ನವದೆಹಲಿ: ಮಹತ್ವದ ಬೆಳೆವಣಿಗೆಯೊಂದರಲ್ಲಿ ಸೌದಿ ಅರೇಬಿಯಾವು ಭಾರತದ ಹಜ್ ಕೋಟಾವನ್ನು 170,000 ದಿಂದ 200,000 ಕ್ಕೆ ಏರಿಕೆ ಮಾಡಿದೆ. ಹೀಗಾಗಿ ಇನ್ನು ಮುಂದೆ 30,000 ಹೆಚ್ಚುವರಿ ಭಾರತೀಯ ಮುಸ್ಲಿಮರಿಗೆ ವಾರ್ಷಿಕವಾಗಿ ಮೆಕ್ಕಾ ಯಾತ್ರೆಗೆ ಹೋಗುವ ಅವಕಾಶ ಸಿಕ್ಕಂತಾಗಿದೆ. ಸೌದಿ ಅರೇಬಿಯಾದ ಉತ್ತರಾಧಿಕಾರಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ದ್ವಿಪಕ್ಷೀಯ ಮಾತುಕತೆ ನಡೆಸಿದ ಸಂದರ್ಭದಲ್ಲಿ ಭಾರತದ ಹಜ್ ಕೋಟಾದ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿತ್ತು.
ಜಿ 20 ಶೃಂಗಸಭೆಗಾಗಿ ಪ್ರಸ್ತುತ ಜಪಾನ್ನಲ್ಲಿರುವ ಮೋದಿಯವರು, ಸಲ್ಮಾನ್ ಅವರೊಂದಿಗೆ ವ್ಯಾಪಾರ ಮತ್ತು ಹೂಡಿಕೆ, ಇಂಧನ ಸುರಕ್ಷತೆ ಮತ್ತು ಭಯೋತ್ಪಾದನೆ ನಿಗ್ರಹದ ಬಗ್ಗೆ ಚರ್ಚಿಸಿದರು.
ಇವರ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆಯವರು, “ಭಾರತದ ಹಜ್ ಕೋಟಾವನ್ನು ವಾರ್ಷಿಕವಾಗಿ 170,000 ರಿಂದ 200,000 ಕ್ಕೆ ಏರಿಸುವುದಾಗಿ ಸೌದಿ ರಾಜಕುಮಾರ ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ. ಅಲ್ಲದೇ, ಇದರಿಂದಾಗಿ ಶೀಘ್ರದಲ್ಲೇ ಆರಂಭವಾಗಲಿರುವ ಹಜ್ ಯಾತ್ರೆಗೆ ಎರಡು ಲಕ್ಷ ಭಾರತೀಯರಿಗೆ ಹೋಗಲು ಅವಕಾಶವಿದೆ ಎಂದಿದ್ದಾರೆ.
ಇಬ್ಬರು ನಾಯಕರು ಹೆಚ್ಚಿನ ಪ್ರವಾಸೋದ್ಯಮ, ಹೆಚ್ಚುವರಿ ವಿಮಾನಗಳ ಅವಶ್ಯಕತೆಯ ಬಗ್ಗೆ ಪರಸ್ಪರ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಮತ್ತೊಮ್ಮೆ ಭೇಟಿಯಾಗಲು ಸಮ್ಮತಿಸಿದ್ದಾರೆ ಎಂದು ಗೋಖಲೆ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ಸೌದಿಯಲ್ಲಿ ಜರುಗಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾಗುವಂತೆ ಮೋದಿಯನ್ನು ಸಲ್ಮಾನ್ ಆಹ್ವಾನಿಸಿದ್ದಾರೆ ಮತ್ತು ಮೋದಿ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.