ಎಲ್ಲಿ ನೋಡಿದರೂ ಯೋಗ ಯೋಗ ಯೋಗ. ಯಾವ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳ ನೋಡಿದರೂ ಜನ ಯೋಗದೆಡೆಗೆ ಮುಗಿ ಬಿದ್ದಿದ್ದಾರೆ. ಯೋಗದ ಹಿನ್ನೆಲೆ, ಪ್ರಯೋಜನಗಳು ಮತ್ತು ಸಾಧಕರ ಸಾಲು ಸಾಲು ಸುದ್ದಿಗಳು. ಮುಖ್ಯವಾದ ವ್ಯಕ್ತಿಯನ್ನು ಮರೆತಿದ್ದೇವೆ. ಇವತ್ತು ಜಗತ್ತು ಈ ಪರಿ ಯೋಗದ ಆರಾಧನೆ ಮಾಡಲು ಯಾರು ಕಾರಣ? ಭಾರತೀಯ ಸನಾತನ ಧರ್ಮದ ಯೋಗವನ್ನು ಈ ದಿನ ವಿಶ್ವವೇ ಆಚರಿಸುತ್ತಿದೆ ಎಂದಾಗ ಹಿಂದಿರುವ ಆ ಶಕ್ತಿಗೆ ನಮೋ ನಮಃ ಎಂದು ಹೇಳದೇ ಬಿಟ್ಟರೆ ಹೇಗೆ? ಹಾಂ.. ನರೇಂದ್ರ ಮೋದಿಯವರು. ಭಾರತ ಕಂಡಂತಹ ಅದ್ವಿತೀಯ ಪ್ರಧಾನಿ. ಫ್ರಾನ್ಸ್ನ ಐಫೆಲ್ ಟವರ್, ಒಪೆರಾ ಹೌಸ್ ಆಸ್ಟ್ರೇಲಿಯ, ಕಾಂಬೋಡಿಯಾದ ಆಂಗ್ಕೊರ್ ಟೆಂಪಲ್ ಮತ್ತು ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಬ್ರಿಡ್ಜ್ ಸೇರಿದಂತೆ ಜಗತ್ಪ್ರಸಿದ್ಧ ಸ್ಥಳಗಳಲ್ಲಿ ಈ ವರ್ಷ ಜನರು ಯೋಗದ ಮುಂದೆ ತಲೆ ಬಾಗಲಿದ್ದಾರೆ. ಭಾರತದ ರಾಂಚಿಯಲ್ಲಿ ಅದ್ದೂರಿ ಯೋಗ ದಿನ ಆಚರಿಸಲಾಗುತ್ತದೆ. 1893 ರಲ್ಲಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಚಿಕಾಗೊದ ವಿಶ್ವಧರ್ಮ ಸಮ್ಮೇಳನದಲ್ಲಿ ಯೋಗದ ಕುರಿತು ಮಾಹಿತಿ ನೀಡಿದ್ದರು. ಆದರೆ 2015 ರ ತನಕವೂ ಭಾರತವನ್ನು ತಿಳಿದವರ ಹೊರತು ಪಡಿಸಿ ಅದು ಬಿಡಿ ಹೆಚ್ಚಿನ ಭಾರತೀಯರಿಗೂ ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳ ಮಹತ್ವ ತಿಳಿಸಲು ಯೋಗ ದಿನ ಬರಬೇಕಾಯಿತು.
ಸೆಪ್ಟೆಂಬರ್ 27, 2014 ರ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗದ ದಿನದ ಪ್ರಸ್ತಾಪ ಮಾಡಿದ್ದರು. ಭಾರತದಲ್ಲಿ ಹುಟ್ಟಿದ ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಾಧನೆಯಾಗಿದ್ದು ಅದರ ಕುರಿತು ಅಧ್ಭುತವಾಗಿ ಅರಿವು ಮೂಡಿಸಿದರು. “ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ನೆರವೇರಿಕೆ; ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ; ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನ. ಇದು ವ್ಯಾಯಾಮದ ಬಗ್ಗೆ ಅಲ್ಲ, ನಿಮ್ಮೊಂದಿಗೆ, ಜಗತ್ತು ಮತ್ತು ಪ್ರಕೃತಿಯೊಂದಿಗೆ ಏಕತೆಯ ಭಾವವನ್ನು ಕಂಡುಹಿಡಿಯುವುದು. ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಮತ್ತು ಪ್ರಜ್ಞೆಯನ್ನು ಸೃಷ್ಟಿಸುವ ಮೂಲಕ, ಅದು ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ. ಅಂತರರಾಷ್ಟ್ರೀಯ ಯೋಗ ದಿನವನ್ನು ಅಳವಡಿಸಿಕೊಳ್ಳಲು ನಾವು ಕೆಲಸ ಮಾಡೋಣ.” ಎಂದರು. ಮುಂದುವರಿದಂತೆ, ಯೋಗದ ಮೂಲ ಭಾರತದ ಪರಂಪರೆಗಳೊಂದಿಗೆ ಮಿಳಿತಗೊಂಡಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಪತಂಜಲಿ ಮಹರ್ಷಿಗಳನ್ನು ನಾವು ಯೋಗ ಪಿತಾಮಹ ಎಂದರೂ ಪುರಾಣಗಳಲ್ಲಿ ಆದಿಯೋಗಿ ಶಿವನ ಮತ್ತು ಯೋಗದ ಐತಿಹ್ಯವಿದೆ ಎಂದರು.
ಯಾವ ಪರಿಯಲ್ಲಿ ನರೇಂದ್ರ ಮೋದಿಯವರು ಮಾತುಗಳು ಪ್ರಭಾವ ಬೀರಿದವು ಎಂದರೆ ಅದೇ ವರ್ಷದ ಡಿಸೆಂಬರ್ 11 ರಂದು ಭಾರತದ ಖಾಯಂ ಪ್ರತಿನಿಧಿ ಅಶೋಕ್ ಮುಖರ್ಜಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ದಿನದ ಕರಡು ನಿರ್ಣಯವನ್ನು ಪರಿಚಯಿಸಿದರು. ಕರಡು ಪ್ರತಿಗೆ 177 ಸದಸ್ಯ ರಾಷ್ಟ್ರಗಳಿಂದ ವ್ಯಾಪಕ ಬೆಂಬಲವನ್ನು ಸಿಕ್ಕಿತು. ಅದನ್ನು ಯಾವುದೇ ಆಕ್ಷೇಪಣೆ ಇಲ್ಲದೆ ಸ್ವೀಕರಿಸಲಾಯಿತು. ಸಹಿ ಹಾಕಿದ ಒಟ್ಟು 177 ರಾಷ್ಟ್ರಗಳು ಈ ನಿರ್ಣಯವನ್ನು ಸಹ-ಪ್ರಾಯೋಜಿಸಿದವು. ಇದು ವಿಶ್ವಸಂಸ್ಥೆಯ ಸಾಮಾನ್ಯಸಭೆಯ ನಿರ್ಣಯಕ್ಕೆ ಸಹ-ಪ್ರಾಯೋಜಕರಲ್ಲಿ ಇತಿಹಾಸದಲ್ಲಿ ಅತಿ ಹೆಚ್ಚು. ವಿಶ್ವಸಂಸ್ಥೆ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಭಾರತದ ಹಲವಾರು ಆಧ್ಯಾತ್ಮಿಕ ಚಿಂತಕರು ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇಶಾ ಫೌಂಡೇಶನ್ ಸ್ಥಾಪಕ, ಸದ್ಗುರು ಜಗ್ಗೀ ವಾಸುದೇವ್, “ಈ ಒಂದು ಅಡಿಪಾಯ ಒಂದು ರೀತಿಯ ಮಾನವ ಒಳ ಯೋಗಕ್ಷೇಮಕ್ಕೆ ವೈಜ್ಞಾನಿಕ ವಿಧಾನವನ್ನು ಮಾಡಲು ಆಗಿರಬಹುದು, ವಿಶ್ವಾದ್ಯಂತ ಪ್ರಚಂಡ ಹೆಜ್ಜೆ ಇಲ್ಲಿದೆ” ಎಂದರು. ಸ್ಥಾಪಕ ಆರ್ಟ್ ಆಫ್ ಲಿವಿಂಗ್, ರವಿಶಂಕರ್ ಮೋದಿ ಪ್ರಯತ್ನಗಳ ಕುರಿತು “ಆಡಳಿತದ ಪ್ರೋತ್ಸಾಹವಿಲ್ಲದೆ ಬದುಕಲು ಯಾವುದೇ ತತ್ವಶಾಸ್ತ್ರ, ಧರ್ಮ ಅಥವಾ ಸಂಸ್ಕೃತಿಗೆ ಬಹಳ ಕಷ್ಟ ಸಾಧ್ಯ. ಯೋಗ ಇಷ್ಟು ದಿನ ಅನಾಥ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿತ್ತು. ಈಗ, ವಿಶ್ವಸಂಸ್ಥೆಯ ಅಧಿಕೃತ ಮಾನ್ಯತೆ ಯೋಗದ ಪ್ರಯೋಜನವನ್ನು ಇಡೀ ಜಗತ್ತಿಗೆ ಮತ್ತಷ್ಟು ಹರಡುತ್ತದೆ” ಎಂದರು.
ಜೂನ್ 21 ಅನ್ನು ವಿಶ್ವ ಯೋಗ ದಿನದ ದಿನಾಂಕವೆಂದು ಪ್ರಸ್ತಾಪಿಸಲು ಕಾರಣ, ಈ ದಿನಾಂಕವು ಉತ್ತರ ಗೋಳಾರ್ಧದಲ್ಲಿ (ದಕ್ಷಿಣ ಗೋಳಾರ್ಧದಲ್ಲಿ ಕಡಿಮೆ) ವರ್ಷದ ಅತಿ ಉದ್ದದ ದಿನವಾಗಿದೆ. ಇದು ವಿಶ್ವದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದ ವಿಶ್ವ ಯೋಗ ದಿನ ಆಚರಿಸಲಾಗುತ್ತದೆ. ಇದರ ಸವಿ ನೆನಪಾಗಿ 2015 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹತ್ತು ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಿತು. ಜೂನ್ 21, 2015 ರಲ್ಲಿ ಮೊದಲ ಬಾರಿ ಯೋಗ ದಿನ ಭಾರತದಲ್ಲಿ ದೆಹಲಿಯ ರಾಜಪಥದಲ್ಲಿ ಆಚರಿಸಿದರು. ಆಯುಷ್ ಸಚಿವಾಲಯವು ಭಾರತದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿತು. 35.985 ಜನರು ಪಾಲ್ಗೊಂಡಿದ್ದರು. ನರೇಂದ್ರ ಮೋದಿಯವರು ಸೇರಿದಂತೆ ಮತ್ತು 84 ರಾಷ್ಟ್ರಗಳಿಂದ ಗಣ್ಯರು ಭಾಗವಹಿಸಿದ್ದರು. 21 ಆಸನಗಳನ್ನು 35 ನಿಮಿಷಗಳ ಕಾಲ ದೆಹಲಿಯ ರಾಜಪಥದಲ್ಲಿ ನಡೆಸಲಾಯಿತು. ಈ ದಿನವನ್ನು ವಿಶ್ವದಾದ್ಯಂತ ಲಕ್ಷಾಂತರ ಜನರು ಆಚರಿಸಿದರು. ಎನ್ಸಿಸಿ ಕೆಡೆಟ್ಗಳು ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡುವ ಮೂಲಕ “ಏಕರೂಪದ ಯುವ ಸಂಘಟನೆಯಿಂದ ಏಕಕಾಲದಲ್ಲಿ ಅತಿದೊಡ್ಡ ಯೋಗ ಪ್ರದರ್ಶನಕ್ಕಾಗಿ” ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರವೇಶಿಸಿದರು. ರಾಜಪಥದಲ್ಲಿ ನಡೆದ ಈ ಘಟನೆಯು ಆಯುಷ್ ಸಚಿವಾಲಯಕ್ಕೆ ನೀಡಲಾದ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿತು ಮತ್ತು ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಅವರಿಂದ ಸ್ವೀಕರಿಸಲ್ಪಟ್ಟಿತು. ಹೀಗೆ ಆರಂಭವಾದ ಯೋಗ ದಿನ ಈ ವರ್ಷ ಐದನೆಯ ಆವೃತ್ತಿಯಲ್ಲಿ “ಹೃದಯಕ್ಕಾಗಿ ಯೋಗ” ಎಂಬ ಥೀಮ್ನಡಿ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜೂನ್ 5 ರಿಂದ #YogaDay2019 ಅಡಿ ಪ್ರತಿ ದಿನ ಯೋಗಾಸನಗಳ ಆ್ಯನಿಮೇಟೆಡ್ ವಿಡಿಯೋಗಳನ್ನು ಹಾಕುತ್ತಿದ್ದಾರೆ.
ಚುನಾವಣೆ, ರಾಜಕೀಯ ಎಲ್ಲದಕ್ಕೂ ಒಂದು ವಿರಾಮ ನೀಡಿದ ನರೇಂದ್ರ ಮೋದಿಯವರು ಅರಸಿ ಹೊರಟದ್ದು ಧ್ಯಾನವನ್ನು. ಅವರಿಗೆ ಮನಸ್ಸಿನ ಶಾಂತಿಗೆ ವಿದೇಶಗಳಿಗೆ ಓಡುವ ಅವಶ್ಯಕತೆ ಇರಲಿಲ್ಲ. ಯೋಗದ ಹಿನ್ನೆಲೆಯನ್ನು ಅರಿತು ಈ ರೀತಿಯಲ್ಲಿ ಜಗತ್ತು ಆರಾಧಿಸಲು ಕಾರಣ ನಿಸ್ಸಂಶಯವಾಗಿ ಪ್ರಧಾನಿ ಮೋದಿಯವರು. ಬಡ ರಾಷ್ಟ್ರಗಳ ತುಳಿದು, ಸೇನಾ ದಾಳಿ ಮಾಡಿ, ಯಥೇಚ್ಛ ಸಾಲಗಳನ್ನು ನೀಡಿ ವಿಶ್ವದ ಹಿರಿಯ ಎನ್ನಿಸಿಕೊಳ್ಳುವ ಪರಂಪರೆ ಭಾರತದ್ದಲ್ಲ. ಹಿಂದೂಸ್ಥಾನ ಇದೇ ಹಾದಿಯಲ್ಲಿ ನಡೆಯಲಿದೆ. ನಮೋ ಅವರ ಬೆಂಗಾವಲಿನಲ್ಲಿ ವಿಶ್ವಗುರು ಆಗಲಿದೆ. ವಿಶ್ವ ಯೋಗದಿನದ ಶುಭಾಶಯಗಳು.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.