ಕಲೆಕ್ಟರ್ ನೇಹಾ ಗಿರಿಯವರು, ಒಮ್ಮೆ ವಾಲ್ಮೀಕಿ ಜನಾಂಗದ ಮಹಿಳೆಯೊಬ್ಬಳು ನೀಡುತ್ತಿದ್ದ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದ ಗ್ರಾಮಸ್ಥರನ್ನು ಕಂಡರು. ತಕ್ಷಣವೇ ಅವರು ಮಾಡಿದ ಕೆಲಸವೆಂದರೆ, ಜಾತಿ ತಾರತಮ್ಯದ ಬಗ್ಗೆ ದಿಟ್ಟ ಸಂದೇಶವನ್ನು ರವಾನೆ ಮಾಡಿದ್ದು.
1995ರ ಅಸ್ಪೃಶ್ಯತೆ (ಅಪರಾಧ) ಕಾಯ್ದೆಯಡಿಯಲ್ಲಿ ಅಸ್ಪೃಶ್ಯತೆಗೆ 6 ದಶಕಗಳ ಕಾಲದಿಂದ ನಿಷೇಧವನ್ನು ಹೇರಲಾಗಿದೆ. ಆದರೆ ಇದರಿಂದ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಿದೆ ಎಂದು ನಾವಂದುಕೊಂಡರೆ ಅದು ನಮ್ಮ ಭ್ರಮೆಯಷ್ಟೇ.
ಅಸ್ಪೃಶ್ಯತೆಯ ವಿರುದ್ಧದ ಹೋರಾಟ, ಆಂದೋಲನಗಳನ್ನು ಗಮನಿಸಿದರೆ ಇಂದು ಅಸ್ಪೃಶ್ಯತೆ ಎಂಬುದು ಕೇವಲ ಮಕ್ಕಳ ಶಾಲಾ ಪಠ್ಯಪುಸ್ತಕದಲ್ಲಿ ಮಾತ್ರ ಇರಬೇಕಿತ್ತು. ಆದರೆ ದುರಾದೃಷ್ಟವಶಾತ್ ಇಂದಿಗೂ ಗ್ರಾಮೀಣ ಭಾರತದ ಮೂಲೆಗಳಲ್ಲಿ ಅಸ್ಪೃಶ್ಯತೆ ಎಂಬುದು ಇಂದಿಗೂ ಜೀವಂತವಾಗಿದೆ.
ತನ್ನದೇ ಕಾರ್ಯಕ್ಷೇತ್ರದಲ್ಲಿ ಅಸ್ಪೃಶ್ಯತೆಯನ್ನು ಕಣ್ಣಾರೆ ಕಂಡ ಐಎಎಸ್ ನೇಹಾ ಗಿರಿಯವರಿಗೆ ನಿಜಕ್ಕೂ ಶಾಕ್ ಆಗಿತ್ತು.
ರಾಜಸ್ಥಾನದ ಧೋಲಪುರದ ಜಿಲ್ಲಾ ಕಲೆಕ್ಟರ್ ಆಗಿರುವ ನೇಹಾ, ಮನರೇಗಾ ಬಗ್ಗೆ ಪರಿಶೀಲನೆಯನ್ನು ನಡೆಸಲು ಬಸೆಡಿ ಪಂಚಾಯತ್ಗೆ ಜನವರಿ 4 ರಂದು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ವಾಲ್ಮೀಕಿ ಜನಾಂಗದ ತಾಯಿಯೊಬ್ಬರಿಗೆ ಅಸ್ಪೃಶ್ಯತೆಯ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಕಣ್ಣಾರೆ ಕಂಡರು.
ಮಗುವಿನೊಂದಿಗೆ ಬಂದಿದ್ದ ಆ ಮಹಿಳೆ ಅತ್ಯಂತ ಕಷ್ಟಕರವಾದ ಕೆಲಸವನ್ನು ಮಾಡುತ್ತಿದ್ದರು, ಮತ್ತೊಬ್ಬ ಗಟ್ಟಿ ಮುಟ್ಟಾದ ಪುರುಷ ಎಲ್ಲರಿಗೂ ನೀರು ಕೊಡುತ್ತಿದ್ದ. ಇದನ್ನು ಕಂಡ ನೇಹಾ, ಮಹಿಳೆಗೆ ನೀರು ವಿತರಿಸುವ ಕಾರ್ಯವನ್ನು ನೀಡಬಹುದಲ್ಲವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅಲ್ಲಿದ್ದವರು, ಆಕೆ ವಾಲ್ಮೀಕಿ ಜನಾಂಗಕ್ಕೆ ಸೇರಿದವಳು, ಅವಳು ನೀರು ಕೊಟ್ಟರೆ ಯಾರೂ ಕುಡಿಯುವುದಿಲ್ಲ ಎಂದರು.
ಈ ಉತ್ತರದಿಂದ ತೀವ್ರವಾಗಿ ನೊಂದ ನೇಹಾ, ಅಸ್ಪೃಶ್ಯತೆಯ ಕೆಟ್ಟ ಚಾಳಿಯನ್ನು ಬಿಡಿಸುವ ದೃಢ ನಿರ್ಧಾರ ಮಾಡಿದರು. ಆ ಮಹಿಳೆಯಿಂದ ನೀರು ಪಡೆದು ಎಲ್ಲರೆದುರು ಕುಡಿದರು.
ಕೆಟ್ಟ ಪದ್ಧತಿಯ ವಿರುದ್ಧ ಜನರೆದರು ದೃಢವಾಗಿ ಮಾತನಾಡಿದರು, ವಾಲ್ಮೀಕಿ ಮಹಿಳೆಯನ್ನು ಕರೆದು ಎಲ್ಲರಿಗೂ ನೀರು ಕೊಡು ಎಂದರು. ಎಲ್ಲಾ ಕಾರ್ಮಿಕರಿಗೂ ಅದನ್ನು ಕುಡಿಯುವಂತೆ ಸೂಚನೆ ನೀಡಿದರು. ಈ ಮೂಲಕ ಇಡೀ ದೇಶಕ್ಕೆ ಒಂದು ಮಾದರಿ ಎನಿಸುವ ಸಂದೇಶವನ್ನು ರವಾನಿಸಿದರು.
ಈ ಪ್ರದೇಶದ ಜಾತಿ ಪದ್ಧತಿಯಲ್ಲಿ, ವಾಲ್ಮೀಕಿ ಸಮುದಾಯವು ದಲಿತರಲ್ಲಿಯೂ ಕೂಡ ಕೆಳಮಟ್ಟದ್ದು ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ಈ ಜನಾಂಗ ನಿರಂತರವಾಗಿ ಅನ್ಯಾಯದ ತಾರತಮ್ಯಕ್ಕೆ ಒಳಗಾಗುತ್ತಿದೆ.
ಅಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ದಲಿತ ಕಾರ್ಯಕರ್ತ ಭನ್ವರ್ ಮೆಗ್ವಾಂಶಿ ಅವರು, “ಇದು ಮಧ್ಯಾಹ್ನದ ಬಿಸಿಯೂಟವಾಗಿರಲಿ, ನೀರು ವಿತರಿಸುವುದಾಗಿರಲಿ, ಮನರೇಗಾ ಕೆಲಸವೇ ಆಗಿರಲಿ ಅಥವಾ ಅಂಗನವಾಡಿ ಕಾರ್ಯಕ್ರಮಗಳೇ ಆಗಿರಲಿ ಮೇಲ್ಜಾತಿಯ ಜನರಿಗೆ ಮಾತ್ರ ಉದ್ಯೋಗವನ್ನು ನೀಡಲಾಗುತ್ತಿದೆ. ಯೋಜನೆಗಳಲ್ಲಿ ದಲಿತರನ್ನು ಒಳಪಡಿಸಬೇಕು ಎಂದು ನಾವು ನಿರಂತರವಾಗಿ ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದೇವೆ. ಆಗ ಮಾತ್ರ ಅಸ್ಪೃಶ್ಯತೆಯಂತಹ ಅಭ್ಯಾಸ ಕೊನೆಗೊಳ್ಳುತ್ತದೆ” ಎಂದಿದ್ದಾರೆ.
ಕಟ್ಟುನಿಟ್ಟಾದ ನಿಯಮದ ಅನುಷ್ಠಾನದ ಹೊರತಾಗಿಯೂ, ಅಸ್ಪೃಶ್ಯತೆಯನ್ನು ರದ್ದುಗೊಳಿಸಲು ದೃಢವಾದ ಕಾರ್ಯವಿಧಾನದ ಕೊರತೆ ಇದೆ. ಇದು ಕಾನೂನನ್ನು ನಿಷ್ಪರಿಣಾಮಕಾರಿಯಾಗಿಸಿದೆ ಎಂದು ಆಕೆ ಹೇಳಿದ್ದಾರೆ.
ನೀರು ಕುಡಿಸುವುದು ಒಂದು ಸಣ್ಣ ಕಾರ್ಯವೇ ಇರಬಹುದು, ಆದರೆ ಐಎಎಸ್ ನೇಹಾ ಅವರು ಈ ಕಾರ್ಯದ ಮೂಲಕ ಭಾರತದಲ್ಲಿ ಅಸ್ತಿತ್ವದಲ್ಲಿರುವ ದೊಡ್ಡ ಸಾಮಾಜಿಕ ಆಚರಣೆಯ ಕೊಳಕು ಮುಖವನ್ನು ಬಹಿರಂಗಪಡಿಸಿದ್ದಾರೆ. ಮಾತ್ರವಲ್ಲ, ಅದನ್ನು ತಡೆಯಲು ಅವರು ಬಲವಾದ ನಿಲುವನ್ನು ತೆಗೆದುಕೊಂಡಿದ್ದಾರೆ ಮತ್ತು ಅದನ್ನು ನಿರ್ಮೂಲನೆಗೊಳಿಸುವತ್ತ ದೃಢ ಹೆಜ್ಜೆಯನ್ನು ಇಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.