ಸಸರಾಮ್: ಕೆಲವು ತಿಂಗಳುಗಳ ಹಿಂದೆ ಬಿಹಾರದ ಸಸರಾಮ್ ಜಿಲ್ಲೆಯ ಶಶಿಕಲಾ ತನ್ನ ಸಹೋದರನನ್ನು ಕಳೆದುಕೊಂಡಿದ್ದಳು, ಆದರೆ ಕೆಲ ದಿನಗಳ ಹಿಂದೆ ಆಕೆಯ ವಿವಾಹ ಜರುಗಿ ಗಂಡನ ಮನೆಗೆ ಹೊರಟು ನಿಂತಾಗ ಆಕೆಗೆ ವಿದಾಯವನ್ನು ಕೋರಲು ಆಕೆಯ ಬಳಿ 50 ಸಹೋದರರಿದ್ದರು.
2017ರ ನವೆಂಬರ್ 18ರಂದು ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಹುತಾತ್ಮರಾದ ವಾಯುಸೇನೆಯ ಗರುಡ ಯುನಿಟ್ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಳ ಅವರ ಸಹೋದರಿಯೇ ಶಶಿಕಲಾ. ಹುತಾತ್ಮ ಜ್ಯೋತಿ ಪ್ರಕಾಶ್ ಅವರ 50 ಸಹೋದ್ಯೋಗಿ ಕಮಾಂಡೋಗಳು ಶಶಿಕಲಾ ಅವರ ವಿವಾಹ ಸಮಾರಂಭಕ್ಕೆ ಆಗಮಿಸಿ ಸಹೋದರರ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ಜ್ಯೋತಿ ಪ್ರಕಾಶ್ ಅವರಿಗೆ ಮೂರು ಮಂದಿ ಸಹೋದರಿಯರಿದ್ದಾರೆ. ಅವರು ಹುತಾತ್ಮರಾಗುವ ಮುನ್ನವೇ ಇಬ್ಬರು ಸಹೋದರಿಯರ ವಿವಾಹ ನೆರವೇರಿದೆ. ಇತ್ತೀಚಿಗಷ್ಟೇ ಕೊನೆಯ ಸಹೋದರಿ ಶಶಿಕಲಾ ಅವರ ವಿವಾಹ ನೆರವೇರಿದೆ. ಅವರ ತಂದೆ ತೇಜ್ ನಾರಾಯಣ್ ಸಿಂಗ್ ಅವರು ಏರ್ ಚೀಫ್ ಮಾರ್ಷಲ್ ಮತ್ತು ಗರುಡ ಕಮಾಂಡೋ ಯುನಿಟ್ಗೆ ಆಹ್ವಾನವನ್ನು ಕಳುಹಿಸಿಕೊಟ್ಟಿದ್ದರು. ಸಾಂಕೇತಿಕವಾಗಿ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದರು.
ಆದರೆ ಸರ್ಪ್ರೈಸ್ ಎಂಬಂತೆ 50 ಮಂದಿ ಕಮಾಂಡೋಗಳು ಮದುವೆಯ ಮುಂಚಿನ ದಿನವೇ ಆಗಮಿಸಿ, ಎಲ್ಲಾ ಸಿದ್ಧತೆಗಳಲ್ಲಿ ಪಾಲ್ಗೊಂಡಿದ್ದಾರೆ. ರೂ. 5 ಲಕ್ಷದಷ್ಟು ಹಣವನ್ನು ವಿವಾಹಕ್ಕೆ ನೀಡಿದ್ದಾರೆ. ಸಹೋದರರು ನೆರವೇರಿಸಬೇಕಾದ ಪದ್ಧತಿಗಳನ್ನು ನೆರವೇರಿಸಿದ್ದಾರೆ.
ಕಮಾಂಡೋಗಳ ಕಾರ್ಯವನ್ನು ಕಂಡು ಶಶಿಕಲಾ ಮತ್ತು ಅವರ ಕುಟುಂಬ ಭಾವುಕವಾಗಿದೆ. ಒಂದು ಮಗನನ್ನು ಕಳೆದುಕೊಂಡೆವು, ಆದರೆ 50 ಮಕ್ಕಳನ್ನು ಇಂದು ಪಡೆದಿದ್ದೇವೆ ಎಂದು ಅವರು ತಮ್ಮ ಧನ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.