ಪಶ್ಚಿಮ ಬಂಗಾಳ ಸರ್ಕಾರದ ಸಹಾಯದಿಂದ ಸತ್ಯಜಿತ್ ರೇ ರವರು 1955 ರಲ್ಲಿ ಬಿಭೂತಿಭೂಷಣ್ ಬಂಡೋಪದ್ಯಾಯ ರವರ ಕಥೆಯನ್ನು ಆಯ್ದು, ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆ ಹೊತ್ತುತ್ತಾರೆ. ಸುಬ್ರತ ಮಿತ್ರ ರವರ ಛಾಯಾಗ್ರಹಣ, ಪಂಡಿತ್ ರವಿಶಂಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಕಾನು ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಸುಬೀರ್ ಬ್ಯಾನರ್ಜಿ, ಉಮಾದಾಸ್ ಗುಪ್ತ, ರುಂಕಿ ಬ್ಯಾನರ್ಜಿ ಹಾಗೂ ಚುನಿಬಲ ದೇವಿ (ವೃದ್ದೆಯ ಪಾತ್ರದಲ್ಲಿ) ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ವ್ಯಾಟಿಕನ್ ಪ್ರಶಸ್ತಿ, ರೋಮ್, ಗೋಲ್ಡನ್ ಕಾರ್ಬಾವ್, ಮನಿಲಾ, ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ವಿಮರ್ಶಕರ ಪ್ರಶಸ್ತಿ – ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ಪ್ರಶಸ್ತಿಗಳು ಈ ಚಿತ್ರಕ್ಕೆ ಗೌರವ ತಂದಿದೆ. ಅಷ್ಟೇ ಅಲ್ಲದೇ, ಬಿ.ಬಿ.ಸಿ. ಯವರು ಬಿಡುಗಡೆ ಮಾಡಿದ ವಿಶ್ಚದ ಶ್ರೇಷ್ಠ 100 ಚಿತ್ರಗಳಲ್ಲಿ ಭಾರತದ ಏಕೈಕ ಚಿತ್ರವೇ “ಪಥೇರ್ ಪಾಂಚಾಲಿ”. ೧೯೫೫ರ ಅಮೆರಿಕಾದ ನ್ಯೂಯಾರ್ಕ್ನ ‘ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್’ನಲ್ಲಿ ನಡೆದ ಪ್ರೀಮಿಯರ್ ನ ನಂತರ,ಅದೇ ವರ್ಷ ಕಲ್ಕತ್ತಾದಲ್ಲಿ ಬಿಡಿಗಡೆ ಮಾಡಲಾಯಿತು. ಚಿತ್ರಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರದ ಸಹಜತೆ, ಮನಕಲಕುವ ನಿರೂಪಣೆ, ಮಾನವೀಯತೆ ಮುಂತಾದ ಅಂಶಗಳ ಕುರಿತು ವಿಮರ್ಶಕರು ಮೆಚ್ಚಿನ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ನಿಧಾನಗತಿಯ ನಿರೂಪಣೆಯನ್ನು ಹಿನ್ನಡೆ ಎಂದು ಭಾವಿಸಿದ್ದಾರೆ.
ಚಿತ್ರದ ಕಥೆಯು ಮುಂದಿನ ಎರಡು ಭಾಗಗಳಾದ ಅಪರಿಜಿತೊ(ಅಜೇಯ) ಹಾಗೂ ಅಪುರ್ ಸಂಸಾರ್(ಅಪೂವಿನ ಜಗತ್ತು)ನೊಂದಿಗೆ ಮುಂದುವರೆಯುತ್ತದೆ. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಆರಂಭವಾದ ಪರ್ಯಾಯ ಸಿನಿಮಾ ಅಥವಾ ಕಲಾತ್ಮಕ ಚಿತ್ರಗಳಿಗೊಂದು ಮಹತ್ವದ ಅಡಿಪಾಯವನ್ನು ಈ ಚಿತ್ರವು ಹಾಕಿಕೊಟ್ಟಿತು. ೧೯೫೫ರ ಅತ್ಯತ್ತಮ ಭಾರತೀಯ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರವು, ಕ್ಯಾನೆ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ’ ಪಡೆಯಿತಲ್ಲದೇ, ರೇರವರನ್ನು ಜಗದ್ವಿಖ್ಯಾತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿತು.
ಪಥೇರ್ ಪಾಂಚಾಲಿ ಅಪ್ಪು ಟ್ರಿಲಾಜಿ ಸರಣಿಯ ಮೊದಲ ಚಿತ್ರ. ಬಂಗಾಲೀ ಬ್ರಾಹ್ಮಣ ಕುಟುಂಬವೊಂದರ ಕಥಾಧಾರಿತ ಚಿತ್ರ ಇದು. ಈ ಚಿತ್ರದ ತಂದೆಯ ಪಾತ್ರಕ್ಕೆ ಸಾಹಿತ್ಯದ ಗೀಳು. ಹೆಸರು ಗಳಿಸುವ ಆಸೆಯಲ್ಲಿ ಮನೆಯನ್ನೇ ಮರೆತವನಾತ. ಕಡುಬಡತನದಲ್ಲಿ ಸಂಸಾರ ನೌಕೆಯನ್ನು ಸಾಗಿಸಲು ಹರಸಾಹಸ ಪಡುವವಳು ತಾಯಿ ಸರ್ಬಜಯಾ. ವೃದ್ಧಾಪ್ಯದಲ್ಲೂ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಕುಟುಂಬದ ಎಲ್ಲಾ ವಿಚಾರಗಳಲ್ಲಿ ಮೂಗು ತುರಿಸಿ ಆಗಾಗ್ಗೆ ಸೊಸೆಯ ಕೋಪಕ್ಕೆ ತುತ್ತಾಗುವ ಅಜ್ಜಿ ಇಂದಿರ್. ಪ್ರಪಂಚದ ಗೊಡವೆ ಇಲ್ಲದೇ ಪ್ರತಿನಿತ್ಯವೂ ಬಾಲ್ಯದ ಸವಿಯನ್ನುಣ್ಣುವ ಮಗಳು ದುರ್ಗಾ…ಹೀಗೆ ಪಥೇರ್ ಪಾಂಚಾಲಿಯ ಕಥೆ ಸಾಗುತ್ತಿರುತ್ತದೆ. ಇದು ಅಪೂ ಹಾಗೂ ದುರ್ಗಾರ ಬಾಲ್ಯದ ದಿನಗಳು ಮತ್ತು ಸ್ವಾತಂತ್ರ್ಯ ಪೂರ್ವದ ಹಳ್ಳಿಯ ಕಷ್ಟದ ದಿನಗಳ ಕುರಿತು ಬೆಳಕುಚೆಲ್ಲುತ್ತದೆ.
ಕಥೆ:
ಒಂದು ಬೆಂಗಾಲಿ ಬ್ರಾಹ್ಮಣ ಕುಟುಂಬದ ಸುತ್ತ ಹೆಣೆದ ಕತೆ ಇದು. ಹರಿಹರ ಒಬ್ಬ ಅರ್ಚಕ, ಪ್ರವೃತ್ತಿಯಲ್ಲಿ ಕವಿ. ಕುಸಿತದ ಅಂಚಿನಲ್ಲಿದ್ದ ಮನೆಯಲ್ಲಿ ಅವನೊಂದಿಗೆ ಸಂಸಾರದಲ್ಲಿದ್ದವರು ಅವನ ಹೆಂಡತಿ ಸರ್ಬೋಜಯ, ಮಗಳು ದುರ್ಗ ಮತ್ತು ಅವನ ಸಂಬಂಧಿ ಹಣ್ಣು ಹಣ್ಣು ಮುದುಕಿ ಇಂದಿರ. ಊರಿಗೆ ಬಂದ ಬರಗಾಲ ಮತ್ತು ಕಿತ್ತು ತಿನ್ನುವ ಬಡತನ ಹರಿಹರನನ್ನು ಕೆಲಸಕ್ಕಾಗಿ ಊರೂರು ಸುತ್ತುವಂತೆ ಮಾಡುತ್ತದೆ. ಈ ನಡುವೆ ಮಗ ಅಪು ಜನಿಸುತ್ತಾನೆ. ದಿನದಿನಕ್ಕೂ ಕ್ಷೀಣವಾಗುತ್ತಿರುವ ಆಹಾರ ಸಂಗ್ರಹ, ಬೆಳೆಯುತ್ತಿರುವ ಮಕ್ಕಳು, ಹಣ್ಣು ಮುದುಕಿ ಇಂದಿರಳೊಂದಿಗೆ ಆಗಾಗ ಮುಖಾಮುಖಿ, ಆಸೆಯ ಅಮಲಿನಲ್ಲಿ ಮಗಳು ಆಗಾಗ ನೆರೆಹೊರೆಯ ನಡುವೆ ನಡೆಸುವ ಸಣ್ಣಪುಟ್ಟ ಕಳ್ಳತನಗಳು, ಕೆಲಸದ ನಿಮಿತ್ತ ದೂರ ಹೋದ ಗಂಡ ಇವುಗಳೆಲ್ಲಾ ಸರ್ಬೋಜಯಳನ್ನು ಕಾಡುವ ಸಮಸ್ಯೆಗಳು.
ಇಡೀ ಚಿತ್ರದ ಅತಿ ಆಸಕ್ತಿದಾಯಕ ಭಾಗವೆಂದರೆ ದುರ್ಗ ಮತ್ತು ಅಪು ಬೆಳೆಯುವ ಬಗೆ. ತಮ್ಮ ಓರಗೆಯವರಿಗೆ ಲಭ್ಯವಾದ ಹಾಗು ಬಡತನದಿಂದಾಗಿ ವಂಚಿತರಾದ, ಮಿಠಾಯಿ ಕೊಂಡುಕೊಳ್ಳುವಂತಹ ಸಣ್ಣ ಪುಟ್ಟ ಘಟನೆಗಳು ಕೂಡ ಗಾಢ ಅಂಕಿತವನ್ನೂರುವಂತಾಗುತ್ತವೆ. ಮುದುಕಿ ಒಂದು ರೀತಿಯಲ್ಲಿ ಮಕ್ಕಳನ್ನು ಹಾಗೂ ತಾಯಿಯನ್ನು ಕೊಂಡಿಹಾಕುವವಳಾಗುತ್ತಾಳೆ. ಅದರಲ್ಲೂ ದುರ್ಗಳ ಮೇಲೆ ಇಂದಿರಾಗೆ ವಿಶೇಷ ಪ್ರೀತಿ. ಇಂದಿರಳೊಂದಿಗೆ ಘರ್ಷಣೆಯಲ್ಲಿಯೇ ಸರ್ಬೋಜಯ ದೂರ ಸರಿದಿದ್ದ ಗಂಡನಿಂದ ನಿರ್ಮಿತವಾದ ಏಕಾಂಗಿತನವನ್ನು ಕಳೆದುಕೊಳ್ಳುತ್ತಿರುತ್ತಾಳೆ. ಇಂದಿರಳ ಸಾವು ಈ ಸಂಸಾರದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ. ಇಂದಿರಳೊಂದಿಗೆ ದುರ್ಗಳ ಎಳೆತನವೂ ಹೋಗಿ ದುರ್ಗಳು ಗಂಭೀರ ವ್ಯಕ್ತಿತ್ವದೊಂದಿಗೆ ನಿಲ್ಲುತ್ತಾಳೆ. ದುರ್ಗ ಮತ್ತು ಅಪುವಿನ ನಡುವಿನ ಬಂಧ ಮಾತ್ರ ಅನೇಕ ಅಪೂರ್ವ ಕ್ಷಣಗಳನ್ನು ನೋಡುಗನಿಗೆ ನೀಡುತ್ತವೆ. ಈ ನಡುವೆ ಋತುವು ಕಳೆದು ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಯಲ್ಲಿ ನೆನೆಯುವುದು ಅಪು ಮತ್ತು ದುರ್ಗಳಿಗೆ ಯಾವ ಕಿಮ್ಮತ್ತೂ ಬಯಸದೆ ಬಂದ ಸುಖ. ಇದು ದುರ್ಗಳ ಆರೋಗ್ಯವನ್ನು ಹಾಳುಗೆಡಹುತ್ತದೆ. ಖಾಯಿಲೆ ಮಲಗಿದ ದುರ್ಗಳನ್ನು ಉಳಿಸಿಕೊಳ್ಳಲು ಸರ್ಬೋಜಯ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾಳೆ. ಶಿಥಿಲಗೊಂಡ ಮನೆ ಮತ್ತು ಕ್ರೌರ್ಯಕ್ಕೆ ತಿರುಗಿದ ಪ್ರಕೃತಿ ದುರ್ಗಳನ್ನು ಆ ಸಂಸಾರದಿಂದ ಕಸಿದುಕೊಳ್ಳುತ್ತವೆ. ದುರ್ಗಳ ಸಾವು ಅಪುವಿನ ಮೇಲೆ ಗಾಢ ಪ್ರಭಾವವನ್ನು ಬೀರುತ್ತದೆ. ಅಪು ಈಗ ಮೊದಲಿನ ಸಣ್ಣ ಹುಡುಗನಲ್ಲ, ಪಾಠ ಕಲಿತವನು! ಒಂಟಿಯಾಗಿ ಬರಿಗೈನಲ್ಲಿ ಹೊರ ಹೊರಟವನು ವಾಪಸ್ಸು ಬಂದು ಕೊಡೆ ಹಿಡಿದು ಹೊರಡುತ್ತಾನೆ! ಸಿನೆಮಾದ ಅಂತ್ಯದಲ್ಲಿ ಹರಿಹರ ಮನೆಗೆ ಹಿಂತಿರುಗುತ್ತಾನೆ. ದುರ್ಗಳ ಸಾವಿನ ಸುದ್ದಿ ಅವನಿಗೂ ಆಘಾತವಾಗುತ್ತದೆ. ಬದುಕಲಸಾಧ್ಯವಾದ ಆ ಮನೆಯನ್ನು, ಹಳ್ಳಿಯನ್ನು ತ್ಯಜಿಸಿ ತನ್ನ ಸಂಸಾರವನ್ನು ವಾರಣಾಸಿಗೆ ಕೊಂಡೊಯ್ಯುತ್ತಾನೆ. ಪ್ರಯಾಣದುದ್ದಕ್ಕೂ ಇಡೀ ಸಂಸಾರಕ್ಕೆ ದುರ್ಗಳ ನೆನಪು ಕಾಡುತ್ತದೆ. ಇದಿಷ್ಟು ಕತೆ.
ಸಿನೆಮಾದ ಗತಿ ಬಹಳ ನಿಧಾನ. ಅದರಲ್ಲೂ ಜೆಟ್ವೇಗದಲ್ಲಿ ಚಲಿಸುವ ಹಾಲಿವುಡ್ನ ‘ಆ್ಯಕ್ಷನ್’ ಸಿನೆಮಾಗಳಿಗೆ ಹೋಲಿಸಿದರೆ ಇದರದ್ದು ಆಮೆಗತಿ. ಆದರೆ ಈ ನಿಧಾನ ಗತಿಯಿಂದಾಗಿಯೇ ರೇ ಈ ಸಿನೆಮಾವನ್ನು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಿದೆ. ಪ್ರತಿಯಾಂದು ದೃಶ್ಯಾವಳಿಯೂ ಎಷ್ಟರಮಟ್ಟಿಗೆ ಸ್ವಾಭಾವಿಕವಾಗಿ ಮೂಡಿದೆ ಎಂದರೆ ಎಲ್ಲಿಯೂ ಕೃತಕ ಭಾವನೆಗಳ ಸುಳಿವಿಲ್ಲ. ಪಾತ್ರಪಾತ್ರಗಳ ನಡುವಿನ ಅನುಬಂಧ ನಿಜ ಜೀವನಕ್ಕೆ ಸೇರಿದ್ದು. ನಟರೋ, ಬೇರ್ಪಡಿಸಲಾಗದಷ್ಟು ಪಾತ್ರಗಳಿಗೆ ಹೊಂದಿಕೊಂಡಿದ್ದಾರೆ. ಎಲ್ಲದಕ್ಕಿಂತಾ ಅದ್ಭುತವೆಂದರೆ ಎಂಭತ್ತು ದಾಟಿದ್ದ ಚಿನಿಬಾಲ ದೇವಿಯಿಂದ ಇಂದಿರಳ ಪಾತ್ರ ಮಾಡಿಸಿದ್ದು.
ಸಿನಿಮಾದ ಪಾತ್ರಗಳು ಮಾತಿನಲ್ಲಾಗಲೀ ಅಥವಾ ವರ್ತನೆಯಲ್ಲಾಗಲೀ ಸಹಜತೆಯ ಚೌಕಟ್ಟನ್ನು ಮೀರುವುದಿಲ್ಲ. ರೇ ಇದರ ಬಗ್ಗೆ ಎಷ್ಟು ಎಚ್ಚರ ವಹಿಸುತ್ತಿದ್ದರೆಂದರೆ ಈ ಕಾರಣಕ್ಕಾಗಿಯೇ ಅವರು ಬಹುಪಾಲು ಚಿತ್ರಗಳನ್ನು ಬೆಂಗಾಲಿಯಲ್ಲಿ ಮಾತ್ರ ಮಾಡಬೇಕಾಯಿತು. ಬೆಂಗಾಲಿ ಸಂಸ್ಕೃತಿ ಅವರು ಕಂಡ ಮತ್ತು ಅನುಭವಿಸಿದ ಸಮಾಜದ ಸಂಸ್ಕೃತಿ. ಬೆಂಗಾಲದ ಕುಟುಂಬದ ಮೇಲೆ ಚಿತ್ರ ತೆಗೆದರೆ ಅವರು ಮಾತನಾಡುವ ಭಾಷೆಯೂ ಬೆಂಗಾಲಿಯೇ ಆಗಿರಬೇಕು. ‘ ಶತರಂಜ್ ಕೆ ಖಿಲಾಡಿ’ ಸೇರಿದಂತೆ ಒಂದೆರಡು ಚಿತ್ರಗಳನ್ನು ರೇ ಹಿಂದಿಯಲ್ಲೂ ತೆಗೆದರು. ಆದರೆ ಬೆಂಗಾಲಿಯ ಹೊರತಾಗಿ ಬೇರೆ ಭಾಷೆಯಲ್ಲಿ ಚಿತ್ರ ನಿರ್ಮಿಸುವುದು ಅವರಿಗೆ ಸ್ವಲ್ಪವೂ ಸರಿ ಬರಲಿಲ್ಲ. ಎಲ್ಲದಕ್ಕಿಂತಾ ಹೆಚ್ಚಾಗಿ ಕಲೆಯನ್ನು ಗುರುತಿಸುವಲ್ಲಿ ಬೆಂಗಾಲಿ ಬಾಬುಗಳು ಭಾರತದಲ್ಲೇ ಅಗ್ರಗಣ್ಯರು. ಪಥೇರ್ ಪಾಂಚಾಲಿ ಬಿಡುಗಡೆಯಾದಾಗ ಚಿತ್ರಮಂದಿರದಲ್ಲಿ ಟಿಕೇಟಿಗಾಗಿ ಅನೇಕ ದಿನಗಳ ಕಾಲ ನೂಕು ನುಗ್ಗಲು ಇತ್ತಂತೆ ! ಒಂದು ಕಲಾತ್ಮಕ ಚಿತ್ರಕ್ಕೆ ಬೇರೆಲ್ಲಿ ಈ ರೀತಿಯ ಸ್ಪಂದನೆಯನ್ನು ನಿರೀಕ್ಷಿಸಲು ಸಾಧ್ಯ? ಬೆಂಗಾಲಿ ಭಾಷೆ ತಿಳಿಯದ ನನ್ನಂತವನು ಕೂಡ ಪಥೇರ್ ಪಾಂಚಾಲಿಯನ್ನು ಆನಂದಿಸಲು ಸಾಧ್ಯವಾಯಿತು. ನಟನಟಿಯರು ತಮ್ಮ ಸಂಭಾಷಣೆಯಲ್ಲಿ ಕೃತಕತೆಯನ್ನು ಕಡೆಯುವುದಿಲ್ಲ. ಮಾತುಗಳಲ್ಲಿ ಆ ಮಾತನ್ನು ಅರ್ಥ ಮಾಡಿಕೊಂಡ ಭಾವನೆಗಳು ಮತ್ತು ಸಾರ್ಥಕತೆಗಳಿರುತ್ತವೆ. ಇದು ಸಹಜ ನಟನೆಯಲ್ಲಿ ಅತಿ ಮುಖ್ಯ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಬಡತನ, ಕಷ್ಟಗಳ ಸಮಯದಲ್ಲಿ ಇರಬೇಕಾದ ಮಾನಸಿಕ ಸ್ಥೈರ್ಯದ ಕುರಿತು ತಿಳಿಯಲು.
2. ಹಸಿವು, ನೋವು, ನಲಿವು, ಬದುಕು, ಆಪ್ಯಾಯಮಾನ, ಆತ್ಮೀಯತೆ, ಇವುಗಳ ಕುರಿತು ತಿಳಿಯಲು.
3. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
✍ ರಾಘವೇಂದ್ರ ಪದ್ಮಶಾಲಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.