ನಿಮಗೆ ಬಹುಶಃ ನೆನಪಿರಬಹುದು. ‘ಸ್ವಾತಂತ್ರ್ಯ ಬಂದ ಬಳಿಕ ಆಗಿಹೋದ 16 ಮಂದಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ 8 ಮಂದಿ ಭ್ರಷ್ಟರು. ಆರು ಮಂದಿ ಅತ್ಯಂತ ಪ್ರಾಮಾಣಿಕರು. ಉಳಿದ ಇಬ್ಬರ ಬಗ್ಗೆ ಅವರು ಭ್ರಷ್ಟರೋ ಅಥವಾ ಪ್ರಾಮಾಣಿಕರೋ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾನು ಹೀಗೆ ಹೇಳಿದ್ದು ನ್ಯಾಯಾಂಗ ನಿಂದನೆ ಆಗಿದ್ದಲ್ಲಿ ನನ್ನನ್ನು ಜೈಲಿಗೆ ಕಳಿಸಿ. ನನಗೇನೂ ಬೇಸರವಿಲ್ಲ’ ಇಂತಹದೊಂದು ಹೇಳಿಕೆಯನ್ನು 2010 ರ ಸೆಪ್ಟೆಂಬರ್ ತಿಂಗಳಲ್ಲಿ ಹಿರಿಯ ವಕೀಲರಾಗಿದ್ದ ಶಾಂತಿಭೂಷಣ್ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಸೀಲ್ ಮಾಡಿದ ಕವರ್ನ ಅರ್ಜಿಯಲ್ಲಿ ತಿಳಿಸಿದ್ದರು. ಆ ಅರ್ಜಿಯಲ್ಲಿ ಆ 8 ಮಂದಿ ಭ್ರಷ್ಟಾತಿಭ್ರಷ್ಟ ಮುಖ್ಯ ನ್ಯಾಯಾಧೀಶರು (ಸಿಜಿಐ) ಯಾರೆಂಬುದನ್ನು ಪಟ್ಟಿ ಮಾಡಿದ್ದರು. ಧೈರ್ಯವಿದ್ದರೆ ಸೀಲ್ ಮಾಡಿದ ಆ ಕವರ್ ಒಡೆದು ಅಲ್ಲಿರುವ ಹೆಸರುಗಳನ್ನು ಓದಿ ಎಂದೂ ಸವಾಲೆಸೆದಿದ್ದರು. ಆದರೆ ಶಾಂತಿಭೂಷಣ್ ಸುಪ್ರೀಂಕೋರ್ಟ್ಗೆ ನೀಡಿದ ಆ ಕವರ್ ಒಡೆದು ಅದರಲ್ಲಿರುವ ಕಳಂಕಿತ ಸಿಜೆಐಗಳ ಹೆಸರನ್ನು ಬಹಿರಂಗಗೊಳಿಸುವ ಧೈರ್ಯವನ್ನು ಸುಪ್ರೀಂಕೋರ್ಟ್ ಇದುವರೆಗೂ ಪ್ರದರ್ಶಿಸಿಲ್ಲ. ಶಾಂತಿಭೂಷಣ್ ನ್ಯಾಯಾಲಯಕ್ಕೆ ಸಲ್ಲಿಸಿದ ಆ ಅರ್ಜಿಯನ್ನು ಸ್ವೀಕರಿಸಿ ವಿಚಾರಣೆಗೆ ಎತ್ತಿಕೊಳ್ಳಲೂ ಇಲ್ಲ.
ಶಾಂತಿಭೂಷಣ್ 1977 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರದಲ್ಲಿ ಕಾನೂನು ಸಚಿವರಾಗಿದ್ದರು. 4 ಮಂದಿ ಸಿಜೆಐಗಳು ಭ್ರಷ್ಟರು ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಬೇಕಾದರೆ ಅವರ ಧೈರ್ಯವನ್ನು ಯಾರಾದರೂ ಮೆಚ್ಚಲೇಬೇಕು. ನನಗೆ ಈ ಕಾರಣಕ್ಕಾಗಿ ಜೈಲು ಶಿಕ್ಷೆಯಾದರೂ ಚಿಂತೆಯಿಲ್ಲ. ನ್ಯಾಯಾಂಗ ಕ್ಷೇತ್ರದಲ್ಲಿನ ಭ್ರಷ್ಟಾಚಾರದ ಕೊಳೆ ತೊಳೆಯುವಲ್ಲಿ ಇದೊಂದು ನನ್ನ ಅಳಿಲು ಸೇವೆ ಎಂದೇ ಭಾವಿಸುವೆ ಎಂಬ ಅವರ ಕಳಕಳಿ ಮಾತ್ರ ಖಂಡಿತ ಸ್ವಾಗತಾರ್ಹ.
ನ್ಯಾಯಾಂಗವನ್ನು ಅತ್ಯಂತ ಪರಮಪವಿತ್ರ ಸಂಸ್ಥೆಯೆಂದು ಪೂಜ್ಯ ಭಾವದಿಂದ ಗೌರವಿಸುವ ನಮ್ಮ ದೇಶದಲ್ಲಿ ನ್ಯಾಯಾಂಗದ ಅತ್ಯುನ್ನತ ಹುದ್ದೆಯಲ್ಲಿ ಇರುವವರ ಮೇಲೆ ಆರೋಪಗಳು ಕೇಳಿ ಬಂದರೆ ಅದು ನ್ಯಾಯ ವ್ಯವಸ್ಥೆಯ ಆಂತರ್ಯವನ್ನೇ ಕಲಕಿಬಿಡುತ್ತದೆ. ಜಡ್ಜ್ಗಳನ್ನು ನ್ಯಾಯಮೂರ್ತಿಗಳು ಎಂದು ಸಂಬೋಧಿಸುವ ರೀತಿಯಲ್ಲೇ ಅವರಿಗೆ ದೇವರ ಸ್ಥಾನ ನೀಡುವ ಕಳಕಳಿ ಅಡಗಿದೆ. ಹೀಗಿರುವಾಗ ದೇವರ ಸ್ಥಾನದಲ್ಲಿರುವ ಮುಖ್ಯ ನ್ಯಾಯಮೂರ್ತಿಗಳೇ ಕಳಂಕಿತರಾಗಿ ಬಿಟ್ಟರೆ…? ಈಗಲೂ ಅಂತಹದೊಂದು ವಿದ್ಯಮಾನ ಸುಪ್ರೀಂಕೋರ್ಟನ್ನೇ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ಪ್ರಸ್ತುತ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ವಿರುದ್ಧ ಸುಪ್ರೀಂ ಕೋರ್ಟಿನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿರುವುದು ಇಡೀ ನ್ಯಾಯಾಂಗ ವ್ಯವಸ್ಥೆಯೇ ಒಮ್ಮೆ ಬೆಚ್ಚಿ ಬೀಳುವಂತಾಗಿದೆ. ಸುಪ್ರೀಂಕೋರ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿ ಹಾಲಿ ಮುಖ್ಯ ನ್ಯಾಯಮೂರ್ತಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ೨೨ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಇದು ಹಿಂದೆಂದೂ ಕಂಡು ಕೇಳರಿಯದಂತಹ ಬಹು ಸೂಕ್ಷ್ಮ ಪ್ರಕರಣ. ಸಿಜೆಐಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದೆರಗಿದರೂ ಲೈಂಗಿಕ ಕಿರುಕುಳದ ಆರೋಪ ಬಂದೆರಗಿರುವುದು ಇದೇ ಮೊದಲು.
ಈ ಪ್ರಕರಣವನ್ನು ಸುದೀರ್ಘ ಲೇಖನವೊಂದರ ಮೂಲಕ ಮೊದಲು ಬಹಿರಂಗಗೊಳಿಸಿದ್ದು ‘ದಿ ವೈರ್’ ಎಂಬ ಆನ್ಲೈನ್ ಸುದ್ದಿ ಮಾಧ್ಯಮ. 870 ಶಬ್ದಗಳಿಗೂ ಹೆಚ್ಚು ದೀರ್ಘವಾದ ಆ ಲೇಖನದಲ್ಲಿ ಹಗರಣಕ್ಕೆ ಸಂಬಂಧಿಸಿದ ವಿವರಗಳು, ದಿನಾಂಕಗಳು, ಸೂಕ್ಷ್ಮಾತಿ ಸೂಕ್ಷ್ಮ ಎಳೆಗಳು ದಾಖಲಾಗಿವೆ. ಸಿಜೆಐ ಅವರನ್ನು ಬ್ಲಾಕ್ ಮೇಲ್ ಮಾಡಲು ಯಾರೋ ಅಬ್ಬೇಪಾರಿ, ತಲೆಹಿಡುಕ ಪತ್ರಕರ್ತರು ಬರೆದ ಲೇಖನ ಅದಾಗಿಲ್ಲ. ಹಾಗೆಂದೇ ’ದಿ ವೈರ್’ ಹಗರಣವನ್ನು ಬಯಲಿಗೆಳೆದಿದ್ದೇ ತಡ, ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ಈ ಪ್ರಕರಣವನ್ನು ಸ್ವಯಂಪ್ರೇರಿತರಾಗಿ ವಿಚಾರಣೆಗೆ ಕೈಗೆತ್ತಿಕೊಂಡು ಆರೋಪಿಯ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಈ ಪರಿಯ ನಡೆ ಮಾತ್ರ ಸಾರ್ವತ್ರಿಕ ಟೀಕೆಗೊಳಗಾಗಿದೆ. ಸ್ವತಃ ಸುಪ್ರೀಂಕೋರ್ಟಿನ ಬಾರ್ ಅಸೋಸಿಯೇಷನ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪೂರ್ಣ ಕೋರ್ಟ್ (ಎಲ್ಲ ನ್ಯಾಯಮೂರ್ತಿಗಳು) ಸೇರಿ ಈ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿವೆ.
ಮುಖ್ಯವಾಗಿ ನಮ್ಮ ದೇಶದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಂತಹ ಉನ್ನತ ಕೋರ್ಟ್ನ ಜಡ್ಜ್ಗಳ ವಿರುದ್ಧ ಆರೋಪ ಕೇಳಿ ಬಂದರೆ ಅದನ್ನು ನಿರ್ವಹಿಸಲು ವಿವಾದಕ್ಕೆ ಎಡೆ ಮಾಡಿಕೊಡದಂತಹ ನಿಯಮಾವಳಿ ಇಲ್ಲ. ಜಡ್ಜ್ಗಳ ಸಮಿತಿಯೇ ಇತ್ಯರ್ಥಪಡಿಸುತ್ತದೆ. ಗುರುತರ ಆರೋಪವಾದರೆ ಶಾಸನ ಸಭೆಯಲ್ಲಿ ವಾಗ್ದಂಡನೆ ಮೂಲಕ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಸಂಕೀರ್ಣ ಪ್ರಕ್ರಿಯೆ ನಡೆಯುತ್ತದೆ.
2012 ರಲ್ಲಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಹಾಗೂ ಮಾನವ ಹಕ್ಕುಗಳ ಆಯೋಗ ಎಂಬ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿದ್ದವರ ವಿರುದ್ಧ ಯುವತಿಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು. ನಂತರ ಸುಪ್ರೀಂಕೋರ್ಟ್ನ ಜಡ್ಜ್ಗಳ ಸಮಿತಿಯು ಅದರ ವಿಚಾರಣೆ ನಡೆಸಿತ್ತು. ಅನಂತರ ಆ ಜಡ್ಜ್ ಮಾನವ ಹಕ್ಕು ಆಯೋಗ (ಎನ್ಎಚ್ಆರ್ಸಿ) ಹುದ್ದೆಗೆ ರಾಜೀನಾಮೆ ನೀಡಿದ್ದರು. ದೂರು ನೀಡಿದ ಆ ಯುವತಿ ಅದೇಕೋ ಪ್ರಕರಣವನ್ನು ಮುಂದುವರಿಸಲು ಆಸಕ್ತಿ ತೋರಲಿಲ್ಲ. 2013 ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮತ್ತು ಹಸಿರು ಪೀಠದ ಮುಖ್ಯಸ್ಥರಾಗಿದ್ದವರ ಮೇಲೂ ಲೈಂಗಿಕ ಕಿರುಕುಳದ ಆರೋಪ ಬಂದಿತ್ತು. ಆದರೆ ಆ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ದೊರಕದೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗಿದ್ದ ಪರಮಪವಿತ್ರ, ಪೂಜ್ಯ ಭಾವನೆ ಮಸುಕುಗೊಂಡಿತೆಂದೇ ಹೇಳಬೇಕಾಗುತ್ತದೆ. ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ದೊರಕಿದಿದ್ದರೆ ಹೀಗಾಗುವ ಸಂಭವ ಇರುತ್ತಿರಲಿಲ್ಲ.
ಈಗಲೂ ಅಷ್ಟೇ ಸಿಜೆಐ ಸ್ವತಃ ವಿಚಾರಣೆ ಕೈಗೆತ್ತಿಕೊಂಡು ದೂರುದಾರೆಯ ಅರ್ಜಿ ವಜಾಗೊಳಿಸಿದ್ದು ಎಷ್ಟು ಸಮಂಜಸ ? ಈ ಪ್ರಶ್ನೆ ಈಟಿಯಂತೆ ನ್ಯಾಯಾಂಗ ವ್ಯವಸ್ಥೆಯನ್ನು ಇರಿಯುತ್ತಲೇ ಇದೆ. ತನ್ನ ಮೇಲೆಯೇ ಲೈಂಗಿಕ ಕಿರುಕುಳದ ಗಹನ ಆರೋಪ ವ್ಯಕ್ತವಾದಾಗ ತಾನೇ ಆ ದೂರನ್ನು ವಿಚಾರಣೆಗೆ ಎತ್ತಿಕೊಳ್ಳುವುದು ಹಾಗೂ ಅರ್ಜಿಯನ್ನು ಆಧಾರ ರಹಿತವೆಂದು ತ್ವರಿತವಾಗಿ ವಜಾಗೊಳಿಸುವುದು ಎಷ್ಟು ಸಮಂಜಸ ? ಮನೆಯ ಯಜಮಾನನ ಮೇಲೆ ಗುರುತರ ಆರೋಪ ವ್ಯಕ್ತವಾದರೆ ಅದನ್ನು ಆತನೇ ಇತ್ಯರ್ಥ ಮಾಡುವುದು ಹೇಗೆ ಸಾಧ್ಯ ? ಬಂಧು ಬಳಗದ ಹಿರಿಯರು ಅಥವಾ ಊರ ಹಿರಿಯರು, ಪ್ರಜ್ಞಾವಂತರು ಒಟ್ಟಿಗೇ ಕಲೆತು ಚರ್ಚಿಸಿ, ತೀರ್ಪು ನೀಡಿದರೆ ಅದನ್ನು ಎಲ್ಲರೂ ಒಪ್ಪುತ್ತಾರೆ. ಇದೊಂದು ಸಹಜ ನ್ಯಾಯ ಪ್ರಕ್ರಿಯೆ ಎಂದು ಎಲ್ಲರೂ ಸಮ್ಮತಿಸುತ್ತಾರೆ. ಆದರೆ ಆರೋಪಕ್ಕೊಳಗಾದವರೇ ತಮ್ಮ ಬಗ್ಗೆ ತೀರ್ಪು ನೀಡಿದರೆ ಅದು ಅಸಹಜ ನ್ಯಾಯದಾನವಲ್ಲದೆ ಮತ್ತೇನು ?
ಹಗರಣ ಪ್ರಚಾರ ಮಾಧ್ಯಮಗಳಲ್ಲಿ ತೀವ್ರವಾಗುತ್ತಿದ್ದಂತೆ ಕೊನೆಗೆ ಹಗರಣದ ಇತ್ಯರ್ಥಕ್ಕೆ ತನಿಖೆ ನಡೆಸಲು ಮೂವರು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನೊಳಗೊಂಡ ಆಂತರಿಕ ಸಮಿತಿ ರಚಿಸಲಾಯಿತು. ನ್ಯಾ. ಎಸ್. ಎ. ಬೋಬ್ಡೆ, ನ್ಯಾ. ರಮಣ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ ಆ ಸಮಿತಿಯಲ್ಲಿದ್ದ ಮೂವರು ಸುಪ್ರೀಂ ನ್ಯಾಯಮೂರ್ತಿಗಳು. ಆದರೆ ನ್ಯಾ. ರಮಣ ಅವರಿಗೆ ಈ ಆಂತರಿಕ ತನಿಖಾ ಸಮಿತಿಯಲ್ಲಿ ಸ್ಥಾನ ನೀಡಿದ್ದಕ್ಕೆ ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾ. ರಮಣ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಆಪ್ತರು. ಅವರು ಯಾವಾಗಲೂ ಸಿಜೆಐ ಮನೆಗೆ ಹೋಗಿ ಬಂದು ಮಾಡುತ್ತಿರುತ್ತಾರೆ. ಹೀಗಾಗಿ ಅವರಿಗೆ ಸ್ಥಾನ ಕಲ್ಪಿಸಿದ್ದು ಸರಿಯಲ್ಲ ಎಂಬುದು ಆ ಮಹಿಳೆಯ ವಾದ. ಕೊನೆಗೆ ನ್ಯಾ. ರಮಣ ಅವರೇ ಸಮಿತಿಯಿಂದ ಹೊರ ಬಂದು, ಅವರ ಜಾಗದಲ್ಲಿ ನ್ಯಾ. ಇಂದು ಮಲ್ಹೋತ್ರಾ ಸೇರ್ಪಡೆಯಾದರು.
ಈ ಆಂತರಿಕ ಸಮಿತಿ ಈಗಾಗಲೆ ವಿಚಾರಣೆಯನ್ನು ಆರಂಭಿಸಿದೆ. ಈ ವೇಳೆ ಮಹಿಳಾ ದೂರುದಾರೆ ಹಾಜರಾಗಿದ್ದರು. ಆದರೆ ಆಕೆಯ ಪರ ವಕೀಲರನ್ನು ವಿಚಾರಣೆ ಕೊಠಡಿಯಿಂದ ಹೊರಗಿಡಲಾಗಿತ್ತು. ಈ ವಿಚಾರಣೆ ಸಾಮಾನ್ಯ ಕೋರ್ಟ್ ಪ್ರಕ್ರಿಯೆ ಅಲ್ಲ. ಹಾಗಾಗಿ ಇಲ್ಲಿ ಯಾವುದೇ ಅರ್ಜಿದಾರರ ಪರವಾಗಿ ವಕೀಲರು ವಾದ ಮಾಡುವಂತಿಲ್ಲ. ವಕೀಲರು ಹಾಜರಾಗುವಂತೆಯೇ ಇಲ್ಲ ಎಂದು ನ್ಯಾ. ಎಸ್. ಎ. ಬೊಬ್ಡೆ ಹೇಳಿದ್ದಾರೆ.
ದೂರುದಾರೆ ಮಹಿಳೆಯನ್ನು ಸಮಿತಿಯ ಮೂವರು ನ್ಯಾಯಮೂರ್ತಿಗಳು ಪ್ರಶ್ನಿಸುತ್ತಾರೆ. ಸಮಿತಿಯಲ್ಲಿರುವ ಇಬ್ಬರು ನ್ಯಾಯಮೂರ್ತಿಗಳು ಮಹಿಳೆಯರು ಎಂಬುದೊಂದು ಸಮಾಧಾನದ ಸಂಗತಿ. ಈ ನಡುವೆ ಈ ಹಗರಣದ ಬಿಸಿ ವ್ಯಾಪಿಸುತ್ತಿದ್ದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ನ ಹಲವು ನ್ಯಾಯಾಧೀಶರು ತಮ್ಮ ಕರ್ತವ್ಯ ನಿರ್ವಹಣೆಗೆ ಇನ್ನು ಮುಂದೆ ಕಚೇರಿಯಲ್ಲಿ ಪುರುಷ ಸಿಬ್ಬಂದಿಯನ್ನು ನೇಮಿಸಿ, ಮಹಿಳಾ ಸಿಬ್ಬಂದಿ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರಂತೆ. ಆದರೆ ಕೋರ್ಟ್ ಸಿಬ್ಬಂದಿಗಳ ಪೈಕಿ ಶೇ. 60 ರಷ್ಟು ಮಹಿಳೆಯರೇ ಇರುವುದರಿಂದ ನ್ಯಾಯಾಧೀಶರ ಬೇಡಿಕೆ ಪೂರೈಸಲು ಸಾಧ್ಯವಿಲ್ಲ. ಅಷ್ಟಕ್ಕೂ ಪುರುಷ ನ್ಯಾಯಮೂರ್ತಿಗಳು ಈ ಪ್ರಕರಣದಿಂದ ಹೆದರಿಕೊಂಡು ಇಂತಹ ಬೇಡಿಕೆಯನ್ನಿಟ್ಟಿದ್ದಾದರೂ ಏಕೆ ? ಎಂದಾದರೊಂದು ದಿನ ತಮ್ಮ ಮೇಲೂ ಲೈಂಗಿಕ ಹಗರಣದ ಆರೋಪ ಬಂದೆರಗಬಹುದೆಂಬ ಭಯವೇ ? ಕಳ್ಳನ ಮನಸ್ಸು ಎಂದಿದ್ದರೂ ಹುಳ್ಳುಳ್ಳಗೆ ಎಂಬ ಗಾದೆ ಮಾತಂತೂ ಈ ಸಂದರ್ಭದಲ್ಲಿ ನೆನಪಾಗದೆ ಇರದು !
’ಸಿಜೆಐ ವಿರುದ್ಧ ಆರೋಪಗಳ ತನಿಖೆ ನಡೆದು ಅಂತಿಮ ವರದಿ ಏನೇ ಬಂದರೂ ಇಡೀ ವೃತ್ತಾಂತದಿಂದ ನ್ಯಾಯಾಂಗದ ಘನತೆಗೆ ಕುತ್ತು ತರುತ್ತದೆ. ಈಗಾಗಲೇ ಸಿಜೆಐ ಪರ ಮತ್ತು ವಿರುದ್ಧವಾಗಿ ಎರಡು ಬಣಗಳು ಸೃಷ್ಟಿಯಾಗಿವೆ’ ಎಂಬ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಪ್ರತಿಕ್ರಿಯೆ ಅತ್ಯಂತ ಗಮನಾರ್ಹ.
ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರ, ಲೈಂಗಿಕ ಕಿರುಕುಳ, ಇತ್ಯಾದಿ ಗಂಭೀರ ಆರೋಪ ಬಂದೆರಗಿದಾಗ ಅವರ ರಾಜೀನಾಮೆಗೆ ಆಗ್ರಹಿಸಲಾಗುತ್ತದೆ. ಹವಾಲಾ ಹಗರಣದ ಆರೋಪ ತಮ್ಮ ಮೇಲೆ ಬಂದೆರಗಿದಾಗ ಆಡ್ವಾಣಿಯವರು ತಮ್ಮ ಹುದ್ದೆಗೆ ತಾನಾಗಿ ರಾಜೀನಾಮೆ ನೀಡಿದ್ದರು. ದೋಷರಹಿತನೆಂದು ಕೋರ್ಟ್ ತೀರ್ಪು ಬಂದ ಬಳಿಕವೇ ಮತ್ತೆ ಆ ಹುದ್ದೆ ಅಲಂಕರಿಸಿದ್ದರು. ರೈಲ್ವೆ ದುರಂತ ನಡೆದಾಗ ಯಾರೂ ಆಗ್ರಹಿಸದಿದ್ದರೂ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ಆ ದುರಂತದಲ್ಲಿ ಅವರ ತಪ್ಪೇನೂ ಇರಲಿಲ್ಲ. ಆದರೆ ನಮ್ಮ ಸಿಜೆಐ ರಂಜನ್ ಗೊಗೋಯ್ ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊಂದಿದ್ದರೂ ರಾಜೀನಾಮೆ ನೀಡಲಿಲ್ಲ. ಹುದ್ದೆಗಂಟಿಕೊಂಡು ತಾನೇ ದೂರನ್ನು ಕೈಗೆತ್ತಿಕೊಂಡು ದೂರು ಅರ್ಜಿಯನ್ನು ವಜಾಗೊಳಿಸಿದರು. ಅನಂತರ ರಚನೆಯಾದ ಆಂತರಿಕ ತನಿಖಾ ಸಮಿತಿಗೂ ತಮ್ಮ ಆಪ್ತರೊಬ್ಬರನ್ನು (ನ್ಯಾ. ರಮಣ) ಸೇರಿಸಿದರು.
ಇದೆಂತಹ ಮೇಲ್ಪಂಕ್ತಿ ? ಉನ್ನತ ಹುದ್ದೆಯಲ್ಲಿರುವವರು ನೈತಿಕತೆಯನ್ನು ಎತ್ತಿ ಹಿಡಿಯುವ ಪರಿ ಇದೇನಾ ? ಸಾರ್ವಜನಿಕರಿಗೆ ಈ ವಿದ್ಯಮಾನದಿಂದ ರವಾನೆಯಾಗುವ ಸಂದೇಶವಾದರೂ ಎಂತಹುದು !
✍✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.