ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಾರತೀಯ ಸೇನಾ ಪಡೆಗಳು ನಾಲ್ಕು ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಗುರುವಾರ ಸಂಜೆ ಜಿಲ್ಲೆಯ ಪಂಜರನ್ ಲಸಿಪೋರ ಪ್ರದೇಶದಲ್ಲಿ ಎನ್ಕೌಂಟರ್ ಆರಂಭಗೊಂಡಿತ್ತು. ಮೃತ ಉಗ್ರರ ಪೈಕಿ ಇಬ್ಬರು ಹಿಂದೆ ಪೊಲೀಸರಾಗಿದ್ದು ಬಳಿಕ ಭಯೋತ್ಪಾದನೆಯ ಹಾದಿ ಹಿಡಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತ ಉಗ್ರರನ್ನು ಪಂಜರನ್ ಪುಲ್ವಾಮದ ಆಶಿಕ್ ಅಹ್ಮದ್, ಅರಿಹಲ್ ಪುಲ್ವಾಮದ ಇಮ್ರಾನ್ ಅಹ್ಮದ್, ತುಜನ್ ಪುಲ್ವಾಮದ ಶಬಿರ್ ಅಹ್ಮದ್ ಮತ್ತು ಉತ್ಮುಲ ಕೀಗಂ ಶೋಪಿಯಾನದ ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಶಬೀರ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಸ್ಪೆಷಲ್ ಪೊಲೀಸ್ ಆಫೀಸರ್ಗಳಾಗಿದ್ದು, ಬಳಿಕ ಹುದ್ದೆಯನ್ನು ತೊರೆದು ಉಗ್ರರಾಗಿದ್ದವರಾಗಿದ್ದಾರೆ.
ಮೃತರಿಂದ ಮೂರು ಎಕೆ ಸರಣಿಯ ರೈಫಲ್ಸ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಈಗಲೂ ಮುಂದುವರೆದಿದೆ. ಗುರುವಾರ ಉಗ್ರರು ಅವಿತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಧ್ಯರಾತ್ರಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
ಬುಧವಾರ ಓರ್ವ ಯೋಧನನ್ನು ಅನಂತನಾಗ್ನಲ್ಲಿನ ಅವರ ನಿವಾಸದಲ್ಲೇ ಅಪರಿಚಿತ ಉಗ್ರರು ಗುಂಡಿಟ್ಟು ಕೊಲೆ ಮಾಡಿದ್ದರು, ಮನ್ಸೂರ್ ಅಹ್ಮದ್ ಬೇಗ್ ಮೃತ ಯೋಧನಾಗಿದ್ದಾರೆ. ಇವರ ಮನೆಗೆ ಏಕಾಏಕಿ ನುಗ್ಗಿದ ಉಗ್ರರು ಗುಂಡಿನ ದಾಳಿಯನ್ನು ನಡೆಸಿ ಹತ್ಯೆ ಮಾಡಿದ್ದಾರೆ. ಅದರ ಮರುದಿನವೇ ಭಾರತೀಯ ಸೇನೆ ಉಗ್ರರ ಭರ್ಜರಿ ಬೇಟೆಯನ್ನಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.