2014ರಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದ ನರೇಂದ್ರ ಮೋದಿಯವರು ದೇಶದ ಜನರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ಹಲವಾರು ಯೋಜನೆಗಳನ್ನು ಹೊರತಂದರು. ಅದರಲ್ಲಿ ವಿಮಾ ಯೋಜನೆಗಳು ಕೂಡ ಒಂದು. ಕಳೆದ 5 ವರ್ಷಗಳಿಂದ ಮೋದಿ ಸರ್ಕಾರ ಅನುಷ್ಠಾನಗೊಳಿಸಿದ 8 ಪ್ರಮುಖ ವಿಮಾ ಯೋಜನೆಗಳ ವಿವರ ಇಲ್ಲಿದೆ.
1. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY)
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಸರ್ಕಾರ ಬೆಂಬಲಿತ ಅಪಘಾತ ವಿಮೆಯಾಗಿದೆ. 2015ರಲ್ಲಿ ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿಯವರು ಬಜೆಟ್ ವೇಳೆ ಇದನ್ನು ಪರಿಚಯಿಸಿದರು. ಮೇ 8ರಂದು ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಬ್ಯಾಂಕಿನಲ್ಲಿ ಸಕ್ರಿಯ ಖಾತೆಯನ್ನು ಹೊಂದಿರುವ 18 ರಿಂದ 70 ವಯೋಮಾನದೊಳಗಿನ ವ್ಯಕ್ತಿಗಳು ಈ ವಿಮಾ ಯೋಜನೆಗೆ ಒಳಪಡಲು ಅರ್ಹರಾಗಿದ್ದಾರೆ. ವರ್ಷಕ್ಕೆ 12 ರೂಪಾಯಿ ಪಾವತಿಸಬೇಕು. ಕಡಿಮೆ ಪ್ರೀಮಿಯಂನಿಂದಾಗಿ ಇದು ಹೆಚ್ಚಿನ ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಇದು ಜಿಎಸ್ ಟಿಯಿಂದ ಮುಕ್ತವಾಗಿದೆ. ಅನಿವಾಸಿ ಭಾರತೀಯರೂ ಇದಕ್ಕೆ ಒಳಪಡಬಹುದು, ಆದರೆ ಪ್ರೀಮಿಯಂ ಅನ್ನು ಭಾರತೀಯ ರೂಪಾಯಿಯಲ್ಲೇ ಪಾವತಿ ಮಾಡಬೇಕು. ಅಪಘಾತದಿಂದ ಸಾವಿಗೀಡಾಗುವವರ ಕುಟುಂಬಸ್ಥರ ನೆರವಿಗೆ ಈ ವಿಮೆ ಸಿಗುತ್ತದೆ. ಮೃತರ ನಾಮಿನಿಗಳಿಗೆ ರೂ.2 ಲಕ್ಷದವರೆಗೆ ವಿಮೆ ಸಿಗಲಿದೆ ಮತ್ತು ಗಾಯಾಳು ವಿಮಾದಾರರಿಗೆ ರೂ. 1 ಲಕ್ಷ ಸಿಗಲಿದೆ. ಇದು ಮೆಡಿಕ್ಲೇಮ್ ಅಲ್ಲ. ಹೀಗಾಗಿ ಆಸ್ಪತ್ರೆಯ ವೆಚ್ಚ ಇತ್ಯಾದಿಗಳು ಇದರಡಿ ಬರುವುದಿಲ್ಲ. ಆತ್ಮಹತ್ಯೆ ಇದರಡಿ ಬರುವುದಿಲ್ಲ, ಆದರೆ ಹತ್ಯೆಯಾಗಿದ್ದಲ್ಲಿ ಬರುತ್ತದೆ.
2. ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)
ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಭಾರತದ ಸರ್ಕಾರ ಬೆಂಬಲಿತ ಜೀವ ವಿಮಾ ಯೋಜನೆ. ಈ ಯೋಜನೆಯನ್ನು ಮೊದಲು ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2015 ರ ಬಜೆಟ್ನಲ್ಲಿ ಪರಿಚಯಿಸಿದರು. ಈ ಯೋಜನೆಗೆ ಕೋಲ್ಕತ್ತಾದಲ್ಲಿ 2015ರ ಮೇ 9 ರಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
ಈ ವಿಮೆಯಡಿ ಪಾಲಿಸಿದಾರನ ಮರಣದ ಸಂದರ್ಭದಲ್ಲಿ ನಾಮಿನಿಗೆ 2 ಲಕ್ಷ ರೂ.ವಿಮೆ ಬರುತ್ತದೆ. ಇದು ಒಂದು ವರ್ಷದ ವಿಮಾ ಯೋಜನೆ ಮತ್ತು ಪ್ರತಿವರ್ಷ ಇದನ್ನು ನವೀಕರಿಸಬಹುದಾಗಿದೆ. 18-70 ವರ್ಷ ವಯಸ್ಸಿನ ನಡುವೆ ಇರುವವರು ಮತ್ತು ಈ ಬ್ಯಾಂಕಿನಲ್ಲಿ ಸಕ್ರಿಯ ಉಳಿತಾಯ ಖಾತೆಯನ್ನು ಹೊಂದಿರುವ ಯಾರಾದರೂ PMJJBY ಅನ್ನು ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ 330 ರೂಪಾಯಿಗಳು.
ಕುಟುಂಬದ ಏಕೈಕ ದುಡಿಮೆಗಾರನಿಗೆ ಈ ಯೋಜನೆಯು ತನ್ನ ಕುಟುಂಬದ ಹಿತಾಸಕ್ತಿಯನ್ನು ಕಾಪಾಡಲು ಅತ್ಯಂತ ಅಗತ್ಯವಾಗಿದೆ. ಗಮನಿಸಬೇಕಾದ ಒಂದು ವಿಷಯವೆಂದರೆ, ವಿಮೆದಾರರು ನೋಂದಾಯಿತರಾದ ಮೊದಲ 45 ದಿನಗಳಲ್ಲಿ ವಿಮೆಯ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ. ಬ್ಯಾಂಕ್ ಖಾತೆ ಹೊಂದಿರುವ ಯಾವುದೇ ಭಾರತೀಯ ವಾಸಿಯೂ ಇದಕ್ಕೆ ನೋಂದಾಯಿತನಾಗಬಹುದು. ಈ ಯೋಜನೆಗೆ ಚಂದಾದಾರರು ಮಾನ್ಯತೆ ಪಡೆದ ವೈದ್ಯರಿಂದ ತಮಗೆ ಯಾವುದೇ ಗಂಭೀರವಾದ ಕಾಯಿಲೆ ಇಲ್ಲ ಎಂಬ ಸರ್ಟಿಫಿಕೇಟ್ ಅನ್ನು ಸಲ್ಲಿಸಬೇಕು. ಚಂದಾದಾರರು 55 ವರ್ಷ ವಯಸ್ಸನ್ನು ತಲುಪಿದ ನಂತರ ವಿಮಾ ಮೊತ್ತವನ್ನು ಪಡೆದುಕೊಳ್ಳಬಹುದು. ಮೇ 2018 ರ ವೇಳೆಗೆ 5 ಕೋಟಿ ಜನರು ಈ ಯೋಜನೆಯಡಿ ನೋಂದಾಯಿತರಾಗಿದ್ದಾರೆ.
3. ವರಿಷ್ಠ ಪಿಂಚಣಿ ಬೀಮಾ ಯೋಜನೆ
ವರಿಷ್ಠ ಪಿಂಚಣಿ ಬಿಮಾ ಯೋಜನೆ ಭಾರತದ ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ (ಎಲ್ಐಸಿ)ನಿಂದ ನಿರ್ವಹಿಸಲ್ಪಡುವ ಒಂದು ಯೋಜನೆಯಾಗಿದೆ. 60 ವರ್ಷ ಮತ್ತು ಮೇಲ್ಪಟ್ಟ ನಾಗರಿಕರಿಗೆ ಪ್ರಯೋಜನ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿ. ಭವಿಷ್ಯದಲ್ಲಿ ತಮ್ಮ ಯೋಜಿತ ಆದಾಯದಲ್ಲಿನ ಕೊರತೆಯನ್ನು ಅನುಭವಿಸುವ ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಈ ಯೋಜನೆಯು ರಕ್ಷಿಸುತ್ತದೆ. ಈ ಯೋಜನೆಯನ್ನು 2017 ರಲ್ಲಿ ಕೇಂದ್ರ ಸಂಪುಟ ಅನುಮೋದಿಸಿದೆ. ಈ ಯೋಜನೆಗೆ ಏಕೈಕ ಮಾನದಂಡವೆಂದರೆ ಚಂದಾದಾರರು 60 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನವರು ಆಗಿರಬೇಕು. ಯಾವುದೇ ರೀತಿಯ ಆರೋಗ್ಯ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವ ಅಗತ್ಯವಿಲ್ಲ.
ವರಿಷ್ಠ ಪಿಂಚಣಿ ಬೀಮಾ ಯೋಜನೆಯಡಿ ಜೀವಿತಾವಧಿಯವರೆಗೆ ಚಂದಾದಾರರಿಗೆ ಪಿಂಚಣಿ ಸಿಗುತ್ತದೆ. ಪಿಂಚಣಿದಾರರಿಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಿಂಚಣಿ ಪಾವತಿಸಬಹುದು. ಹತ್ತು ವರ್ಷಗಳ ಕಾಲ ವಾರ್ಷಿಕ ಶೇಕಡ 9% ರಷ್ಟು ರಿಟರ್ನ್ ರೇಟ್ ಅನ್ನು ಇದು ಖಾತರಿಪಡಿಸಬಹುದು. ಈ ಯೋಜನೆಯ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಚಂದಾದಾರರು ಒಂದೇ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಇದಕ್ಕೆ ಲಾಕ್ ಇನ್ ಪಿರೇಡ್ 15 ವರ್ಷ ಆದರೆ ಎಕ್ಸಿಟ್ ಪೇಯ್ಡ್ ಅನ್ನು ಪಾವತಿಸುವ ಮೂಲಕ ಈ ಸಮಯಕ್ಕೆ ಮುಂಚಿತವಾಗಿಯೇ ಹಣವನ್ನು ಹಿಂತೆಗೆದುಕೊಳ್ಳುವ ಒಂದು ಆಯ್ಕೆ ಇರುತ್ತದೆ. ಎಕ್ಸಿಟ್ ಪೇಯ್ಡ್ ಪ್ರಮಾಣವು ಹಿಂಪಡೆಯುವ ಮೊತ್ತದ ಶೇ.2ರಷ್ಟಾಗಿರುತ್ತದೆ. ಈ ಯೋಜನೆಯ ವ್ಯಾಪ್ತಿಯೊಳಗೆ ಬೀಳುವ ಎಲ್ಲಾ ಪಾವತಿಗಳನ್ನು ಇಸಿಎಸ್ ಅಥವಾ ಎನ್ಎಫ್ಟಿ ಮೂಲಕ ನೀಡಲಾಗುತ್ತದೆ.
4. ಪುನರ್ ನಿರ್ಮಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS)
ಮಳೆ, ಉಷ್ಣಾಂಶ, ಗಾಳಿ ವೇಗ, ಮಂಜು ಮುಂತಾದ ಅನಧಿಕೃತ ಹವಾಮಾನ ಪರಿಸ್ಥಿತಿಗಳ ವಿರುದ್ಧ ರೈತರನ್ನು ರಕ್ಷಿಸಲು ಈ ವಿಮಾ ಯೋಜನೆ ರೂಪಿಸಲಾಗಿದೆ. ಪುನಾರಚನೆ ಮಾಡಲಾದ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯನ್ನು 2016 ರ ಫೆಬ್ರವರಿ 18 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು. ಇದರ ಅನುಷ್ಠಾನದ ವರ್ಷದಲ್ಲಿ, 12 ರಾಜ್ಯಗಳು ಈ ಯೋಜನೆಯನ್ನು 2016ರ ಖರಿಫ್ನಲ್ಲಿ ಅಳವಡಿಸಿಕೊಂಡಿವೆ, 9 ರಾಜ್ಯಗಳು ನಂತರ 2016-17ರ ರಬೀಯಲ್ಲಿ ಅಳವಡಿಸಿಕೊಂಡವು.
ಕೀಟಗಳು, ಕಳೆಗಳು ಇತ್ಯಾದಿ ನಮ್ಮ ಬೆಳೆಗಳ ಮೇಲೆ ಪ್ರಭಾವ ಬೀರುವ ವಿವಿಧ ಹವಾಮಾನೇತರ ಅಪಾಯಗಳು, ಇವುಗಳನ್ನು ತಂತ್ರಜ್ಞಾನದಿಂದ ನಿವಾರಿಸಿಕೊಳ್ಳಬಹುದು. ಆದರೆ ಹವಾಮಾನ ಸಂಬಂಧಿತ ಅಪಾಯಗಳನ್ನು ವಿಮೆ ಮೂಲಕ ನಿಭಾಯಿಸಬೇಕು. ಈ ಯೋಜನೆಯನ್ನು ಕೃಷಿ ಸಚಿವಾಲಯವು ನಿರ್ವಹಿಸುತ್ತದೆ ಮತ್ತು ಕೆಟ್ಟ ಹವಾಮಾನದ ಕಾರಣದಿಂದಾಗಿ ಉಂಟಾಗುವ ಬೆಳೆ ನಷ್ಟದಿಂದ ಆರ್ಥಿಕ ಸಂಷಕ್ಟಕ್ಕೀಡಾಗುವ ರೈತನನ್ನು ರಕ್ಷಿಸುವ ಗುರಿಯನ್ನು ಇದು ಹೊಂದಿದೆ. ಬಿತ್ತನೆಯಿಂದ ಬೆಳೆ ಪರಿಪಕ್ವತೆ ಪಡೆಯುವವರೆಗಿನ ಅವಧಿಯನ್ನು ಈ ವಿಮೆ ಪರಿಗಣಿಸುತ್ತದೆ. ಬೆಳೆಗಾರರಿಗೆ ಪರಿಹಾರ ನೀಡುವಾಗ ಹವಾಮಾನದ ನಿಯತಾಂಕಗಳನ್ನು “ಪ್ರಾಕ್ಸಿ” ಆಗಿ ಬಳಸಲಾಗುತ್ತದೆ.
ಈ ವಿಮಾ ಯೋಜನೆಯು ವಸ್ತುನಿಷ್ಠ ಡೇಟಾವನ್ನು ಆಧರಿಸಿರುವುದರಿಂದ, ಪಾವತಿಯ ಪ್ರಕ್ರಿಯೆ ಮತ್ತು ಅದಕ್ಕೆ ಸಮಯ ತೆಗೆದುಕೊಳ್ಳುವಿಕೆ ತುಂಬಾ ಕಡಿಮೆಯಾಗಿರುತ್ತದೆ. ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಪೇಪರ್ ವರ್ಕ್ಗಳು ಅದಕ್ಕೆ ಅವಶ್ಯಕವಾಗಿದ್ದು, ಪೂರ್ವ ನಿರ್ಧಾರಿತ ಸೂತ್ರಗಳಿಂದ ಕ್ಲೈಮ್ ಮೊತ್ತವನ್ನು ನಿಗದಿಮಾಡಲಾಗುತ್ತದೆ. ಈ ಯೋಜನೆಯು ಸಂಕಷ್ಟ ಪೀಡಿತ ರೈತರ ನಷ್ಟವನ್ನು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಕಡಿಮೆಗೊಳಿಸುವ ಗುರಿ ಹೊಂದಿದೆ. ಅಪಾಯದ ಪ್ರಾರಂಭದಿಂದ 45 ದಿನಗಳ ಅವಧಿಯೊಳಗೆ ಮೊತ್ತವನ್ನು ಸಾಮಾನ್ಯವಾಗಿ ಪಾವತಿಸಲಾಗುತ್ತದೆ. ಋತುಕಾಲಿಕ ಕೃಷಿ ಕಾರ್ಯಾಚರಣೆಗಳಿಗೆ ಸಾಲಗಳನ್ನು ಪಡೆಯುವ ಎಲ್ಲ ರೈತರು ಈ ಯೋಜನೆಯಡಿಯಲ್ಲಿ ಅಗತ್ಯವಾಗಿ ಒಳಗೊಂಡರೆ ಒಳ್ಳೆಯದು. ಸುಮಾರು 15 ಲಕ್ಷ ರೈತರಿಗೆ 2016 ರ ಖರಿಫ್ನಲ್ಲಿ ರೂ. 8583.56 ಕೋಟಿ ವಿಮೆ ಮೊತ್ತ ಪಾವತಿಸಲಾಗಿದೆ.
5. ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ (PMFBY)
ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಮೋದಿಯವರು 2016 ರ ಫೆಬ್ರವರಿ 18 ರಂದು ಪ್ರಾರಂಭಿಸಿದರು. ಈ ಯೋಜನೆಯು ಕೃಷಿ ಸಚಿವಾಲಯದಿಂದ ನಿರ್ವಹಿಸಲ್ಪಡುತ್ತದೆ. ರೈತರ ಒತ್ತಡವನ್ನು ಮತ್ತು ನಷ್ಟವನ್ನು ಕಡಿಮೆಗೊಳಿಸುವುದು, ವಿಪತ್ತುಗಳ ವಿರುದ್ಧ ಅವರ ಹಿತಾಸಕ್ತಿಗಳನ್ನು ಕಾಪಾಡುವುದು ಇದರ ಗುರಿಯಾಗಿದೆ. ದುರ್ಬಲ ಮಳೆಗಾಲದಲ್ಲಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಗುರಿಯನ್ನೂ ಇದು ಒಳಗೊಂಡಿದೆ.
ಈ ಯೋಜನೆಯು ಪ್ರದೇಶ ವಿಧಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ, ಈ ಮೂಲಕ ವಿಪತ್ತುಗಳ ವಿರುದ್ಧ ಬೆಳೆಗಳನ್ನು ರಕ್ಷಿಸುತ್ತದೆ. ರೈತರ ಆದಾಯವನ್ನು ಸ್ಥಿರಗೊಳಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಯೋಜನೆ ರೈತರಿಗೆ ತಮ್ಮ ಬೆಳೆಗಳಿಗೆ ತಾಂತ್ರಿಕವಾಗಿ ಪ್ರಾವೀಣ್ಯತೆ ಪಡೆದ ಮತ್ತು ಜ್ಞಾನಾಧಾರಿತ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ಈ ಯೋಜನೆಯಡಿ ವಿಮೆ ಮಾಡಲಾದ ಬೆಳೆಗಳೆಂದರೆ ಆಹಾರ ಬೆಳೆಗಳು, ಎಣ್ಣೆ ಬೀಜಗಳು ಮತ್ತು ವಾರ್ಷಿಕ ತೋಟಗಾರಿಕೆ ಬೆಳೆಗಳು. ಈ ಯೋಜನೆಗೆ ಒಳಪಡುವ ವಿವಿಧ ಅಪಾಯಗಳೆಂದರೆ, ಬಿತ್ತನೆ ಸಮಸ್ಯೆ ಅಥವಾ ತೋಟದ ಸಮಸ್ಯೆಗಳು. ಬರ, ಪ್ರವಾಹ, ಶುಷ್ಕತೆ ಮುಂತಾದ ಅಪಾಯಗಳಿಗೆ ವಿಮೆಯನ್ನು ಸಹ ಒದಗಿಸಲಾಗುತ್ತದೆ. ಎರಡು ವಾರಗಳ ಅಥವಾ ಹದಿನಾಲ್ಕು ದಿನಗಳು ಸುಗ್ಗಿಯ ನಂತರ ಈ ಯೋಜನೆಯ ಮೂಲಕ ಕೊಯ್ಲು ವಿಮೆಯನ್ನು ಸಹ ನೀಡಲಾಗುತ್ತದೆ.
6. ಆಯುಷ್ಮಾನ್ ಭಾರತ್ ಯೋಜನೆ
ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವದಲ್ಲೇ ಸರ್ಕಾರೀ ಪ್ರಾಯೋಜಿತ ಬಹುದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 10 ಕೋಟಿ ಕುಟುಂಬಗಳನ್ನು ಒಳಗೊಳ್ಳುವ ಗುರಿ ಇದೆ. 2018 ರ ಸ್ವಾತಂತ್ರ ದಿನದ ಭಾಷಣದಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಪ್ರಧಾನಿ ಉಲ್ಲೇಖಿಸಿದ್ದರು. ಈ ಯೋಜನೆಯನ್ನು ರಾಂಚಿಯಲ್ಲಿ ಸೆಪ್ಟೆಂಬರ್ 2018 ರಲ್ಲಿ ಅಧಿಕೃತವಾಗಿ ಆರಂಭಿಸಲಾಯಿತು.
ಒಂದು ಲಕ್ಷ ಜನರು 2018ರ ಅಕ್ಟೋಬರ್ ವರೆಗೆ ಈ ಯೋಜನೆಗೆ ನೋಂದಾಯಿತಗೊಂಡಿದ್ದಾರೆ. ಈ ಯೋಜನೆ ವಾರ್ಷಿಕ ರೂ. 5 ಲಕ್ಷಗಳಷ್ಟು ವಿಮೆಯನ್ನು ಒದಗಿಸುತ್ತದೆ ಮತ್ತು ಸುಮಾರು 50 ಕೋಟಿ ನಾಗರಿಕರನ್ನು ಒಳಗೊಳ್ಳುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯ ಎರಡು ಪ್ರಮುಖ ಅಂಶಗಳೆಂದರೆ ರಾಷ್ಟ್ರೀಯ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್ ಮತ್ತು ವೆಲ್ನೆಸ್ ಸೆಂಟರ್ಗಳಾಗಿವೆ. ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು ಬಹುತೇಕ ಆಸ್ಪತ್ರೆಗಳನ್ನು ಒಳಗೊಳ್ಳುತ್ತದೆ ಮತ್ತು ಇದರ ಫಲಾನುಭವಿಗಳು ದೇಶದಾದ್ಯಂತದ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿಂದ ಹಣವಿಲ್ಲದ ಪ್ರಯೋಜನಗಳನ್ನು ಪಡೆಯಬಹುದು.
ದೇಶಾದ್ಯಂತ ಸುಮಾರು 1.5 ಲಕ್ಷ ವೆಲ್ನೆಸ್ ಸೆಂಟರ್ಗಳಿಗೆ ರೂ. 1200 ಕೋಟಿಗಳನ್ನು ಪೂರೈಕೆ ಮಾಡಲಾಗಿದೆ. ಈ ವೆಲ್ನೆಸ್ ಸೆಂಟರ್ಗಳು ಮಕ್ಕಳ ಆರೋಗ್ಯ ರಕ್ಷಣೆ, ಮಾನಸಿಕ ಅಸ್ವಸ್ಥತೆಯ ನಿರ್ವಹಣೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ.
7. ಅಟಲ್ ಪಿಂಚಣಿ ಯೋಜನೆ
ಅಟಲ್ ಪಿಂಚಣಿ ಯೋಜನೆಯು ಭಾರತದಲ್ಲಿನ ಸರಕಾರ ಬೆಂಬಲಿತ ಪಿಂಚಣಿ ಯೋಜನೆಯಾಗಿದೆ. ಇದು ಅಸಂಘಟಿತ ವಲಯವನ್ನು ಗುರಿಯಾಗಿಸಿ ತಂದ ಯೋಜನೆಯಾಗಿದೆ. ಈ ಯೋಜನೆಯನ್ನು ಮೊದಲು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಣಕಾಸು ಬಜೆಟ್ನಲ್ಲಿ ಪ್ರಸ್ತಾಪಿಸಿದರು ಮತ್ತು 2015 ರ ಮೇ ತಿಂಗಳಲ್ಲಿ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಔಪಚಾರಿಕವಾಗಿ ಪ್ರಾರಂಭಿಸಿದರು.
ಈ ಯೋಜನೆಯ ಮುಖ್ಯ ಗುರಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಪ್ರಯೋಜನಗಳನ್ನು ವಿಸ್ತರಿಸುವುದು. ಸುಮಾರು 1.08 ಕೋಟಿ ಚಂದಾದಾರರು ಮತ್ತು 4,500 ಕೋಟಿ ರೂ. ಕೊಡುಗೆಯನ್ನು ಈ ಯೋಜನೆಯಡಿ ಈ ದಿನಾಂಕದವರೆಗೆ ಸ್ವೀಕರಿಸಲಾಗಿದೆ. ಈ ಯೋಜನೆಯಡಿ ರೂ. 1000 ಮತ್ತು 5000 ರ ನಡುವೆ ಪಿಂಚಣಿ ಪಾವತಿಸಲಾಗುತ್ತದೆ. 10000 ರೂ. ವರೆಗೆ ಹೆಚ್ಚುವರಿ ಸ್ಲ್ಯಾಬ್ಗಳನ್ನು ಸೇರಿಸಬಹುದಾಗಿದೆ. ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಚಂದಾದಾರರು ಬ್ಯಾಂಕಿನಲ್ಲಿ ಅಥವಾ ಪೋಸ್ಟ್ ಆಫೀಸ್ನಲ್ಲಿ ಉಳಿತಾ ಖಾತೆಯನ್ನು ಹೊಂದಿರುವುದು. ಚಂದಾದಾರರು 18 ರಿಂದ 40 ರ ವಯಸ್ಸಿನ ನಡುವೆ ಇರಬೇಕು. ಫಲಾನುಭವಿಯು ಕನಿಷ್ಟ 20 ವರ್ಷ ಪ್ರೀಮಿಯಂ ಕಟ್ಟಲೇಬೇಕು.
ಯಾರಾದರೂ ಈ ಯೋಜನೆಯನ್ನು ಆಯ್ಕೆ ಮಾಡಬಹುದು, ಆದರೆ ಹೆಚ್ಚಾಗಿ ಚಾಲಕರು, ಮನೆಗೆಲಸದವರು ಮುಂತಾದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ನೋಂದಾಯಿಸಬಹುದು. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
8. ಕಿಸಾನ್ ವಿಕಾಸ್ ಪತ್ರ
ಕಿಸಾನ್ ವಿಕಾಸ್ ಪತ್ರವು 1998 ರಲ್ಲಿ ಭಾರತೀಯ ಪೋಸ್ಟ್ ಆಫೀಸ್ನಿಂದ ಮೊದಲ ಬಾರಿಗೆ ಪ್ರಾರಂಭಿಸಲ್ಪಟ್ಟ ಒಂದು ಉಳಿತಾಯ ಪ್ರಮಾಣಪತ್ರ ಯೋಜನೆಯಾಗಿದೆ. ಈ ಯೋಜನೆಯು ಸುಮಾರು 10 ವರ್ಷ ಅಥವಾ 118 ತಿಂಗಳುಗಳಲ್ಲಿ ಹೂಡಿಕೆಗೆ ದ್ವಿಗುಣಗೊಳಿಸಲು ಹೆಚ್ಚು ನಿಖರವಾಗಿದೆ. ದೀರ್ಘಕಾಲದವರೆಗೆ ತಮ್ಮ ಉಳಿತಾಯವನ್ನು ಉತ್ತೇಜಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
ಈ ಯೋಜನೆಯ ತಿದ್ದುಪಡಿಯನ್ನು 2014 ರಲ್ಲಿ ಪರಿಚಯಿಸಲಾಯಿತು. ಅದರ ಪ್ರಕಾರ, ಹಿಂಪಡೆಯುವಿಕೆಯ ಅವಧಿಯನ್ನು 118 ತಿಂಗಳುಗಳಲ್ಲಿ ನಿಗದಿಪಡಿಸಲಾಗಿದೆ ಮತ್ತು ಈ ಯೋಜನೆಯ ಲಾಭಗಳನ್ನು ಪಡೆಯಲು ಕನಿಷ್ಠ ಹೂಡಿಕೆಯು ರೂ. 1000 ಕ್ಕೆ ನಿಗದಿಪಡಿಸಲಾಗಿದೆ. ಹೂಡಿಕೆಯ ಮೇಲೆ ಮಿತಿ ಇಲ್ಲ ಎಂದು ಘೋಷಿಸಲಾಗಿದೆ. ಅಂದರೆ, ಈ ಯೋಜನೆಯಲ್ಲಿ ಅವನು / ಅವಳು ಬಯಸಿದಂತೆ ವ್ಯಕ್ತಿಯು ಹೆಚ್ಚು ಹಣವನ್ನು ಹೂಡಬಹುದು. 18 ವರ್ಷ ಅಥವಾ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕನು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು ಪ್ರಾಥಮಿಕವಾಗಿ ರೈತರಿಗೆ ಮಾತ್ರವಾಗಿತ್ತು ಆದರೆ ಈಗ ಅದು ಎಲ್ಲರಿಗೂ ಲಭ್ಯವಿದೆ. ಈ ಯೋಜನೆಯ ದುರುಪಯೋಗವನ್ನು ತಪ್ಪಿಸಲು, ಬಂಡವಾಳವು 50000 ರೂ. ಮೀರಿದರೆ ಪ್ಯಾನ್ ಕಾರ್ಡ್ ಅನ್ನು ಸಾಕ್ಷಿಯನ್ನಾಗಿ ಪ್ರಸ್ತುತಪಡಿಸುವುದನ್ನು ಸರ್ಕಾರವು ಕಡ್ಡಾಯವಾಗಿ ಮಾಡಿದೆ. ಈ ಯೋಜನೆಯನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ. ಈ ಯೋಜನೆಯಿಂದ ಆದಾಯವು ಖಾತರಿಪಡಿಸಲ್ಪಡುತ್ತದೆ ಆದರೆ ತೆರಿಗೆಗೆ ಒಳಪಟ್ಟಿರುತ್ತದೆ. ಮತ್ತೊಂದು ಅಂಶವೆಂದರೆ, ಸಾಲಗಳನ್ನು ಪಡೆಯಲು KVP ಪ್ರಮಾಣಪತ್ರವನ್ನು ಒಂದು ಮೇಲಾಧಾರವಾಗಿ ಬಳಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.