ಜಮ್ಮು: ಅಮರನಾಥ ಯಾತ್ರೆ ಆರಂಭಕ್ಕೆ ಕೆಲವೇ ಸಮಯ ಇರುವ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ಗಡಿಯಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಅಧಿಕಾರಿಗಳಿಗೆ ಮತ್ತು ಭದ್ರತಾ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಕತುವಾ ಮತ್ತು ಪೂಂಚ್ ಜಿಲ್ಲೆಗೆ ಭೇಟಿ ನೀಡಿದ ಅವರು, ಅಮರನಾಥ ಯಾತ್ರೆಯ ಉದ್ದಕ್ಕೂ ಮೂರು ಸುತ್ತಿನ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದ್ದಾರೆ.
ಜುಲೈ 1 ರಿಂದ ಆರಂಭಗೊಳ್ಳಲಿರುವ ಯಾತ್ರೆಗೆ ಸಿಂಗಲ್-ವಿಂಡೋ ಕ್ಲಿಯರೆನ್ಸ್ ಮತ್ತು ವಾಹನಗಳ ತಪಾಸಣೆಗಳ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಅವರು ಸೂಚಿಸಿದ್ದಾರೆ. ಸಮಾಜದ್ರೋಹಿ ಕೃತ್ಯಗಳನ್ನು ಪತ್ತೆ ಮಾಡುವ ಸಲುವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕಂಟ್ರೋಲ್ ರೂಮ್ ಮತ್ತು ಸೆಕ್ಯೂರಿಟಿ ಚೆಕ್ಪಾಯಿಂಟ್ಗಳನ್ನು ಸ್ಥಾಪಿಸುವಂತೆ ತಿಳಿಸಿದ್ದಾರೆ.
ಸಿಂಗ್ ಅವರು ಉಧಂಪುರ ಮತ್ತು ಕತುವಾ ಜಿಲ್ಲೆಗಳಲ್ಲಿರುವ ದುದು ಬಸಂತ್ ಘರ್ ಮತ್ತು ಬನಿ ಲೊತಂಗ್ಗಳಿಗೆ ಭೇಟಿ ನೀಡಿದರು. ಬಳಿಕ ಪೂಂಚ್ ಜಿಲ್ಲೆಯ ಗಡಿ ಭಾಗ ಮೆಂಧರ್ಗೆ ತೆರಳಿದರು. ಅಲ್ಲಿ ಯೋಧರೊಂದಿಗೆ ಸಂವಾದವನ್ನು ನಡೆಸಿದರು ಮತ್ತು ಅಲ್ಲಿನ ವಿಲೇಜ್ ಡಿಫೆನ್ಸ್ ಕಮಿಟಿ ಬಗ್ಗೆ ಅತ್ಯಂತ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರೆಯನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಪೊಲೀಸರು ಮತ್ತು ಸೇನೆಯ ನಡುವೆ ಹೊಂದಾಣಿಕೆ ಅಗತ್ಯ ಎಂಬುದನ್ನು ಅವರು ಪ್ರತಿಪಾದಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಸೋಮವಾರ ಜಮ್ಮು ಕಾಶ್ಮೀರಕ್ಕೆ ತೆರಳಿ ಭದ್ರತಾ ಪರಿಸ್ಥಿತಿಗಳನ್ನು ಅವಲೋಕನ ನಡೆಸಿದರು.
ಅಮರನಾಥ ಯಾತ್ರೆ ಜುಲೈ 1 ರಿಂದ ಆರಂಭವಾಗಲಿದ್ದು, ಕಠಿಣ ಹಾದಿಯನ್ನು ಸವೆಸಿ ದೇಶದಾದ್ಯಂತ ಭಕ್ತರು ಹಿಮದಿಂದ ರಚಿತಗೊಂಡ ಶಿವಲಿಂಗದ ದರ್ಶನ ಪಡೆಯುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.