ನವದೆಹಲಿ: ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ಪುರಾತನ ತಾಣವೊಂದರಲ್ಲಿ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ)ಯು ರಥ ಮತ್ತು ಇತರ ಪುರಾತನ ವಸ್ತುಗಳ ಅವಶೇಷಗಳನ್ನು ಪತ್ತೆ ಮಾಡಿದ್ದು, ಇದು ಕ್ರಿ.ಪೂ 2,000 ಕ್ಕಿಂತಲೂ ಹಳೆಯದು ಎನ್ನಲಾಗಿದೆ. ಇದೀಗ ಈ ತಾಣವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ತಾಣವೆಂದು ಘೋಷಿಸಲು ನಿರ್ಧರಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ವರದಿಯ ಪ್ರಕಾರ, 28 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಸಾದಿಕ್ಪುರ್ ಸಿನೌಲಿಯ ತಾಣವನ್ನು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳವನ್ನು ಘೋಷಿಸುವ ಪ್ರಕ್ರಿಯೆಯನ್ನು ಪುರಾತತ್ವ ಇಲಾಖೆ ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ, ಪುರಾತತ್ವ ಇಲಾಖೆಯು ಜೂನ್ 6 ರಂದು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರಿ ಅಧಿಸೂಚನೆ ಹೊರಡಿಸಿತು. ಎರಡು ತಿಂಗಳ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು.
ಈ ತಾಣದಲ್ಲಿ ಉತ್ಖನನ ಮತ್ತು ಸಂರಕ್ಷಣೆ ಕಾರ್ಯವು 2018 ರಲ್ಲಿ ಪ್ರಾರಂಭವಾಯಿತು ಮತ್ತು ಅದು ಇನ್ನೂ ನಡೆಯುತ್ತಿದೆ. ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಅವಶೇಷ ಪತ್ತೆಯಾದ ಕಾರಣ ಈ ತಾಣವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ತಾಣ ಎಂದು ಪರಿಗಣಿಸಲಾಗಿದೆ.
ವರದಿಯ ಪ್ರಕಾರ, ತಾಣದಲ್ಲಿ ಮೂರು ರಥಗಳು, ಕಾಲುಗಳುಳ್ಳ ಶವಪೆಟ್ಟಿಗೆ, ಗುರಾಣಿಗಳು, ಕತ್ತಿ ಮತ್ತು ಹೆಲ್ಮೆಟ್ಗಳು ಪತ್ತೆಯಾಗಿವೆ. ಇವೆಲ್ಲವೂ ಕ್ರಿ.ಪೂ 2,000 ದಲ್ಲಿ ಅಸ್ತಿತ್ವದಲ್ಲಿದ್ದ ಸೈನಿಕ ವರ್ಗಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ.
ಪುರಾತತ್ತ್ವ ಸಂಶೋಧನಾ ಸಂಸ್ಥೆಯು ತನ್ನ ಅಧಿಕೃತ ಹೇಳಿಕೆಯಲ್ಲಿ, ಈ ತಾಣವು ಎರಡನೇ ಮಿಲೇನಿಯಂ ಬಿಸಿಇಗೆ ಸೇರಿದ “ಹರಪ್ಪನ್ ಅವಧಿಯ ಅತಿದೊಡ್ಡ ಸ್ಮಶಾನ’ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.