ಅಹ್ಮದಾಬಾದ್ : ಗುಜರಾತಿನ ವಿಜಯ್ ರೂಪಾಣಿ ನೇತೃತ್ವದ ಬಿಜೆಪಿ ಸರ್ಕಾರ ಮಂಗಳವಾರ ಐತಿಹಾಸಿಕ ಬಜೆಟ್ ಅನ್ನು ಮಂಡನೆಗೊಳಿಸಿದೆ. ಬಜೆಟ್ ಗಾತ್ರ ರೂ. 2 ಲಕ್ಷ ಕೋಟಿಗಳನ್ನು ದಾಟಿದ್ದು, ಗುಜರಾತ್ ರಾಜ್ಯ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ಬಜೆಟ್ ಅನ್ನು ಮಂಡನೆಗೊಳಿಸಲಾಗುತ್ತಿದೆ.
ಗುಜರಾತಿನ ಹಣಕಾಸು ಸಚಿವರಾಗಿ 7ನೇ ಬಜೆಟ್ ಅನ್ನು ಮಂಡಿಸಿದ ನಿತಿನ್ ಪಟೇಲ್ ಅವರು, 2019-20ರ ಸಾಲಿಗೆ ರೂ. 2,04,815 ಕೋಟಿಯ ಕೊಡುಗೆಗಳನ್ನು ರಾಜ್ಯಕ್ಕೆ ಘೋಷಣೆ ಮಾಡಿದ್ದಾರೆ. ನೀರು ನಿರ್ವಹಣೆ, ಹಸಿರೀಕರಣ, ಶುದ್ಧ ಇಂಧನ, ಪರಿಸರ, ಕೃಷಿ, ಉದ್ಯೋಗ ಮತ್ತು ರೈತರ ಕಲ್ಯಾಣದ ಮೇಲೆ ಬಜೆಟ್ ಹೆಚ್ಚಿನ ವೆಚ್ಚ ಮತ್ತು ಹೂಡಿಕೆಗಳನ್ನು ಕಂಡಿದೆ.
“ಇದು ರಾಜ್ಯಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ, ಯಾಕೆಂದರೆ ರಾಜ್ಯ ರಚನೆಯಾದ ನಂತರ ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ 2 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಗಾತ್ರದ ಬಜೆಟ್ ಅನ್ನು ಪ್ರಸ್ತುತಪಡಿಸಲಾಗಿದೆ” ಎಂದು ಪಟೇಲ್ ಹೇಳಿದ್ದಾರೆ.
ಗುಜರಾತಿನಲ್ಲಿನ ಯಾವ ಮನೆಯೂ ಟ್ಯಾಪ್ ನೀರಿನಿಂದ ಹೊರಗುಳಿಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 20,000 ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಪಟೇಲ್ ತಮ್ಮ ಬಜೆಟ್ ಭಾಷಣದ ವೇಳೆ ಹೇಳಿದ್ದಾರೆ.
2022 ರ ವೇಳೆಗೆ ರಾಜ್ಯವು ಶುದ್ಧ ಇಂಧನ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಲಿದೆ ಮತ್ತು ಅದರ ಸ್ಥಾಪಿತ ಶುದ್ಧ ಶಕ್ತಿಯ ಸಾಮರ್ಥ್ಯವನ್ನು ಪ್ರಸ್ತುತ ಇರುವ 8,885 ಮೆಗಾವ್ಯಾಟ್ನಿಂದ 30,000 ಮೆಗಾವ್ಯಾಟ್ಗೆ ಹೆಚ್ಚಿಸಲಾಗುತ್ತದೆ. ಅಲ್ಲದೇ, ಇದರಲ್ಲಿ 10,000 ಮೆಗಾವ್ಯಾಟ್ ಅನ್ನು ಇತರ ರಾಜ್ಯಗಳಿಗೆ ಮಾರಾಟ ಮಾಡಲು ರಾಜ್ಯ ಯೋಜಿಸಿದೆ ಎಂದು ಪಟೇಲ್ ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ರಾಜ್ಯದ ಆರ್ಥಿಕತೆಯು ಶೇಕಡಾ 10 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದು, ಇದು ದೊಡ್ಡ ರಾಜ್ಯಗಳ ಪೈಕಿ ಅತಿ ಹೆಚ್ಚು. 2017-18ರಲ್ಲಿ ರಾಜ್ಯವು ಶೇ 11.2 ರಷ್ಟು ಬೆಳವಣಿಗೆಯ ದರವನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.