ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಭಾನುವಾರ ಜರುಗಲಿದ್ದು, ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ಕೊನೆಯ ಪ್ರಯತ್ನವನ್ನು ನಡೆಸುತ್ತಿವೆ. ಕೊನೆಯ ಹಂತ ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎಸ್ಪಿ, ಟಿಎಂಸಿ ಪಕ್ಷಗಳಿಗೆ ಅತ್ಯಂತ ಪ್ರಮುಖವಾದುದ್ದಾಗಿದೆ. ಹೀಗಾಗಿ ಈ ಪಕ್ಷಗಳ ಹಿರಿಯ ನಾಯಕರು ತೀವ್ರಗತಿಯಲ್ಲಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ಬಲ್ಲಿಯ, ಬಿಹಾರದ ಬಕ್ಸರ್, ಸಸರಾಮ್ ಮತ್ತು ಛತ್ತೀಸ್ಗಢದಲ್ಲಿ ಸಮಾವೇಶಗಳನ್ನು ಆಯೋಜಿಸುತ್ತಿದ್ದಾರೆ. ಇತರ ಕಡೆಗಳಲ್ಲಿ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ, ಅಮಿತ್ ಶಾ ಅವರುಗಳು ಪ್ರಚಾರ ಸಮಾವೇಶವನ್ನು ನಡೆಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಹೋದರಿ ಪ್ರಿಯಾಂಕ ವಾದ್ರಾ ಕೂಡ ತಮ್ಮ ಪಕ್ಷದ ಪರವಾಗಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ.
ಸೋಮವಾರ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ‘ಪ್ರತಿಪಕ್ಷಗಳು ನನ್ನ ಇಮೇಜ್ ಅನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ, ಆದರೆ ನನ್ನ ಪ್ರಯತ್ನ ಜಾಗತಿಕ ವೇದಿಕೆಯಲ್ಲಿ ದೇಶದ ಇಮೇಜ್ ಅನ್ನು ಎತ್ತರಕ್ಕೆ ಕೊಂಡೊಯ್ಯುದಾಗಿದೆ’ ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷದವರು ನನ್ನನ್ನು ನೀಚ್ ಎನ್ನುತ್ತಿದ್ದಾರೆ. ಅವರು ಈ ರೀತಿ ಹೇಳುತ್ತಿರುವುದು ಮೊದಲನೇ ಸಲವೇನಲ್ಲ. ಹಿಂದೆಯೂ ಅವರು ಈ ರೀತಿಯ ಪದವನ್ನು ನನ್ನ ಮೇಲೆ ಪ್ರಯೋಗಿಸಿದ್ದಾರೆ. ನಾನು ಯಾಕೆ ನೀಚ? ಕೆಳ ಜಾತಿಯವನೆಂದೇ? ಬಡವನೆಂದೇ? ಗುಜರಾತಿಯವನೆಂದೇ?, ಈ ಕಾರಣಕ್ಕಾಗಿ ಅವರು ನನ್ನನ್ನು ದ್ವೇಷ ಮಾಡುತ್ತಿದ್ದಾರಾ?” ಎಂದು ಮೋದಿ ಪ್ರಶ್ನಿಸಿದ್ದಾರೆ.
“ನಮ್ಮ ಸರ್ಕಾರವನ್ನು ರಾಕ್ಷಸ ಸರ್ಕಾರ, ನನ್ನನ್ನು ರಾವಣ ಎಂದು ದಿಗ್ವಿಜಯ್ ಸಿಂಗ್ ಹೇಳಿದರು, ಪ್ರಮೋದ್ ತಿವಾರಿ ನನ್ನನ್ನು ಹಿಟ್ಲರ್, ಗಡಾಫಿಗೆ ಹೋಲಿಸಿದರು. ರಾತ್ರಿ, ಹಗಲು ನನ್ನನ್ನು ಅವರು ನಿಂದಿಸಿದರು, ಆದರೆ ನಾನು ಮೌನವಾಗಿಯೇ ಇದ್ದೇನೆ, ಯಾಕೆಂದರೆ ನನ್ನ ಆದ್ಯತೆ ಕೆಲಸ, ಜಗತ್ತಿನ ಮುಂದೆ ಭಾರತದ ಇಮೇಜ್ ವೃದ್ಧಿಸುವುದು ನನ್ನ ಆದ್ಯತೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.