ಶಾಲೆ, ಕಾಲೇಜಿಗೆ ಹೋಗುವ ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ? ಯಾವ ರೀತಿ ಅವರ ನಡವಳಿಕೆ ಇದೆ ? ಮೊಬೈಲ್ನಲ್ಲಿ ದಿನಿವಿಡೀ ಒಬ್ಬರೇ ಕುಳಿತು ಏನು ನೋಡುತ್ತಾರೆ, ಏನು ಮಾಡುತ್ತಾರೆ ? ಎಂಬುದನ್ನು ನೀವು ಗಮನಿಸಿದ್ದೀರಾ ? ಇಲ್ಲವಾದರೆ ಗಮನಿಸುವುದಕ್ಕೆ ಆರಂಭಿಸುವುದು ಉತ್ತಮ. ಸಮಾಜ ಕೆಟ್ಟಿದೆ, ವ್ಯವಸ್ಥೆ ಕೆಟ್ಟಿದೆ ಎಂದು ನಂತರ ದೂರುವ ಮೊದಲು ಈಗಲೇ ಎಚ್ಚೆತ್ತುಕೊಳ್ಳುವುದು ಹೆಚ್ಚು ಸೂಕ್ತ.
ಕಳೆದೊಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನತೆಯದ್ದೇ ಸುದ್ದಿ. ಪುತ್ತೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಒಂದು ಕಡೆಯಾದರೆ ಮಂಗಳೂರಿನಲ್ಲಿ ಯುವತಿಯ ಮೇಲೆ ಇರಿದ ಪ್ರಕರಣ ಇನ್ನೊಂದು. ಇದೆರಡು ಈ ವಾರದ ಘಟನೆಗಳು. ಇದಾದ ಬಳಿಕ ಅನೇಕ ಮಂದಿ ಮಾತನಾಡುತ್ತಾರೆ, “ಇದು ಹೊರಬಂದ ಪ್ರಕರಣ, ಹೊರಬಾರದ ಪ್ರಕರಣ ಇನ್ನೆಷ್ಟು ಇರಬಹುದು”. ಇದರ ಅರ್ಥ, ಇಂದಿನ ವ್ಯವಸ್ಥೆ ಮೇಲೆ ಅನೇಕರು ನಿರಾಶೆಯನ್ನು ಹೊಂದಿದ್ದಾರೆ. ಇದಕ್ಕೆ ಕಾಲೇಜು, ಸಮಾಜ, ವ್ಯವಸ್ಥೆ, ಪೊಲೀಸ್ ಇಲಾಖೆ ಮಾತ್ರವೇ ಕಾರಣವಲ್ಲ ಪೋಷಕರೂ ಕಾರಣರಾಗುತ್ತಾರೆ.
ಎರಡು ವರ್ಷದ ಹಿಂದೆ ಹೈಸ್ಕೂಲ್ ಒಂದರಲ್ಲಿ ಶಾಲೆಯ ಕಚೇರಿ ಬೀಗ ಮುರಿದು ಒಳನುಗ್ಗಿ ಹಣವನ್ನು ಲಪಟಾಯಿಸಿದರು. ಸಿಸಿ ಕ್ಯಾಮರಾ ವೀಕ್ಷಣೆ ಮಾಡಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂತು. ಅದೇ ಶಾಲೆಯ ವಿದ್ಯಾರ್ಥಿಗಳ ತಂಡ ಮಾಡಿರುವ ಕಳ್ಳತನ ಬೆಳಕಿಗೆ ಬಂದಿತ್ತು. ಬಳಿಕ ವಿಚಾರಣೆ ಮಾಡಿದಾಗ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಗಂಟೆಗಟ್ಟಲೆ ಸಿಸಿ ಕ್ಯಾಮಾರ ಹೇಗೆ ಬಂದ್ ಮಾಡಬಹುದು ಎಂದು ಗೂಗಲ್ ಸರ್ಚ್ ಮಾಡಿದರು. ನಂತರ ಹಾಗೆಯೇ ಮಾಡಿದ್ದರು. ಆದರೂ ಒಂದು ಸಿಸಿ ಕ್ಯಾಮಾರ ವಿದ್ಯಾರ್ಥಿಗಳ ಗಮನಕ್ಕೆ ಬಾರದೇ ಸಿಕ್ಕಿಬಿದ್ದಿದ್ದರು. ಮನೆಯವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅವರು ಪ್ರಾಜೆಕ್ಟ್ ಅಂತ ಮೊಬೈಲ್ನಲ್ಲಿ ನೋಡುತ್ತಿದ್ದರು. ನಾವು ಗಮನಿಸಲಿಲ್ಲ ಎಂದು ಹೇಳಿದ್ದರು. ಗುಂಪಾಗಿ ಈ ತಂಡ ಏನು ಮಾಡಬಹುದು ಎಂದು ಮೊಬೈಲ್ನಲ್ಲಿ ವೀಕ್ಷಣೆ ಮಾಡುತ್ತಿತ್ತು.
ಇಂದು ಪ್ರಾಜೆಕ್ಟ್ ಎಲ್ಲಾ ಕಾಲೇಜು, ಶಾಲೆಗಳಲ್ಲಿ ಹೆಚ್ಚಾಗಿದೆ. ಈ ಹೆಸರಲ್ಲಿ ಅನೇಕ ಚರ್ಚೆಗಳು ನಡೆಯುತ್ತಿದೆ. ಪ್ರಾಜೆಕ್ಟ್ ತಂಡದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿ ಎಂದು ಬೇಧವಿಲ್ಲದೆ ಎಲ್ಲರೂ ತೊಡಗಿಸಿಕೊಳ್ಳುತ್ತಾರೆ. ಒಂದಾಗಿಯೇ ಇರುತ್ತಾರೆ. ರಜಾ ದಿನವೂ ಪ್ರಾಜೆಕ್ಟ್ ಹೆಸರಲ್ಲಿ ಮಕ್ಕಳು ಮನೆ ಬಿಡುತ್ತಾರೆ. ಎಲ್ಲಿಗೆ ಹೋಗುತ್ತಾರೆ, ಯಾರು ಜೊತೆಯಲ್ಲಿ ಇರುತ್ತಾರೆ ಎಂಬ ಬಗ್ಗೆ ಕನಿಷ್ಟವಾಗಿಯೂ ಪೋಷಕರು ವಿಚಾರಣೆ ಮಾಡದೇ ಇದ್ದರೆ ಮುಂದೆ ಅಪಾಯವೂ ಹೆಚ್ಚಿದೆ. ಹಾಗಂತ ಎಲ್ಲಾ ವಿದ್ಯಾರ್ಥಿಗಳು ದಾರಿ ತಪ್ಪುತ್ತಾರೆ ಅಂತಲ್ಲ. ಮೊಬೈಲ್ ಮೂಲಕ , ಗೂಗಲ್ ಮೂಲಕ ಹುಡುಕಾಡುತ್ತಾ ಹೋದಾಗ ಕಾಣುವ ಚಿತ್ರ ಎಳೆಯ ಮನಸ್ಸು ಬಿಡಿ ಹಿರಿಯರನ್ನೂ ಸೆಳೆಯುತ್ತದೆ. ಈಗ ಕಾಲೇಜು ಬಿಡಿ ಶಾಲೆಗೆ ಹೋಗುವ ಮಕ್ಕಳೇ ಮೊಬೈಲ್ ಹೊಂದಿರುತ್ತಾರೆ. ಹೆತ್ತವರಿಗೂ ಅನಿವಾರ್ಯವಾಗಿದೆ. ಅದರ ನಂತರ ಗಮನಿಸದೇ ಇದ್ದರೆ ಮಾತ್ರ ಅಪಾಯವೂ ಇದೆ. ಇದರ ಜೊತೆಗೆ ಮಾದಕ ವಸ್ತುಗಳೂ ಕಾಲೇಜು ವಠಾರದಲ್ಲಿ ಹೆಚ್ಚಾಗಿ ಸಿಗುವಂತೆ ಜಾಲಗಳೂ ಮಾಡುತ್ತವೆ. ಒಬ್ಬ ವಿದ್ಯಾರ್ಥಿಯ ಬಳಸಿ ಈ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವ ಜಾಲವೂ ಹರಡಿರುತ್ತದೆ ಎಂಬುದು ಇದುವರೆಗಿನ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಎಚ್ಚರ ಇರಬೇಕಾದ್ದು ಪೋಷಕರು ಮೊದಲು. ಘಟನೆ ನಡೆದ ಬಳಿಕ ಪೊಲೀಸ್ ಇಲಾಖೆ, ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಇನ್ಯಾರನ್ನೋ ದೂರಿದರೆ ಪ್ರಯೋಜನವಿಲ್ಲ. ಯಾವುದೇ ಘಟನೆಯಾದರೆ ಇಂದು ಮೊಬೈಲ್ ಮೂಲಕ ಸೆರೆಯಾಗುತ್ತದೆ ಬಳಿಕ ಕೆಲವು ದಿನದ ಬಳಿಕ ಅದುವೇ ವೈರಲ್ ಆಗುತ್ತದೆ. ಯಾವುದೇ ಸಂದರ್ಭದಲ್ಲಿ ಜಾಲಗಳಿಗೆ ಸಿಲುಕಿದ ಹುಡುಗಿಯರು ಹೇಳಲಾಗದ ಸ್ಥಿತಿಯಲ್ಲಿ ಇರುತ್ತಾಳೆ. ಘಟನೆಯ ಬಳಿಕ ವಿದ್ಯಾರ್ಥಿಗಳನ್ನು ಹಳಿದು ಪ್ರಯೋಜನವೇ ಇಲ್ಲ.
ಈ ಎಲ್ಲಾ ಕಾರಣಕ್ಕೆ ಎಚ್ಚರಿಕೆ ಹೆಚ್ಚು ವಹಿಸಿದರೆ ಉತ್ತಮ. ಶಾಲೆ ಕಾಲೇಜು ಮಕ್ಕಳ ನಡವಳಿಕೆ, ಮೊಬೈಲ್ ಗಮನಿಸುವುದು, ಹೆತ್ತವರೇ ಆಗಾಗ ಪರಿಶೀಲನೆ ಮಾಡುವುದು ಹೆಚ್ಚು ಉತ್ತಮ. ಇದು ವಿಶ್ವಾಸದ ಕೊರತೆಯಲ್ಲ, ಮಕ್ಕಳ ಮೇಲೆ ಅಪನಂಬಿಕೆಯ ಪ್ರಶ್ನೆಯೂ ಅಲ್ಲ. ಸುರಕ್ಷತೆ ಹಾಗೂ ಭವಿಷ್ಯದ ಪ್ರಶ್ನೆ ಅಷ್ಟೇ. ಈ ಜವಾಬ್ದಾರಿ ಪೋಷಕರಿಗೂ ಇದೆಯಲ್ಲ.
✍ ಸುಳ್ಯನ್ಯೂಸ್.ಕಾಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.