ಭುವನೇಶ್ವರ: ಅಪರೂಪದ ಅವಶೇಷಗಳನ್ನು ಮತ್ತು ಕಲಾಕೃತಿಗಳನ್ನು ಸಂಗ್ರಹಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಒರಿಸ್ಸಾದ 40 ವರ್ಷದ ಸತ್ಯ ಕೇತನ್ ಮೊಹಂತಿ ಅವರು ಇದುವರೆಗೆ ಸುಮಾರು 8,000 ಇಂತಹ ಸಂಗ್ರಹಗಳನ್ನು ಹೊಂದಿದ್ದಾರೆ. ಇದಕ್ಕಾಗಿ ಪಶ್ಚಿಮ ಒರಿಸ್ಸಾದಲ್ಲಿ ಒಂದು ಮ್ಯೂಸಿಯಂ ಅನ್ನು ನಿರ್ಮಿಸಲು ಬಯಸುತ್ತಿದ್ದಾರೆ.
ಕಳೆದ ಎರಡು ದಶಕಗಳಿಂದ ಅವರು ಸಂಗೀತ ಪರಿಕರಗಳಿಂದ ಹಿಡಿದು ನಾಣ್ಯಗಳವರೆಗಿನ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ. ಈ ಎಲ್ಲಾ ವಸ್ತುಗಳು ವಿವಿಧ ರಾಜಾಡಳಿತಕ್ಕೆ ಸೇರಿದ ಕಾಲದವು ಆಗಿವೆ. ಕಳೆದ 23 ವರ್ಷಗಳಿಂದ ತಾನು ಈ ಕಾರ್ಯವನ್ನು ನಡೆಸುತ್ತಾ ಬಂದಿದ್ದೇನೆ ಎಂದು ಸತ್ಯ ಕೇತನ್ ಹೇಳುತ್ತಾರೆ.
ತನ್ನ ಅಪರೂಪದ ಪ್ರಾಚೀನ ವಸ್ತುಗಳನ್ನು ಅವರು 14 ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಚಿನ್ನದ ನಾಣ್ಯಗಳನ್ನೂ ಇದು ಒಳಗೊಂಡಿದೆ. ಗಂಗಾ ರಾಜವಂಶ ಕಾಲದ, ಅಶೋಕ ಮತ್ತು ಕುಶಾನರ ಕಾಲದ, ರಝೀಯಾ ಸುಲ್ತಾನಳ ಕಾಲದ ನಾಣ್ಯಗಳು ಇವರ ಬಳಿಯಿದೆ. ಸುಮಾರು 1000 ನಾಣ್ಯಗಳನ್ನು ಇವರು ಹೊಂದಿದ್ದಾರೆ. ಬುದ್ಧ ಮತ್ತು ಜುರಾಸಿಕರ ಕಾಲಕ್ಕೆ ಸೇರಿದ ವಸ್ತುಗಳೂ ಇವರ ಬಳಿ ಇದೆ.
100 ಕ್ಕೂ ಹೆಚ್ಚಿನ ಪಳೆಯುಳಿಕೆಗಳು, ಅಪರೂಪದ ಕಪ್ಪೆಚಿಪ್ಪುಗಳು, ಅಪರೂಪದ ಸಂಗೀತ ವಾದ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಆಯುಧಗಳು, ಬುಡಕಟ್ಟು ಜನಾಂಗದವರ ಆಭರಣಗಳು, 350ಕ್ಕೂ ಹೆಚ್ಚಿನ ಕಲ್ಲು ಮತ್ತು ಖನಿಜಗಳು ಇವರ ಸಂಗ್ರಹದ ಭಾಗವಾಗಿವೆ.
ಅಂಚೆ ಚೀಟಿಗಳು, ಹಳೆಯ ಲಕೋಟೆಗಳು, ಪತ್ರಗಳು, ತಾಳೆ ಗರಿ ಎಲೆ ಹಸ್ತಪ್ರತಿಗಳು ಮತ್ತು ಸುಮಾರು 800 ರೀತಿಯ ಗಿಡಮೂಲಿಕೆ ಉತ್ಪನ್ನಗಳು ಅವರ ಬಳಿ ಇದೆ. ತಮ್ಮ ಸಂಪಾದನೆಯ ಅರ್ಧದಷ್ಟು ಹಣವನ್ನು ಈ ವಸ್ತುಗಳನ್ನು ಸಂಗ್ರಹಿಸುವ ಸಲುವಾಗಿ ಅವರು ವ್ಯಯಿಸಿದ್ದಾರೆ.
ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂಬರುವ ಪೀಳಿಗೆಗೂ ತಿಳಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಮ್ಯೂಸಿಯಂ ಸ್ಥಾಪನೆ ಮಾಡುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.