ಹೊ.ವೆ. ಶೇಷಾದ್ರಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ, ಸದಾ ಕಾಲ ನೆನಪಿನಲ್ಲಿ ಉಳಿಯುವ ದೊಡ್ಡ ಹೆಸರು. ಅವರಿಗೆ ಅವರ ವೈಚಾರಿಕ ಲೇಖನಗಳ ಸಾಲುಗಳನ್ನು, ಅವರ ಚಿಂತನಗಂಗಾ ಕೃತಿಯ ಸಾಲುಗಳನ್ನು ಉದಾಹರಿಸಿ, ಟೀಕಿಸಿ ಅವರಿಗೆ ಒಂದು ದೊಡ್ಡ ಪತ್ರ ಬಂತು. ಅದರಲ್ಲಿ ಅವರು ಶೋಷಕರ ಮತ್ತು ಬಂಡವಾಳಶಾಹಿಯ ಪರ ಎಂದು ಟೀಕೆ ಮಾಡಿ ಬರೆದಿತ್ತು. ಕಾಫಿ ಪ್ಲಾಂಟೇಷನ್ ಬೆಳೆಗಾರರ ಪರ ವಹಿಸುವ ಬದಲು ಮಾಲೀಕರ ಪರವಾಗಿ ನಿಂತಿದ್ದೀರಿ ಎಂದು ಅವರ ಬಗ್ಗೆ ಒಬ್ಬರು ಕಿಡಿಕಾರಿದ್ದರು. ಈ ಘಟನೆಯ ನಂತರ 1978 ರಲ್ಲಿ ಕಡೂರಿನಲ್ಲಿ ಸಂಘದ ಶಿಬಿರವೊಂದಕ್ಕೆ ಶೇಷಾದ್ರಿಗಳು ಬಂದಿದ್ದರು. ಅವರಿಗೆ ಟೀಕೆ ಮಾಡಿ ಪತ್ರ ಬರೆದ ವ್ಯಕ್ತಿಯು ಆ ಶಿಬಿರಕ್ಕೆ ಬಂದಿದ್ದರು. ಶೇಷಾದ್ರಿಗಳು ಆ ವ್ಯಕ್ತಿಯನ್ನು ಊಟಕ್ಕೆ ಕರೆದಾಗ ಅವರು ಒಲ್ಲೆ ಎಂದರು. ಆಗ ಶೇಷಾದ್ರಿಯವರು ಮುಗುಳುನಗುತ್ತಾ” ಪರವಾಗಿಲ್ಲ, ಶೋಷಕರೊಂದಿಗೆ ಊಟ ಮಾಡಿದರೆ ತೊಂದರೆ ಏನಿಲ್ಲ” ಎನ್ನುತ್ತಾ ತಮ್ಮ ಪಕ್ಕದಲ್ಲಿ ಅವರನ್ನು ಕೂರಿಸಿಕೊಂಡರು. ಹೇಳಿದರು ,” ಅಲ್ಲಯ್ಯ, ಅಷ್ಟು ಹತ್ತಿರದಿಂದ, ಅಷ್ಟು ವರ್ಷದಿಂದ ನಮ್ಮನ್ನೆಲ್ಲಾ ನೋಡಿದ್ದೀಯಾ, ಶಿಬಿರಗಳಲ್ಲಿ ಜೊತೆಗೆ ಇದ್ದೀಯ, ನಾವು ಶೋಷಕರಂತೆ ನಿನಗೆ ಕಾಣಿಸಿದೆವಾ? ನೀನೇ ಬಂದು ಮಾತನಾಡಬಹುದಿತ್ತು, ಚರ್ಚೆ ಮಾಡಬಹುದಿತ್ತು, ಅದೇಕೆ ಅಷ್ಟು ಕಟುವಾಗಿ ಪತ್ರ ಬರೆದೆ?” ಎಂದರು. ಆಗ ಆ ವ್ಯಕ್ತಿಯು ಕರಗಿಹೋದರು. ಮುಂದೆ ಮತ್ತೆ ಎಂದಿಗೂ ಅಂತಹ ಟೀಕಿಸುವ, ನಿಂದಿಸಿ ಪತ್ರ ಬರೆಯುವ ಸಾಹಸವನ್ನು ಅವರು ಮಾಡಲಿಲ್ಲ. ಸಾತ್ವಿಕ ವ್ಯಕ್ತಿತ್ವದ ಎದುರು ಎಂತಹ ವಿರೋಧವೂ ಕೂಡ ಮಂಜುಗಡ್ಡೆಯಂತೆ ಕರಗಿ ನೀರಾಗುವ ಪರಿ ಇದು. ಸಾಹಿತ್ಯ ಸಂಗಮ ಪ್ರಕಟಿಸಿದ ಮಂಜುನಾಥ ಅಜ್ಜಂಪುರ ಬರೆದ ಧ್ಯೇಯ ಯಾತ್ರಿ ಎಂಬ ಪುಸ್ತಕದಲ್ಲಿ ಇದರ ಉಲ್ಲೇಖವಿದೆ.
ಈ ಘಟನೆಯನ್ನು ಉದಾಹರಿಸುವದಕ್ಕೆ ಬಹಳ ಬಲವಾದ ಕಾರಣವಿದೆ. ಕೋಪಿಸಿಕೊಳ್ಳುವ ಸಂದರ್ಭದಲ್ಲಿ ಕೋಪಿಸಿಕೊಳ್ಳದೆ ಇದ್ದ ಜನನಾಯಕ ಬಹಳ ಉನ್ನತಮಟ್ಟಕ್ಕೆ ಇರುತ್ತಾನೆ. ಅವನ ಮನಸ್ಸಿನಲ್ಲಿ ತಾನು ಬಹಳ ಉನ್ನತ ಮಟ್ಟದಲ್ಲಿ ಇದ್ದೇನೆ ಎಂಬ ಭಾವನೆ ಖಂಡಿತ ಇರುವುದಿಲ್ಲ. ಆದರೆ ಸಮಾಜವೇ ಅವನನ್ನು ಅವನಿಗೆ ಗೊತ್ತಿಲ್ಲದೇ ಉನ್ನತ ಮಟ್ಟದಲ್ಲಿ ನೋಡುತ್ತದೆ. ಉದ್ರೇಕಗೊಳ್ಳುವ, ಪ್ರತಿಕಾರ ಕೈಗೊಳ್ಳುವ ಎಲ್ಲಾ ಕಾರಣಗಳಿದ್ದರೂ ಕೂಡಾ ಉದ್ರೇಕಗೊಳ್ಳದೆ, ಪ್ರತಿಕಾರ ಕೈಗೊಳ್ಳದೆ ಇರುವವನು ಉತ್ತಮ ಮನುಷ್ಯತ್ವ ಎನಿಸಲ್ಪಡುತ್ತದೆ. ಒಂದು ಹಂತದಲ್ಲಿ ಅದು ಮನುಷ್ಯತ್ವದಿಂದ ಮಾಧವತ್ವಕ್ಕೆ ಇಟ್ಟ ಹೆಜ್ಜೆಯಾಗಿರುತ್ತದೆ. ಹಾಗಾದರೆ ಇದು ಜೀವನದ ವಾಸ್ತವಿಕ ಸಂದರ್ಭಗಳಲ್ಲಿ ಅನ್ವಯಿಸಬಹುದಾದ ಸಂಗತಿಯೇ? ಎಂಬ ಪ್ರಶ್ನೆಯನ್ನು ಕೆಲವರು ಕೇಳಬಹುದು.” ಆಧ್ಯಾತ್ಮಿಕ ಹಾಗೂ ತಾತ್ವಿಕ ಸಂಗತಿಗಳೇ ಬೇರೆ, ರಾಜಕೀಯವೇ ಬೇರೆ, ಅಥವಾ “ನೀನು ಅಧ್ಯಾತ್ಮ ಮಾತಾಡುವವನು ರಾಜಕೀಯಕ್ಕೆ ಏಕೆ ಬಂದದ್ದು?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೆಲವರು ಕೇಳಬಹುದು. ಆದರೆ ನಮ್ಮ ಸಂಸ್ಕೃತಿಯ, ನಮ್ಮದೇ ಪರಂಪರೆಯ ಅರಿವು ಇದ್ದವನು ಈ ರೀತಿ ಹೇಳಲಾರ ಎಂಬುದು ನನ್ನ ಸ್ಪಷ್ಟ ಅಭಿಮತ.
ಆಡಳಿತದಲ್ಲಿ ನೈತಿಕತೆಯನ್ನು ಧರ್ಮವನ್ನು ಮತ್ತು ಮೌಲ್ಯವನ್ನು ರೂಢಿಸಿಕೊಳ್ಳಬೇಕಾದ ರಾಜನೀತಿಜ್ಞ ಜನನಾಯಕ ಆಗಬೇಕೇ ಹೊರತು ನೀತಿ ಧರ್ಮಗಳನ್ನು ತನ್ನ ಮೂಗಿನ ನೇರಕ್ಕೆ ಸ್ವೀಕರಿಸುವವನು ಅಲ್ಲ ಅಥವಾ ನೀತಿ ಧರ್ಮದ ಅನುಷ್ಠಾನದ ಸಂದಿಗ್ಧ ಸಂದರ್ಭಗಳಲ್ಲಿ ಅದರಿಂದ ನುಣುಚಿಕೊಳ್ಳುವವನೂ ಅಲ್ಲ. ತನ್ನ ಮಗ ತಪ್ಪು ಮಾಡಿದಾಗ ಅವನಿಗೆ ಇತರ ಪ್ರಜೆಗಳಿಗೆ ವಿಧಿಸುವಂತೆ ದಂಡನೆ ವಿಧಿಸಿದ ಪ್ರಹ್ಲಾದ ಮಹಾರಾಜ ಹಾಗೂ ಅಮೋಘವರ್ಷ ನೃಪತುಂಗ ಅಂತಹ ರಾಜನೀತಿಜ್ಞತೆಯ ಅಪೂರ್ವ ಮಾದರಿಗಳು. ಆದಕಾರಣ ಮೌಲ್ಯಗಳನ್ನು ಅನುಷ್ಠಾನಗೊಳಿಸುವಾಗ ಉಂಟಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ಚಿಂತಿಸದ ವ್ಯಕ್ತಿ ಮಾದರಿ ಜನನಾಯಕ ಮತ್ತು ಆತ್ಮಶಕ್ತಿಯಿಂದ ಬೆಂಬಲಿತ. ಮತ್ತು ನೀತಿಯನ್ನು ಅನುಷ್ಠಾನಗೊಳಿಸುವಾಗ ಪ್ರತಿಕೂಲ ಪರಿಸ್ಥಿತಿಗಳನ್ನು ಪೂರ್ವಭಾವಿಯಾಗಿ ಕಲ್ಪಿಸಿ ಭಯಗೊಳ್ಳುವವರು ಅಂತಸ್ಥವಾದ ದಿವ್ಯಶಕ್ತಿಯ ಅಸ್ತಿತ್ವದ ಕುರಿತು ಸಂದೇಹ ಉಳ್ಳವರಾಗಿರುತ್ತಾರೆ ಮತ್ತು ಆ ಮೂಲಕ ಆತ್ಮ ವಿಸ್ಮೃತಿಯ ಪ್ರಮಾದಕ್ಕೆ ಈಡಾದವರು ಆಗಿರುತ್ತಾರೆ. ಭಾರತೀಯ ಜನತಾ ಪಕ್ಷದ ಆರಂಭಿಕ ಹಾಗೂ ಹಿರಿಯ ನಾಯಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಇಂತಹವರೆಲ್ ಅಂತಹ ಸಂದಿಗ್ಧಗಳಲ್ಲಿ ನೈತಿಕತೆಯ ಅನುಷ್ಠಾನದ ಛಲವನ್ನು ಬಿಡದೆ, ಅಗ್ನಿ ಪರೀಕ್ಷೆಗಳಲ್ಲಿ ಮಿಂದೆದ್ದು ಬಂದವರು.
ತುರ್ತು ಪರಿಸ್ಥಿತಿಯ ಸಂದರ್ಭದ ಸಂಸತ್ ಅಧಿವೇಶನದಲ್ಲಿ ಬಿಜೆಪಿಯ ಸದಸ್ಯರು ಆಗಿನ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿಯವರ ವಿರುದ್ಧ. ಘೋಷಣೆಯನ್ನು ಕೂಗುತ್ತಾ,” ಇಂದಿರಾ ಕೊ ಹಠಾವೋ” ಎಂದರು. ಆಗ ಅಟಲ್ಜಿ ಅವರು ಎದ್ದು ನಿಂತು,” ಇಂದಿರಾ ಕೊ ಹಠಾವೋ ನಹಿ, ಇಂದಿರಾ ಜೀ ಕೋ ಹಟಾವೋ” ಎಂದು ತಮ್ಮ ಪಕ್ಷದವರನ್ನು ತಿದ್ದಿದವರು. ಆದಕಾರಣ ಅವರು ಇಂದಿರಾಗಾಂಧಿಯವರ ಹೃದಯವನ್ನು ಗೆದ್ದರು. ಸಂಸತ್ ಅಧಿವೇಶನಗಳಲ್ಲಿ ಇಂದಿರಾಗಾಂಧಿಯವರು ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನು ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದರು ಎಂಬುದು ಅಂತಹ ಉನ್ನತ ವ್ಯಕ್ತಿತ್ವದ ಪರಿಣಾಮ. ಆದರೆ ಪಕ್ಷಕ್ಕೆ ಪಕ್ಷ ಕಟ್ಟಿದ ಹಿರಿಯರು ಅಂತಹ ಸಂದರ್ಭಗಳಲ್ಲಿ ಹೇಗೆ ವರ್ತಿಸಿದರು ಎಂಬುದು ಮಾದರಿ ರೂಪವಾಗಿದೆ ಹೊರತು, ಬೇರಾವುದೂ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೃದಯದಲ್ಲಿ ತುಂಬಿಸಿಕೊಳ್ಳುವುದು ಒಳ್ಳೆಯದು. ನಮ್ಮನ್ನು ಶಾಸಕರ ಮಗನೊಬ್ಬ ಬ್ಯಾಟ್ನಿಂದ ಹಲ್ಲೆ ಮಾಡಿದ ಪ್ರಕರಣ ಇರಬಹುದು, ಗಾಂಧಿ ಹಾಗೂ ಗೋಡ್ಸೆ ವಿಚಾರದಲ್ಲಿ ಬಿಸಿಬಿಸಿಯಾದ ಚರ್ಚೆಗಳು ಆಗುತ್ತಿರುವಾಗ ಮಹಾತ್ಮ ಗಾಂಧಿಯ ಕುರಿತಾದ ಅವಹೇಳನವನ್ನು ಸಂಸದರು ಮಾಡಿದ ಸಂದರ್ಭಗಳಿರಬಹುದು- ಎಲ್ಲ ಸಂದರ್ಭಗಳಲ್ಲೂ ತಮ್ಮದೇ ಪಕ್ಷದವರು ಮಾಡಿದ ತಪ್ಪಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ತೆಗೆದುಕೊಂಡ ನಿಲುವುಗಳು ಹಾಗೂ ಸಂಸದರಿಗೆ ಮುಟ್ಟಿಸಿದ ಬಿಸಿ, ಎಲ್ಲವೂ ಕೂಡ ಅಂತಹ ಆದರ್ಶ ನೈತಿಕ ನಿಷ್ಠೆಗಳಿಂದ ಪ್ರೇರಿತವಾದ ನಡೆಗಳು. ಆದರೆ ನಾಯಕನ ಈ ಆದರ್ಶಗಳನ್ನು ತಳಮಟ್ಟದಲ್ಲಿ ಅನುಷ್ಠಾನಕ್ಕೆ ತರದೇ ಇರುವುದು ನಿಜಕ್ಕೂ ಭ್ರಮನಿರಸನಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಾಸಕರ ಮಗ ನಿತೀಶ್ ರಾಣೆ ಅವರು ರೈಲ್ವೆ ಇಂಜಿನಿಯರ್ ಮೇಲೆ ಕೆಸರು ನೀರನ್ನು ಎರಚಿದ್ದು, ಮತ್ತು ಅದನ್ನು ಅವರ ತಂದೆ ಸಮರ್ಥಿಸಿಕೊಂಡದ್ದು ಎರಡೂ ಕೂಡ ಇಂತಹದ್ದೇ ಅಧಃಪತನದ ಸಂಕೇತ. ತಮ್ಮವರು ಎನಿಸಿಕೊಂಡ ಕಾರಣಕ್ಕೆ, ತಮ್ಮವರ ತಪ್ಪನ್ನು ಸರಿಯೆಂದು ಹೇಳಿಕೊಳ್ಳುವ ದೃತರಾಷ್ಟ್ರ ಸಂತತಿಯಿಂದ, ಕಾಂಗ್ರೆಸ್ ಇರಲಿ -ಜೆಡಿಎಸ್ ಇರಲಿ- ಬಿಜೆಪಿ ಇರಲಿ, ಸ್ವಪಕ್ಷೀಯರ ಮೌಲ್ಯಗಳ ಕುಸಿತವನ್ನು ಸಮರ್ಥಿಸಿಕೊಳ್ಳುವ ಜನಪ್ರತಿನಿಧಿಗಳು ಇರುವಾಗ ರಾಷ್ಟ್ರದಲ್ಲಿ ಸುಧಾರಣೆ ಸಾಧ್ಯವೇ? ಪಕ್ಷದ ಲೆಕ್ಕಾಚಾರ, ಜಾತಿಯ ಲೆಕ್ಕಾಚಾರ ಎಲ್ಲವನ್ನೂ ಮೀರಿ ನಿಂತ ಮೌಲ್ಯಾಧಾರಿತ ನ್ಯಾಯದ ಲೆಕ್ಕಾಚಾರವನ್ನು ಜಾರಿಗೆ ತರುವ ಅಮೂಲ್ಯ ಕ್ಷಣಗಳು ಭಾರತದ ಪ್ರಜೆಗೆ ಒಂದು ಕನಸಾಗಿ ಉಳಿಯದಂತೆ ಸಂದರ್ಭಗಳು ಸೃಷ್ಟಿಯಾಗಲಿ. ಶೋಷಣೆಗೆ ಒಳಗಾದ ಯಾರೇ ಆದರೂ ಕ್ಷಮಾಶೀಲವಾದ ಗುಣದಿಂದ ಒಂದು ಪಟ್ಟು ಹೆಚ್ಚಿನ ಯೋಗ್ಯತೆಯನ್ನು ಹೊಂದಿದವರು ಇರುತ್ತಾರೆ ಮತ್ತು ಜನಮಾನಸದಲ್ಲಿ ಅಚ್ಚಳಿಯದೆ ತಮ್ಮದೇ ಛಾಪನ್ನು ಮೂಡಿಸಿರುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ ಮತ್ತು ಭಾರತದ ಇತಿಹಾಸ ಮತ್ತು ಭವ್ಯ ಪರಂಪರೆ ಗಳು ಇವೆಲ್ಲದಕ್ಕೂ ಸಾಕ್ಷಿಯಾಗಿ ನಿಲ್ಲುತ್ತವೆ. ಯೋಗ ದಿನದ ಎಲ್ಲಾ ಅಂಗ ಭಂಗಿಗಳಿಗೆ ಮಿಗಿಲಾದ ಸಮಚಿತ್ತದ ವೃತ್ತಿಯನ್ನು ಹೊಂದುವ ಯೋಗವು, ಆ ದಿನದ ಆಚರಣೆಗೆ ಸಾರ್ಥಕ್ಯವನ್ನು ತರಲಿ. ಉದ್ವೇಗ, ಉದ್ರೇಕ ಮತ್ತು ಪ್ರತೀಕಾರ ಗಳು ಒಮ್ಮೆಗೆ ಅಹಂಕಾರಗಳನ್ನು ತೃಪ್ತಿಪಡಿಸ ಬಹುದಾದರೂ, ನಮ್ಮ ಮಿತಿಗಳನ್ನು ಮೀರುವ, ಮನುಷ್ಯನ ಒಳಗಿನ ದೈವತ್ವವನ್ನು ಪ್ರಕಟಿಸುವ ಸಾಧನಗಳಲ್ಲ ಎಂಬುದನ್ನು ಇತ್ತಂಡದವರು ಮನಗಂಡರೆ ತಲೆಯನ್ನು ತಣ್ಣಗೆ ಇಟ್ಟುಕೊಳ್ಳುವ ಯೋಗ ಸಿದ್ಧಿಸಿದೆ ಎಂಬ ಸಮಾಧಾನವನ್ನು ನಾವೆಲ್ಲರೂ ತಳೆಯಬಹುದು.
ಅಧಿಕಾರವು ಸೃಷ್ಟಿಸುವ ಅಮಲಿಗೆ ಬಲಿಯಾಗದವರು ನಿಜಕ್ಕೂ ವಿಜಯಶಾಲಿಗಳು. ದರ್ಪ, ದುರಹಂಕಾರ ಇವೆಲ್ಲವೂ ನಹುಷ ಚಕ್ರವರ್ತಿಯನ್ನು ದೇವೇಂದ್ರನ ಸ್ಥಾನದಿಂದ ಪದಚ್ಯುತಗೊಳಿಸಿ ಹೆಬ್ಬಾವು ಆಗಿಸಿದಂತೆ ಎಲ್ಲ ಸೌಭಾಗ್ಯಗಳನ್ನು ನುಂಗಿ ನೊಣೆಯಬಹುದು. ಆದರೆ ಅಂತಹ ಅಹಂಕಾರ ಇಲ್ಲದಿರುವಿಕೆ ಮತ್ತು ನಮ್ರತೆ ಗಳನ್ನು ಅಸಾಧ್ಯವೆಂದು ವರ್ಗೀಕರಿಸುವ ವರ್ಗವೇ ನಮ್ಮ ಎದುರಿಗಿದೆ. ಆದರೆ ಅದನ್ನು ಸಾಧ್ಯವಾಗಿಸಿದ ಮಹಾತ್ಮರುಗಳ ಮಾರ್ಗದರ್ಶಿ ಇತಿಹಾಸವು ನಮ್ಮ ಕಣ್ಣಮುಂದಿದೆ. ಚುನಾವಣಾ ಸಂದರ್ಭಗಳಲ್ಲಿ ಅಂತಹ ಮಹಾತ್ಮರ ಹೆಸರುಗಳನ್ನು, ಅವರ ಆದರ್ಶಗಳನ್ನು ನಮ್ಮ ಘೋಷವಾಕ್ಯವನ್ನಾಗಿ ಮಾಡಿಕೊಂಡದ್ದೂ ಇದೆ. ಅವೆಲ್ಲವನ್ನೂ ಬದುಕಿನಲ್ಲಿ ಅಳವಡಿಸುವುದಕ್ಕೆ ಆಳವಾದ ಶ್ರದ್ಧೆಯ ಅಗತ್ಯವೂ ಇದೆ.
ಇತ್ತೀಚೆಗೆ ಪುತ್ತೂರಿನಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಂದ ವೈದ್ಯರ ಮೇಲೆ ನಡೆದ ಒಂದು ಪ್ರಕರಣದಲ್ಲಿ ಜನಪ್ರತಿನಿಧಿಗಳಿಗೂ ವೈದ್ಯರಿಗೂ ಒಂದು ಸಂದಿಗ್ಧದ ಕ್ಷಣ ಎದುರಾಗಿದೆ. ಸಂಘರ್ಷದಿಂದ ಸಂಘರ್ಷವನ್ನು ಅಲ್ಲದೆ ಶಾಂತಿಯ ಉತ್ಕರ್ಷವನ್ನು ಎಂದಿಗೂ ನಿರೀಕ್ಷಿಸಲಾಗದು. ಇದು ಕೇವಲ ಒಂದು ಧಾರ್ಮಿಕ ಉಪನ್ಯಾಸ ರೀತಿಯ ಹೇಳಿಕೆ ಅಲ್ಲ. ಬುದ್ಧಿಯ ಜರಡಿಯಲ್ಲಿ ಗಾಳಿಸಿ ಅನುಷ್ಠಾನಗೊಳಿಸ ಬೇಕಾದ “ತಿತಿಕ್ಷೆ “ಎಂಬ ಗುಣ. ಚಿಂತೆ ಮಾಡದೆ, ಗೊಣಗದೆ ಪ್ರತೀಕಾರ ಬುದ್ಧಿ ತಳೆಯದೆ, ಕಷ್ಟಗಳನ್ನು ಸ್ವೀಕರಿಸುವುದು. ಆ ಮೂಲಕ ವಿಕಾಸದ ಹಾದಿಯಲ್ಲಿ ಸಾಗುವುದು. “ಇದೆಲ್ಲವೂ ಅಸಾಧ್ಯ, ಆಗುವ ಹೋಗುವ ಮಾತಲ್ಲ ” ಎಂದು ಹೇಳುವವನು ದಯವಿಟ್ಟು ಧರ್ಮ, ಶ್ರೀರಾಮ, ಹಿಂದುತ್ವ, ಸನಾತನ ಶಬ್ದಗಳನ್ನು ಬಳಸುವಲ್ಲಿ, ಅವುಗಳನ್ನು ಕೇವಲ ಶಬ್ದಗಳನ್ನಾಗಿ ಗ್ರಹಿಸಿದ್ದಾರೆ ಹೊರತು ತಾತ್ಪರ್ಯ ಸಹಿತ ಪ್ರಯುಕ್ತ ಪದಪುಂಜಗಳಾಗಿ ಅಲ್ಲ ಎಂಬುದನ್ನು ಗ್ರಹಿಸಬಹುದು. ಜನಪ್ರತಿನಿಧಿ ಯಾದವನು ತಾನು ಮಾದರಿ ರೂಪಿ ಆಗಬೇಕಾಗಿರುವುದರಿಂದ ಅವನಿಂದ ಮೊದಲಾಗಿ ಈ ಗುಣವನ್ನು ಸಮಾಜ ಬಯಸುತ್ತದೆ. ಇದನ್ನು ಅಳವಡಿಸದೆ ಇದ್ದರೆ ಅವನು ಮಾತ್ರವಲ್ಲ, ಅವನ ಆಳ್ವಿಕೆಗೆ ಒಳಪಟ್ಟ ಪ್ರದೇಶವು ಅವನತಿಯತ್ತ ಸಾಗುತ್ತದೆ ಎಂಬುದು ಕಟುಸತ್ಯ. ಆದುದರಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಗುಣಾತ್ಮಕ ಮೌಲ್ಯಗಳು ಮಾನದಂಡಗಳಾಗಬೇಕೇ ಹೊರತು, ಜಾತಿ ಬಲ ಜನ ಬಲ ಧನ ಬಲಗಳ ಅಳತೆಗೋಲುಗಳಲ್ಲ. ಈ ವಿಚಾರವನ್ನು ಕಳೆದ ವಿಧಾನಸಭಾ ಪೂರ್ವದ ಚುನಾವಣಾ ತಯಾರಿ ಸಭೆಯಲ್ಲಿ ಇದೇ ಪಂಚವಟಿಯಲ್ಲಿ ಮೀಟಿಂಗಿನಲ್ಲಿ ಹೇಳಿದ್ದೇನೆ. ಎಲ್ಲಾ ವರಿಷ್ಠರು ಇದ್ದರು. ಆದರೆ ನಾನು ಏನೋ ವಿಚಿತ್ರ ಮಾತಾಡಿದ್ದೇನೆ ಎನ್ನುವಂತೆ ಎಲ್ಲರೂ ನನ್ನನ್ನು ನೋಡಿದರು. ನನ್ನ ದನಿಗೆ ಯಾರು ಧ್ವನಿ ಸೇರಿಸಲ್ಲ. ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಪಂಚಾಯಿತಿನವರಿಗೆ ಎಲ್ಲ ಜನ ಪ್ರತಿನಿಧಿಗಳಿಗೆ ಮಾತನಾಡುವುದು ಹೇಗೆ, ನಮ್ರತೆಯನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬ ತರಬೇತಿಯನ್ನು ಕೊಟ್ಟರೆ ಒಳ್ಳೆಯದು ಎಂದು ಮೊದಲೇ ಹೇಳಿದ್ದೆ. ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.
ಇತ್ತೀಚೆಗೆ ಮೋದಿಯವರು ಅಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದರು? ವೈದ್ಯಾಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಯೋಚಿಸಿ.
ನಾನು ಗಮನಿಸಿದಂತೆ, ಗ್ರಾಮಪಂಚಾಯಿತಿನಿಂದ ಹಿಡಿದು ಜಿಲ್ಲಾಪಂಚಾಯಿತಿವರೆಗೆ ಎಲ್ಲರಿಗೂ ಹೇಗೆ ಮಾತನಾಡಬೇಕು ಮತ್ತು ನಮ್ರತೆಯನ್ನು ಹೇಗೆ ರೂಡಿಸಿಕೊಳ್ಳಬೇಕು ಎಂಬುದರ ಪ್ರಾಥಮಿಕ ತರಬೇತಿಯ ಅಗತ್ಯವಿದೆ. ಪಕ್ಷದ ವರಿಷ್ಠರು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಪಕ್ಷಕ್ಕೆ ಕೆಟ್ಟ ಹೆಸರು ತರುವ ಇಂತಹ ವರ್ತನೆಗಳ ಬಗ್ಗೆ ಸ್ಪಷ್ಟ ಕಡಿವಾಣಗಳನ್ನು ಹಾಕಬೇಕು.
ಜೊತೆಗೆ ಮಹಾತ್ಮರು ಒಬ್ಬರ ಮಾತು ನನಗೆ ನೆನಪಾಗುತ್ತಿದೆ.-” ಪ್ರಧಾನಿಗೆ (ಜನಪ್ರತಿನಿಧಿಗೆ) ತಾನು ಪ್ರಧಾನಿ ಎಂಬ ಅಹಂಕಾರ ಬಂದರೆ, ಅವನನ್ನು ಯಾರು ಆ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೋ, ಅವರೇ ಅವನನ್ನು ಕೆಳಗೆ ಇಳಿಸುತ್ತಾರೆ.” ಎಲ್ಲಾ ಸದ್ಗುಣಗಳನ್ನು ನುಂಗಿ ಹಾಕುವುದಿದ್ದರೆ ಅದು ಅಹಂಕಾರ ಮಾತ್ರ. ತನ್ನದು ತಪ್ಪಾಗಿದೆ ಕ್ಷಮಿಸಬೇಕು ಎಂದು ಕ್ಷಮೆ ಕೇಳುವುದಕ್ಕೂ ಅಹಂಕಾರವನ್ನು ಅಷ್ಟರಮಟ್ಟಿಗೆ ತಗ್ಗಿಸ ಬೇಡವೇ? ಅರ್ಥಾತ್ ಕ್ಷಮೆ ಕೇಳುವುದೆಂದರೆ ಅಂತರಂಗವನ್ನು ಶುದ್ಧಗೊಳಿಸುವ ಒಂದು ಪ್ರಕ್ರಿಯೆ. ಅಹಂಕಾರದ ನಡವಳಿಕೆಯನ್ನು ಸಹಿಸಿಕೊಳ್ಳುವುದು ತಿತಿಕ್ಷೆ ಅಥವಾ ಕಷ್ಟಸಹಿಷ್ಣುತೆ ಎಂಬ ಶುದ್ಧೀಕರಣ ಪ್ರಕ್ರಿಯೆ. ಇದು ಪ್ರಾಯೋಗಿಕ ಮನಶಾಸ್ತ್ರ.
ಆದರೆ ಒಂದಂತೂ ಕಠೋರ ಸತ್ಯ.” ತಪ್ಪಾಯ್ತು, ಕ್ಷಮಿಸಿಬಿಡಿ” ಎಂದು ಹೇಳಿ ಸರಿಪಡಿಸಬಹುದಾದ ಘಟನೆಗಳಿಂದಲೇ ಸಮಾಜದಲ್ಲಿ ಬಹುದೊಡ್ಡ ಗಲಾಟೆ ದೊಂಬಿಗಳು ಸಂಭವಿಸುತ್ತವೆ. ಆದರ್ಶ ಮತ್ತು ಅನುಷ್ಠಾನಗಳ ನಡುವಿನ ಬಿರುಕು ದೊಡ್ಡದಾದಾಗ ಇಂತಹ ಗಲಾಟೆಗಳು ಜನ್ಮ ತಳೆಯುತ್ತವೆ. ವೇಗ ಪ್ರತಿಬಂಧಕಗಳಿಲ್ಲದ, ತಿರುವುಗಳಿಲ್ಲದ ರಸ್ತೆಯಲ್ಲಿ ಚಲಿಸುವ ಬ್ರೇಕ್ ಇಲ್ಲದ ವಾಹನಗಳಂತೆ ಹೋಗುತ್ತಲೇ ಇರುತ್ತದೆ. ಎಲ್ಲೋ ಒಂದು ಕಡೆ? ಚರಂಡಿಗೆ ಬಿದ್ದಾಗ ನಿಲ್ಲುತ್ತದೆ!
✍ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.