ನಿರೀಕ್ಷೆ ನಿಜವಾಗಲಿಲ್ಲ. ಪ್ರಜಾ ಪ್ರಭುಗಳು ಎಚ್ಚೆತ್ತುಕೊಳ್ಳಲೇ ಇಲ್ಲ.
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಡೆದ ಮತದಾನ ಪ್ರಮಾಣ ಗಮನಿಸಿದರೆ ಇದಕ್ಕಿಂತ ಭಿನ್ನವಾದ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಒಟ್ಟು 2,67,51,125 ಮತದಾರರ ಪೈಕಿ 1,83,56,067 ಮಂದಿ ಮತ ಚಲಾಯಿಸಿದ್ದಾರೆ ಇದು ಚುನಾವಣಾ ಆಯೋಗವೇ ನೀಡಿರುವ ನಿಖರ ಮಾಹಿತಿ ಅಂದರೆ ಮೊದಲ ಹಂತದಲ್ಲಿ ಮತ ಚಲಾಯಿಸಿದವರ ಶೇಕಡಾವಾರು ಶೇ. 68.62. ಈ ಪೈಕಿ ಮಂಡ್ಯದಲ್ಲಿ ಅತ್ಯಧಿಕ ಶೇ. 80.24 ರಷ್ಟು ಮತದಾನವಾಗಿದ್ದರೆ ಬೆಂಗಳೂರು ಉತ್ತರದಲ್ಲಿ ಅತ್ಯಂತ ಕಡಿಮೆ ಶೇ. 53.23 ರಷ್ಟು ಮತದಾನವಾಗಿದೆ. ಅತ್ಯಂತ ವಿದ್ಯಾವಂತರ ಸಂಖ್ಯೆಯೇ ಹೆಚ್ಚಿರುವ ಬೆಂಗಳೂರು ದಕ್ಷಿಣದಲ್ಲಿ ಶೇ. 53.48 ಮಾತ್ರ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೋಲಾರ, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ ಈ ಕ್ಷೇತ್ರಗಳಲ್ಲಿ ಆಗಿರುವ ಮತದಾನ ಶೇ. 70 ಕ್ಕೂ ಹೆಚ್ಚು. ಮೈಸೂರು ಕ್ಷೇತ್ರದಲ್ಲಿ ಮಾತ್ರ ಶೇ. 68.82. ಬೆಂಗಳೂರು ದಕ್ಷಿಣ ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಶೇ. 50 ಕ್ಕಿಂತ ಮತದಾನ ಮೇಲೇಳಲೇ ಇಲ್ಲ. ಹಾಗೆ ನೋಡಿದರೆ ರಾಜಧಾನಿ ಬೆಂಗಳೂರು ಶಿಕ್ಷಿತರೇ ಹೆಚ್ಚಾಗಿರುವ ಪ್ರದೇಶ. ಹಾಗಿದ್ದರೂ ಶಿಕ್ಷಿತರ ಪ್ರದೇಶದಲ್ಲಿ ಕಡಿಮೆ ಮತದಾನ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಮತದಾನ. ಮೇಲ್ನೋಟಕ್ಕೆ ಇದು ನಮ್ಮ ವಿದ್ಯಾವಂತರ ಬೇಜವಾಬ್ದಾರಿತನ, ನಿರುತ್ಸಾಹ, ಆಲಸ್ಯ, ಪ್ರಜ್ಞಾವಂತಿಕೆಯ ತೀವ್ರ ಕೊರತೆಗೆ ಹಿಡಿದ ಕನ್ನಡಿ ಎಂದು ಯಾರು ಬೇಕಾದರೂ ವಿಶ್ಲೇಷಿಸಿಬಿಡಬಹುದು. ನಮ್ಮ ಮನೆಯ ಎದುರು ಅಂಚೆ ಇಲಾಖೆಯ ಉದ್ಯೋಗಿ ಮಹಿಳೆಯೊಬ್ಬರು ಮತದಾನದ ಹಿಂದಿನ ದಿನವೇ ಹೈದರಾಬಾದಿನಲ್ಲಿರುವ ತನ್ನ ಮಗಳ ಮನೆಗೆ ತೆರಳಿ ಮತ ಹಾಕದೆ ಉಳಿದರು. ಆಕೆ ಪ್ರತಿ ಬಾರಿ ಚುನಾವಣೆ ಬಂದಾಗಲೂ ಓಟು ಮಾಡುವುದಿಲ್ಲ ಎಂದು ಆಕೆಯ ಪತಿ ಹೇಳುತ್ತಾರೆ. ಆದರೆ ಗ್ಯಾಸ್ ಸಬ್ಸಿಡಿ ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದು ಒಂದೆರಡು ದಿನ ತಡವಾದರೆ, ಬಿಬಿಎಂಪಿ ಕಸದ ವ್ಯಾನ್ ಬರುವುದು ತಡವಾದರೆ, ಅಥವಾ ಬರದಿದ್ದರೆ ಆಕಾಶ ಭೂಮಿ ಒಂದಾಗುವಂತೆ ಹಾರಾಡುತ್ತಾರೆ. ಸರ್ಕಾರದ ಕರ್ತವ್ಯ ಲೋಪದ ಬಗ್ಗೆ ಸಿಕ್ಕಿದವರ ಬಳಿಯೆಲ್ಲ ದೂರು ಹೇಳುತ್ತಲೇ ಇರುತ್ತಾರೆ. ಮತದಾನ ಮಾಡಬೇಕೆಂಬ ತನ್ನ ಕರ್ತವ್ಯವನ್ನು ಮಾತ್ರ ಮರೆತೇ ಬಿಡುತ್ತಾರೆ. ಇವರೊಬ್ಬರೇ ಅಲ್ಲ, ಇಂಥವರು ಬೆಂಗಳೂರಿನಲ್ಲಿ ಇನ್ನೂ ಸಾಕಷ್ಟಿದ್ದಾರೆ.
ಸರ್ಕಾರದ ಸವಲತ್ತುಗಳೆಲ್ಲವೂ ನಿಯತ್ತಾಗಿ ದೊರಕುತ್ತಿರಬೇಕು ಎಂದು ಆಗ್ರಹಿಸುವ ಈ ಮಂದಿ, 5 ವರ್ಷಕ್ಕೊಮ್ಮೆ ಬರುವ ಪವಿತ್ರ ಕರ್ತವ್ಯದ ಬಗ್ಗೆ ಎಚ್ಚೆತ್ತುಕೊಳ್ಳದೇ ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರವೆಸಗುತ್ತಲೇ ಇರುತ್ತಾರೆ. ಮತದಾನದ ಹಿಂದಿನ ದಿನ, ಮತದಾನದ ದಿನ ಮತ್ತು ಅದರ ಮರುದಿನ ಹೇಗೂ ಸಾಲು ಸಾಲು ರಜೆ ಇದೆ ಎಂದು ಪ್ರವಾಸ ಹೋಗಿ ಮತದಾನಕ್ಕೆ ಬೆನ್ನು ತಿರುಗಿಸಿದವರ ಸಂಖ್ಯೆಯೂ ಕಡಿಮೆ ಇಲ್ಲ.
ರಾಜ್ಯ ಚುನಾವಣಾ ಆಯೋಗದ ಸಹಯೋಗದಲ್ಲಿ ವಿವಿಧ ಖಾಸಗಿ ಸಂಸ್ಥೆಗಳು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಯುವ ಸಮೂಹ ಬೆಂಗಳೂರಿನಲ್ಲಿ ನಿರೀಕ್ಷೆಯಂತೆ ಮತಗಟ್ಟೆಗೆ ಬಾರದೆ ನಿರಾಸೆ ಮೂಡಿಸಿದರು. ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮ ನಡೆದಿತ್ತು. ಬೀದಿ ನಾಟಕ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಮಾಧ್ಯಮಗಳ ಮೂಲಕವೂ ಪ್ರಚಾರ ಸಾಗಿತ್ತು. ಆದರೂ ಮತದಾನಕ್ಕೆ ಯುವ ಸಮೂಹ ಆಸಕ್ತಿ ತೋರಿಸದಿರುವುದು ಪ್ರಜಾಪ್ರಭುತ್ವದ ವಿಡಂಬನೆಯಲ್ಲದೆ ಮತ್ತೇನು? ಖಾಸಗಿ ಟಿವಿ ವಾಹಿನಿಯೊಂದು ಮತದಾನದ ದಿನ ಮಧ್ಯಾಹ್ನ 4 ರ ಬಳಿಕ ಮತ ಹಾಕದ ಹಲವು ಮತದಾರರನ್ನು ಹೇಗೋ ಫೋನ್ ಮೂಲಕ ಸಂಪರ್ಕಿಸಿ, ‘ನೀವೇಕೆ ಮತ ಹಾಕಲಿಲ್ಲ? ನಿಮ್ಮ ಕರ್ತವ್ಯವಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡಾಗ ‘ನೀವ್ಯಾರ್ರಿ ನಮಗೆ ಹೇಳೋಕೆ? ನಮಗೆ ಓಟ್ ಮಾಡಲು ಇಷ್ಟವಿಲ್ಲ’ ಎಂದು ಒರಟಾಗಿ ಹೇಳಿದವರೂ ಇದ್ದಾರೆ. ‘ನಮ್ಮಿಂದ ಪ್ರಮಾದವಾಗಿದೆ’ ಎಂದವರೇ ಇಲ್ಲ.
ಮತದಾನ ಮಾಡದೆ ಬೆಂಗಳೂರಿನಿಂದ ಚಿಕ್ಕಮಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲೆಂದೇ ಬಂದ ಐಟಿ-ಬಿಟಿ ಯುವಕರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ರಸ್ತೆಯಲ್ಲೇ ತಡೆದು ಶಾಲು ಹೊದಿಸಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ಜೆರಾಕ್ಸ್ ಪ್ರತಿಯ ಮಾಲೆ ಹಾಕಿ ಮುಜುಗರಕ್ಕೆ ಒಳಪಡಿಸಿದ್ದ ವಿದ್ಯಮಾನವನ್ನು ಮರೆಯುವಂತೆಯೇ ಇಲ್ಲ. ಪ್ರವಾಸಕ್ಕೆ ಬಂದ 200 ಕ್ಕೂ ಹೆಚ್ಚು ಮಂದಿಗೆ ಇದು ಯಾವ ಚುನಾವಣೆ, ಮತದಾನದ ದಿನಾಂಕ ಗೊತ್ತಿಲ್ಲದಿರುವುದು ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನೇ ದಂಗು ಬಡಿಸಿದೆ ! ನಿಜವಾಗಿ ಪತ್ರಕರ್ತರ ಸಂಘವು ಮತದಾನ ಮಾಡದೆ ಪ್ರವಾಸಕ್ಕೆ ಬಂದಿದ್ದ ಆ ಯುವಕ-ಯುವತಿಯರಿಗೆ ಚಪ್ಪಲಿ ಹಾರ ಹಾಕಿ ಸ್ವಾಗತಿಸಬೇಕಾಗಿತ್ತು! ಸ್ಟ್ರೆಚರ್ನಲ್ಲಿ ಮಲಗಿಕೊಂಡೇ ಮತಗಟ್ಟೆಗೆ ಬಂದವರು, ನೂರು ದಾಟಿದರೂ ಮೊಮ್ಮಕ್ಕಳ ನೆರವಿನಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಹಣ್ಣು ಹಣ್ಣು ಮುದುಕ -ಮುದುಕಿಯರ ನಿದರ್ಶನ ಕಣ್ಣಿಗೆ ಹೊಡೆಯುವಂತಿರುವಾಗ ಐದಾರು ಅಂಕಿಯ ಸಂಬಳವೆಣಿಸಿ, ಮೋಜು ಮಸ್ತಿಯಲ್ಲೆ ಜೀವನ ಕಳೆಯುವ ವಿದ್ಯಾವಂತ ಯುವ ಸಮೂಹದವರ ಶೂನ್ಯ ಪ್ರಜ್ಞಾವಂತಿಕೆ ಬಗ್ಗೆ ಹೇಳುವುದಾದರೂ ಏನನ್ನು ?
ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಯಲು ಇನ್ನೂ ಕೆಲವು ಗಂಭೀರ ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು ಬೆಂಗಳೂರಿನಲ್ಲಿ ಸುಮಾರು 2 ಲಕ್ಷ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಏಕಾಏಕಿ ನಾಪತ್ತೆಯಾಗಿರುವುದು. ಕೆಲವೆಡೆ ಒಂದು ಕುಟುಂಬದ ಒಬ್ಬ ವ್ಯಕ್ತಿಯ ಹೆಸರು ಪಟ್ಟಿಯಲ್ಲಿದ್ದರೆ, ಇನ್ನೊಬ್ಬರ ಹೆಸರೇ ಇರಲಿಲ್ಲ. ಇನ್ನು ಕೆಲವೆಡೆ ಒಂದೇ ಕಟ್ಟಡದಲ್ಲಿರುವ ನೂರಾರು ಮಂದಿಯ ಮತಗಳು ಸಾಮೂಹಿಕವಾಗಿ ಡಿಲೀಟ್ ಆಗಿವೆ. ಇದರಲ್ಲಿ ಬಿಬಿಎಂಪಿ ಆಡಳಿತ ವ್ಯವಸ್ಥೆ ಲೋಪವೆಸಗಿರುವ ಸಾಧ್ಯತೆ ಇದೆ ಎಂಬುದು ಬಿಜೆಪಿಯ ಆರೋಪ. ಮತದಾನದ ಹಕ್ಕು ನಿರಾಕರಿಸಿರುವ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಅದು ಹೇಳಿದೆ. ನಿರ್ದಿಷ್ಟ ದೂರು ದಾಖಲಾದರೆ ಆ ಕುರಿತು ತನಿಖೆ ನಡೆಸುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಯೂ ಹೇಳಿದ್ದಾರೆ.
ಆದರೆ ಮತದಾರರ ಹೆಸರು ಸಾಮೂಹಿಕವಾಗಿ ಡಿಲೀಟ್ ಆಗಲು ಹೇಗೆ ಸಾಧ್ಯ ? ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ವರ್ಗಾವಣೆ ಅಥವಾ ರದ್ದತಿ ನಿಯಮಾವಳಿಯಂತೆ ನಡೆಯುತ್ತದೆ. ಮತದಾರನೇ ಸ್ವತಃ ಅರ್ಜಿ ನೀಡದೆ ಹೆಸರನ್ನು ಸೇರಿಸಲು ಅಥವಾ ಡಿಲೀಟ್ ಮಾಡಲು ಸಾಧ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ಇದು ಆಗಿರುವುದರಿಂದ, ಪ್ರಮಾದದಿಂದ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ನಿರ್ಲಕ್ಷ್ಯದಿಂದ ಆಗಿದ್ದರೂ ಅದು ಶಿಕ್ಷಾರ್ಹವೇ. ರಾಜಕೀಯ ದುರುದ್ದೇಶದಿಂದ ಯಾರಾದರೂ ಪಟ್ಟಬದ್ಧ ಹಿತಾಸಕ್ತಿಗಳು ಈ ಅಕೃತ್ಯ ಮಾಡಿದ್ದರೆ ಅದೂ ಅಕ್ಷಮ್ಯ. ಕೇವಲ ಬೆಂಗಳೂರು ಮಾತ್ರವಲ್ಲ, ಮಂಗಳೂರು. ಮೈಸೂರುಗಳಲ್ಲೂ ಗುಂಪುಗಳಲ್ಲಿ ಮತದಾರರ ಹೆಸರು ಡಿಲೀಟ್ ಆಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಮತದಾನದ ಏರಿಳಿತ ಉಂಟಾಗಿ, ಫಲಿತಾಂಶದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ನ್ಯಾಯಸಮ್ಮತ ಮತದಾನವನ್ನು ನಾಶಪಡಿಸಲು ಬಯಸುವ ದುಷ್ಟಶಕ್ತಿಗಳು ಈ ಸಂಚಿನ ಹಿಂದಿವೆ ಎಂಬುದಂತೂ ಸ್ಪಷ್ಟ. ಇದು ಪ್ರಜೆಗಳ ನಂಬಿಕೆಗೆ ಎಸಗಿದ ಮಹಾದ್ರೋಹ. ಇದೊಂದು ಗುರುತರ ಅಪರಾಧ ಪ್ರಕರಣವಾಗಿದ್ದು ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ಸಾಮೂಹಿಕವಾಗಿ ಮತದಾರರ ಹೆಸರು ಡಿಲೀಟ್ ಆದ ಕಡೆ ಮರು ಮತದಾನಕ್ಕೆ ಅವಕಾಶ ಕಲ್ಪಿಸಬೇಕಾಗಿದೆ.
ಕನಿಷ್ಠ ಮತದಾನ ನಡೆದ ‘ಕೀರ್ತಿ’ ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರಿಗೆ ದೊರೆತರೆ, ರಾಷ್ಟ್ರಮಟ್ಟದಲ್ಲಿ ಶ್ರೀನಗರಕ್ಕೆ ಆ ಕೀರ್ತಿ ಸಲ್ಲುತ್ತದೆ. ಏಕೆಂದರೆ ಮೊದಲ ಹಂತದ ಮತದಾನ ಅಲ್ಲಿ ಕೇವಲ ಶೇ. 14.08 ಮಾತ್ರ. ಇದಕ್ಕೆ ಕಾರಣ ರಹಸ್ಯವಲ್ಲ. ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಮತದಾನಕ್ಕೆ ನೀಡಿರುವ ಬಹಿಷ್ಕಾರ ಕರೆ. ಮತದಾರರಿಗೆ ಬೆದರಿಕೆ. ಶ್ರೀನಗರ ಲೋಕಸಭಾ ಕ್ಷೇತ್ರದ 50 ಬೂತ್ಗಳಲ್ಲಿ ಯಂದರ್ಬಾಲ್ ಜಿಲ್ಲೆಯ 27 ಬೂತ್ಗಳಲ್ಲಿ ಹಾಗೂ ಬಡಗಾಂವ್ನ 13 ಕ್ಕೂ ಹೆಚ್ಚು ಬೂತ್ಗಳಲ್ಲಿ ಹೀಗೆ ಒಟ್ಟು 90 ಕ್ಕೂ ಹೆಚ್ಚು ಬೂತ್ಗಳಲ್ಲಿ ಶೂನ್ಯ ಮತದಾನ ! Zero Turnout. ಕರ್ನಾಟಕದ ಕೆಲವೆಡೆ ಮತದಾರರು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ, ಅನಂತರ ಕೆಲವರ ಮಧ್ಯಪ್ರವೇಶದಿಂದ ಆ ಬಹಿಷ್ಕಾರವನ್ನು ಹಿಂಪಡೆದರು. ಆದರೆ ನಮ್ಮ ಪೊಲೀಸರೂ, ಸೈನಿಕರಿಗೆ ಕಲ್ಲೆಸೆಯುವ, ಉಗ್ರರಿಗೆ ನೆರವು ನೀಡುವ ಕಾಶ್ಮೀರಿಗಳು ಮತದಾನಕ್ಕೆ ಮಾತ್ರ ಬರಲೇ ಇಲ್ಲ. ಭಾರತ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಆ ಮುಠ್ಠಾಳರಿಗೆ ಅದೆಷ್ಟು ನಿರಾಸಕ್ತಿ, ದ್ವೇಷ, ಆಕ್ರೋಶಗಳಿಗೆ ಎಂಬುದು ಈ ವಿದ್ಯಮಾನದಿಂದ ಬಯಲಾಗಿದೆ. ಭಾರತ ಸರ್ಕಾರದಿಂದ ಸಿಗುವ ಬೊಗಸೆ ತುಂಬಾ ಸವಲತ್ತು, ಆರ್ಥಿಕ ನೆರವು ಇತ್ಯಾದಿಗಳನ್ನು ಮಾತ್ರ ಓಟು ಹಾಕದ ಈ ಕಾಶ್ಮೀರಿ ಮತದಾರರು ಅಪ್ಪಿತಪ್ಪಿಯೂ ತಿರಸ್ಕರಿಸುವುದಿಲ್ಲ !
ಪ್ರಜಾತಂತ್ರ ವ್ಯವಸ್ಥೆಯ ಬಹುಮುಖ್ಯ ಉತ್ಸವವಾಗಿರುವ ಲೋಕಸಭಾ ಚುನಾವಣೆಯನ್ನು ಚುನಾವಣಾ ಆಯೋಗ ಹಿಂದೆಂದಿಗಿಂತ ಸಮರ್ಪಕವಾಗಿ ನಡೆಸಲು ಪ್ರಯತ್ನಿಸಿದೆಯಾದರೂ, ಮತದಾರರ ಸಾಮೂಹಿಕ ಹೆಸರುಗಳು ಡಿಲೀಟ್, ಶೂನ್ಯ ಮತದಾನ, ಎಗ್ಗಿಲ್ಲದೆ ಹರಿಯುತ್ತಿರುವ ಹಣದ ಹೊಳೆ, ಇತರೆ ಆಮಿಷಗಳನ್ನು ತಡೆಗಟ್ಟುವಲ್ಲಿ ಆಯೋಗ ಇನ್ನೂ ಸಫಲವಾಗಿಲ್ಲ. ಆಯೋಗ ಇನ್ನಷ್ಟು ನಿಷ್ಪಕ್ಷಪಾತ, ದಕ್ಷ, ಕಟ್ಟೆಚ್ಚರದ ನಿರ್ವಹಣೆ ಮಾಡುವಂತಾಗಬೇಕು ಎಂಬುದು ಪ್ರಜ್ಞಾವಂತರೆಲ್ಲ ನಿರೀಕ್ಷೆ.
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.