ಮಕ್ಕಳ ಭವಿಷ್ಯ ರೂಪಿಸುವವನೇ ನಿಜವಾದ ಶಿಕ್ಷಕ. ಇಲ್ಲೊಬ್ಬರು ಶಿಕ್ಷಕ ಕೇವಲ ಮಕ್ಕಳ ಬದುಕನ್ನಲ್ಲ ಇಡೀ ಬುಡಕಟ್ಟು ಸಮುದಾಯವನ್ನೇ ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅದಕ್ಕಾಗಿ ಕಳೆದ 20 ವರ್ಷಗಳಿಂದ ಕಾಡಿನಲ್ಲೇ ಬದುಕುತ್ತಿದ್ದಾರೆ. ಅಲ್ಲಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ.
ಕೇರಳದ ಪಿಕೆ ಮುರಳೀಧರನ್ ಅವರು 29ನೇ ವಯಸ್ಸಿನಲ್ಲೇ ಅಂದರೆ 1999ರಲ್ಲಿ ತಮ್ಮ ಸ್ವಂತ ಊರನ್ನು ಬಿಟ್ಟು ಕೇರಳ ಇಡುಕ್ಕಿ ಜಿಲ್ಲೆಯ ನೆನ್ಮನಲ್ಕುಡಿಗೆ ತೆರಳಿದ್ದರು. ಅಲ್ಲಿಂದ ಅವರ ಜೀವನದ ದೆಸೆಯೇ ಬದಲಾಗಿ ಹೋಗಿದೆ. ಬುಡಕಟ್ಟು ಪ್ರದೇಶಗಳಲ್ಲಿ ಬಹು ತರಗತಿ ಕಲಿಕಾ ಕೇಂದ್ರ ಮತ್ತು ಏಕ ಶಿಕ್ಷಕ ಶಾಲೆಗಳನ್ನು ನಡೆಸುವ ಕೇರಳದ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯ ಸ್ವಯಂಸೇವಕನಾಗಿ ದುಡಿಯುತ್ತಿದ್ದ ಅವರನ್ನು ಬುಡಕಟ್ಟು ಪ್ರದೇಶವೊಂದರಲ್ಲಿ ಏಕ ಶಿಕ್ಷಕ ಶಾಲೆಯ ಶಿಕ್ಷಕರನ್ನಾಗಿ ನೇಮಕ ಮಾಡಿತ್ತು.
ನೆನ್ಮನಲ್ಕುಡಿ ಮುತುವನ್ಸ್ ಎಂಬ ಗ್ರಾಮ ಬುಡಕಟ್ಟು ಜನರ ಊರಾಗಿದೆ, ವಿಭಿನ್ನವಾದ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಇವರು ಹೆಸರಾಗಿದ್ದಾರೆ, ಅರಣ್ಯಗಳ ನಡುವೆ ಬಿದಿರನಲ್ಲಿ ಗುಡಿಸಲನ್ನು ನಿರ್ಮಾಣ ಮಾಡಿಕೊಂಡು ಇವರು ಬದುಕುತ್ತಾರೆ. ಈ ಪರಿಸರ ಸವಾಲುಗಳ ಬಗ್ಗೆ ಅರಿವನ್ನು ಇಟ್ಟುಕೊಂಡೇ ಮುರಳೀಧರನ್ ಅವರು ಇಲ್ಲಿಗೆ ಶಿಕ್ಷಕರಾಗಿ ಬಂದರು.
ಆ ಪ್ರದೇಶದಲ್ಲಿ ಶಾಲೆಯನ್ನೇ ನೋಡದ, ಅಕ್ಷರದ ಪರಿಚಯವೇ ಇಲ್ಲದ ಸುಮಾರು 5-15 ವಯಸ್ಸಿನ ಸುಮಾರು 35 ಮಕ್ಕಳಿದ್ದರು. ಅಲ್ಲಿ ಮೂಲಸೌಕರ್ಯಗಳಿರಲಿಲ್ಲ, ಇದ್ದದ್ದು ಗುಡಿಸಲು ಒಂದೇ. ಆದರೆ ಮುರಳೀಧರನ್ ಅವರಿಗೆ ಇದ್ಯಾವುದೂ ಸಮಸ್ಯೆಯಾಗಿ ಗೋಚರಿಸಿ ಇಲ್ಲ. ಅವರಿಗೆ ಕಾಡಿದ್ದ ದೊಡ್ಡ ಸಮಸ್ಯೆ ಎಂದರೆ ಶಾಲೆಗೆ ಕಟ್ಟಡ ಇಲ್ಲದೇ ಇದ್ದುದು. ಸರ್ಕಾರ ಇಲ್ಲಿನ ಮಕ್ಕಳಿಗೆ ಪುಸ್ತಕಗಳನ್ನೂ ಒದಗಿಸಿರಲಿಲ್ಲ. ಒಂದೇ ಒಂದು ಬಟ್ಟೆಯಲ್ಲೇ ಮಕ್ಕಳು ದಿನದೂಡುತ್ತಿದ್ದರು. ನೈರ್ಮಲ್ಯದ ಕೊರತೆಯಿಂದಾಗಿ ಅವರು ಅನಾರೋಗ್ಯಕ್ಕೀಡಾಗುವ ಅಪಾಯವೂ ದಟ್ಟವಾಗಿತ್ತು.
ಮೂರು ತಿಂಗಳಾಗುವಾಗಲೇ ಇಲ್ಲಿನ ಮಕ್ಕಳನ್ನು ಹೊರಕ್ಕೆ ಕರೆದುಕೊಂಡು ಬರಲಾಗುತ್ತದೆ. ಅರಣ್ಯದ ಸುತ್ತಮುತ್ತ ಅವರು ತಿರುಗಾಡಿಕೊಂಡು ಜೀವನ ಮಾಡುತ್ತಾರೆ. ಹೀಗಾಗಿ ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಇವರಿಗೆ ವಿದ್ಯೆ ಕಲಿಸುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಮತ್ತೊಂದು ದೊಡ್ಡ ತೊಡಕು ಮುರಳೀಧರನ್ ಅವರಿಗೆ ಕಾಡಿದ್ದೆಂದರೆ ಭಾಷೆ. ಮುತುವನ್ಸ್ ತಮಿಳಿನ ಮೂಲವಿರುವ ಭಾಷೆ ಮಾತನಾಡುತ್ತಾರೆ. ಇದು ಅವರಿಗೆ ಬರುತ್ತಿರಲಿಲ್ಲ. ಹೀಗಾಗಿ ಆರಂಭದಲ್ಲಿ ಅವರು ಸಂಜ್ಞಾ ಭಾಷೆಯಲ್ಲೇ ಅವರೊಂದಿಗೆ ವ್ಯವಹರಿಸಿದರು. ಮಲಯಾಳಂ ಕಲಿಸುವ ಬದಲು ಅಲ್ಲಿಯವರೆಗೆ ನೈರ್ಮಲ್ಯವನ್ನು ಹೇಳಿಕೊಟ್ಟರು. ನಿತ್ಯ ಸ್ಥಾನ ಮಾಡುವಂತೆ ಮಾಡಿದರು. ಬಳಿಕ ನಿಧಾನಕ್ಕೆ ಅವರ ಭಾಷೆಯನ್ನು ಕಲಿತುಕೊಂಡರು.
ಬಳಿಕ ಮಕ್ಕಳಿಗೆ ಮಲಯಾಳಂ ಪರಿಚಯಿಸುವ ಸಲುವಾಗಿ ಪದ್ಯ, ಕವಿತೆಗಳನ್ನು ಹೇಳಿಕೊಟ್ಟರು. ಅವರೊಂದಿಗೆ ಅದನ್ನು ಹಾಡುವಂತೆ ಮಾಡಿದರು.
ಆದರೆ ಮುರಳೀಧರನ್ ಅವರ ಯೋಜನೆ ಅಂದುಕೊಂಡಂತೆ ಆಗಲಿಲ್ಲ. ಯಾಕೆಂದರೆ ನೆನ್ಮನಲ್ಕುಡಿಯಲ್ಲಿ ಬುಡಕಟ್ಟು ಜನರು ಕೆಲವು ಸಮಯ ಮಾತ್ರ ಇರುತ್ತಾರೆ. ಆ ಬಳಿಕ ಅವರು ಕೊಯ್ಲು ಅವಧಿಯಲ್ಲಿ ವಝಕುತು ಎಂಬ ಊರು (ಬುಡಕಟ್ಟು ತಾಣ)ಗೆ ವಲಸೆ ಹೋಗುತ್ತಾರೆ. ಅಲ್ಲಿ ಏಲಕ್ಕಿಯನ್ನು ಬೆಳೆಸಲಾಗುತ್ತದೆ. ಬೆಳೆಯ ಅವಧಿ ಮುಕ್ತಾಯವಾದಾಗ ಮಾತ್ರ ಅವರು ನೆನ್ಮನಲ್ಕುಡಿಗೆ ಬರುತ್ತಾರೆ.
ಹೊಸ ಊರಿನಲ್ಲೇ ತಮ್ಮ ಕರ್ತವ್ಯವನ್ನು ಆರಂಭಿಸಿದ ಮುರಳೀಧರನ್ ಅವರು, ಅಲ್ಲೇ ಎರಡೂ ಕಡೆಗಳ ಸುಮಾರು 55 ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದರು. ಸತ್ರಾಮ್ ಎಂಬ ಗಂಡು ಮಕ್ಕಳ ವಾಸಸ್ಥಳದಲ್ಲಿ ಕಲಿಸಲು ಆರಂಭಿಸಿದರು. ನೆನ್ಮನಲ್ಕುಡಿಯಂತೆಯೇ ಊರುನಲ್ಲೂ ನೈರ್ಮಲ್ಯದ ಸ್ಥಿತಿಗತಿ ಇತ್ತು, ಅಲ್ಲೂ ಅದನ್ನು ಸರಿಪಡಿಸುವ ಕಾರ್ಯವನ್ನು ಇವರು ಮಾಡಿದರು.
ಎಲ್ಲದಕ್ಕೂ ಮುಖ್ಯವಾಗಿ ಬುಡಕಟ್ಟು ಮಕ್ಕಳಿಗೆ ಸರಿಹೊಂದುವ ಕಲಿಕಾ ವಿಧಾನವನ್ನೇ ಇವರು ಅನುಸರಿಸಿದರು. ಅವರ ಭಾಷೆಯನ್ನು ಕಲಿತರು ಮತ್ತು ಗೋಡೆಯ ಮಧ್ಯೆಗಿಂತ ಹೊರಕ್ಕೆ ತರಗತಿಗಳನ್ನು ಏರ್ಪಡಿಸಿದರು. ಶಿಕ್ಷಣದ ಮಹತ್ವ ಎಂತಹುದು ಎಂಬುದನ್ನು ಅವರಿಗೆ ತಿಳಿಸಿಕೊಡುವ ಪ್ರಯತ್ನವನ್ನು ನಡೆಸಿದರು.
ಪೋಷಕರನ್ನು ಕಷ್ಟಪಟ್ಟು ಒಪ್ಪಿಸಿ ಅವರು ಮಕ್ಕಳನ್ನು 2003ರಲ್ಲಿ ದೂರದ ಆದಿಮಲೆಯಲ್ಲಿನ ಶಾಲೆಗೆ ಸೇರುವಂತೆ ಮಾಡಿದರು. ಆ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಸೇರಿಸಿ ಮನೆಗೆ ತಂದು ತಲುಪಿಸುವ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡರು.
ಸತ್ರಾಮ್ನಲ್ಲಿ ನೆಲೆಸಿದ್ದ ಮುರಳೀಧರನ್ ಅವರು ಬುಡಕಟ್ಟು ಜನರು ಬೆಳೆಯುವ ಆಹಾರವನ್ನೇ ತಿಂದರು. ಭತ್ತ ಮತ್ತು ರಾಗಿ ಅವರ ಮುಖ್ಯ ಆಹಾರವಾಗಿತ್ತು.
ಬುಡಕಟ್ಟು ಜನರಿಗೆ ಸ್ಥಳಿಯ ಸರ್ಕಾರದ ಬಗ್ಗೆ, ಹೇಗೆಲ್ಲಾ ವ್ಯವಸ್ಥೆಗಳು ಕಾರ್ಯನಿರ್ವಹಣೆ ಮಾಡುತ್ತವೆ ಎಂಬಿತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮಾತ್ರವಲ್ಲ, ಅವರಿಗೆ ಐಡಿ ಕಾರ್ಡ್, ರೇಶನ್ ಕಾರ್ಡ್ ದೊರೆಯುವಂತೆಯೂ ಮಾಡಿದರು.
ಪ್ರಾಣಿಗಳ ದಾಳಿ ವಿಪರೀತವಾದ ಕಾರಣ ಈ ಬುಡಕಟ್ಟು ಜನರು ವಝಕುತುವಿನಿಂದ ಒಲಕ್ಕಯಂ ಪ್ರದೇಶಕ್ಕೆ ವಲಸೆ ಹೋಗುವಂತೆ ಆಯಿತು. ಇದರಿಂದಾಗಿ ಮುತುವನ್ಸ್ ಜನರ ಆದಾಯ ಸ್ಥಿರತೆ ಕಾಣಲು ಶಕ್ತವಾಯಿತು. ಮುರಳೀಧರನ್ ಅವರ ಸಲಹೆಯ ಮೇರೆ ಇಲ್ಲಿನ ಜನ ಕಾಳು ಮೆಣಸು ಬೆಳೆಯಲಾರಂಭಿಸಿದರು. ಇದರಿಂದಾಗಿ ಸಂಪಾದನೆ ಹೆಚ್ಚಾಯಿತು. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಅಲ್ಲಿನ ಜನರಿಗೆ ಉದ್ಯೋಗವನ್ನೂ ದೊರಕಿಸಿಕೊಟ್ಟರು. ಇದರಿಂದ ಮುತುವನ್ ಜನರ ಬದುಕು ನಿಧಾನಕ್ಕೆ ಸುಧಾರಣೆ ಕಂಡಿತು.
2011ರಲ್ಲಿ ವಯಸ್ಕ ಶಿಕ್ಷಣ ಅಭಿಯಾನವನ್ನು ಆರಂಭಿಸಿದ ಅವರು, ಮಕ್ಕಳು ತಮ್ಮ ಪೋಷಕರಿಗೆ ಕಲಿಸುವಂತೆ ಮಾಡಿದರು.
ಮುರಳೀಧರನ್ ಅವರು ಮುತುವನ್ಗಳ ಇತಿಹಾಸ ಮತ್ತು ಜೀವನದ ಬಗ್ಗೆ ಎರಡು ಪ್ರಮುಖ ಪುಸ್ತಕಗಳನ್ನು ಬರೆದಿದ್ದಾರೆ.
2005ಕ್ಕೂ ಮುನ್ನ ಈ ಮಕ್ಕಳು ಶಾಲೆಗೆ ಖಾಲಿ ಹೊಟ್ಟೆಯಲ್ಲೇ ಬರುತ್ತಿದ್ದರು. ಹೀಗಾಗಿ ಮುರಳೀಧರನ್ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಈ ಮಕ್ಕಳಿಗೆ ಗಂಜಿ ನೀಡುತ್ತಿದ್ದರು. ಬಳಿಕ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡು ಊಟ ಒದಗಿಸಲು ಅನುದಾನವನ್ನು ಪಡೆದುಕೊಂಡರು.
ಕಳೆದ ವರ್ಷದ ಜನವರಿಯಿಂದ ಎಡಮಲಕ್ಕುಡಿ ಪಂಚಾಯತ್ ಈ ಮಕ್ಕಳಿಗೆ ಬೆಳಿಗ್ಗೆ ಮತ್ತು ರಾತ್ರಿ ಊಟವನ್ನು ಪೂರೈಕೆ ಮಾಡುತ್ತಿದೆ. ಸ್ಥಳಿಯ ಆಡಳಿತ ಇಲ್ಲಿನ ಶಾಲೆಯನ್ನು ನವೀಕರಣಗೊಳಿಸಲು ರೂ 3.5 ಲಕ್ಷ ಅನುದಾನವನ್ನೂ ಒದಗಿಸಿದೆ. ದಾನಿಗಳು ಪೊಲೀಸ್ ಆಯುಕ್ತರು ಈ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಕುರ್ಚಿ, ಮೇಜುಗಳನ್ನು ಒದಗಿಸಿದ್ದಾರೆ. ಕೆಲ ಮಕ್ಕಳು ಶಾಲೆಯಲ್ಲೇ ವಾಸ ಮಾಡುತ್ತಾರೆ. ಅಂತಹವರಿಗೆ ದಿಂಬು, ಚಾಪೆಗಳನ್ನೂ ಒದಗಿಸಲಾಗಿದೆ.
1999ರಿಂದ ಬುಡಕಟ್ಟು ಜನರೊಂದಿಗೆ ಬದುಕುತ್ತಿರುವ ಮುರಳೀಧರನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಮೃತರಾಗಿದ್ದಾರೆ. ಮಕ್ಕಳನ್ನು ತಮ್ಮ ಪೋಷಕರ ಬಳಿ ಬಿಟ್ಟಿರುವ ಮುರಳೀಧರನ್ ಅವರನ್ನು ನೋಡಲು ತಿಂಗಳಿಗೆ ಒಂದು ಬಾರಿ ಹೋಗುತ್ತಾರೆ.
ಎರಡು ದಶಕಗಳಿಂದ ಬುಡಕಟ್ಟು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ, ಅಲ್ಲಿನ ಜನರ ಬದುಕನ್ನು ಬದಲಾಯಿಸುತ್ತಾ ಬಂದಿರುವ ಮುರಳೀಧರನ್ ಮುತುವನ್ಗಳ ಪಾಲಿಗೆ ಜೀವಂತ ದಂತಕಥೆ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.