೈಫೈ ಸ್ಥಾಪಿಸುತ್ತಿದೆ. ಶಾಲೆ-ಕಾಲೇಜುಗಳಲ್ಲಿ ವೈಫೈ ಸಿಗಲಿದೆ.
ಭಾರತವನ್ನು ಡಿಜಟಲೀಕರಣಗೊಳಿಸುವ ದೂರದೃಷ್ಟಿಯಿಂದ ಆರಂಭವಾಗಿರುವ ಈ ಯೋಜನೆ 2019ರ ವೇಳೆಗೆ ಕ್ರಾಂತಿಯನ್ನು ಸೃಷ್ಟಿಸುವ ಭರವಸೆ ಇದೆ. ಆಡಳಿತ ಯಂತ್ರವನ್ನು ಸರಳಗೊಳಿಸಿ, ಚುರುಕುಗೊಳಿಸಿ, ದೇಶದ ಜನರನ್ನೂ ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಯೋಜನೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.