ಅನಿಶ್ಚಿತ ಮಳೆ ಎಷ್ಟೇ ಸವಾಲುಗಳನ್ನೊಡ್ಡಿದರೂ ಕಳೆದ ಒಂದು ದಶಕಗಳಿಂದ ಭಾರತದ ಕೃಷಿ ವಲಯವು ಆರ್ಥಿಕತೆಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. 10 ವರ್ಷಗಳಿಂದ ಮಹತ್ವದ ಪರಿವರ್ತನೆಯನ್ನು ಕಾಣುತ್ತಿರುವ ಕೃಷಿ, ಕೇವಲ ಆಹಾರ ಧಾನ್ಯ ಅಥವಾ ಒಂದು ವಲಯದ ಮೇಲೆ ಅವಲಂಬಿತವಾಗಿಲ್ಲ. ಬಹುಮುಖಿ ವಲಯವಾಗಿ ಇದು ರೂಪಾಂತರಗೊಂಡಿದ್ದು, ದೇಶದ ಶೇ.50ರಷ್ಟು ಜನಸಂಖ್ಯೆಗೆ ಈಗಲೂ ಉದ್ಯೋಗವನ್ನು ನೀಡುತ್ತಿದೆ. ಕಠಿಣ ಹವಮಾನದಲ್ಲೂ ಗ್ರಾಮೀಣ ಭಾಗದ ಆರ್ಥಿಕ ಬೆಳವಣಿಗೆಗೆ ಶ್ರಮಿಸುತ್ತಿದೆ.
2014-15 ಮತ್ತು 2015-16ರ ಸಾಲಿನಲ್ಲಿ, ನೈರುತ್ಯ ಮಾನ್ಸೂನ್ ಅವಧಿಯಲ್ಲಿನ ಮಳೆಯ ಕೊರತೆಯಿಂದಾಗಿ ಕೃಷಿ ಬೆಳವಣಿಗೆಗೆ ಅಡ್ಡಿಯಾಯಿತು. 2016-17ರ ಅವಧಿಯಲ್ಲಿ ಮಳೆ ಸಾಧಾರಣವಾಗಿದ್ದರಿಂದ ಕೃಷಿ ಬೆಳವಣಿಗೆ ಸಕಾರಾತ್ಮಕವಾಗಿ ಮಾರ್ಪಟ್ಟಿತು.
ಕೃಷಿಯು ಆರ್ಥಿಕತೆ 2011-12ರ ದರಗಳಲ್ಲಿ ಸೇರ್ಪಡೆಗೊಳಿಸಿದ ಒಟ್ಟು ಮೌಲ್ಯವು 2012-13ರ ಮತ್ತು 2018-19ರ ಹಣಕಾಸು ವರ್ಷದಲ್ಲಿ ಅನಿಯಮಿತಗೊಂಡಿತು. ಕೆಳಗೆ ನೀಡಲಾಗಿರುವ ಚಾರ್ಟ್ ಪರಿಶೀಲನಾ ಅವಧಿಯಲ್ಲಿ ಕೇವಲ ಹವಮಾನದ ಕಾರಣದಿಂದಾಗಿ ಬೆಳವಣಿಗೆಯ ಏರು ಮತ್ತು ತಗ್ಗುಗಳನ್ನು ತೋರಿಸುತ್ತದೆ.
ಇಂಡಿಯಾ ಬ್ರ್ಯಾಂಡ್ ಈಕ್ವಿಟಿ ಫೌಂಡೇಶನ್ ವರದಿಯ ಪ್ರಕಾರ, ಭಾರತೀಯ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳು 2011-12 ಮತ್ತು 2017-18ರ ಅವಧಿಯಲ್ಲಿ ಶೇ.2.75ರಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿವೆ. 2011-12ರಲ್ಲಿ ಇದ್ದ ಸಮಗ್ರ ಮೌಲ್ಯ ಸೇರ್ಪಡೆ ರೂ.18.76 ಲಕ್ಷ ಕೋಟಿಯು 2017-18ರ ವೇಳೆಗೆ ರೂ.19.32 ಲಕ್ಷ ಕೋಟಿಗೆ ತಲುಪಿದೆ. 2013-14 ಮತ್ತು 2014-15ರ ಅವಧಿಯಲ್ಲಿ ಸಮಗ್ರ ಮೌಲ್ಯ ಸೇರ್ಪಡೆಯು $249.68 ಬಿಲಿಯನ್ನಿಂದ $249.2 ಬಿಲಿಯನ್ಗೆ ಇಳಿಕೆಯಾಗಿತ್ತು.
ಕೃಷಿ ಸಚಿವಾಲಯದ ಪ್ರಕಾರ, 2007 ರಿಂದ 2017 ರ ವರೆಗೆ ಉತ್ಪಾದನೆ ಶೇ.18ರಷ್ಟು ಮತ್ತು ಇಳುವರಿ ಶೇ.16ರಷ್ಟು ಏರಿಕೆಯಾದರೂ ಭಾರತದ ಆಹಾರ ಧಾನ್ಯ ವಲಯವು ಸಾಗುವಳಿ ವಿಷಯದಲ್ಲಿ ಅತ್ಯಂತ ನಿರ್ಲಕ್ಷ್ಯದ ಬೆಳವಣಿಗೆಯನ್ನು ಕಂಡಿದೆ.
ಇದಕ್ಕೆ ತದ್ವಿರುದ್ದ ಎಂಬಂತೆ ಸಿರಿಧಾನ್ಯ ಮತ್ತು ಮೆಕ್ಕೆ ಜೋಳದಂತಹ ಒರಟು ಧಾನ್ಯ ಬೆಳೆಯುವ ಪ್ರದೇಶ ಶೇ.12ರಷ್ಟು ಕಡಿಮೆಯಾಯಿತು, ಆದರೆ ಉತ್ಪಾದನೆ ಮತ್ತು ಇಳುವರಿ ಕ್ರಮವಾಗಿ ಶೇ.20 ಮತ್ತು ಶೇ.40ರಷ್ಟು ಬೆಳವಣಿಗೆಯನ್ನು ಕಂಡಿತು. ಹೈಬ್ರಿಡ್ ತಳಿಗಳನ್ನು ಬೆಳೆಸಿದ ಹಿನ್ನಲೆಯಲ್ಲಿ ಇದು ಸಾಧ್ಯವಾಗಿದೆ.
ದ್ವಿದಳ ಧಾನ್ಯಗಳ ಬೆಳೆ ಕೂಡ ಮಹತ್ವದ ಪ್ರಗತಿಯನ್ನು ಕಂಡಿದೆ. ಇದು ಬೆಳೆಯುವ ಪ್ರದೇಶ ಶೇ.18ರಷ್ಟು ಹೆಚ್ಚಾಗಿದೆ ಮತ್ತು ಇಳುವರಿ ಶೇ.18ರಷ್ಟು ಹೆಚ್ಚಾಗಿದೆ. ಉತ್ಪಾದನೆಯೂ ಶೇ.60ರಷ್ಟು ಹೆಚ್ಚಳವನ್ನು ಕಂಡಿದೆ.
ಕಬ್ಬು ಮಾತ್ರ ಕಡಿಮೆ ಉತ್ಪಾದನೆಯನ್ನು ಕಂಡಿರುವ ಬೆಳೆ. ಹತ್ತಿ ಬೆಳೆಯುವ ಪ್ರದೇಶ ಮತ್ತು ಉತ್ಪಾದನೆಯೂ ಹೆಚ್ಚಳವಾಗಿದೆ. ಇಳುವರಿ ಕೂಡ ಶೇ.10ರಷ್ಟು ಹೆಚ್ಚಳವಾಗಿದೆ. ತೈಲಬೀಜ ಬೆಳೆಯುವ ರೈತರು ಹತ್ತಿ ಮತ್ತು ದ್ವಿದಳ ಧಾನ್ಯಗಳಿಗೆ ಶಿಫ್ಟ್ ಆಗುತ್ತಿರುವ ಹಿನ್ನಲೆಯಲ್ಲಿ ಅದರ ಪ್ರದೇಶ ಶೇ.2ರಷ್ಟು ತಗ್ಗಿದೆ. ಆದರೆ ಉತ್ಪಾದನೆ ಮತ್ತು ಇಳುವರಿ ಕ್ರಮವಾಗಿ ಶೇ.10ರಷ್ಟು ಮತ್ತು 15ರಷ್ಟು ಹೆಚ್ಚಳವಾಗಿದೆ.
ಆದರೆ ಈ ಕಾರಣಗಳಿಂದ ಮಾತ್ರ ಕೃಷಿ ಉಳಿದುಕೊಂಡಿಲ್ಲ. ಕೇಂದ್ರ ಸರ್ಕಾರ ಪ್ರತಿ ವರ್ಷ ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡುತ್ತಿದೆ. ಆದರೆ, ಜಾಗತಿಕವಾಗಿ ಆಹಾರ ಧಾನ್ಯಗಳ ಬೆಲೆ ಕಳೆದ ಎರಡು ವರ್ಷಗಳಿಂದ ಕುಗ್ಗುತ್ತಿದೆ.
ಹಾಗಾದರೆ ಭಾರತದ ಕೃಷಿ ಒಟ್ಟು ಮೌಲ್ಯ ಸೇರ್ಪಡೆ ಹೇಗೆ ಹೆಚ್ಚಳಗೊಂಡಿತು? ಅದು ಹೇಗೆ ಗ್ರಾಮೀಣ ಸಂಪತ್ತನ್ನು ವೃದ್ಧಿಸಿತು? ಉತ್ತರ ಸರಳ: ಭಾರತದ ಕೃಷಿಯ ಕಥೆ ಕೇವಲ ಆಹಾರ ಧಾನ್ಯಗಳನ್ನು ಮಾತ್ರ ಒಳಗೊಂಡಿಲ್ಲ, ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ.
ಭಾರತೀಯ ಕೃಷಿಯ ಯಶಸ್ಸಿನ ಕಥೆಗಳಲ್ಲಿ ಒಂದಾಗಿರುವುದು ತೋಟಗಾರಿಕೆಯ ಬೆಳವಣಿಗೆ. ಭಾರತೀಯ ತೋಟಗಾರಿಕೆ ಬೆಳೆಗಳು ಶೇ.5ರಷ್ಟು ಮೌಲ್ಯ ಸೇರ್ಪಡೆಗೊಳಿಸಿದೆ. ಆಹಾರಧಾನ್ಯಗಳು ಸೇರ್ಪಡೆಗೊಳಿಸಿರುವುದು ಕೇವಲ ಶೇ.3ರಷ್ಟು ಮಾತ್ರ.
ಎಕರೆ ಮತ್ತು ಉತ್ಪಾದಕತೆಯ ಬೆಳವಣಿಗೆಯು ತೋಟಗಾರಿಕೆಯಲ್ಲಿನ ಅಪೂರ್ವ ಬೆಳವಣಿಗೆಯ ಹಿಂದಿರುವ ಪ್ರಮುಖ ಕಾರಣಗಳು. 2004 ರಿಂದ ಉತ್ಪಾದಕತೆಯು ಕೇವಲ 13 ವರ್ಷಗಳಲ್ಲಿ ಶೇ. 35 ರಷ್ಟು ಹೆಚ್ಚಾಗಿದೆ. ಇದು ಚೀನಾ ನಂತರ ಭಾರತವು ಎರಡನೇ ಅತಿದೊಡ್ಡ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಉತ್ಪಾದಿಸುವ ರಾಷ್ಟ್ರವನ್ನಾಗಿಸಿದೆ.
2004-05ರ ಅವಧಿಯಲ್ಲಿ ತೋಟಗಾರಿಕೆ ಉತ್ಪಾದನೆಯು 167 ದಶಲಕ್ಷ ಟನ್ನುಗಳಷ್ಟು ಆಗಿತ್ತು ಮತ್ತು 2011-12ರಲ್ಲಿ 250 ದಶಲಕ್ಷ ಟನ್ ಗೆ ಏರಿತು. 2017-18ರ ಅವಧಿಯಲ್ಲಿ ಇದು 305 ದಶಲಕ್ಷ ಟನ್ಗೆ ಏರಿದೆ ಎಂದು ಅಂದಾಜಿಸಲಾಗಿದೆ – ಅದರಲ್ಲಿ ಮೂರನೇ ಒಂದು ಭಾಗ ಹಣ್ಣುಗಳು ಮತ್ತು ಉಳಿದ ತರಕಾರಿಗಳಾಗಿವೆ. 2004-05ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆ 198 ದಶಲಕ್ಷ ಟನ್. 2011-12ರಲ್ಲಿ ಇದು 245 ದಶಲಕ್ಷ ಟನ್ಗೆ ತಲುಪಿದೆ ಮತ್ತು 2017-18ರ ಅವಧಿಯಲ್ಲಿ 280 ದಶಲಕ್ಷ ಟನ್ ಆಗಿದೆ.
2014-15 ಮತ್ತು 2015-16ರಲ್ಲಿ, ಮಳೆ ಕೊರತೆಯು ಆಹಾರ ಧಾನ್ಯದ ಉತ್ಪಾದನೆಯ ಮೇಲೆ ಪ್ರಭಾವ ಬೀರಿದಾಗ, ತೋಟಗಾರಿಕೆ ಸಹಾಯ ಹಸ್ತವನ್ನು ನೀಡಿತು. ಮತ್ತೊಂದೆಡೆ, ಗ್ರಾಮೀಣ ಆರ್ಥಿಕತೆಗೆ ನೆರವಾಗಲು ಕೃಷಿಯ ಇತರ ವಲಯಗಳೂ ಸಾಕಷ್ಟು ಸಹಾಯವನ್ನು ಮಾಡಿವೆ.
ಪಶುಸಂಗೋಪನೆ ಮತ್ತು ಮೀನುಗಾರಿಕಾ ಕ್ಷೇತ್ರಗಳು ಸಹ ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಕೊಡುಗೆ ನೀಡಿವೆ. ಹಾಲು ಉತ್ಪಾದನೆಯಲ್ಲಿನ ಅಮೋಘ ಹೆಚ್ಚಳವು ಪಶುಸಂಗೋಪನೆ ಕ್ಷೇತ್ರದ ಪ್ರಮುಖ ಬೆಳವಣಿಗೆಗಳಲ್ಲಿ ಒಂದಾಗಿದೆ.
2006 ರಲ್ಲಿ 100 ದಶಲಕ್ಷ ಟನ್ಗಿಂತ ಕಡಿಮೆ ಇದ್ದ ಹಾಲು ಉತ್ಪಾದನೆ, 2016-17ರಲ್ಲಿ 163.7 ದಶಲಕ್ಷ ಟನ್ಗೆ ಏರಿಕೆಯಾಗಿದೆ. 299 ಗ್ರಾಂ ಇದ್ದ ದಿನದ ಹಾಲಿನ ಜಾಗತಿಕ ತಲಾ ಲಭ್ಯತೆಯು ಈಗ 355 ಗ್ರಾಂಗೆ ಏರಿಕೆಯಾಗಿದೆ.
ಮಾಂಸ ಉತ್ಪಾದನೆ – ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ – 2.3 ದಶಲಕ್ಷ ಟನ್ನಿಂದ 7.4 ದಶಲಕ್ಷ ಟನ್ಗೆ ಏರಿಕೆಯಾಗಿದೆ. ಅದೇ ಅವಧಿಯಲ್ಲಿ ಮೊಟ್ಟೆಯ ಉತ್ಪಾದನೆಯು 50.66 ಬಿಲಿಯನ್ನಿಂದ 88.13 ಶತಕೋಟಿಗೆ ಶೇ. 60 ಹೆಚ್ಚಾಗಿದೆ. ಮೀನು ಉತ್ಪಾದನೆಯು 6.87 ದಶಲಕ್ಷ ಟನ್ನಿಂದ 11.41 ದಶಲಕ್ಷ ಟನ್ಗೆ ಏರಿದೆ.
ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕಾ ವಲಯಗಳ ಕೊಡುಗೆಯು ಕೇವಲ ಉತ್ಪಾದನೆ ಹೆಚ್ಚಳಕ್ಕೆ ಅಥವಾ ದೇಶೀಯ ಬೇಡಿಕೆಯನ್ನು ಪೂರೈಸುವಿಕೆಗೆ ಮಾತ್ರ ಸೀಮಿತವಾಗಿಲ್ಲ. ಈ ಕ್ಷೇತ್ರಗಳು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕೃಷಿ ರಫ್ತು ಪ್ರಮಾಣವನ್ನು ಶೇಕಡಾ 0.95ರಷ್ಟರಿಂದ ಶೇ 2.1 ಕ್ಕೆ ಏರಿಸಲು ಸಹಾಯ ಮಾಡಿದೆ.
ಮೀನಿನ ರಫ್ತಿನ ಮೌಲ್ಯ, ವಿಶೇಷವಾಗಿ ಸಾಗರ ಉತ್ಪನ್ನಗಳ ಮೌಲ್ಯ 2013-14 ಮತ್ತು 2016-17ರ ನಡುವೆ 29% ರಷ್ಟು ಹೆಚ್ಚಾಗಿದ್ದು, ರೂ.397 ಕೋಟಿಗೆ ಏರಿಕೆಯಾಗಿದೆ. 2013-14 ಮತ್ತು 2016-17ರ ನಡುವೆ ಎಮ್ಮೆ ಮಾಂಸದ ರಫ್ತು 260 ಕೋಟಿ ರೂಪಾಯಿ ಕೊಡುಗೆ ನೀಡುತ್ತಿದೆ. ಮಸಾಲೆ ಪದಾರ್ಥಗಳು ಮತ್ತು ತರಕಾರಿಗಳು ಕೂಡ ಭಾರತದ ರಫ್ತಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ, 2013-14ರಲ್ಲಿ 690 ಕೋಟಿ ಇವುಗಳ ರಫ್ತು 2016-17ರ ಅವಧಿಯಲ್ಲಿ 750 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಹೀಗೆ, ಕಳೆದ 10-12 ವರ್ಷಗಳಿಂದ ಕೃಷಿ ಸಂಬಂಧಿತ ಇತರ ವಲಯಗಳು ಗ್ರಾಮೀಣ ಆರ್ಥಿಕತೆಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ. ನಗರ ಪ್ರದೇಶಗಳು ಹೋರಾಟ ನಡೆಸಬೇಕಾದ ಸನ್ನಿವೇಶದಲ್ಲೂ ಗ್ರಾಮೀಣ ಪ್ರದೇಶ ಭಾರತದ ಅಭಿವೃದ್ಧಿಗೆ ಯಾಕೆ ಹೆಚ್ಚಿನ ಕೊಡುಗೆಯನ್ನು ನೀಡಿತು ಎಂಬುದಕ್ಕೆ ಇದುವೇ ಕಾರಣ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಭಾರತದ ಕೃಷಿಯು ಕಳೆದ ಒಂದು ದಶಕಗಳಿಂದ ಮಹತ್ವದ ಪರಿವರ್ತನೆಯನ್ನು ಕಾಣುತ್ತಾ ಬರುತ್ತಿದೆ. ಅದು ಕೇವಲ ಆಹಾರ ಧಾನ್ಯ ಅಥವಾ ಒಂದು ವಲಯದ ಮೇಲೆ ಅವಲಂಬಿತವಾಗಿಲ್ಲ. ನಿಜವಾಗಿ ಹೇಳಬೇಕೆಂದರೆ, ಅದು ಬಹುಮುಖಿ ವಲಯವಾಗಿ ರೂಪಾಂತರಗೊಳ್ಳುತ್ತಿದೆ. ಹೀಗಾಗಿ ಇಂದಿಗೂ ದೇಶದ ಶೇ.50ರಷ್ಟು ಜನಸಂಖ್ಯೆಗೆ (2011ನೇ ಸೆನ್ಸಸ್ ಪ್ರಕಾರ) ಈಗಲೂ ಉದ್ಯೋಗವನ್ನು ನೀಡುತ್ತಿದೆ. ಕಠಿಣ ಹವಮಾನದಲ್ಲೂ ಗ್ರಾಮೀಣ ಭಾಗ ಆರ್ಥಿಕ ಬೆಳವಣಿಗೆಗೆ ಶ್ರಮಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.