ನವದೆಹಲಿ: ಕಣಿವೆ ರಾಜ್ಯಕ್ಕೆ ಕಾಶ್ಮೀರಿ ಪಂಡಿತರನ್ನು ಮತ್ತು ಸೂಫಿಗಳನ್ನು ವಾಪಾಸ್ ತರಲು ಬದ್ಧರಾಗಿರುವುದಾಗಿ ಹೇಳಿರುವ ಗೃಹಸಚಿವ ಅಮಿತ್ ಶಾ ಅವರು, ಪ್ರಸಿದ್ಧ ಖೀರ್ ಭವಾನಿ ದೇಗುಲದಲ್ಲಿ ಕಾಶ್ಮೀರಿ ಪಂಡಿತರು ಪ್ರಾರ್ಥನೆ ಸಲ್ಲಿಸುವ ಕಾಲ ಬಂದೇ ಬರುತ್ತದೆ ಎಂದಿದ್ದಾರೆ.
“ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೊರದಬ್ಬಲಾಯಿತು. ಅನೇಕ ದೇಗುಲಗಳನ್ನು ನಾಶಪಡಿಸಲಾಯಿತು. ಮಾತ್ರವಲ್ಲದೇ ಜಮ್ಮು ಕಾಶ್ಮೀರದಲ್ಲಿ ಏಕತೆ ಮತ್ತು ಸೌಹಾರ್ದತೆಯ ಮಾತನಾಡುತ್ತಿದ್ದ ಸೂಫಿಸಂ ಅನ್ನೂ ಟಾರ್ಗೆಟ್ ಮಾಡಲಾಯಿತು” ಎಂದಿದ್ದಾರೆ.
“ಕಾಶ್ಮೀರಿ ಪಂಡಿತರ ಮತ್ತು ಸೂಫಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆದಾಗ ಅವರ ಪರವಾಗಿ ಯಾರೊಬ್ಬರೂ ಧ್ವನಿ ಎತ್ತಲಿಲ್ಲ” ಎಂದಿರುವ ಶಾ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾಶ್ಮೀರಿ ಪಂಡಿತರನ್ನು ವಾಪಾಸ್ ಕರೆತರಲು ಬದ್ಧವಾಗಿದೆ ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಣೆಗೊಳಿಸುವ ಬಗೆಗಿನ ಮತ್ತು ಗಡಿ ಪ್ರದೇಶದ ಜನರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒದಗಿಸುವ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ನಾವು ಕಾಶ್ಮೀರದ ಸಂಸ್ಕೃತಿಯನ್ನು ರಕ್ಷಿಸುತ್ತೇವೆ. ಕಾಶ್ಮೀರಿ ಪಂಡಿತರು ಮಾತಾ ಖೀರ್ ಭವಾನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಸಮಯ ಬರುತ್ತದೆ ಮತ್ತು ಅವರೊಂದಿಗೆ ಸೂಫಿಗಳನ್ನು ಸಹ ನಾವು ವಾಪಾಸ್ ಕರೆ ತರುತ್ತೇವೆ. ಕಾಶ್ಮೀರದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದೆ” ಎಂದು ಗೃಹ ಸಚಿವರು ಹೇಳಿದರು.
ಶ್ರೀನಗರದಿಂದ ಪೂರ್ವಕ್ಕೆ 14 ಕಿ.ಮೀ ದೂರದಲ್ಲಿರುವ ಮಾತಾ ಖೀರ್ ಭವಾನಿ ದೇವಾಲಯವು ಕಾಶ್ಮೀರಿ ಪಂಡಿತರ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.