ಆರೆಸ್ಸೆಸ್ ಮತ್ತು ರಾಜಕೀಯದ ಬಗ್ಗೆ ಡಾ. ಮನಮೋಹನ್ ವೈದ್ಯ ಬರೆಯುತ್ತಾರೆ…..
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದ ಸಮಯದಿಂದಲೂ ತಾನು ಇಡೀ ಸಮಾಜದ ಸಂಘಟನೆಯೆಂದೇ ತಿಳಿದುಕೊಂಡು ಬಂದಿದೆ. ಸ್ವಾತಂತ್ರ್ಯದ ನಂತರವೂ ಸಂಘದ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಹಾಗಾಗಿ ಸ್ವಾತಂತ್ರ್ಯದ ನಂತರ 1949ರಲ್ಲಿ ಸಂಘದ ಸಂವಿಧಾನ ರಚನೆಯಾದಾಗ ‘ಸಂಘದ ಸ್ವಯಂಸೇವಕನು ರಾಜಕೀಯದಲ್ಲಿ ಸಕ್ರಿಯನಾಗಬಯಸಿದರೆ ಆತ ಯಾವುದೇ ಪಕ್ಷಕ್ಕೆ ಸೇರಬಹುದು’ ಎಂದು ಸ್ಪಷ್ಟವಾಗಿಯೇ ಹೇಳಲಾಗಿದೆ. ಈ ಸಂವಿಧಾನ ಭಾರತೀಯ ಜನಸಂಘದ ಆರಂಭಕ್ಕೂ ಮೊದಲೇ ರಚನೆಯಾದದ್ದು. ಜನಸಂಘದ ಸ್ಥಾಪನೆಯ ನಂತರ ಅನೇಕ ಸ್ವಯಂಸೇವಕರು ಹಾಗೂ ಪ್ರಚಾರಕರು ಅದಕ್ಕಾಗಿ ಕೆಲಸ ಮಾಡುತ್ತಿದ್ದ ಹೊರತಾಗಿಯೂ ಈ ನಿಲುವಿನಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಇರುವುದು ಸ್ವಾಭಾವಿಕ. ಸಂಘವು ಇಡೀ ಸಮಾಜದ ಸಂಘಟನೆಯಾದ ಕಾರಣದಿಂದಾಗಿ ಸ್ವಾಭಾವಿಕವಾಗಿ ಸಮಾಜದ ಯಾವ ಕ್ಷೇತ್ರವೂ ಸಂಘದ ಸ್ಪರ್ಶಕ್ಕೊಳಪಡದೇ ಇರುವುದಿಲ್ಲ. ಸಂಘದ ಸ್ವಯಂಸೇವಕರು ರಾಜಕೀಯವೂ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಪಾಲ್ಗೊಳ್ಳುವರು. ಹಾಗಾಗಿ ಕೆಲವು ಸ್ವಯಂಸೇವಕರು ರಾಜಕೀಯವಾಗಿ ಸಕ್ರಿಯರಾಗಿದ್ದಾರೆಂಬ ಮಾತ್ರಕ್ಕೆ ಸಂಘ ರಾಜಕೀಯ ಮಾಡುತ್ತದೆ ಎನ್ನುವುದು, ಸಂಘವನ್ನು ರಾಜಕೀಯ ಪಕ್ಷ ಎನ್ನುವದು ಎನ್ನುವುದು ಸರಿಯಲ್ಲ. ರಾಜಕೀಯ ಪಕ್ಷವೊಂದು ಸಮಾಜದ ಒಂದು ಭಾಗವನ್ನಷ್ಟೇ ಪ್ರತಿನಿಧಿಸುತ್ತದೆ. ಅದಲ್ಲದೇ, ಸಮಾಜಕ್ಕೆ ಬೇರೆ ಮುಖಗಳೂ ಇರುತ್ತವೆ. ಆದರೆ ಸಂಘವು ಸಂಪೂರ್ಣ ಸಮಾಜದ ಸಂಘಟನೆ ಎನ್ನುವಾಗ ಈ ‘ಸಂಪೂರ್ಣ’ವು ಯಾವುದೋ ಒಂದು ‘ಭಾಗ’ದ ಭಾಗವಾಗಲು ಹೇಗೆ ಸಾಧ್ಯ?
1925ರಲ್ಲಿ ಸಂಘ ಸ್ಥಾಪನೆಯಾದ ತರುವಾಯ 1930ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳವಳಿಯ ಕರೆಗೆ ಓಗೊಟ್ಟು ಸಂಘದ ಸಂಸ್ಥಾಪಕರಾದ ಡಾ. ಹೆಡಗೇವಾರರೂ ಸೇರಿದಂತೆ ಹಲವಾರು ಸ್ವಯಂಸೇವಕರು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಈ ಮುನ್ನ ಡಾ. ಹೆಡಗೇವಾರರು ಸಂಘದ ಸರಸಂಘಸಂಚಾಲಕತ್ವವನ್ನು ಡಾ. ಪರಾಂಪಜೆಯವರಿಗೆ ವಹಿಸುವ ಮೂಲಕ ತಾನು ವೈಯಕ್ತಿಕ ನೆಲೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದೇನೆಂಬ ಸ್ಪಷ್ಟ ಸಂದೇಶ ನೀಡಿದರು. ಇದಕ್ಕಾಗಿ ವರ್ಷಗಳ ಕಾಲ ಅವರು ಕಾರಾಗೃಹವಾಸವನ್ನೂ ಅನುಭವಿಸಿದರು.
ಸ್ವಾತಂತ್ರ್ಯದ ನಂತರ ಸರ್ದಾರ್ ಪಟೇಲರು ಸಂಘವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸುವಂತೆ ಕೇಳಿದ್ದರು. ಆದರೆ ಶ್ರೀ ಗುರೂಜಿಯವರು ಸಂಘವು ಇಡೀ ಸಮಾಜದ ಸಂಘಟನೆಯಾಗಬಯಸುತ್ತದೆಯೇ ಹೊರತು ರಾಜಕೀಯ ಪಕ್ಷವೊಂದಕ್ಕೆ ಸೀಮಿತವಾಗುವುದಿಲ್ಲವೆಂದು ಹೇಳಿ ಈ ಪ್ರಸ್ತಾವವನ್ನು ನಿರಾಕರಿಸಿದ್ದರು. ಕೆಲವು ವರ್ಷಗಳ ನಂತರ ಡಾ. ಶ್ಯಾಮಾಪ್ರಸಾದ ಮುಖರ್ಜಿಯವರು ಗುರೂಜಿಯವರನ್ನು ಭೇಟಿ ಮಾಡಿ, ಸೂಕ್ತವಾದ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿರುವ ರಾಜಕೀಯ ಪಕ್ಷದ ಅನಿವಾರ್ಯತೆ ಇರುವುದರಿಂದ ಸಂಘವು ಆ ಜಾಗವನ್ನು ತುಂಬುವಂತೆ ಸಲಹೆ ನೀಡಿದರು. ಈ ಸಲಹೆಗೆ ಪ್ರತಿಯಾಗಿ ಗುರೂಜಿಯವರು ಮುಖರ್ಜಿಯವರೇ ಈ ನಿಟ್ಟಿನಲ್ಲಿ ಮುಂದಡಿಯಿಡಬೇಕೆಂದೂ ಸಂಘವು ಅಗತ್ಯವಾದ ಎಲ್ಲಾ ಸಹಾಯ ಮಾಡುವುದೆಂದೂ ಹೇಳಿದರು. ಆದರೂ ಸಂಘವು ಇಡೀ ಸಮಾಜದ ಸಂಘಟನೆಯ ತನ್ನ ಕಾರ್ಯವನ್ನೇ ಮುಂದುವರಿಸುತ್ತದೆ ಎಂದು ತಿಳಿಸಿದರು.
1977ರ ತುರ್ತುಪರಿಸ್ಥಿತಿಯ ಸಮಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾಪಕ್ಷದ ಸರ್ಕಾರ ಸ್ಥಾಪನೆಯಾಗುವಲ್ಲಿ ಸಂಘದ ಸ್ವಯಂಸೇವಕರ ಪಾತ್ರ ಮಹತ್ತ್ವವಾದುದು. ಆಗ ಹಲವು ಪಕ್ಷಗಳು ವಿಲೀನಗೊಂಡು ಸ್ಥಾಪನೆಯಾದ ಜನತಾ ಪಾರ್ಟಿಯಲ್ಲಿ ಅರ್ಥಾತ್ ಸರ್ಕಾರದಲ್ಲಿ ವಿಲೀನಗೊಳ್ಳುವಂತೆ ಕೇಳಿ ಬಂದಿದ್ದ ಕೋರಿಕೆಯನ್ನು ತಿರಸ್ಕರಿಸುತ್ತಾ ಅಂದಿನ ಸರಸಂಘಚಾಲಕರಾದ ಶ್ರೀ ಬಾಳಾಸಾಹೇಬ್ ದೇವರಸ್ ಅವರು ಅನಿವಾರ್ಯ ಸಮಯದಲ್ಲಿ ಸಂಘವು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತಷ್ಟೇ, ಈಗ ಇಡೀ ಸಮಾಜದ ಸಂಘಟನೆಯೆಡೆಗೆ ಸಂಘವು ಗಮನಕೊಡುವುದಾಗಿ ಹೇಳಿದ್ದರು.
ಇದನ್ನೆಲ್ಲಾ ಅರ್ಥೈಸಿಕೊಳ್ಳಬೇಕೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಡೀ ಸಮಾಜದ ಸಂಘಟನೆಯೇ ಹೊರತು ಸಮಾಜದೊಳಗಿನ ಒಂದು ಸಂಘಟನೆಯಲ್ಲ ಎಂಬ ವಿಚಾರವನ್ನು ಅರಿಯುವುದು ಅವಶ್ಯವಾಗುತ್ತದೆ.
2018ರಲ್ಲಿ ಅಖಿಲ ಭಾರತ ಪ್ರತಿನಿಧಿ ಸಭೆ(ABPS)ಯು ನಾಗಪುರದಲ್ಲಿ ಆಯೋಜನೆಗೊಂಡಿತ್ತು. ಹಿರಿಯ ಸ್ವಯಂಸೇವಕ ಎಂ. ಜಿ. ವೈದ್ಯ ಅವರು ಸರಕಾರ್ಯವಾಹರ ಆಹ್ವಾನದ ಮೇರೆಗೆ ಅದರಲ್ಲಿ ಭಾಗವಹಿಸಿದ್ದರು. (ಅವರು 1931ರಲ್ಲಿ ತಮ್ಮ 8ನೇ ವರ್ಷ ವಯಸ್ಸಿಗೇ ಸ್ವಯಂಸೇವಕರಾದವರು) ಅದೇ ದಿನ ಅವರಿಗೆ 95 ವರ್ಷಗಳು ಪೂರ್ಣಗೊಳ್ಳುತ್ತಿದ್ದ ಕಾರಣ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತರು ವೈದ್ಯರನ್ನು ಸನ್ಮಾನಿಸಿದರು. ಆ ನಂತರ ಮಾತನಾಡಿದ ಎಂ. ಜಿ. ವೈದ್ಯರು, “ಸಂಘವನ್ನು ಅರ್ಥೈಸಿಕೊಳ್ಳುವುದು ಸುಲಭಸಾಧ್ಯವಾದ ಕೆಲಸವಲ್ಲ ಹಾಗೂ ಪಾಶ್ಚಾತ್ಯರ ದ್ವಂದ್ವಾತ್ಮಕ (binary) ದೃಷ್ಟಿಕೋನದ ಮೂಲಕವಂತೂ ಇದು ಅಸಾಧ್ಯವೇ ಸರಿ. ಏಕಾತ್ಮ(integral)ವಾದ ಭಾರತೀಯ ದೃಷ್ಟಿಯಿಂದ ಮಾತ್ರ ಸಂಘವನ್ನು ಅರಿಯುವುದು ಸಾಧ್ಯ” ಎಂದಿದ್ದರು. ಆತ್ಮತತ್ವದ ವರ್ಣನೆ ಮಾಡುತ್ತಾ ಈಶಾವಾಸ್ಯ ಉಪನಿಷತ್ತಿನ ಐದನೇ ಶ್ಲೋಕವು ಹೀಗೆ ಹೇಳುತ್ತದೆ:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯ ಬಾಹ್ಯತಃ||
ಇದರ ಅರ್ಥ ಹೀಗಿದೆ: ಆತ್ಮತತ್ವವೆಂಬುದು ಚಲವೂ ಹೌದು, ನಿಶ್ಚಲವೂ ಹೌದು. ಇದು ಅತಿ ದೂರದಲ್ಲಿದೆ ಹಾಗೂ ಅತಿ ಸಮೀಪದಲ್ಲೂ ಇದೆ. ಇದು ಎಲ್ಲದರ ಒಳಗೂ ಇದೆ, ಎಲ್ಲದರ ಹೊರಗೂ ಇದೆ. ಇದು ವಿರೋಧಾಭಾಸ ಅನ್ನಿಸಬಹುದು. ಆದರೆ ಅದು ಸತ್ಯ. ಅದೇ ರೀತಿಯ ತರ್ಕ ಸಂಘಕ್ಕೂ ಅನ್ವಯವಾಗುತ್ತದೆ.
ಸಮಾಜದ ಸಂಯೋಜನೆ ಕ್ಲಿಷ್ಟವಾದುದು. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಮತೀಯ, ಕಾರ್ಮಿಕ, ಶೈಕ್ಷಣಿಕ, ವಿದ್ಯಾರ್ಥಿಗಳ ಸಂಘಟನೆ ಮೊದಲಾದವುಗಳು ಸಮಾಜದೊಳಗೆ ಇರುತ್ತವೆ. ಸಂಘವು ಇಡೀ ಸಮಾಜದ ಸಂಘಟನೆಯಾದುದರಿಂದ ಇವುಗಳಲ್ಲಿ ಯಾವುದೊಂದೂ ಕೂಡ ಸಂಘದ ಪರಿಧಿಯಿಂದ ಹೊರಗೆ ಇರುವುದಿಲ್ಲ. ಸ್ವಯಂಸೇವಕರು ಇವೆಲ್ಲದರಲ್ಲಿಯೂ ಭಾಗಿಗಳಾಗಿರುತ್ತಾರೆ. ಅಂದಮಾತ್ರಕ್ಕೆ ಸಂಘವು ಸಮಾಜದೊಳಗಿನ ಯಾವುದೋ ಒಂದು ಸಂಘಟನೆಯಾಗಲಾರದು. ಸಂಘವು ಇವೆಲ್ಲವೂ ಆಗಿಯೂ ಇವುಗಳಿಗಿಂತ ಹೊರತಾಗಿದೆ. ಇದು ಇಡೀ ಸಮಾಜದ ಸಂಘಟನೆ.
ಪುರುಷಸೂಕ್ತದಲ್ಲೂ ಇದೇ ರೀತಿಯ ವಿಚಾರವಿದೆ. ಸ ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಂ|
ಭೂಮಿಯೂ ಸೇರಿದಂತೆ ಇಡೀ ವಿಶ್ವವನ್ನು ವ್ಯಾಪಿಸಿಕೊಂಡು ನಂತರವೂ ದಶಾಂಗುಲ ಅಧಿಕವಾಗಿದೆ ಎಂದು.
ಪರಮಾಣು ವಿಜ್ಞಾನಿಗಳು ಪರಮಾಣುವನ್ನು ವಿಭಜಿಸಲಾಗದೆಂದು ಹಿಂದೆ ಹೇಳಿದ್ದರು. ನಂತರ ಪರಮಾಣುವನ್ನು ವಿಭಜಿಸಬಹುದೆಂದೂ, ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನುಗಳೆಂಬ ಮೂರು ಕಣಗಳನ್ನು ಹೊಂದಿದೆಯೆಂದು ಹೇಳಿದರು. ಕೇವಲ ಮೂರು ಕಣಗಳಷ್ಟೇ ಅಲ್ಲ, ಅದು ಅನೇಕ ಸಬ್ ಅಟಾಮಿಕ್ ಕಣಗಳಿಂದಾಗಿದೆ ಎಂದು ಆಮೇಲೆ ಗೊತ್ತಾಯಿತು. ಅವುಗಳು ಕಣಗಳಷ್ಟೇ ಅಲ್ಲ, ಅಲೆಗಳಾಗಿಯೂ ವರ್ತಿಸುತ್ತವೆ ಎಂಬುದನ್ನು ತದನಂತರ ಕಂಡುಕೊಂಡರು. ಆ ನಂತರ ಹೈಸನ್ ಬರ್ಗನ ಅನಿಶ್ಚಿತತೆಯ ನಿಯಮವು ಇವುಗಳ ಸ್ಥಾನ ಹಾಗೂ ವೇಗವನ್ನು ಏಕಕಾಲದಲ್ಲಿ ನಿಖರವಾಗಿ ತಿಳಿಯುವುದು ಅಸಾಧ್ಯವೆಂದು ಹೇಳಿತು. ಈಶಾವಾಸ್ಯ ಉಪನಿಷತ್ತು ಅದನ್ನೇ ಹೇಳಿದೆ. ಇದನ್ನು ಭಾರತೀಯವಾದ ಏಕಾತ್ಮ ದೃಷ್ಟಿಯಿಂದ ಮಾತ್ರ ಅರಿಯಲು ಸಾಧ್ಯ. “ಒಂದೋ ಇದು, ಇಲ್ಲವೇ ಅದು” ಎಂಬ ಪಾಶ್ಚಾತ್ಯರ ಬೈನರಿ ದೃಷ್ಟಿಯಿಂದ ಅಸಾಧ್ಯ. ಸಂಘವನ್ನು ಅರಿಯಲು ಇದೇ ಏಕಾತ್ಮ ದೃಷ್ಟಿಯೇ ಬೇಕು. ಎಂ. ಜಿ. ವೈದ್ಯರು ಇದನ್ನೇ ತಿಳಿಸಿದರು.
ಹೀಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಪೂರ್ಣ ಸಮಾಜದ ಸಂಘಟನೆಯಾಗಿರುವುದರಿಂದ ಹಾಗೂ ರಾಜಕೀಯ ಕ್ಷೇತ್ರ ಸಮಾಜದ ಒಂದು ಭಾಗವಾಗಿರುವುದರಿಂದ ಇದರಲ್ಲೂ ಸಂಘ ಸಕ್ರಿಯವಾಗಿರುತ್ತದೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಉತ್ಸವವಾಗಿರುವುದರಿಂದ ಅದರಲ್ಲಿ ಅಧಿಕಾಧಿಕ ಮತದಾನವಾಗುವ ಸಲುವಾಗಿ ಹಾಗೂ ಸ್ಥಳೀಯವಾದ ಸಣ್ಣಪುಟ್ಟ ವಿಷಯಗಳಿಂದ ಹೊರಬಂದು ರಾಷ್ಟ್ರೀಯ ದೃಷ್ಟಿಕೋನವನ್ನಿರಿಸಿಕೊಂಡು ದೇಶದ ಹಿತದೃಷ್ಟಿಯಿಂದ ಜನರು ಮತದಾನ ಮಾಡುವಂತಾಗಬೇಕೆಂದು ಜನಜಾಗೃತಿ ಮೂಡಿಸುವ ಕೆಲಸವನ್ನೂ ಸ್ವಯಂಸೇವಕನು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಮಾಡುತ್ತಾನೆ. ಸಂಘದ ಸಂವಿಧಾನವು ಯಾವುದೇ ಸ್ವಯಂಸೇವಕನನ್ನು (ಸಂಘದ ಪದಾಧಿಕಾರಿಯನ್ನಲ್ಲ) ಯಾವುದೇ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸುವುದಿಲ್ಲ. ಆದರೆ ಶೇ.90 ರಷ್ಟು ಸ್ವಯಂಸೇವಕರು ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ಹೆಸರೆತ್ತದೇ ರಾಷ್ಟ್ರೀಯ ವಿಷಯಗಳ ಬಗೆಗಷ್ಟೇ ಜನಜಾಗೃತಿ ಮೂಡಿಸುವುದು ಕಾಣಸಿಗುತ್ತದೆ. ಹೀಗಿರುವ ಹೊರತಾಗಿಯೂ ಸಂಘವು ಒಂದು ರಾಜಕೀಯ ಪಕ್ಷ ಅಥವಾ ಒಂದು ರಾಜಕೀಯ ಪಕ್ಷದ ಭಾಗವಾಗಲಾರದು. ಅದು ಸಂಪೂರ್ಣ ಸಮಾಜದ ಸಂಘಟನೆ. ಇದನ್ನು ಭಾರತೀಯ ಚಿಂತನೆಯ ಏಕಾತ್ಮ (integral) ದೃಷ್ಟಿ ಹಾಗೂ ಈಶಾವಾಸ್ಯ ಉಪನಿಷತ್ತಿನ ದೃಷ್ಟಿಯಿಂದಷ್ಟೇ ತಿಳಿಯಬಹುದು.
ಡಾ. ಮನಮೋಹನ ವೈದ್ಯ
ಸಹ ಸರಕಾರ್ಯವಾಹ, ರಾ.ಸ್ವ.ಸಂ.
( ಕನ್ನಡಕ್ಕೆ : ಸುಮುಖ ನೀರುಗಾರು )
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.