ಶ್ರೀನಗರ: ಐಐಟಿಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಆರ್ಥಿಕ ಸಂಕಷ್ಟದಿಂದಾಗಿ ತನಗೆ ಸಿಕ್ಕ ಸೀಟನ್ನು ತೊರೆಯಲು ಸಿದ್ಧನಾಗಿದ್ದ ಜಮ್ಮು ಕಾಶ್ಮೀರದ ವಿದ್ಯಾರ್ಥಿ ಜಹೀದ್ ಅಹ್ಮದ್ ಖುರೇಶಿ ಅವರ ನೆರೆವಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಧಾವಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸ್ಮೃತಿ, ‘ಜಹೀದ್ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಆರ್ಥಿಕ ನೆರವನ್ನು ತನ್ನ ಸಚಿವಾಲಯ ಭರಿಸಲಿದೆ’ ಎಂದಿದ್ದಾರೆ.
21 ವರ್ಷದ ಜಹೀದ್ ಭಯೋತ್ಪಾದನೆಯ ಸಂತ್ರಸ್ಥ, ಈತ ಎರಡು ತಿಂಗಳ ಮಗುವಿದ್ದಾಗಲೇ ಈತನ ತಂದೆ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಬಳಿಕ ಇನ್ನೊಂದು ಮದುವೆಯಾಗಿದ್ದ ತಾಯಿ ಈತನನ್ನು ಅಜ್ಜಿಯೊಂದಿಗೆ ಬಿಟ್ಟಿದ್ದಳು.
ಆರ್ಥಿಕ ಸಂಕಷ್ಟದ ನಡುವೆಯೂ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದ ಜಹೀದ್ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ೮೯ನೇ ರ್ಯಾಂಕ್ ಪಡೆದು ಉತ್ತೀರ್ಣಗೊಂಡಿದ್ದ. ಆದರೆ ಐಐಟಿ ಸೇರಲು ಆತನ ಬಳಿ ಹಣವಿರಲಿಲ್ಲ. ಕೌನ್ಸೆಲಿಂಗ್ಗೆ ಬೇಕಾದ 10 ಸಾವಿರ ರೂಪಾಯಿಯೂ ಈತನ ಬಳಿ ಇರಲಿಲ್ಲ. ಹೀಗಾಗಿ ಎಂಜಿನಿಯರ್ ಆಗಬೇಕೆಂಬ ತನ್ನ ಕನಸನ್ನು ಮರೆತು ಐಐಟಿಯಲ್ಲಿ ತನಗೆ ಸಿಕ್ಕ ಸೀಟನ್ನು ತ್ಯಜಿಸಿ ಸಾಮಾನ್ಯ ಡಿಗ್ರಿ ಪಡೆಯಲು ಮುಂದಾಗಿದ್ದ.
ಇದೀಗ ಆತನ ಸಂಕಷ್ಟವನ್ನು ಅರಿತು ಸ್ವತಃ ಸಚಿವೆಯೇ ನೆರವಿಗೆ ಆಗಮಿಸಿದ್ದಾರೆ. ಈ ಮೂಲಕ ಬಡ ವಿದ್ಯಾರ್ಥಿಯೊಬ್ಬನ ಕನಸಿಗೆ ಜೀವ ತುಂಬಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.