ನವದೆಹಲಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಈಗ ಕರ್ನಾಟಕದ ಮೊತ್ತ ಮೊದಲ ಶೇ. 100 ರಷ್ಟು ಸೌರಶಕ್ತಿ ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಎಲ್ಲಾ ಮನೆಗಳೂ ಸೌರ ವಿದ್ಯುತ್ ಅಳವಡಿಸಿಕೊಂಡಿರುವ ಕಾರಣ ಇದು ರಾಜ್ಯದ ಮೊಟ್ಟ ಮೊದಲ ‘ಸೌರ ಗ್ರಾಮ ಪಂಚಾಯಿತಿ’ಯಾಗಿ ಹೊರಹೊಮ್ಮಿದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಮಾಸೆಬೈಲು ಚಾರಿಟಬಲ್ ಟ್ರಸ್ಟ್, ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಹಾಗೂ ಅಮಾಸೆಬೈಲು ಗ್ರಾಮದ ಸಂಘಟಿತ ಶ್ರಮದ ಫಲವಾಗಿ ಅಮಾಸೆಬೈಲು ಇಂದು ಸೌರ ಗ್ರಾಮವಾಗಿ ಹೊರಹೊಮ್ಮಿದೆ.
ಅಮಾಸೆಬೈಲು ಗ್ರಾ. ಪಂ. ವ್ಯಾಪ್ತಿಯಲ್ಲಿ 1,497 ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ. ಅದರಲ್ಲಿ 1,000 ಮನೆಗಳಿಗೆ ನಾಲ್ಕು ದೀಪಗಳು, 497 ಮನೆಗಳಿಗೆ 2 ದೀಪಗಳನ್ನು ಅಳವಡಿಸಲಾಗಿದೆ. 350 ಮನೆಯವರು ಮೊದಲೇ ಸೋಲಾರ್ ದೀಪ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಆರಂಭಿಸಿದ ಸೋಲಾರ್ ಯೋಜನೆ ಪೂರ್ಣಗೊಂಡು ಸೋಲಾರ್ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೇ 31ಕ್ಕೆ ಜರ್ಮನ್ ಸಂಸ್ಥೆಯೊಂದು ಇಂಟರ್ ಸೋಲಾರ್ ಆವಾರ್ಡ್ ಅನ್ನು ಈ ಗ್ರಾಮಕ್ಕೆ ನೀಡಲಿದೆ ಎನ್ನಲಾಗಿದೆ.
2016ರಲ್ಲಿ ಅಮಾಸೆಬೈಲು ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸುವ ಯೋಜನೆಗೆ ಆರಂಭ ನೀಡಲಾಗಿತ್ತು. ಇದಕ್ಕಾಗಿ ಸುಮಾರು 2.13 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಇದಕ್ಕೆ ಸಿಕ್ಕಿದೆ. ಪಂಚಾಯತ್ ಮತ್ತು ಚಾರಿಟೇಬಲ್ ಟ್ರಸ್ಟ್ ಕೂಡ ಹಣವನ್ನು ವಿನಿಯೋಗಿಸಿದೆ.
ತಲಾ ಒಂದು ಸೋಲಾರ್ ಲ್ಯಾಂಪ್ ಅಳವಡಿಸಲು ತಗಲುವ ವೆಚ್ಚ ರೂ. 5 ಸಾವಿರ ಆಗಿದ್ದು, ಗ್ರಾಮಸ್ಥರಿಗೆ ಸಬ್ಸಿಡಿ ದರದಲ್ಲಿ ರೂ. 1500 ಕ್ಕೆ ಲ್ಯಾಂಪ್ ಅಳವಡಿಸಿಕೊಡಲಾಗಿದೆ. 5 ವರ್ಷಗಳವರೆಗೆ ಇವುಗಳು ಗ್ಯಾರಂಟಿ ಅವಧಿಯನ್ನು ಹೊಂದಿದೆ. ಜೂನ್ 9 ಕ್ಕೆ ಸೋಲಾರ್ ಅಳವಡಿಕೆ ಯೋಜನೆಯ ಸಮಾರೋಪ ಸಮಾರಂಭ ಈ ಗ್ರಾಮದಲ್ಲಿ ಜರುಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.