ನವದೆಹಲಿ: ಶಾಂಘೈ ಕೊಅಪರೇಶನ್ ಸಮಿತ್ ನಲ್ಲಿ ಭಾಗವಹಿಸುವ ಸಲುವಾಗಿ ಕರ್ಜೀಸ್ತಾನದ ರಾಜಧಾನಿ ಬಿಷ್ಕೆಕ್ ಗೆ ಗುರುವಾರ ಪ್ರಯಾಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಪಾಕಿಸ್ಥಾನದ ವಾಯುಮಾರ್ಗವನ್ನು ಬಳಸದಿರಲು ನಿರ್ಧರಿಸಿದ್ದಾರೆ. ಬದಲಾಗಿ ಅವರು ಒಮನ್ ವಾಯುಮಾರ್ಗದ ಮೂಲಕ ಬಿಷ್ಕೆಕ್ಗೆ ಪ್ರಯಾಣಿಸಲಿದ್ದಾರೆ.
ಮೋದಿಯವರ ವಿವಿಐಪಿ ವಿಮಾನಕ್ಕೆ ಬಿಷ್ಕೆಕ್ ಪ್ರಯಾಣಿಸಲು ಎರಡು ದಾರಿಗಳಿವೆ. ಒಂದು ಪಾಕಿಸ್ಥಾನದ ವಾಯು ಮಾರ್ಗವನ್ನು ಬಳಸುವುದು, ಇದು ಅತ್ಯಂತ ಸರಳವಾದ ಮಾರ್ಗವಾಗಿದೆ. ಎರಡನೇಯದು, ಒಮನ್ ಮೂಲಕ ಇರಾನ್ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳನ್ನು ದಾಟಿ ಬಿಷ್ಕೆಕ್ ತಲುಪುವುದು. ಮೋದಿಯವರು ಎರಡನೇಯ ಮಾರ್ಗವನ್ನು ತಮ್ಮದಾಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಮೋದಿ ಪಾಕಿಸ್ಥಾನದ ವಾಯು ಮಾರ್ಗವನ್ನು ಬಳಸಿ ಬಿಷ್ಕೆಕ್ಗೆ ಪ್ರಯಾಣಿಸುತ್ತಿಲ್ಲ ಎಂಬುದನ್ನು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರು ಖಚಿತಪಡಿಸಿದ್ದಾರೆ.
ಈ ಹಿಂದೆ ಮೋದಿ ವಿಮಾನದ ಹಾರಾಟಕ್ಕೆ ಅನುವು ಮಾಡಿಕೊಡುವಂತೆ ಭಾರತೀಯ ಅಧಿಕಾರಿಗಳು ಪಾಕಿಸ್ಥಾನವನ್ನು ಕೇಳಿಕೊಂಡಿದ್ದರು, ಇದಕ್ಕೆ ಪಾಕಿಸ್ಥಾನ ಒಪ್ಪಿಕೊಂಡಿತ್ತು. ಆದರೀಗ ಮೋದಿಯವರೇ ಪಾಕ್ ಮಾರ್ಗವಾಗಿ ಪ್ರಯಾಣಿಸದಿರುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ಜೂನ್ 13 ಮತ್ತು 14ರವರೆಗೆ ಶಾಂಘೈ ಕೊಅಪರೇಶನ್ ಸಮಿತ್ ನಡೆಯಲಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೂ ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಮೋದಿ ಮತ್ತು ಅವರ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿಲ್ಲ. ಆದರೆ ಚೀನಾ ಮತ್ತು ರಷ್ಯಾ ಅಧ್ಯಕ್ಷರುಗಳೊಂದಿಗೆ ಮೋದಿ ಇಲ್ಲಿ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.