ಕಿತ್ತು ತಿನ್ನುವ ಬಡತನ, ಪೋಷಕರ ಅಸಡ್ಡೆ, ಬಲವಂತದ ಕಾರಣಕ್ಕಾಗಿ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಬಾಲ್ಯದ ತುಂಟಾಟಗಳಿಲ್ಲದೆ, ಪೋಷಕರ ಪೋಷಣೆಯಿಲ್ಲದೆ, ಅಕ್ಷರಗಳ ಜ್ಞಾನ ಸಂಪಾದನೆ ಇಲ್ಲದೆ ಈ ಮಕ್ಕಳ ಬದುಕು ಕಮರಿ ಹೋಗುತ್ತಿದೆ.
ಬಾಲ್ಯ ಕಾರ್ಮಿಕತನವನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ‘ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ’ 2002ರಿಂದ ಪ್ರತಿವರ್ಷ ಜೂನ್ 12ನ್ನು ‘ಬಾಲಕಾರ್ಮಿಕ ವಿರೋಧಿ ದಿನ’ವನ್ನಾಗಿ ಆಚರಿಸುತ್ತಿದೆ. ಸರ್ಕಾರಗಳನ್ನು, ಜನರನ್ನು, ಉದ್ಯೋಗಿಗಳನ್ನು ಒಂದೆಡೆ ತಂದು ಬಾಲಕಾರ್ಮಿಕತನದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವದಾದ್ಯಂತ ಪ್ರಸ್ತುತ 150 ಮಿಲಿಯನ್ ಬಾಲ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. 2011ರ ಸೆನ್ಸಸ್ ಪ್ರಕಾರ ಭಾರತದಲ್ಲಿ 4.5 ಮಿಲಿಯನ್ ಬಾಲ ಕಾರ್ಮಿಕರಿದ್ದು, ಇವರ ವಯಸ್ಸು 5-15 ಆಗಿದೆ. ಅಪಾಯಕಾರಿ ಕೈಗಾರಿಕೆಗಳಲ್ಲಿ, ಮನೆಗಳಲ್ಲಿ, ಕಟ್ಟಡ ನಿರ್ಮಾಣಗಳಲ್ಲಿ ಅತೀಹೆಚ್ಚು ಸಂಖ್ಯೆಯ ಮಕ್ಕಳು ದುಡಿಯುತ್ತಿದ್ದಾರೆ ಇದು ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪ್ರಭಾವವನ್ನು ಉಂಟು ಮಾಡುತ್ತಿದೆ. ಮಾಲೀಕರ ದೌರ್ಜನ್ಯಗಳನ್ನೂ ಇವರು ಸಹಿಸಿಕೊಳ್ಳಬೇಕಾಗುತ್ತದೆ.
ಸರ್ಕಾರ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೆ ತಂದರೂ ಇನ್ನೂ ಹಲವಾರು ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದಾರೆ. ಕಿತ್ತು ತಿನ್ನುವ ಬಡತನ ಅವರನ್ನು ಶಾಲೆಯ ಮೆಟ್ಟಿಲು ಹತ್ತದಂತೆ ಮಾಡುತ್ತಿದೆ. ಹೆತ್ತವರ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಲೆಂದೋ, ತನ್ನ ಹೊಟ್ಟೆಯನ್ನು ಪೊರೆಯಲೆಂದೋ ಅನೇಕ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಶಾಲೆಗೆ ಹೋಗಲು ಮನಸ್ಸಿಲ್ಲದೆಯೇ ವಯಸ್ಸಲ್ಲದ ವಯಸ್ಸಿನಲ್ಲಿ ದುಡಿಯಲು ಆರಂಭಿಸುತ್ತಾರೆ. ಇಂತಹ ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಿಸುವ ಹಿರಿಯರ ಕೊರತೆಯೂ ಇದೆ.
ಬಾಲಕಾರ್ಮಿಕತನಕ್ಕೆ ಮತ್ತೊಂದು ಭಯಾನಕ ಕಾರಣವೆಂದರೆ ಮಕ್ಕಳ ಕಳ್ಳಸಾಗಾಣಿಕೆ. ಎಲ್ಲಿಂದಲೂ ಮಕ್ಕಳನ್ನು ಅಕ್ರಮವಾಗಿ ಸಾಗಿಸಿಕೊಂಡು ಬಂದು ಅವರನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ಜೀತದಾಳುಗಳಂತೆ ದುಡಿಸಲಾಗುತ್ತಿದೆ. ಇನ್ನೂ ಕೆಲವು ಮಕ್ಕಳನ್ನು ಭಿಕ್ಷಾಟನೆಗೆ ದೂಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕೈಗಾರಿಕೆ, ಸಂಸ್ಥೆಗಳಲ್ಲಿ ಮಕ್ಕಳನ್ನು ಬಹಿರಂಗವಾಗಿ ದುಡಿಸಿಕೊಳ್ಳುತ್ತಿರುವುದು ಯಾರಿಗೂ ಕಾಣುವುದಿಲ್ಲ. ಆದರೆ ಯಾರಿಗೂ ಕಾಣದಂತೆ ಕೂಡಿ ಹಾಕಿ ಮಕ್ಕಳನ್ನು ದುಡಿಸಿಕೊಳ್ಳುವ ಕೈಗಾರಿಕೆಗಳು ಹಲವಾರು ಇವೆ.
ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ರಸ್ತೆಗಳಲ್ಲಿ ಈಗಲೂ ಭಿಕ್ಷಾಟನೆ ಮಾಡುವ ಅನೇಕ ಮಕ್ಕಳು ನಮ್ಮ ಕಣ್ಣಿಗೆ ಬೀಳುತ್ತಾರೆ. ಶಾಲೆಗೆ ಹೋಗುವ ವಯಸ್ಸಲ್ಲಿ ಅಮ್ಮ, ತಾಯಿ ಎಂದು ಭಿಕ್ಷೆ ಬೇಡುವ ಈ ಮಕ್ಕಳನ್ನು ಕಂಡಾಗ ಹೃದಯ ಭಾರವಾಗುತ್ತದೆ. ಆದರೆ ಇವರನ್ನು ಭಿಕ್ಷಾಟನೆಗೆ ಇಳಿಸಿದವರು ಯಾರು? ಈ ಮಕ್ಕಳು ಎಲ್ಲಿಂದ ಬಂದರು? ಇವರ ಪೋಷಕರು ಏನು ಮಾಡುತ್ತಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಗುವುದೇ ಇಲ್ಲ. ಮಕ್ಕಳ ಭಿಕ್ಷಾಟನೆಯ ಹಿಂದೆ ಮಾಫಿಯಾದ ಕೈವಾಡವಿದೆ ಎಂಬ ಶಂಕೆಯನ್ನೂ ತಳ್ಳಿ ಹಾಕುವಂತಿಲ್ಲ.
ಹಲವಾರು ಕಾಯ್ದೆಗಳನ್ನು ತಂದರೂ ಇನ್ನೂ ಬಾಲ ಕಾರ್ಮಿಕತನ ಜೀವಂತವಾಗಿರುವುದು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ಸಾರಿ ಹೇಳುತ್ತದೆ. ಕೈಗಾರಿಕಗಳಲ್ಲಿ, ಮಾಲೀಕರ ದೌರ್ಜನ್ಯದಲ್ಲಿ ಕಮರಿ ಹೋಗುತ್ತಿರುವ ಮುಗ್ಧ ಮಕ್ಕಳ ಜೀವನವನ್ನು ಸರಿ ದಾರಿಗೆ ತರುವ, ಅವರಿಗೆ ಉತ್ತಮ ಭವಿಷ್ಯ ಕಲ್ಪಿಸುವ ಹೊಣೆ ನಾಗರಿಕ ಸಮಾಜದ ಎಲ್ಲರ ಕರ್ತವ್ಯವೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.