ಓಹ್! ಕ್ಯೂಆರ್ ಕೋಡ್ ಎಲ್ಲೋ ಕೇಳಿರುವಂತಿದೆಯಲ್ಲ ಎಂದುಕೊಳ್ಳಬೇಡಿ. ದಿನ ನಿತ್ಯದ ಜೀವನದಲ್ಲಿ ನೀವು ನೋಡುತ್ತಲೇ ಇರುತ್ತೀರಿ. ಬೆಳಿಗ್ಗೆ ಎದ್ದು ಹಿಡಿಯುವ ಬ್ರಷ್ನಿಂದ ಹಿಡಿದು ರಾತ್ರಿ ಮಲಗುವಾಗ ತಲೆಯಿಡುವ ದಿಂಬಿನ ತನಕ ಎಲ್ಲವೂ ಕ್ಯೂಆರ್ ಕೋಡ್ ಮಯ. ಚಿತ್ರ ವಿಚಿತ್ರ ಚುಕ್ಕೆಗಳು, ಗೆರೆಗಳು ಮತ್ತು ಅದಕ್ಕೊಂದು ವಿಶಿಷ್ಟ ಚೌಕಟ್ಟು ಇರುವ ಚಿತ್ರವನ್ನು ಪ್ರತಿ ಪ್ಯಾಕುಗಳ ಮೇಲೂ ನೀವು ನೋಡಿಯೇ ಇರುತ್ತೀರಿ. ಆದರೆ ಹೆಚ್ಚು ಗಮನ ಹರಿಸಿರುವುದಿಲ್ಲ.
ಇತ್ತೀಚೆಗೆ ಭಾರತ ಸರ್ಕಾರ ಡಿಜಿಟಲ್ ಪಾವತಿ ಹೆಚ್ಚಿಸುವ ನಿಟ್ಟಿನಲ್ಲಿ, ಯುಪಿಐ (Unified Payments Interface) ಬಳಸಿ, ಕ್ಯೂಆರ್ ಕೋಡ್ ಆಧಾರಿತ ಪಾವತಿಗೆ ಉತ್ತೇಜಿಸುವ ಯೋಜನೆ ಪ್ರಕಟಿಸುವುದರೊಂದಿಗೆ ಕ್ಯೂಆರ್ ಕೋಡ್ ಚರ್ಚೆ ಮುನ್ನೆಲೆಗೆ ಬಂದಿದೆ. ಹಾಗಾಗಿ ನಾವು ಕ್ಯೂಆರ್ ಕೋಡ್ ಪುರಾಣ ಅರಿತು ಕೃತಾರ್ಥರಾಗೋಣ.
ಕ್ಯೂಆರ್ ಕೋಡ್ ( Quick Response Code)
ಕನ್ನಡದಲ್ಲಿ ‘ತ್ವರಿತ ಪ್ರತಿಕ್ರಿಯೆ ಸಂಕೇತ’ ಎನ್ನಬಹುದು. ಇದಕ್ಕೂ ಮೊದಲು ಕೆಲವು ಬೇರೆ ಬೇರೆ ರೀತಿಯ ಗೆರೆಗಳು ಇದ್ದ ಬಾರ್ಕೋಡ್ ಚಿತ್ರ ಎಲ್ಲಾ ವಸ್ತುಗಳ ಪ್ಯಾಕುಗಳ ಮೇಲೆ ಹರಿದಾಡುತ್ತಿತ್ತು. ಅದರದೇ ಸ್ವಲ್ಪ ಸುಧಾರಿತ ಹೊಸ ರೂಪವೇ ಕ್ಯೂಆರ್ ಕೋಡ್. 1994ರಲ್ಲಿ ಜಪಾನಿನ ಡೆನ್ಸೋ ವೇವ್ ಕಾರ್ಖಾನೆಯಲ್ಲಿ ಮೊದಲ ಬಾರಿಗೆ ಬಳಸಲಾಯಿತು. ಒಂದು ವಸ್ತುವನ್ನು ಗುರುತಿಸುವುದು ಅದರ ಮೂಲ ಉದ್ದೇಶ. ಇದರ ಹೊಟ್ಟೆಯೊಳಗೆ ಅಂಕಿ ಅಂಶಗಳು, ಅಕ್ಷರಗಳು, ಇನ್ನಿತರ ವಿವರಗಳನ್ನು ತುಂಬಿಕೊಂಡಿದೆ.
ಕ್ಯೂಆರ್ ಕೋಡ್ನ ಸಂಗ್ರಹಣಾ ಸಾಮರ್ಥ್ಯ ಹಾಗೂ ವೇಗವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವ ಕಾರಣ, ಸಂಕೇತದ ಬಳಕೆ ಹೆಚ್ಚುತ್ತಲೇ ಹೋಯಿತು. ಕ್ಯೂಆರ್ ಕೋಡ್ ರಚಿಸಿ ಕೊಡಲು ನಿಮಗೆ ಅನೇಕ ಸಾಫ್ಟ್ವೇರ್ ಮತ್ತು ಆನ್ಲೈನ್ ತಾಣಗಳು ಸಿಗುತ್ತವೆ.
ಉಪಯೋಗಗಳನ್ನು ನೋಡುವುದಾದರೆ ವಿಳಾಸ ಪತ್ತೆಹಚ್ಚಲು, ಮಿಂಚಂಚೆ ಕಳಿಸಲು, ಸಂದೇಶ ರವಾನಿಸಲು ಬಳಸುತ್ತಾರೆ. ಮೊಬೈಲ್ಗಳಲ್ಲಿ, ಆ್ಯಪ್ಗಳಾದ ವಾಟ್ಸ್ಆ್ಯಪ್, ಫೇಸ್ಬುಕ್, ಶೇರ್ಇಟ್, ಮೆಸ್ಸೆಂಜರ್ಗಳಲ್ಲಿ ಅಲ್ಲದೆ ಗೇಮ್ಗಳಲ್ಲಿ ಬಳಕೆ ಆಗುತ್ತಿದೆ. ಬಹಳ ಸರಳ ವಿಧಾನವಾದ ಕಾರಣ ವೆಬ್ಸೈಟ್ ಲಾಗಿನ್ ಮಾಡಲು, ಓಟಿಪಿಗಳನ್ನು ಪಡೆಯಲು ಸಾಧ್ಯ.
ಇಷ್ಟೆಲ್ಲಾ ಇದ್ದರೂ ಕ್ಯೂಆರ್ ಕೋಡ್ ತೊಂದರೆಗಳಿಂದ ಹೊರತಲ್ಲ. ಸೈಬರ್ ಕಳ್ಳರು ತಮ್ಮ ಕೈಚಳಕ ತೋರಬಹುದು. ನಕಲಿ ಕ್ಯೂಆರ್ ಕೋಡ್ ನಿಮ್ಮ ಮಾಹಿತಿಯನ್ನು ಹೊತ್ತೊಯ್ಯಬಹುದು. ತಂತ್ರಜ್ಞಾನ ಎಂದ ಮೇಲೆ ಇದೆಲ್ಲ ಸಾಮಾನ್ಯ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಇಷ್ಟು ದಿನ ರೂಪೇ ಕಾರ್ಡ್ಗಳನ್ನು ಪ್ರೋತ್ಸಾಹಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಹಲವು ಸೌಲಭ್ಯಗಳನ್ನು ನೀಡಿದೆ. ಇತ್ತೀಚೆಗೆ ಬಂದ ಭೀಮ್ ಆ್ಯಪ್ನಲ್ಲಿ ಕ್ಯೂಆರ್ ಕೋಡ್ ಬಳಸಲಾಗಿದ್ದು, ಹೆಚ್ಚು ಫಲಿಸಿದೆ ಕೂಡ.
ಕ್ಯೂಆರ್ ಕೋಡ್ ಕುರಿತು ಜಿಎಸ್ಟಿ ಕಾರ್ಯಾಲಯದ ಅಂಕಿತವೂ ದೊರಕಿದ್ದು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಮುಂದಿನ ಜವಾಬ್ದಾರಿ ವಹಿಸಿಕೊಂಡಿದೆ. ಇನ್ನು ಮೇಲೆ ಭಾರತೀಯ ಗ್ರಾಹಕರು ಎಲ್ಲೆಡೆ ತಮ್ಮ ಡೆಬಿಟ್ ಕ್ರೆಡಿಟ್ ಕಾರ್ಡುಗಳ ಬದಲು ಸರಳವಾಗಿ ಡಿಜಿಟಲ್ ಪಾವತಿ ಮಾಡಬಹುದು.
ಭಾರತ ಹೊಸ ವಿಧಾನಗಳಿಗೆ ತೆರೆದುಕೊಳ್ಳುತ್ತಿರುವ ಹಿಂದಿನ ಶ್ರೇಯ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು. ಇದರಿಂದ ಭೌತಿಕ ಹಣದ ಹರಿವು ಕಡಿಮೆಯಾಗುವುದಲ್ಲದೆ, ತಲಾ ಆದಾಯದ ಮೇಲೂ ಪರಿಣಾಮ ಬೀರಲಿದೆ. ಇಂತಹ ದಾಪುಗಾಲು ಹಾಕುತ್ತಾ ಭಾರತ ಭ್ರಷ್ಟಾಚಾರದಿಂದ ದೂರ ದೂರ ಸರಿಯುತ್ತಿದೆ ಎನ್ನಬಹುದು.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.