ಬೆಳ್ತಂಗಡಿ: ಮಗ ಶಾಸಕನಾದರೂ ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ 74 ವರ್ಷದ ಮುತ್ತಣ್ಣ ಪೂಂಜಾ ಅವರ ಫೋಟೋವೊಂದು ಈಗ ಭಾರೀ ವೈರಲ್ ಆಗಿದೆ. ಸೈಕಲಿಗೆ ಹಾಲಿನ ಕ್ಯಾನ್ ಅನ್ನು ಹಾಕಿಕೊಂಡು ಅವರು ನಡೆದುಕೊಂಡು ಬರುತ್ತಿರುವ ಫೋಟೋ ಇದಾಗಿದೆ. ಮುತ್ತಣ್ಣ ಅವರು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರ ತಂದೆಯಾಗಿದ್ದಾರೆ.
ಈ ಪೋಟೋ ಹಿಂದೆ ತೆಗೆದದ್ದಾಗಿದೆ. ಆದರೆ ಮುತ್ತಣ್ಣ ಅವರು ಈಗಲೂ ಕೃಷಿ, ಹೈನುಗಾರಿಕೆಯನ್ನು ಅವಲಂಬಿಸಿಯೇ ಜೀವನ ಸಾಗಿಸುತ್ತಿದ್ದಾರೆ. ‘ಹಿಂದೆ ನಾನು ಸೈಕಲಿನಲ್ಲಿ ಹಾಲು ಹಾಕುತ್ತಿದೆ, ಆದರೆ ಈಗ ನೆರೆಮನೆಯ ವ್ಯಕ್ತಿಯೊಬ್ಬರು ಅವರ ಸ್ಕೂಟರ್ ಮೂಲಕ ನನ್ನನ್ನು ಹಾಲಿನ ಡೈರಿಯವರೆಗೆ ಬಿಟ್ಟು ಬರುತ್ತಾರೆ’ ಎಂದು ಮುತ್ತಣ್ಣ ಹೇಳುತ್ತಾರೆ.
ಮಗ ಶಾಸಕನಾದ ಬಳಿಕವೂ ಇವರ ಕುಟುಂಬದ ದಿನಚರಿ ಕಿಂಚಿತ್ತೂ ಬದಲಾಗಿಲ್ಲ. ನಿತ್ಯ ಅಡಿಕೆ ತೋಟಕ್ಕೆ ಹೋಗಿ ಬಿದ್ದ ಅಡಿಕೆಗಳನ್ನು ಇವರು ಹೆಕ್ಕಿಕೊಂಡು ಬರುತ್ತಾರೆ. ದನಗಳನ್ನು ಸಾಕುತ್ತಾರೆ, ಹಾಲು ಕರೆಯುತ್ತಾರೆ.
“30 ವರ್ಷಗಳ ಕಾಲ ನಮಗೆ ಬೀಡಿ ವ್ಯಾಪಾರ ಇತ್ತು. ಆಮೇಲೆ ಅದನ್ನು ಬಿಟ್ಟೆವು, ಇತ್ತೀಚಿನವರೆಗೆ ಸೈಕಲ್ ಮೂಲಕ ತೆರಳಿ ಡೈರಿಗೆ ಹಾಲು ಹಾಕಿ ಬರುತ್ತಿದ್ದೆ. ಆದರೀಗ ನೆರೆಮನೆಯವರು ಸ್ಕೂಟರ್ ಮೂಲಕ ನನ್ನನ್ನು ಡೈರಿವರೆಗೆ ಬಿಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನನ್ನ ಫೋಟೋಗಳನ್ನು ನಾನು ಇದುವರೆಗೆ ನೋಡಿಲ್ಲ” ಎಂದು ಮುತ್ತಣ್ಣ ಪೂಂಜಾ ಹೇಳಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿ, “ನಮ್ಮದು ಬಡ ಕುಟುಂಬ, ಕೃಷಿಯನ್ನು ಆಧರಿಸಿ ಬದುಕಿದವರು. ನಮಗೆ ಉತ್ತಮ ಜೀವನ ಕಲ್ಪಿಸಲು ಅವರು ತುಂಬಾ ಕಷ್ಟಪಟ್ಟಿದ್ದಾರೆ. ನಾನು ಶಾಸಕ ಆದ ಬಳಿಕವೂ ಅವರ ದಿನಚರಿ ಬದಲಾಗಿಲ್ಲ. ಅವರ ಬದುಕು ಕೃಷಿ, ಹೈನುಗಾರಿಕೆಯತ್ತಲೇ ತಿರುಗುತ್ತಿರುತ್ತದೆ, ಇದರಿಂದಾಗಿ ಅವರು ಫಿಟ್ ಆಗಿಯೂ ಇದ್ದಾರೆ. ಬೆಳಗ್ಗೆ 6 ಗಂಟೆಗೆ ಏಳುತ್ತಾರೆ, ಬಳಿಕ ಡೈರಿಗೆ ಹಾಲು ಹಾಕುತ್ತಾರೆ. ಮಧ್ಯಾಹ್ನದವರೆಗೂ ದುಡಿಯುತ್ತಾರೆ. ಬಳಿಕ ಸ್ವಲ್ಪ ಹೊತ್ತು ಮಲಗುತ್ತಾರೆ. ಸಂಜೆ ಪಟ್ಟಣಕ್ಕೆ ತೆರಳುತ್ತಾರೆ. ರಾತ್ರಿ 8.30ಕ್ಕೆ ಮಲಗುತ್ತಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.