ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದೆ. ಗೋವಾದ 15 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ತಮ್ಮ ಗುಂಪನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಎಂದು ಈ ಶಾಸಕರು ಮಾಡಿದ ಮನವಿಯನ್ನು ಅಲ್ಲಿನ ಸ್ಪೀಕರ್ ರಾಜೇಶ್ ಪಟ್ನೇಕರ್ ಅವರು ಅನುಮೋದಿಸಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಇದೀಗ ಗೋವಾ ಶಾಸಕರ ನಡೆಯೂ ತೀವ್ರ ಆಘಾತವನ್ನುಂಟು ಮಾಡಿದೆ.
“ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. 40 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಬಲವು ಈಗ 27 ಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ನಮ್ಮ ಕಚೇರಿಗೆ ಮಾಹಿತಿಯನ್ನು ನೀಡಿದ್ದಾರೆ. ನಾನು ಎರಡೂ ಮನವಿಗಳನ್ನು ಸ್ವೀಕರಿಸಿದ್ದೇನೆ ”ಎಂದು ಸ್ಪೀಕರ್ ಪಟ್ನೇಕರ್ ಹೇಳಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಚಂದ್ರಕಾಂತ್ ಕಾವ್ಲೇಕರ್ ಅವರು ಕೂಡ ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾಗಿದ್ದಾರೆ.
ಪ್ರತಿಪಕ್ಷಗಳಲ್ಲಿ ಹತಾಶೆ ಇದ್ದ ಕಾರಣ ಈ 10 ಮಂದಿ ಶಾಸಕರು ಆಡಳಿತ ಪಕ್ಷಕ್ಕೆ ಸೇರಿದ್ದಾರೆ ಎಂದು ಕಾವ್ಲೇಕರ್ ಹೇಳಿದ್ದಾರೆ. “ನಾವು ಇಷ್ಟು ದಿನ ವಿರೋಧ ಪಕ್ಷದಲ್ಲಿದ್ದೆವು ಮತ್ತು ನಮ್ಮ ಕ್ಷೇತ್ರಗಳಲ್ಲಿನ ಅಭಿವೃದ್ಧಿಯನ್ನು ಮೂಲೆಗುಂಪು ಮಾಡಿಕೊಂಡು ಪ್ರತಿಪಕ್ಷದಲ್ಲಿ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಯವರ ಕೈ ಬಲಪಡಿಸಲು ಹಾಗೂ ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಲು ನಾವು ಬಿಜೆಪಿ ಸೇರಿಕೊಂಡಿದ್ದೇವೆ ”ಎಂದು ಕಾವ್ಲೇಕರ್ ಹೇಳಿದ್ದಾರೆ.
ಬಿಜೆಪಿಯ ಹೈಕಮಾಂಡ್ ವಿಲೀನಕ್ಕೆ ಸಮ್ಮತಿಯನ್ನು ನೀಡಿದೆ ಮತ್ತು ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ಶಾಸಕರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲು ಗುರುವಾರ ನವದೆಹಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಸಿಎಂ ಸಾವಂತ್ ಹೇಳಿದ್ದಾರೆ. “ನಾವು ಪ್ರಸ್ತುತ ಸಚಿವ ಮಂಡಲದಲ್ಲಿ ಯಾವುದೇ ಬದಲಾವಣೆಗಳನ್ನು ತರುವ ನಿರ್ಧಾರವನ್ನು ಮಾಡಿಲ್ಲ. ಬಿಜೆಪಿಯನ್ನು ಬಲಪಡಿಸಲು ವಿಲೀನ ಕಾರ್ಯ ಮಾಡಿದ್ದೇವೆ. ಈ ಸರ್ಕಾರ ಗೋವಾದ ಜನರಿಗಾಗಿನ ಒಗ್ಗಟ್ಟಿನ ಬಿಜೆಪಿ ಸರ್ಕಾರವಾಗಿದೆ”ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.