ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಬಿಜೆಪಿ ಸಾಧಿಸಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಮಾತನಾಡಿದರು. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌವ್ಹಾಣ್, ಜೆಪಿ ನಡ್ಡಾ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, “2019ರ ಲೋಕಸಭಾ ಚುನಾವಣೆಯಲ್ಲಿ ನವಭಾರತದ ನಿರ್ಮಾಣಕ್ಕೆ ಜನಾದೇಶ ನೀಡುವಂತೆ ಮನವಿ ಮಾಡಿಕೊಂಡೆವು. ದೇಶದ ಕೋಟಿ ಕೋಟಿ ಜನರು ಈ ಫಕೀರನ ಜೋಳಿಗೆಯನ್ನು ಭರಪೂರ ಮತಗಳಿಂದ ತುಂಬಿದರು. ಇದಕ್ಕಾಗಿ ದೇಶದ 130 ಕೋಟಿ ಭಾರತೀಯರಿಗೆ ನಮಿಸುತ್ತೇನೆ” ಎಂದರು.
2019ರ ಲೋಕಸಭಾ ಚುನಾವಣೆ ಜಗತ್ತಿನ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅತೀದೊಡ್ಡ ಸನ್ನಿವೇಶವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಧಿಕ ಪ್ರಮಾಣದ ಮತದಾನವನ್ನು ಕಂಡ ಚುನಾವಣೆ ಇದಾಗಿತ್ತು. ಪ್ರಜಾಪ್ರಭುತ್ವದ, ಭಾರತದ ಬಗೆಗಿನ ಭಾರತೀಯರ ಜಾಗೃತಿಯ ಪ್ರತಿಫಲನವಾಗಿದೆ ಎಂದರು.
ಈ ಲೋಕತಂತ್ರದ ವ್ಯವಸ್ಥೆಯಲ್ಲಿ ಬಲಿದಾನಗೈದ, ಗಾಯಗೊಂಡ ಪರಿವಾರಕ್ಕೆ ನನ್ನ ಸಂವೇದನಾಶೀಲತೆಯನ್ನು ವ್ಯಕ್ತಪಡಿಸುತ್ತೇನೆ. ಪ್ರಜಾಪ್ರಭುತ್ವಕ್ಕಾಗಿನ ತ್ಯಾಗ ಮುಂಬರುವ ಪೀಳಿಗೆಗೆ ಪ್ರೇರಣೆ ನೀಡುತ್ತದೆ ಎಂದರು.
ಈ ಚುನಾವಣೆಯ ವಿಜಯ ಭಾರತದ ವಿಜಯ, ಪ್ರಜಾಪ್ರಭುತ್ವದ ವಿಜಯ, ಜನರ ವಿಜಯ. ಹೀಗಾಗಿ ವಿಜಯವನ್ನು ಜನತೆಯ ಚರಣಗಳಿಗೆ ಸಮರ್ಪಣೆ ಮಾಡುತ್ತೇನೆ ಎಂದರು.
ಎರಡನೆಯ ಬಾರಿ ಅಧಿಕಾರಕ್ಕೇರಿದರೂ ನಮ್ಮ ಆದರ್ಶಗಳನ್ನು, ನಮ್ಮ ಸಂಸ್ಕಾರಗಳನ್ನು, ನಮ್ಮ ವಿನಮ್ರತೆಯನ್ನು ನಾವು ಬಿಡುವುದಿಲ್ಲ. ಸಂವಿಧಾನಕ್ಕೆ ಸಮರ್ಪಿತರಾಗಿ, ವಿಕೇಂದ್ರೀಕರಣವನ್ನು ಗೌರವಿಸಿ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತೆವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.