ಪಾಟ್ನಾ: ದೇಶದ ಮೊದಲ ಡಾಲ್ಫಿನ್ ರಿಸರ್ಚ್ ಸೆಂಟರ್ ಶೀಘ್ರದಲ್ಲೇ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ತಲೆ ಎತ್ತಲಿದೆ. ಅನುಮೋದನೆಗೊಂಡ 8 ವರ್ಷಗಳ ಬಳಿಕ ಈ ಸೆಂಟರಿಗೆ ಅಕ್ಟೋಬರ್ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ.
“ಪಾಟ್ನಾ ವಿಶ್ವವಿದ್ಯಾಲಯದ ಆವರಣದಲ್ಲಿ ಗಂಗಾ ನದಿಯ ತಟದಲ್ಲಿ ಅಕ್ಟೋಬರ್ 5ರಂದು ನ್ಯಾಷನಲ್ ಡಾಲ್ಫಿನ್ ರಿಸರ್ಚ್ ಸೆಂಟರ್ (NDRC)ಗೆ ಶಿಲಾನ್ಯಾಸವನ್ನು ನೆರವೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರು ಅಲ್ಲಿನ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ” ಎಂದು ಬಿಹಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ವಿಭಾಗದ ಹಿರಿಯ ಅಧಿಕಾರಿ ಡಿ.ಕೆ.ಶುಕ್ಲಾ ಹೇಳಿದ್ದಾರೆ.
ಶುಕ್ಲಾ ಅವರ ಪ್ರಕಾರ, ಈ ಬೆಳವಣಿಗೆಯು ದೇಶದ ಅಳಿವಿನಂಚಿನಲ್ಲಿರುವ ಗಂಗಾ ನದಿ ಡಾಲ್ಫಿನ್ಗಳ ಸಂರಕ್ಷಣೆಯ ವಿಷಯದಲ್ಲಿ ಮಹತ್ವದ್ದಾಗಿದೆ. ಅಳಿವಿನಂಚಿನಲ್ಲಿರುವ ಡಾಲ್ಫಿನ್ಗಳು ಆಗಾಗ ಅಕ್ರಮ ಬೇಟೆಗಾರರಿಗೆ ಬಲಿಯಾಗುತ್ತವೆ ಮತ್ತು ಕೆಲವೊಮ್ಮೆ ಮೀನುಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡು, ಯಂತ್ರಗಳಡಿ ಸಿಲುಕಿ ವಿನಾಕಾರಣ ಕೊಲ್ಲಲ್ಪಡುತ್ತವೆ.
ಅಳಿವಿನಂಚಿನಲ್ಲಿರುವ ಸಸ್ತನಿಗಳ ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸಲು ನಿಟ್ಟಿನಲ್ಲಿ ನಡೆಯುವ ಸಂಶೋಧನೆಗಳಲ್ಲಿ ಎನ್ಡಿಆರ್ಸಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಗಂಗಾ ಡಾಲ್ಫಿನ್ಗಳ ಕುರಿತಾದ ಸಂಶೋಧನೆಗಳನ್ನು ಮಾಡಿ ‘ಡಾಲ್ಫಿನ್ ಮ್ಯಾನ್’ ಎಂದು ಖ್ಯಾತರಾಗಿರುವ ನಳಂದ ಓಪನ್ ಯೂನಿವರ್ಸಿಟಿಯ ಉಪಕುಲಪತಿ ಆರ್.ಕೆ. ಸಿನ್ಹಾ ಅವರು ಪಾಟ್ನಾದಲ್ಲಿ ಎನ್ಡಿಆರ್ಸಿ ಸ್ಥಾಪಿಸುವ ಯೋಜನೆಯನ್ನು ಮೊದಲು ರೂಪಿಸಿದ್ದರು. ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಅಂದಿನ ಯೋಜನಾ ಆಯೋಗದ ಅಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ನೀಡಿದ್ದರು. 2011ರಲ್ಲಿ ಅಹ್ಲುವಾಲಿಯಾ ಪಾಟ್ನಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನುಮೋದನೆಯನ್ನು ನೀಡಿದ್ದರು. 2013ರಲ್ಲಿ ಈ ಯೋಜನೆಗಾಗಿ ರೂ.28.06 ಕೋಟಿಯನ್ನು ಬಿಡುಗಡೆ ಮಾಡಲಾಗಿತ್ತು. ರಾಜ್ಯ ಸರ್ಕಾರ ರೂ.18.16 ಕೋಟಿಯನ್ನು ಬಿಡುಗಡೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.