ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ವಾಯುಮಾಲಿನ್ಯ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಪ್ರತಿ ವರ್ಷ, ವಿಶೇಷವಾಗಿ ಚಳಿಗಾಲದಲ್ಲಿ ದೆಹಲಿ-ಎನ್ಸಿಆರ್ ಮತ್ತು ದೇಶದ ಇತರ ನಗರಗಳ ನಿವಾಸಿಗಳು ದಟ್ಟ, ಮಾಲಿನ್ಯಪೂರಿತ ಹೊಗೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದೆಷ್ಟೇ ಪರಿಹಾರವನ್ನು ಕಂಡುಕೊಂಡರು ಕೂಡ ವಾಯುಮಾಲಿನ್ಯದ ಸಮಸ್ಯೆಯನ್ನು ಕುಗ್ಗಿಸಲು ಇದುವರೆಗೆ ಸಾಧ್ಯವಾಗಿಲ್ಲ.
2024 ರ ವೇಳೆಗೆ ವಾಯುಮಾಲಿನ್ಯವನ್ನು ಶೇ. 20-30 ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಮೋದಿ ಸರ್ಕಾರವು ಕಳೆದ ಜನವರಿಯಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು (ಎನ್ಸಿಎಪಿ-National Clean Air Programme) ಪ್ರಾರಂಭಿಸಿತ್ತು. ದೇಶದ 102 ನಗರಗಳಲ್ಲಿನ ಪರಿಸರದಲ್ಲಿರುವ ಮಾಲಿನ್ಯಕಾರಕಗಳನ್ನು ಶೇ. 20-30 ರಷ್ಟು ಕಡಿಮೆ ಮಾಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
ಈಗ, ವರದಿಗಳ ಪ್ರಕಾರ, ಮೋದಿ ಸರ್ಕಾರವು ಎನ್ಸಿಎಪಿ ಅಡಿಯಲ್ಲಿರುವ 102 ನಗರಗಳಿಗೆ ಆರಂಭಿಕ ಹಂತದ 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ದೆಹಲಿ, ಮುಂಬೈ, ಕಾನ್ಪುರ್, ಲಕ್ನೋ, ಚಂಡೀಗಢ, ವಾರಣಾಸಿ, ಬೆಂಗಳೂರು, ಕೋಲ್ಕತಾ, ಹೈದರಾಬಾದ್ ಮತ್ತು ಪಾಟ್ನಾ ಇವುಗಳ ಪೈಕಿ ಸೇರಿವೆ. 2011 ರಿಂದ 2015 ರವರೆಗೆ ಐದು ವರ್ಷಗಳಲ್ಲಿ 102 ನಗರಗಳನ್ನು ಪಿಎಂ 10 ಅಥವಾ ಸಾರಜನಕ ಡೈಆಕ್ಸೈಡ್ ಮಟ್ಟದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. 2011 ರಿಂದ 2015 ರವರೆಗೆ 5 ವರ್ಷಗಳ ಕಾಲ ಸತತವಾಗಿ ಗಾಳಿಯ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಈ ನಗರಗಳನ್ನು ‘ಸಾಧಿಸಲು ವಿಫಲವಾದ’ ನಗರಗಳೆಂದು ಘೋಷಿಸಲಾಗಿದೆ. ಈ ನಗರಗಳ ಪೈಕಿ ಮಹಾರಾಷ್ಟ್ರವು ಅತಿ ಹೆಚ್ಚು ನಗರಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಧನಸಹಾಯಕ್ಕೆ ಅರ್ಹವಾದ 17 ನಗರಗಳನ್ನು ಹೊಂದಿದೆ ಮತ್ತು ಉತ್ತರ ಪ್ರದೇಶವು ಅಂತಹ 15 ನಗರಗಳನ್ನು ಹೊಂದಿದೆ. ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರ, ಕೇರಳ, ಗೋವಾ ಮತ್ತು ಹರಿಯಾಣ ರಾಜ್ಯಗಳು ಈ ಪಟ್ಟಿಯಲ್ಲಿ ಯಾವುದೇ ನಗರಗಳನ್ನು ಹೊಂದಿಲ್ಲ.
ಹತ್ತು ಲಕ್ಷ ಜನಸಂಖ್ಯೆ ಇರುವ 74 ನಗರಗಳು ಐದು ರಿಂದ 20 ಲಕ್ಷ ರೂಪಾಯಿಗಳನ್ನು, 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನರಗಳು ತಲಾ 10 ಲಕ್ಷ ರೂ. ಪಡೆಯಲಿವೆ. “102 ನಗರಗಳಲ್ಲಿ 80 ನಗರಗಳು ಈಗಾಗಲೇ ತಮ್ಮ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿವೆ ಮತ್ತು ಅವುಗಳ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಕೇಂದ್ರವು ಬೆಂಬಲಿಸಲಿದೆ” ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. “ಭೂಮಿಯನ್ನು ಹಸಿರು ಮತ್ತು ಆಕಾಶವನ್ನು ನೀಲಿ ಮಾಡುವ ಉದ್ದೇಶವನ್ನು ಬಜೆಟ್ ಘೋಷಿಸಿದೆ. ಅರಣ್ಯೀಕರಣ ಮತ್ತು ನಗರಗಳನ್ನು ಮಾಲಿನ್ಯ ರಹಿತವಾಗಿಸುವ ಮೂಲಕ ಇದನ್ನು ಸಾಧಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ದಿ ಹಿಂದೂ ವರದಿಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಬೃಹತ್ ಕೈಗಾರಿಕಾ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಕೃಷಿ ಸಚಿವಾಲಯ, ಆರೋಗ್ಯ ಸಚಿವಾಲಯ, ನೀತಿ ಆಯೋಗ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದರ ಭಾಗವಾಗಲಿದೆ. ಎನ್ಸಿಎಪಿ ಅನುಷ್ಠಾನದಲ್ಲಿ ಉದ್ಯಮ ಮತ್ತು ಅಕಾಡೆಮಿಗಳು ಸಚಿವಾಲಯಗಳೊಂದಿಗೆ ಮತ್ತು ಸಂಸ್ಥೆಗಳೊಂದಿಗೆ ಸಹಕರಿಸಲಿವೆ.
“ಸುದೀರ್ಘ ಅವಧಿಯ ಬಳಿಕ. ದೇಶಾದ್ಯಂತದ ವಾಯುಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹೊರತರಲಾದ ಎನ್ಸಿಎಪಿಯ ಅಂತಿಮ ಆವೃತ್ತಿಯನ್ನು ನೋಡುತ್ತಿರುವುದು ಸಂತೋಷವನ್ನು ತಂದಿದೆ. 2024 ರ ವೇಳೆಗೆ ಶೇ. 20-30% ರಷ್ಟು ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವ ಗುರಿ ಇದರ ಪ್ರಮುಖ ಅಂಶವಾಗಿದೆ” ಎಂದು ಗ್ರೀನ್ಪೀಸ್ ಭಾರತದ ಹಿರಿಯ ಪ್ರಚಾರಕ ಸುನಿಲ್ ದಹಿಯಾ ಹೇಳಿದ್ದಾರೆ.
ದೇಶಕ್ಕೆ ವಾಯುಮಾಲಿನ್ಯವನ್ನು ನಿಯಂತ್ರಣ ಮಾಡುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಶೇ. 12.5 ರಷ್ಟು ಸಾವುಗಳು ವಾಯುಮಾಲಿನ್ಯದಿಂದಾಗಿ ಆಗುತ್ತದೆ ಎಂಬುದನ್ನು ವರದಿಗಳು ತಿಳಿಸುತ್ತವೆ. ವಾಯುಮಾಲಿನ್ಯವು ದೇಶಕ್ಕೆ ಒಂದು ದೊಡ್ಡ ಸಮಸ್ಯೆಯಾಗಿದೆ, ಆದರೆ ಕೆಲವರು ದೀಪಾವಳಿಯ ಸಂದರ್ಭದಲ್ಲಿ ಮಾತ್ರ ವಾಯುಮಾಲಿನ್ಯವಾಗುತ್ತದೆ ಎಂದು ಅಂದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ಅವಿರತ ಪ್ರಯತ್ನಗಳನ್ನು ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.