ಜಮ್ಮು ಕಾಶ್ಮೀರದ 2015ರ UPSC ಟಾಪರ್ ಅಥರ್ ಅಮಿರ್ ಖಾನ್ ಅವರ ಬಗ್ಗೆ ನೆನಪಿದೆಯೇ? ಈಗ ಅವರು ರಾಜಸ್ಥಾನದ ಭಿಲ್ವಾರದಲ್ಲಿ ಬಾಲ್ಯವಿವಾಹದ ವಿರುದ್ಧ ಮತ್ತು ಸರ್ಕಾರಿ ಶಾಲೆಗಳ ಪುನರುಜ್ಜೀವನದಲ್ಲಿ ಮೌನವಾಗಿ ಕ್ರಾಂತಿಯನ್ನು ನಡೆಸುತ್ತಿದ್ದಾರೆ.
ಆರು ತಿಂಗಳ ಹಿಂದೆಯಷ್ಟೇ 26 ವರ್ಷದ ಖಾನ್ ಅವರನ್ನು ಭಿಲ್ವಾರದ ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ನೇಮಕ ಮಾಡಲಾಗಿದೆ. ಆ ಪ್ರದೇಶದಲ್ಲಿ ಈಡೇರಿಸಬೇಕಾದ ಹಲವು ಸವಾಲುಗಳು ಇವೆ ಎಂಬುದನ್ನು ಅವರು ಈಗಾಗಲೇ ಮನಗಂಡು ಕಾರ್ಯೋನ್ಮುಖಗೊಂಡಿದ್ದಾರೆ.
ಕೃಷಿ ಭೂಮಿಯ ಕೊರತೆಯಿಂದ ಹಿಡಿದು, ನೀರಿನ ಕೊರತೆ, ಬದುಕಿಗಾಗಿ ಸರ್ಕಾರಿ ಯೋಜನೆಗಳನ್ನೇ ಅವಲಂಬಿಸಿರುವುದು, ಜಾತಿ ಆಧಾರಿತ ವಿಭಜನೆ, ಅತೀ ಹೆಚ್ಚು ಪ್ರಮಾಣದ ಮಕ್ಕಳ ಶಾಲೆ ತೊರೆಯುವಿಕೆ ಎಲ್ಲವೂ ಆ ಪ್ರದೇಶದಲ್ಲಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಭಿಲ್ವಾರ ಜಿಲ್ಲೆ ಅತ್ಯಂತ ಹಿಂದುಳಿದ ಪ್ರದೇಶ.
ಬಾಲ್ಯವಿವಾಹ ಮತ್ತು ಅನಕ್ಷರತೆ ಈ ಭಾಗದ ಅತೀದೊಡ್ಡ ಸಮಸ್ಯೆ ಎಂಬುದನ್ನು ಚೆನ್ನಾಗು ಅರಿತುಕೊಂಡಿರುವ ಖಾನ್ ಅವರು ಆ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದ್ದಾರೆ ಮತ್ತು ಅವರ ಪ್ರಯತ್ನಗಳು ಫಲಕೊಡಲಾರಂಭಿಸಿವೆ. ತನ್ನ ಹುದ್ದೆ ಮತ್ತು ಅನುಭವವನ್ನು ಬಳಸಿಕೊಂಡು ಅವರು ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಿದ್ದಾರೆ.
ಯಾಕೆ ಪೋಷಕರು ತಮ್ಮ ಮಕ್ಕಳಿಗೆ ಕಾನೂನಾತ್ಮಕ ವಯಸ್ಸು ಆಗುವುದಕ್ಕೂ ಮುನ್ನವೇ ಮದುವೆ ಮಾಡುತ್ತಾರೆ ಎಂಬುದು ಖಾನ್ ಮೊದಲು ಅರಿತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆಗ ಅವರಿಗೆ ಗೊತ್ತಾದ ಸಂಗತಿಯೆಂದರೆ, ವಯಸ್ಸಿಗೆ ಬಂದ ಮೇಲೆ ತಮ್ಮ ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗುತ್ತಾರೆ ಎಂಬ ಆತಂಕದಿಂದ, ಅಣ್ಣ ತಮ್ಮಂದಿರಿಗೆ ಒಟ್ಟಿಗೆ ಮದುವೆ ಮಾಡಿದರೆ ಹಣ ಉಳಿಯುತ್ತದೆ ಎಂಬ ಕಾರಣದಿಂದ ಪೋಷಕರು ತಮ್ಮ ಸಣ್ಣ ಮಕ್ಕಳಿಗೆ ಮದುವೆ ಮಾಡುತ್ತಾರೆ.
ಕೆಲವೊಮ್ಮೆ ಅಲ್ಲಿನ ಮಕ್ಕಳು ಮದುವೆಯಾಗಬೇಕೆಂಬ ಪೋಷಕರ ಒತ್ತಡವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳೂ ಇವೆ.
ಈ ಹಿನ್ನಲೆಯಲ್ಲಿ ಖಾನ್ ಅವರು ಎರಡು ಅಂಶಗಳನ್ನು ಪ್ರಮುಖವಾಗಿ ಅನುಷ್ಠಾನಕ್ಕೆ ತಂದರು. ಒಂದು, ಬಾಲ್ಯವಿವಾಹದಂತಹ ಅಥವಾ ಸಣ್ಣ ಮಕ್ಕಳಿಗೆ ಮದುವೆ ಮಾಡಲು ಒತ್ತಾಯಿಸುವಂತಹ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವುದು ಮತ್ತು ಈ ನಿಟ್ಟಿನಲ್ಲಿ ಪೊಲೀಸರನ್ನು ಜಾಗೃತರನ್ನಾಗಿಸುವುದು. ಭಿಲ್ವಾರ ಜಿಲ್ಲಾಡಳಿತದ ಕಛೇರಿಯಲ್ಲೇ ಬಾಲ್ಯವಿವಾದ ಬಗ್ಗೆ ಕಣ್ಗಾವಲನ್ನು ಇಡುವ ಸ್ಪೆಷಲ್ ಕಂಟ್ರೋಲ್ ರೂಮ್ ಅನ್ನು ಸ್ಥಾಪನೆ ಮಾಡಲಾಯಿತು. ಎಸ್ ಎಸ್ ಓ, ತಹಶೀಲ್ದಾರ್, ಪಂಚಾಯತ್ ಸಮಿತಿ ಸದಸ್ಯರು ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಫ್ಲೈಯಿಂಗ್ ಸ್ಕ್ವಾಡ್ ಅನ್ನೂ ರಚನೆ ಮಾಡಿದರು. ಬಾಲ್ಯವಿವಾಹಗಳ ಮೇಲೆ ಹದ್ದಿನ ಕಣ್ಣಿಡುವುದು ಈ ಸಮಿತಿಯ ಕೆಲಸ.
ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿದ ಅವರು, ಅಂಗನವಾಡಿ ಕಾರ್ಯಕರ್ತರನ್ನು, ಸ್ವಸಹಾಯ ಗುಂಪುಗಳನ್ನು, ಗ್ರಾಮ ವಿಕಾಸ ಸಮಿತಿಗಳನ್ನು ತರಬೇತುಗೊಳಿಸಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಹಚ್ಚಿದರು. ಬಾಲ್ಯವಿವಾಹವನ್ನು ಹತ್ತಿಕ್ಕುವ ಬಗೆಗಿನ ಮಾಹಿತಿಯುಳ್ಳ ಕೈಪಿಡಿಗಳನ್ನು ಇವರಿಗೆ ನೀಡಲಾಯಿತು. ಗ್ರಾಮಸ್ಥರಿಂದ ಬಾಲ್ಯವಿವಾಹ ನಡೆಸದಂತೆ, ಮಕ್ಕಳಿಗೆ ಶಿಕ್ಷಣ ಒದಗಿಸುವಂತೆ ಪ್ರತಿಜ್ಞೆಯನ್ನೂ ಮಾಡಿಸುವಂತಹ ಕಾರ್ಯಗಳನ್ನೂ ಮಾಡಿಸಲಾಗುತ್ತಿದೆ.
ಸುಮಾರು 200 ಗ್ರಾಮ ಪಂಚಾಯತ್ಗಳಲ್ಲಿ ಗ್ರಾಮಸ್ಥರ ಸಭೆಯನ್ನು ಏರ್ಪಡಿಸುವ ಜವಾಬ್ದಾರಿಯನ್ನೂ ಈ ತರಬೇತಿ ಪಡೆದ ಸಿಬ್ಬಂದಿಗಳಿಗೆ ನೀಡಲಾಯಿತು. ಖಾನ್ ಅವರು ತಾವು ನಿರಂತರವಾಗಿ ಭೇಟಿ ಕೊಡುವ ಕಟ್ಟಡ ನಿರ್ಮಾಣ ಆವರಣಗಳಿಗೆ, ಶಾಲೆಗಳಿಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ ಮತ್ತು ಸಮುದಾಯ ಭವನಗಳಿಗೆ ಈ ಸಿಬ್ಬಂದಿಗಳನ್ನೂ ಕರೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತಿದ್ದಾರೆ.
ಶಾಲೆಗಳಲ್ಲೂ, ಅಪ್ರಾಪ್ತ ಬಾಲಕಿಯರ ಮಂಡಳಿಯನ್ನು ರಚಿಸಿ ಬಾಲ್ಯವಿವಾಹದಿಂದ ಅವರನ್ನು ದೂರವಿಡುವಂತೆ ಶಿಕ್ಷಕರಿಗೆ ಖಾನ್ ಸೂಚನೆ ನೀಡಿದ್ದಾರೆ. ಶಾಲೆಗಳಲ್ಲಿ ಬಾಲ್ಯವಿವಾಹ ತಡೆ ಕಾಯ್ದೆ ಬಗೆಗಿನ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆ, ಅದರ ಬಗೆಗಿನ ಮಾಹಿತಿಯುಳ್ಳ, ಮಕ್ಕಳ ಹಕ್ಕುಗಳನ್ನು ತಿಳಿಸುವ ಪುಸ್ತಕಗಳನ್ನು ಹಂಚುವಂತೆ ಖಾನ್ ಮಾಡಿದ್ದಾರೆ. ಇದರಿಂದಾಗಿ ಬಾಲ್ಯ ವಿವಾಹವನ್ನು ತಡೆಯುವುದು ತುಂಬಾ ಸುಲಭವಾಗಿದೆ.
ಕೆಲವೊಮ್ಮೆ ಇವರಿಗೆಯೇ ಚಳ್ಳೆ ಹಣ್ಣು ತಿನ್ನಿಸಿ ಮಕ್ಕಳಿಗೆ ಮದುವೆ ಮಾಡುವ ಕಾರ್ಯವನ್ನು ದೊಡ್ಡವರು ಮಾಡುತ್ತಾರೆ ಎಂಬುದನ್ನು ಖಾನ್ ನೆನಪಿಸಿಕೊಳ್ಳುತ್ತಾರೆ. ಮದುವೆ ನಡೆಯುವ ಸ್ಥಳಕ್ಕೆ ಭೇಟಿಕೊಟ್ಟಾಗ ಅಪ್ರಾಪ್ತ ಹೆಣ್ಣು ಅಥವಾ ಗಂಡಿನ ಸ್ಥಾನದಲ್ಲಿ ಇತರೊಬ್ಬ ವಯಸ್ಕರನ್ನು ತಂದು ಕುಳಿಸುವಂತಹ ಕಾರ್ಯವನ್ನು ಜನರು ಮಾಡುತ್ತಾರೆ. ಇಂತಹ ವೇಳೆ ನಾವು ಚಾಣಾಕ್ಷ್ಯವಾಗಿ ಯೋಚಿಸಿ, ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
ಬಾಲ್ಯವಿವಾಹ ತಡೆ ಮಾತ್ರವಲ್ಲದೇ, ಗ್ರಾಮಸ್ಥರು ಮತ್ತು ಗ್ರಾಮ ಮುಖ್ಯಸ್ಥರ ಸಹಕಾರದೊಂದಿಗೆ ಖಾನ್ ಅವರು ಬದ್ನೂರ್ ಸ್ಥಳಿಯ ಶಾಲೆಯನ್ನು ನವೀಕರಣಗೊಳಿಸಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಅವರು, ಶಾಲೆಗಳಿಗೆ ಅಚಾನಕ್ ಭೇಟಿಕೊಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾರೆ. ತಾನು ಭೇಟಿಕೊಟ್ಟ 78 ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂಬುದನ್ನು ಅರಿತುಕೊಂಡ ಅವರು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಗ್ರಾಮದ ಮುಖ್ಯಸ್ಥರೊಂದಿಗೆ ಮಾತನಾಡಿ ದಾನಿಗಳ ನೆರವನ್ನು ಕೋರಿ ಶಾಲೆಗೆ ಬೆಂಚು, ಮೇಜು, ಮಕ್ಕಳಿಗೆ ಪೆನ್, ಪುಸ್ತಕ ಇತ್ಯಾದಿಗಳನ್ನು ಒದಗಿಸುವ ಕೆಲಸ ಮಾಡಿದ್ದಾರೆ. ದೊಡ್ಡ ದೊಡ್ಡ ಗಣ್ಯರಿಗೆ ಪತ್ರ ಬರೆದು, ಶಾಲೆಗಳಿಗೆ ಕೊಡುಗೆ ನೀಡಿ ಎಂದು ಇವರು ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗೆ ಓಗೊಟ್ಟು ಹಲವಾರು ಮಂದಿ ಹಲವು ವಿಧದ ಕೊಡುಗೆಗಳನ್ನು ನೀಡಿದ್ದಾರೆ.
ಕೇವಲ ಆರು ತಿಂಗಳಲ್ಲಿ ಖಾನ್ ಅವರು 70 ಶಾಲೆಗಳಿಗೆ ಕುರ್ಚಿ, ಮೇಜುಗಳು ಸಿಗುವಂತೆ ಮಾಡಿದ್ದಾರೆ. 6 ಸಾವಿರ ಮಕ್ಕಳಿಗೆ ಪೆನ್, ಪೆನ್ಸಿಲ್, ಪುಸ್ತಕಗಳು ಸಿಗುವಂತೆ ಮಾಡಿದ್ದಾರೆ. ಗ್ರಾಮದ ಮುಖ್ಯಸ್ಥರು ಇವರ ಪ್ರೇರಣೆಯಿಂದ ಶಾಲೆಗಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ.
ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗಾಗಿ ಖಾನ್ ಅವರು ಕೌನ್ಸೆಲಿಂಗ್ ಸೆಲ್ ಅನ್ನೂ ಆರಂಭಿಸಿದ್ದಾರೆ.
ಸಮುದಾಯದ ಭಾಗಿಯಿಂದಾಗಿಯೇ ಕಾರ್ಯಕ್ರಮಗಳು ಯಶಸ್ವಿಯಾಗಿದೆ ಎನ್ನುವ ಖಾನ್ ಅವರು, ತಮ್ಮ ಪ್ರತಿ ಅನುಷ್ಠಾನದ ಯಶಸ್ಸನ್ನು ಗ್ರಾಮಸ್ಥರಿಗೆ ನೀಡುತ್ತಾರೆ.
ಜನ ನಮ್ಮೊಂದಿಗಿದ್ದಾಗ ಕಡಿಮೆ ವಿರೋಧಗಳು ವ್ಯಕ್ತವಾಗುತ್ತವೆ. ಬಾಲ್ಯವಿವಾಹ, ಅನಕ್ಷರತೆಯಂತಹ ಪಿಡುಗುಗಳ ಬಗ್ಗೆ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲು ನಮ್ಮ ತುಸು ಪ್ರಯತ್ನ ಸಾಕು. ಭಿಲ್ವಾರದಲ್ಲಿ ನಿಜವಾದ ಪರಿವರ್ತನೆಯನ್ನು ಕಾಣಲು ಇನ್ನೂ ಸಾಧಿಸಬೆಕಾದ ಕಾರ್ಯ ಬಹಳಷ್ಟಿದೆ. ಈ ನಿಟ್ಟಿನಲ್ಲಿ ಜನರನ್ನು ನಾವು ಪ್ರೇರೇಪಿಸುವ ಕಾರ್ಯವನ್ನು ಆರಂಭಿಸಿದ್ದೇವೆ ಎಂದು ಖಾನ್ ಹೇಳುತ್ತಾರೆ.
ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿ, ನಾಗರಿಕ ಸೇವಾ ಪರೀಕ್ಷೆಯನ್ನು ಬರೆದಿರುವ ಜಮ್ಮು ಕಾಶ್ಮೀರ ರಾಜ್ಯದ ಅಥರ್ ಅಮಿರ್ ಖಾನ್ ಅವರು ಭಿಲ್ವಾದರಲ್ಲಿ ನಿಜವಾದ ಪರಿವರ್ತನೆಯನ್ನು ಮಾಡುತ್ತಿದ್ದಾರೆ. ಅವರ ಶ್ರದ್ಧೆ, ಪರಿಶ್ರಮ ಮತ್ತು ಬದ್ಧತೆಗೆ ನಮ್ಮದೊಂದು ಸೆಲ್ಯೂಟ್ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.