ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಸುವುದು ಮತ್ತು ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಎರಡು ಮಸೂದೆಗಳನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು(ಕರ್ನಾಟಕ ತಿದ್ದುಪಡಿ) ಮಸೂದೆ 2015 ಮತ್ತು ಕನ್ನಡ ಭಾಷಾ ಕಲಿಕೆ ಮಸೂದೆ-2015ನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಮಂಡಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಒಪ್ಪಿಗೆ ಸೂಚಿಸಿದರು.
ಮೊದಲ ಮಸೂದೆ ಮೂಲಕ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಕಾಯ್ದೆ-2009’ರಲ್ಲಿ 29ನೇ ನಿಯಮದ ‘ಎಫ್’ ಉಪನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.
ರಾಜ್ಯದಲ್ಲಿನ ಎಲ್ಲಾ ಶಾಲೆಗಳಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ (ಸಿಬಿಎಸ್ಸಿ ಹಾಗೂ ಐಸಿಎಸ್ಸಿ ಶಾಲೆಗಳನ್ನು ಹೊರತುಪಡಿಸಿ) ಎಲ್ಲಾ ವಿದ್ಯಾರ್ಥಿಗಳಿಗೆ 2015-16ನೇ ಶೈಕ್ಷಣಿಕ ವರ್ಷದಿಂದ ಹಂತಹಂತವಾಗಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸಲು ಎರಡನೇ ಮಸೂದೆ ಅವಕಾಶ ಕಲ್ಪಿಸುತ್ತದೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯುವೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.