ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಈಗ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಮಾನ ಅತ್ಯಂತ ಹೃದಯವಿದ್ರಾವಕ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ರೈತ ರತನ್ ಚಂದ್ ಕಿಶನ್ ಸಿಂಗ್ ಪಾಗಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜೇವರ್ಗಿಯ ಇನ್ನೊಬ್ಬ ರೈತ ಮಹಿಳೆ ಸಾಲದ ಬವಣೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಗಾಣದಹೊಸೂರಿನ ಕಬ್ಬು ಬೆಳೆಗಾರ ನಿಂಗೇಗೌಡ ತನ್ನ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ, ಉರಿಯುವ ಬೆಂಕಿಯೊಳಗೆ ನೆಗೆದು ಬೂದಿಯಾಗಿದ್ದಾನೆ. ನಂಜನಗೂಡು ತಾಲ್ಲೂಕು ಸಿzಗೌಡನ ಹುಂಡಿಯ ಶಿವಲಿಂಗೇಗೌಡನ ಶವ ಆತನ ಚೆಂಡುಮಲ್ಲಿಗೆ ಬೆಳೆಯುತ್ತಿದ್ದ ಜಮೀನಿನಲ್ಲೇ ಪತ್ತೆಯಾಗಿದೆ. ಸಾಲಗಾರರ ಕಾಟ ತಾಳಲಾರದೆ ಶಿವಲಿಂಗೇಗೌಡ 2 ದಿನಗಳಿಂದ ಮನೆಗೇ ಬಂದಿರಲಿಲ್ಲವಂತೆ. ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಭೂಸನೂರಿನ ಸಕ್ಕರೆ ಕಾರ್ಖಾನೆಯ ಎದುರೇ ಇಬ್ಬರು ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆ ಪೈಕಿ ಮಲ್ಲಪ್ಪ ಮೈನಾಳೆ ಎಂಬ ರೈತ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಹೀಗೆ ರಾಜ್ಯದಲ್ಲಿ ಸಾಲುಸಾಲು ರೈತರ ಸಾವು. ಇವರೆಲ್ಲರ ಸಾವಿಗೆ ಸಾಲಬಾಧೆಯೇ ಕಾರಣ. ಮೃತಪಟ್ಟವರಲ್ಲಿ ಬಹುತೇಕರು ಕಬ್ಬುಬೆಳೆಗಾರರು. ಸಕ್ಕರೆ ಕಾರ್ಖಾನೆಗಳು ಈ ರೈತರಿಗೆ ಕಬ್ಬಿನ ಬಾಕಿ ಮೊತ್ತ ಸಕಾಲದಲ್ಲಿ ಪಾವತಿಸಲಿಲ್ಲ. ಸೂಕ್ತ ಬೆಲೆಯನ್ನೂ ನೀಡಲಿಲ್ಲ. ಒಬ್ಬೊಬ್ಬ ರೈತನಿಗೂ ಕೊಡಬೇಕಾದ ಲಕ್ಷ ಲಕ್ಷ ಹಣ ಬಾಕಿ ಉಳಿಸಿಕೊಂಡಾಗ ಕೈಸಾಲ, ಬ್ಯಾಂಕ್ ಸಾಲ, ಮತ್ತಿತರ ಸಾಲ ಮಾಡಿ ಹೈರಾಣಾದ ರೈತ ಅಸಹಾಯಕನಾಗಿ ಸಾವಿಗೆ ಶರಣಾಗದೆ ಇನ್ನೇನು ತಾನೆ ಮಾಡಿಯಾನು? ಆದರೆ ಸಾವು ರೈತರ ಸಮಸ್ಯೆಗೆ ಎಂದಿಗೂ ಪರಿಹಾರವಲ್ಲ. ಸಾಲಮಾಡಿ ತೀರಿಸಲಾಗದೆ ಸಾವಿಗೀಡಾದ ರೈತರ ಕುಟುಂಬಗಳು ಈಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಯಜಮಾನ ಮಾಡಿದ ಸಾಲವನ್ನು ಅವರಾದರೂ ತೀರಿಸುವುದು ಹೇಗೆ? ಸಾವಿಗೆ ಶರಣಾದ ಈ ರೈತರೆಲ್ಲಾ ತೀರಾ ಬಡವರ್ಗದವರು. ಬಡತನದ ಬವಣೆ ನೀಗಲು ವ್ಯವಸಾಯವನ್ನೇ ಅವಲಂಬಿಸಿದವರು. ತಮ್ಮ ಸೀಮಿತ ಜಮೀನಿನಲ್ಲಿ ಬೆಳೆ ತೆಗೆದು ಬದುಕಿನ ಬಂಡಿಯನ್ನೆಳೆಯುವ ಅನಿವಾರ್ಯತೆಗೆ ಸಿಲುಕಿದವರು. ಬೆಳೆದ ಫಸಲಿಗೆ ಸಕಾಲದಲ್ಲಿ ಹಣ ದೊರಕದಿದ್ದಾಗ, ಸಾಲಿಗರು ಕಿರುಕುಳ ನೀಡಿದಾಗ ಅನಕ್ಷರಸ್ಥ, ಅಮಾಯಕರಾದ ಈ ರೈತರಿಗೆ ಬೆಂಗಾವಲಾಗಿ ನಿಲ್ಲುವವರು ಯಾರೂ ಇಲ್ಲ. ಇಂತಹ ಹತಾಶ ಸ್ಥಿತಿಯಲ್ಲಿ ಅವರಿಗೆ ತೋಚುವ ದಾರಿ ಒಂದೇ – ಆತ್ಮಹತ್ಯೆ. ಅದು ಸಮಸ್ಯೆಗೆ ಪರಿಹಾರವಲ್ಲವೆಂದು ಯಾರೆಷ್ಟೇ ಹೇಳಿದರೂ ಹತಾಶ ರೈತರ ದುರ್ಬಲ ಮನಸ್ಸಿಗೆ ಪರ್ಯಾಯ ಮಾರ್ಗ ತೋಚದಿರುವುದು ಅಷ್ಟೇ ನಿಜ.
ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕೆಂದು ಸರ್ಕಾರವೇ ಕಬ್ಬಿನ ಬೆಲೆಯನ್ನು ನಿಗದಿಗೊಳಿಸಿದೆ. ಆದರೆ ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿದ ಬೆಲೆಯನ್ನು ರೈತರಿಗೆ ಕೊಡುತ್ತಿಲ್ಲ. ಅಷ್ಟೇ ಅಲ್ಲ, ರೈತರಿಗೆ ಕೊಡಬೇಕಾದ ಲಕ್ಷ ಲಕ್ಷ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ. ಸಕ್ಕರೆ ಮಾರುಕಟ್ಟೆ ಕುಸಿತವಾಗಿರುವುದರಿಂದ ನಾವೇನೂ ಮಾಡುವಂತಿಲ್ಲ ಎಂದು ಕೈಚೆಲ್ಲಿವೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿದರೆ ಅದಕ್ಕೆ ಕಬ್ಬು ಬೆಳೆದ ರೈತರು ಹೊಣೆಗಾರರಾಗುವುದಾದರೂ ಹೇಗೆ? ಅವರ ಪರಿಶ್ರಮಕ್ಕೆ ಸೇರಬೇಕಾದ ಪ್ರತಿಫಲವನ್ನು ನೀಡದೇ ಕಾರ್ಖಾನೆಗಳ ಮಾಲೀಕರು ವಂಚಿಸುವುದು ಎಷ್ಟು ಸಮಂಜಸ? ಸರ್ಕಾರ ಕೂಡ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತದ ಸಂದರ್ಭದಲ್ಲಿ ರೈತರಿಗೆ ಅನ್ಯಾಯವಾಗಬಾರದೆಂದು ಮುನ್ನೆಚ್ಚರಿಕೆ ವಹಿಸಬೇಕೇ ಹೊರತು ಕಾರ್ಖಾನೆಗಳಿಗೆ ಆಗುವ ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಲ್ಲ.
ಒಂದೇ ವಾರದಲ್ಲಿ ಇಷ್ಟೊಂದು ರೈತರ ಆತ್ಮಹತ್ಯೆ ಪ್ರಕರಣ ರಾಜಕೀಯ ಮುಖಂಡರನ್ನು ಬಡಿದೆಬ್ಬಿಸಿದೆ. ಈಗ ನಾ ಮುಂದು ತಾ ಮುಂದು ಎಂದು ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಸಾವೀಗೀಡಾದ ರೈತರ ಮನೆಗೆ ಧಾವಿಸಿ, ಒಂದಿಷ್ಟು ಪರಿಹಾರ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದು ಮಾತ್ರ ಅತ್ಯಂತ ಅಸಹ್ಯಕರ ವಿದ್ಯಮಾನ. ಸಾವಿನ ಮನೆಯಲ್ಲೂ ರಾಜಕಾರಣದ ಆವುಟ! ರೈತ ಸಾವಿಗೆ ಶರಣಾದ ಬಳಿಕ ಆತನ ಮನೆಗೆ ಧಾವಿಸಿ ಸಾಂತ್ವನ ಹೇಳುವ ಈ ಮುಖಂಡರು, ಬದುಕಿದ್ದಾಗ ಆತನ ಸಂಕಟ, ಕಷ್ಟ-ನಷ್ಟಗಳಿಗೊಂದು ತಾರ್ಕಿಕ ಪರಿಹಾರ ನೀಡಲು ಏಕೆ ಮುಂದಾಗಲಿಲ್ಲ? ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಬಾಕಿ ಮೊತ್ತ ಕೊಡದೆ ಸತಾಯಿಸುತ್ತಿವೆ ಎಂಬ ವಿಷಯ ಈ ರಾಜಕೀಯ ಮುಖಂಡರಿಗೆ ತಿಳಿಯದ ಸಂಗತಿಯೇನಲ್ಲ. ಹಾಗಿದ್ದರೂ ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ಬಾಕಿ ಮೊತ್ತ ತುರ್ತಾಗಿ ಪಾವತಿಸುವಂತೆ ಈ ಮುಖಂಡರು ಒಟ್ಟಿಗೆ ಸೇರಿ ಏಕೆ ಹೋರಾಟ ನಡೆಸಬಾರದಾಗಿತ್ತು?
ಬೆಂಕಿ ಬಿದ್ದಾಗ ಬಾವಿ ತೋಡುವ ಮನೋಭಾವದ ಸರ್ಕಾರ, ಈಗ ರೈತರ ಆತ್ಮಹತ್ಯೆ ಸರಣಿಯ ಕಾವು ಏರುತ್ತಿದ್ದಂತೆ ಸಕ್ಕರೆ ಕಾರ್ಖಾನೆ ಜಫ್ತಿಗೆ ಆದೇಶ ನೀಡಿದೆ. ಇತ್ತ ಕಾರ್ಖಾನೆಗಳಿಗೆ ಸಾಲ ನೀಡಿರುವ ಬ್ಯಾಂಕ್ಗಳು ಕೂಡ ಕಾರ್ಖಾನೆಯಲ್ಲಿರುವ ಸಕ್ಕರೆ ಜಫ್ತಿಗೆ ಮುಂದಾಗಿವೆ. ಸಕ್ಕರೆ ದಾಸ್ತಾನು ಜಫ್ತಿಗೆ ಹೀಗೆ ಸರ್ಕಾರ ಹಾಗೂ ಬ್ಯಾಂಕ್ಗಳ ನಡುವೆ ಈಗ ತೀವ್ರ ಪೈಪೋಟಿ! ಸರ್ಕಾರಕ್ಕಿಂತ ಮೊದಲೇ ಕಾರ್ಖಾನೆಗಳ ಗೋದಾಮುಗಳನ್ನು ವಶಪಡಿಸಿಕೊಳ್ಳಲು ಬ್ಯಾಂಕುಗಳು ದಾಪುಗಾಲಿಟ್ಟಿವೆ. ಸರ್ಕಾರ ಜಫ್ತಿ ಮಾಡಲು ಮುಂದಾಗಿರುವ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತರಲೂ ಬ್ಯಾಂಕುಗಳು ಮುಂದಾಗಿವೆ.
ಆದರೆ ಈ ಜಫ್ತಿ ಕಾರ್ಯಾಚರಣೆಯಿಂದ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಸಕ್ಕರೆ ಕಾರ್ಖಾನೆಗಳು ಬ್ಯಾಂಕುಗಳಿಗೆ ಪಾವತಿಸಬೇಕಾದ ಸಾಲದ ಮೊತ್ತ ಒಟ್ಟು 8ಸಾವಿರ ಕೋಟಿ ರೂ. ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ಬಾಕಿ ಹಣ 4 ಸಾವಿರ ಕೋಟಿ ರೂ. ಅಂದರೆ ಒಟ್ಟಾರೆ 12 ಸಾವಿರ ಕೋಟಿ ರೂ. ಸಾಲದ ಹೊರೆ ಕಾರ್ಖಾನೆಗಳ ಮೇಲಿದೆ. ಆದರೆ ಈ ಕಾರ್ಖಾನೆಗಳ ಗೋದಾಮುಗಳಲ್ಲಿರುವುದು ಕೇವಲ 6 ಸಾವಿರ ಕೋಟಿ ರೂ. ಮೌಲ್ಯದ ಸಕ್ಕರೆ ದಾಸ್ತಾನು ಮಾತ್ರ. ಈ 6 ಸಾವಿರ ಕೋಟಿಗಾಗಿ ನಡೆದಿರುವ ಬ್ಯಾಂಕ್ಗಳು ಹಾಗೂ ಸರ್ಕಾರದ ನಡುವಣ ಜಟಾಪಟಿಯ ಪರಿಣಾಮ ರೈತರ ಪಾಲಿಗೆ ಮಾತ್ರ ನಿರಾಶಾದಾಯಕ. ಅವರ ಸಮಸ್ಯೆಗೆ ಇದರಿಂದ ಸಿಗುವ ಪರಿಹಾರ ಶೂನ್ಯ.
ರಾಜ್ಯದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳ ಒಡೆತನ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಮುಖಂಡರದ್ದು. ಇದರಲ್ಲಿ ಆಡಳಿತ ಪಕ್ಷ ಕಾಂಗ್ರೆಸ್, ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ಗೆ ಸೇರಿದ ಮುಖಂಡರ ಕಾರ್ಖಾನೆಗಳೇ ಹೆಚ್ಚಾಗಿವೆ. ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಎಸ್.ಆರ್.ಪಾಟೀಲ್, ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಶಾಸಕರಾದ ಡಿ.ಬಿ. ಇನಾಮದಾರ್, ಸಿದ್ದು ನ್ಯಾಮಗೌಡ, ರಮೇಶ ಜಾರಕಿಹೊಳಿ, ಬಿಜೆಪಿಯ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಮುರುಗೇಶ ನಿರಾಣಿ (ಮಾಜಿ ಸಚಿವ), ಅಮಿತ್ ಕೋರೆ (ಸಂಸದ ಪ್ರಭಾಕರ ಕೋರೆ ಪುತ್ರ), ಲಕ್ಷ್ಮಣ ಸವದಿ, ಜೆಡಿಎಸ್ ಧುರೀಣ ಶ್ರೀಮಂತ ಗೌಡ ಪಾಟೀಲ್ ಮತ್ತಿತರರು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದು ಇವರೆಲ್ಲರೂ ರೈತರಿಗೆ ಬಾಕಿ ನೀಡದೇ ಸತಾಯಿಸುತ್ತಿದ್ದಾರೆ. ಹೀಗಿದ್ದರೂ ಇದೀಗ ಕಬ್ಬು ಬೆಳೆಗಾರರಿಗೆ ಸೂಕ್ತ ನ್ಯಾಯ ಒದಗಿಸಲು ಬೀದಿಗಿಳಿದು ಹೋರಾಟ ನಡೆಸುವುದಾಗಿ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಬೊಬ್ಬೆ ಹೊಡೆಯುತ್ತಿರುವುದು, ಅತ್ತ ಆಡಳಿತ ಪಕ್ಷದ ಮುಖಂಡರು ಕಬ್ಬು ಬೆಳೆಗಾರರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಎಂತಹ ಕ್ರೂರ ವ್ಯಂಗ್ಯ! ರೈತರ ಪ್ರತಿನಿಧಿ ಮತ್ತು ಕಾರ್ಖಾನೆಗಳ ಮಾಲಿಕರ ಪಾತ್ರಗಳೆರಡನ್ನೂ ಏಕಕಾಲಕ್ಕೆ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಇಂತಹ ಡಬಲ್ ಆಕ್ಟಿಂಗ್ ಆಸಾಮಿಗಳಿಂದಾಗಿಯೇ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಉಲ್ಬಣಿಸಿರುವುದು. ಈ ವ್ಯವಹಾರದಲ್ಲಿ ಮಾತ್ರ ಪಕ್ಷಭೇದವಿಲ್ಲ. ರೈತರಿಗೆ ಬಾಕಿ ಉಳಿಸಿಕೊಳ್ಳುವಲ್ಲಿ ವ್ಯತ್ಯಾಸವಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ರಾಜಕೀಯ ಕಾರಣಗಳಿಗಾಗಿ ಕಬ್ಬು ಬೆಳೆಗಾರನ ಪರ ಮೊಸಳೆ ಕಣ್ಣೀರು ಸುರಿಸುವ ಮೊದಲು ತಮ್ಮತಮ್ಮ ಪಕ್ಷಗಳ ಸದಸ್ಯರು ಮಾಲೀಕರಾಗಿರುವ ಕಾರ್ಖಾನೆಗಳಿಂದ ಬಾಕಿ ಹಣ ಪಾವತಿಸುವಂತೆ ಏಕೆ ಆಗ್ರಹಿಸಬಾರದು?
ಆದರೀಗ ಕೆಲವು ರಾಜಕೀಯ ಮುಖಂಡರು, ಕಾರ್ಖಾನೆಗೆ ತಾನು ಮಾಲೀಕನಲ್ಲ. ನಮ್ಮ ಕಾರ್ಖಾನೆಗೆ ರೈತರೇ ಮಾಲೀಕರು. ನಾನೂ ಕೂಡ ರೈತನಾಗಿದ್ದು, ಬೆಲೆ ಏರಿಳಿತ ನಮ್ಮ ಕೈಯಲ್ಲಿರುವುದಿಲ್ಲ… ಇತ್ಯಾದಿ ಸೋಗಲಾಡಿ ಮುಖವಾಡದ ಮಾತು ಆಡುತ್ತಿರುವುದು ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಯ ತಂತ್ರವಲ್ಲದೆ ಮತ್ತೇನು? ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರೇನೋ ‘ಸಕ್ಕರೆ ಕಾರ್ಖಾನೆ ಹೊಂದಿರುವ ನಮ್ಮ ಶಾಸಕರ ಮೇಲೆ ಒತ್ತಡ ತಂದಿದ್ದೇವೆ. ಆಡಳಿತಾರೂಢ ಪಕ್ಷ, ಪ್ರತಿಪಕ್ಷ ಎಂಬ ಮುಲಾಜು ನೋಡುವುದು ಬೇಡ. ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಿ’ ಎಂದಿದ್ದಾರೆ. ರೈತ ಸಂಘದ ಮುಖಂಡರಂತೂ ಕಬ್ಬು ಬೆಳೆಗಾರರ ಆತ್ಮಹತ್ಯೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಹೊಣೆ. ಹಾಗಾಗಿ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
‘ನೇಗಿಲು ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂಬ ಕವಿ ಕುವೆಂಪು ಅವರ ಹಾಡು ಈಗ ಬದಲಾಗಿರುವುದು ಕಾಲದ ವೈರುಧ್ಯ. ನೇಗಿಲು ಹಿಡಿದು ಹೊಲದಲ್ಲೇ ಬೆಂಕಿ ಹಚ್ಚಿಕೊಂಡು ಬೂದಿಯಾಗುವ ನೇಗಿಲ ಯೋಗಿಯ ದಾರುಣ ದೃಶ್ಯ ಈ ಕಾಲದ ವಿದ್ಯಮಾನ. ಮಣ್ಣಿನಿಂದ ಅನ್ನ ತೆಗೆಯುವ ಅನ್ನದಾತ ಈಗ ಮಣ್ಣುಪಾಲಾಗುತ್ತಿದ್ದಾನೆ. ದೇಶದ ಬೆನ್ನೆಲುಬಾಗಿರುವ ಇಂತಹ ಅನ್ನದಾತನಿಗೊಂದು ನೆಮ್ಮದಿಯ ಬದುಕು ಕರುಣಿಸಲು ಆಡಳಿತ ಸೂತ್ರ ಹಿಡಿದವರಿಗೆ ಸ್ವಾತಂತ್ರ್ಯ ಬಂದು 68 ವರ್ಷಗಳ ಬಳಿಕವೂ ಸಾಧ್ಯವಾಗಿಲ್ಲವೆಂದರೆ ಅನ್ನದಾತನಿಗೆ ಅದಕ್ಕಿಂತ ದೊಡ್ಡ ಅಪಮಾನ ಇನ್ನಾವುದು?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.