ರಾಷ್ಟ್ರದ ಒಳಿತಿಗಾಗಿ ಅಹರ್ನಿಶಿ ಹೋರಾಡಿದ ಧೀರ, ಧೀಮಂತ ಸಾಹಸಿ. ಭಾರತದ ಐಕ್ಯತೆಗಾಗಿ ಶ್ರಮಿಸಿ ಪ್ರಾಣತೆತ್ತ ಹುತಾತ್ಮರಲ್ಲಿ ಒಬ್ಬರು ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ.
ಶ್ಯಾಮ್ ಪ್ರಸಾದ್ ಮುಖರ್ಜಿ ಕಲ್ಕತ್ತೆಯ ಸುಪ್ರಸಿದ್ಧ ಸಂಪ್ರದಾಯಸ್ತ ಕುಟುಂಬಕ್ಕೆ ಸೇರಿದವರು. ತಂದೆ ಅಶುತೋಷ್ ಮುಖರ್ಜಿ. ತಂದೆಯವರು ಶಿಕ್ಷಣ ಕ್ಷೇತ್ರದಲ್ಲಿ ಅಸಾಮಾನ್ಯ ಹೆಸರು ಪಡೆದ ಮೇಧಾವಿ. ತಾಯಿ ಯೋಗಮಾಯಾ ದೇವಿ. ಪತಿಪರಾಯಣೆ ಮತ್ತು ಸಂಪ್ರದಾಯಸ್ತ ಹಿಂದು ಮಹಿಳೆ. ಜುಲೈ 6, 1901 ರಂದು ಶ್ಯಾಮ್ ಪ್ರಸಾದ್ ಮುಖರ್ಜಿ ಜನನ. ಅನುವಂಶೀಯವಾದ ಅನೇಕ ಅಮೂಲ್ಯವಾದ ಗುಣಗಳನ್ನು ತಂದೆಯಿಂದ ಪಡೆದಿದ್ದರು. ಬಾಲ್ಯವು ಉತ್ತರ ಕಲ್ಕತ್ತಾದ ಭವಾನಿಪುರದಲ್ಲಿ ಕಳೆಯಿತು. 1917 ರಲ್ಲಿ ಮೆಟ್ರಿಕ್ ಮುಗಿಸಿದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಒಬ್ಬ ಬಡ ಹುಡುಗನಿಗೆ ಪರೀಕ್ಷೆಗೆ ಹಣ ಕಟ್ಟಲಾರದ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರನ್ನು ಒಪ್ಪಿಸಿ ಮಾಫಿ ಮಾಡಿಸಿ ತಮ್ಮ ಹೃದಯವಂತಿಕೆಯನ್ನು ಮೆರೆದಿದ್ದರು.
1921 ರಲ್ಲಿ ಬಿ.ಎ ಪದವಿ. 1923 ರಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಎಂ.ಎ ಪದವಿ ನಂತರ ಬಿ.ಎಲ್ ಪದವಿ ಪಡೆದು ವಕೀಲ ವೃತ್ತಿಯನ್ನು ಆರಂಭಿಸಿದರು.
ಶ್ರೇಷ್ಠ ತಂದೆಯ ಶ್ರೇಷ್ಠ ಮಗ
1926 ರಲ್ಲಿ ಇಂಗ್ಲೆಂಡಿನಲ್ಲಿ ಲಿಂಕನ್ಸ್ ಇನ್ ವಿದ್ಯಾಲಯದಲ್ಲಿ ವಕಾಲತ್ ಪರೀಕ್ಷೆ ಉತ್ತೀರ್ಣ ಹೊಂದಿದರು. ವಿಶ್ವವಿದ್ಯಾಲಯದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದುದನ್ನು ಕಂಡ ಜನ ಶ್ರೇಷ್ಠ ತಂದೆಯ ಶ್ರೇಷ್ಠ ಮಗ ಎನ್ನುತ್ತಿದ್ದರು. 1922 ರಲ್ಲಿ ಸುಧಾ ದೇವಿಯೊಂದಿಗೆ ವಿವಾಹ. 2 ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ತಂದೆ. ದುರದೃಷ್ಟವಶಾತ್ 1933 ರಲ್ಲಿ ಪತ್ನಿ ಕಾಲವಾದರು. ಬದುಕಿನ ಉಳಿದ ಕಾಲವನ್ನು ವಿಧುರರಾಗಿಯೇ ಕಳೆದರು. 24 ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ. 33 ವರ್ಷಕ್ಕೆ ಉಪಕುಲಪತಿ. ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿತು. ಶಿಕ್ಷಕರ ಶಿಕ್ಷಣ, ಸೈನಿಕ ಶಿಕ್ಷಣ, ಮಹಿಳಾ ಶಿಕ್ಷಣ ಲೋಕ ಸೇವಾ ಪರೀಕ್ಷೆಗೆ ವಿಶೇಷ ಬೋಧನೆ, ಮೆಟ್ರಿಕ್ನಲ್ಲಿ ವಿಜ್ಞಾನ ಅಳವಡಿಕೆ, ಬಂಗಾಳಿ ಮಾಧ್ಯಮದಲ್ಲಿ ಕಾಲೇಜು ಶಿಕ್ಷಣ, ವಂಗ ಭಾಷೆಯ ಶಬ್ದಕೋಶ ರಚನೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಶ್ಯಾಮ ಪ್ರಸಾದ ಮುಖರ್ಜಿಯವರಿಂದ ಪ್ರಾರಂಭವಾಯಿತು.
ಪಾಂಡಿಚೆರಿ ಅರವಿಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. 1938 ರಲ್ಲಿ ಕಲ್ಕತ್ತ ಡಿಲಿಟ್ ಪದವಿ ನೀಡಿ ಗೌರವಿಸಿತು. ಬನಾರಸ್ ಯುನಿವರ್ಸಿಟಿ ಆನನರೀ ಎಲ್ ಎಲ್ ಡಿ ಪದವಿ ನೀಡಿತು. 1943 ರಲ್ಲಿ ಬಂಗಾಳದ ರಾಯಲ್ ಏಷ್ಯಾಟಿಕ್ ಸೊಸೈಟಿ ಅಧ್ಯಕ್ಷರಾಗಿ ಚುನಾಯಿತರಾದ ಪ್ರಥಮ ಭಾರತೀಯ.
ಹಿಂದೂ ಮಹಾಸಭೆ
ಅಹಿಂಸಾವಾದಿ ಗಾಂಧೀಜಿಯವರು ಮುಸ್ಲಿಮರ ವಿಶ್ವಾಸಗಳಿಸಲು ಹಿಂದುಗಳು ತೊಂದರೆಗಳನ್ನು ಸಹಿಸಿ ಸಹಜೀವನ ನಡೆಸಲು ಆದೇಶಿದರು. ಶ್ಯಾಮ ಪ್ರಸಾದರಿಗೆ ಇದನ್ನು ಸಹಿಸಲು ಅತೀವ ದುಃಖವಾಯಿತು. ಎಲ್ಲ ಮತೀಯರಿಗೆ ಸಮಾನ ಸ್ಥಾನ ಮಾನ ನೀಡಬೇಕೆಂಬುದು ಶ್ಯಾಮಪ್ರಸಾದ್ ಮುಖರ್ಜಿಯವರ ಅಭಿಲಾಷೆ. ಹಿಂದೂಗಳ ಗತಿಯ ಬಗ್ಗೆ ಚಿಂತಿಸಿದರು. ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಪಕ್ಷಗಳೆರಡನ್ನೂ ಕಟುವಾಗಿ ವಿರೋಧಿಸಿದರು. ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು.
ಜನಸೇವೆಯೇ ಜನಾರ್ಧನ ಸೇವೆ
ಶ್ಯಾಮ ಪ್ರಸಾದ ಮುಖರ್ಜಿಯವರು ಆರ್ಥಿಕಮಂತ್ರಿಯಾಗಿದ್ದಾಗ ಮಿಡ್ನಾಪರ ಜಿಲ್ಲೆ ಭಯಂಕರ ಸುನಾಮಿಗೆ ತುತ್ತಾಯಿತು. ಆಸ್ತಿಪಾಸ್ತಿ ಸಾವು ನೋವು ಉಂಟಾಯಿತು. ಸ್ವಾತಂತ್ರ ಸಂಗ್ರಾಮದಲ್ಲಿ ಸೆಣಸಿದ ವೀರರ ಜಿಲ್ಲೆ ಮಿಡ್ನಾಪುರ. ಇಂಗ್ಲೀಷ್ ಸರಕಾರವು ಈ ಜಿಲ್ಲೆಯ ಜನರನ್ನು ಹಸಿವಿನಿಂದ ಕೊಲ್ಲಿಸುವ ತೀರ್ಮಾನ ತೆಗೆದು ಕೊಂಡಿತ್ತು. ಶ್ಯಾಮ್ ಪ್ರಸಾದ್ರವರು ಮಂತ್ರಿ ಸ್ಥಾನಕ್ಕೆ ರಾಜೀ ನಾಮೆ ಸಲ್ಲಿಸಿ ಖುದ್ದಾಗಿ ಮನೆ ಮನೆಗೆ ತೆರಳಿ ಜನರಲ್ಲಿ ಧೈರ್ಯ ತುಂಬಿದರು. ಸರ್ಕಾರದ ವಿರೋಧವಿದ್ದಾಗ್ಯೂ ಜನ ಸೇವೆಯೇ ಜನಾರ್ಧನ ಸೇವೆಯೆಂದು ಭಾವಿಸಿ ಕಾರ್ಯ ಪ್ರವೃತ್ತರಾದರು.
ಬಂಗಾಳದ ಕ್ಷಾಮದಲ್ಲಿಯೂ ಬೇರೆ ಬೇರೆ ಸಂಘ ಸಂಸ್ಥೆಗಳ ಸಹಾಯದಿಂದ ದುಃಖಿ ಜನರ ಕಷ್ಟಗಳನ್ನು ಪರಿಹರಿಸಿದರು.
ಡಾಕಾದಲ್ಲಿ ನಡೆದ ಹಿಂದೂ ಮುಸಲ್ಮಾನರ ಘರ್ಷಣೆ ನಡೆದಾಗ ಅಲ್ಲಿ ತೆರಳಿ ನವಾಬನ ಭೇಟಿಯಾಗಿ ನೆಮ್ಮದಿಯ ವಾತಾವರಣ ತಂದು ಕೊಟ್ಟರು.
ಹಿಂದೂಗಳ ರಕ್ಷಕ
ಮುಸ್ಲಿಂ ಲೀಗ್ ಮುಖಂಡ ಮಹಮದಾಲಿ ಜಿನ್ಹಾ ಹಿಂದೂ ವಿರೋಧಿ ಪ್ರಚಾರ ಮಾಡಿದಾಗ ಹಾಗೂ ರಾವಲ್ಪಿಂಡ್ನ ಹಳ್ಳಿಗಳು ಅಗ್ನಿಗಾಹುತಿಯಾದಾಗ ರಕ್ಷಣಾ ಕಾರ್ಯದ ಮುಂಚೂಣಿಯನ್ನು ಶ್ಯಾಮ್ ಪ್ರಸಾದ್ರವರೇ ವಹಿಸಿದ್ದರು. ನವಸಾಲಿಯಲ್ಲಿ ಹಿಂದುಗಳ ಮೇಲೆ ಅತ್ಯಾಚಾರವಾದಾಗ ಪ್ರಾಣದ ಹಂಗು ತೊರೆದು ಹಿಂದೂಗಳನ್ನು ರಕ್ಷಿಸಿದರು.
ಭಾರತ ಮತ್ತು ಪಾಕಿಸ್ಥಾನಗಳ ನಡುವೆ ಪಾಸ್ ಪೋರ್ಟ್ ಖಾಯಿದೆ ಬಂದಾಗ ಪೂರ್ವ ಬಂಗಾಳದ ಹಿಂದುಗಳು ಹೆದರಿದರು. ಭಾರತದ ಕಡೆ ದಾವಿಸಿ ಬರುತ್ತಿದ್ದಾಗ ಪಾಕಿಸ್ತಾನಿಯವರಿಂದ ಹಿಂದುಗಳು ತುಂಬ ತೊಂದರೆಗೆ ಒಳಗಾದರು. ಅನೇಕರು ಮಾರ್ಗ ಮಧ್ಯೆ ಹುತಾತ್ಮರಾದರು. ಇದನ್ನು ಪ್ರತಿಭಟಿಸಲು ಶ್ರೀಮತಿ ಸುಚೇತಾ ಕೃಪಲಾನಿಯವರ ಅಧ್ಯಕ್ಷತೆಯಲ್ಲಿ ಸಂಯುಕ್ತ ಸಮಿತಿ ರಚಿಸಿ ಪಾಸ್ಪೋರ್ಟ್ ಒಪ್ಪಂದ ರದ್ದು ಪಡಿಸಿದರು.
ದೇಶ ವಿಭಜನೆಯ ವಿರೋಧಿಸಿದವರಲ್ಲಿ ಇವರು ಮುಖ್ಯಸ್ಥರು. ಇಂಗ್ಲೀಷ್ ಮುಖಂಡರು ರಾಷ್ಟ್ರದ ಮುಖಂಡರುಗಳೊಂದಿಗೆ ಚರ್ಚಿಸಿ ಬಂಗಾಳ, ಪಂಜಾಬ್, ಅಸ್ಸಾಂಗಳ ಅರ್ಧ ಭಾಗಗಳನ್ನು ಉಳಿಸಿಕೊಂಡರು.
ಸುಧಾರಣೆಗಳ ಪ್ರವರ್ತಕ
ಸ್ವಾತಂತ್ರ ಬಂದ ಪ್ರಥಮ ದಿವಸ ಕೈಗಾರಿಕಾ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ವಿಮಾನ ಕಾರ್ಖಾನೆ, ವಿಶಾಖ ಪಟ್ಟಣದ ಹಡಗು ನಿರ್ಮಾಣ, ಸಿಂದ್ರಿ ರಾಸಾಯನಿಕ ಗೊಬ್ಬರ, ಚಿತ್ತರಂಜನ್ ರೈಲ್ವೆ ಮೊದಲಾದುವುಗಳು ಅವರ ಕಾರ್ಯದಕ್ಷತೆಗೆ ಜೀವಂತ ಸಾಕ್ಷಿ. ಮೂರನೇ ದರ್ಜೆ ರೈಲು ಡಬ್ಬಿಗಳ ಸುಧಾರಣೆಗೆ ಇವರೇ ಕಾರಣಕರ್ತರು. ಪೂರ್ವ ಬಂಗಾಳದಲ್ಲಿ ಹಿಂದುಗಳಿಗೆ ರಕ್ಷಣೆ ಸಿಗದಿದ್ದಾಗ ಪಾಕಿಸ್ಥಾನ ಸರ್ಕಾರಕ್ಕೆ ಎಚ್ಚರಿಸಲು ಮಂತ್ರಿ ಮಂಡಲದ ಸಭೆಯಲ್ಲಿ ತಿಳಿಸಿದರು. ದೆಹಲಿ ಇದಕ್ಕೆ ಸಮ್ಮತಿಸದಿದ್ದಾಗ 1951 ರಲ್ಲಿ ತಮ್ಮ ಮಂತ್ರಿ ಪದವಿ ತ್ಯಜಿಸಿ ಹಿಂದೂ ಸೋದರ ಸೇವೆಯಲ್ಲಿ ತೊಡಗಿದರು. ಮಂತ್ರಿ ಪದವಿಯಿಂದ ಮುಕ್ತರಾಗಿ ಸರಕಾರದ ದುರ್ನೀತಿಯ ವಿರುದ್ಧ ಪ್ರಚಾರ ಪ್ರಾರಂಭಿಸಿದರು. ಇದರ ಪ್ರಯತ್ನವೇ 1951 ಏಪ್ರಿಲ್ 28 ರಂದು ಜನ ಸಂಘದ ಉದಯ. ಪ್ರಥಮ ಚುನಾವಣೆಯಲ್ಲಿ ದಕ್ಷಿಣ ಕಲ್ಕತ್ತ ಕ್ಷೇತ್ರದಿಂದ ಸ್ಪರ್ಧಿಸಿದರು. ಮುಸ್ಲಿಂ ಸಂಖ್ಯೆ ಜಾಸ್ತಿ ಇದ್ದರೂ ಕೂಡ ಚುನಾವಣೆಯಲ್ಲಿ ಜಯಭೇರಿ ಹೊಡೆ ದರು. ಪಾರ್ಲಿಮೆಂಟಿನಲ್ಲಿಯೂ ನಿರ್ಭಯವಾಗಿ ವಾದಿಸುತ್ತಿದ್ದರು. ಇವರಿಗೆ ಭಾರತದ ಕೇಸರಿ ಎಂಬ ಬಿರುದು ಬಂದಿತ್ತು.
ಬೌದ್ಧ ಧರ್ಮದ ಒಲವು
ಶ್ಯಾಮ್ ಪ್ರಸಾದರು ಬೌದ್ಧ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಅದರಿಂದಾಗಿ ಬೌದ್ಧ ಧರ್ಮೀಯರ ಆಡಳಿತವಿರುವ ಬರ್ಮಾ ದೇಶಕ್ಕೆ ತೆರಳಿ ಭಾರತ ಮತ್ತು ಬರ್ಮಾದ ನಡುವೆ ಬಾಂಧವ್ಯ ಏರ್ಪಡಿಸಲು ಸಾಧ್ಯವಾಯಿತು.
ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ಭಾರತದ ಅಂಗವಾಗಬೇಕೆಂದು ಅಲ್ಲಿನ ಜನತೆ ಇಚ್ಛಿಸುತ್ತಿದ್ದರು. ಆದರೆ ಈ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪದೆ ಕರ್ತವ್ಯಲೋಪ ಮಾಡುತ್ತಿತ್ತು. ದೇಶದಲ್ಲೆಲ್ಲಾ ಹರತಾಳ, ಖಂಡನಾ ಸಭೆ ನಡೆದವು. ಜಮ್ಮುವಿನ ಅನೇಕರು ಹುತಾತ್ಮರಾದರು. ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಇನ್ನಿತರರು ಮಾರ್ಚ್ 6 ರಂದು ಮೆರವಣಿಗೆ ನಡೆಸಿದರು. 1800 ಪ್ರಜ್ಞಾವಂತರನ್ನು ಸೇರಿಸಿ ಸತ್ಯಾಗ್ರಹ ನಡೆಸಿ ಜೈಲು ಸೇರಿದರು. ಜನತೆಯ ಕರೆಗೆ ಓಗೊಡದಿದ್ದಾಗ ತಾವೇ ಸ್ವಯಂ ರಾವಿ ನದಿ ಮೂಲಕ ಜಮ್ಮು ಕಡೆ ಪಯಣಿಸಿದರು. ಮಾರ್ಗ ಮಧ್ಯದಲ್ಲಿ ಪೋಲೀಸರಿಂದ ಬಂದಿತರಾಗಿ ಶ್ರೀನಗರ ಜೈಲಿಗೆ ಸೇರಿದರು. ಹೆಚ್ಚಿನ ಆಯಾಸದಿಂದಾಗಿ ಜೈಲಿನಲ್ಲಿ ಮುಖರ್ಜಿಯವರ ಆರೋಗ್ಯ ಕೆಟ್ಟು ಪಚನ ಶಕ್ತಿ ಕೆಡಲಾರಂಭಿಸಿತು. ಅನಾರೋಗ್ಯದಿಂದ 1953 ಜೂನ್ 23 ರಂದು ನಿಧನರಾದರು.
ಇಂತಹ ಕರ್ಮವೀರ, ಮೇಧಾವಿ, ಸಾಹಸಿ, ಹಿಂದೂ ಸಂಸ್ಕೃತಿಯ ರಕ್ಷಕ, ಪಾರ್ಲಿಮೆಂಟಿಗೆ ಸಿಂಹ ಅಸ್ತಂಗತರಾದರು. ಆ ವೀರ ಕೇಸರಿಯ ಗರ್ಜನೆ ಇಂದೂ ಪಾರ್ಲಿಮೆಂಟ್ ಸಂಸತ್ ಭವನದಲ್ಲಿ ರಿಂಗಿಣಿಸುತ್ತದೆ. ಶ್ಯಾಮ ಪ್ರಸಾದರು ಶಕ್ತಿಯುತವಾದ ವಿರೋಧ ಪಕ್ಷವನ್ನು ಕಟ್ಟಿ ತಮ್ಮ ನ್ಯಾಯನಿಷ್ಠೆ ನಿರ್ಭಯತೆಯಿಂದ ಎಲ್ಲರಿಗೂ ಸ್ಫೂರ್ತಿದಾಯಕರಾಗಿ ಅಜರಾಮರರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.