ನವದೆಹಲಿ: ಇ-ಸಿಗರೇಟ್, ವೇಪ್, ಇ-ಶೀಷಾ, ಇ-ಹುಕ್ಕಾ ಇನ್ನಿತರ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್(ENDS) ಮೇಲಿನ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸೂಕ್ತವಾದ ಕ್ರಮವನ್ನು ಜರುಗಿಸುವಂತೆ ಸುಮಾರು 1000 ವೈದ್ಯರು, 90 ಸಾರ್ವಜನಿಕ ಆರೋಗ್ಯ ಇಲಾಖೆಗಳು, 1000 ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇ- ಸಿಗರೇಟುಗಳನ್ನು ನಿಷೇಧಿಸುವಂತೆ ಹೊರಡಿಸಿರುವ ಆದೇಶ ಇವುಗಳಿಂದಾಗುವ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಅತ್ಯಂತ ಸೂಕ್ತ ಕ್ರಮವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿರುವ ಇವರು, ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.
ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ಹೊರಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸ್ಟಿಸ್ಟಮ್ ಮಾರಾಟವಾಗದಂತೆ, ಉತ್ಪಾದನೆಗೊಳ್ಳದಂತೆ, ಆಮದುಗೊಳ್ಳದಂತೆ, ಜಾಹೀರಾತುಗೊಳ್ಳದಂತೆ ಕ್ರಮ ಜರುಗಿಸಬೇಕು ಎಂದಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್ ಅವರು ವಾಣಿಜ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದು, ಇ-ಸಿಗರೇಟು ಮುಂತಾದವುಗಳನ್ನು ಉತ್ಪಾದಿಸುವ ಅಮೆರಿಕಾ ಮೂಲದ ಜೆಯುಯುಎಲ್ ಕಂಪನಿಯನ್ನು ನಿರ್ಬಂಧಿಸಬೇಕು ಎಂದು ಕೋರಿದ್ದಾರೆ.
ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ (ENDS)ನಲ್ಲಿ ಬಳಸುವ ಉತ್ಪನ್ನಗಳು ವಿಷಕಾರಿ ಅಂಶದಿಂದ ಕೂಡಿದ್ದು, ಇದು ಕೂಡ ಮಾರಣಾಂತಿಕವಾಗಬಲ್ಲವು. ಇಂಥ ವಸ್ತುಗಳನ್ನು ಜಾಹೀರಾತು ಮಾಡುವಾಗ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶವನ್ನು ಮರೆಮಾಚಿ, ಚಿತ್ತಾಕರ್ಷಕ ಉತ್ಪನ್ನ ಎನ್ನುವಂತೆ ಬಿಂಬಿಸುವುದರಿಂದ ಯುವ ಸಮುದಾಯ ಇದರ ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವಾಲಯ ರಚನೆ ಮಾಡಿದ ಸಮಿತಿ ಎಚ್ಚರಿಕೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.