2014 ರಲ್ಲಿ ‘ದುರ್ಬಲ ಐದು’ ಆರ್ಥಿಕತೆಯೆಂದು ಬ್ರ್ಯಾಂಡ್ ಆಗಿದ್ದ ಭಾರತದ ಆರ್ಥಿಕತೆ, ಈಗ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಪಡೆದುಕೊಂಡಿರುವುದು ಮಾತ್ರವಲ್ಲ, ಬೃಹತ್ ಆರ್ಥಿಕ ಸ್ಥಿರತೆಯನ್ನು ಕೂಡ ಸಂಭ್ರಮಿಸುತ್ತಿದೆ. 1991 ರ ನಂತರದ ಎಲ್ಲಾ ಸರಕಾರಗಳಿಗೆ ಹೋಲಿಸಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಸರಾಸರಿ ಜಿಡಿಪಿ ಬೆಳವಣಿಗೆಯ ಪ್ರಮಾಣವನ್ನು ನೀಡಿದೆ. ಕಳೆದ ಐದು ವರ್ಷಗಳಿಂದ ಜಿಡಿಪಿ ಶೇ 7.3 ರಷ್ಟಿದೆ ಮತ್ತು ಸರಾಸರಿ ಗ್ರಾಹಕರ ಹಣದುಬ್ಬರವನ್ನು ಕಡಿಮೆ ಮಟ್ಟದಲ್ಲಿ ಅಂದರೆ ಶೇ.4.6ರಲ್ಲಿ ನಿರ್ವಹಣೆ ಮಾಡಿದೆ.
ಕಳೆದ ವಾರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, 2030 ರ ಹೊತ್ತಿಗೆ ಭಾರತವು ಖರೀದಿ ಮತ್ತು ಹೂಡಿಕೆಯ ಸಹಾಯದಿಂದ 10 ಟ್ರಿಲಿಯನ್ ಡಾಲರ್ಗಳಷ್ಟು ತಲುಪುವ ಜಿಡಿಪಿ ಸಂಪರ್ಕವನ್ನು ಗಳಿಸಲಿದೆ ಎಂದು ಹೇಳಿದ್ದಾರೆ. ”ಪ್ರಸ್ತುತ, ಭಾರತೀಯ ಆರ್ಥಿಕತೆಯ ಗಾತ್ರವು 2.9 ಟ್ರಿಲಿಯನ್ ಯುಎಸ್ ಡಾಲರ್ ಆಗಿದೆ. ನಾವು ಡಾಲರ್ ದರವನ್ನು ಆಧರಿಸಿ, ಐದನೇ ಮತ್ತು ಆರನೇ ಅತಿದೊಡ್ಡ ಆರ್ಥಿಕತೆಯ ನಡುವೆ ಹೋರಾಟವನ್ನು ನಡೆಸಬೇಕು. ನಾವು ಮುಂಬರುವ ವರ್ಷಗಳನ್ನು ನೋಡುತ್ತಿದ್ದಂತೆ, 2024 ರ ಹೊತ್ತಿಗೆ ಯುಎಸ್ಡಿ 5 ಟ್ರಿಲಿಯನ್ ಡಾಲರ್ ಮತ್ತು 2030 ಅಥವಾ 2031 ರ ವೇಳೆಗೆ ಯುಎಸ್ಡಿ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಮೊದಲ ಮೂರು ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗುವತ್ತ ಗುರಿ ಇಟ್ಟಿರುವ ಬಗ್ಗೆ ಮಾತನಾಡಿದ ಜೇಟ್ಲಿ, ಗುರಿಯನ್ನು ತಲುಪಲು ನಾವು ಹೆಚ್ಚು ಪ್ರಬಲವಾದ ಪ್ರತಿಸ್ಪರ್ಧಿಗಳೊಂದಿಗೆ ನಾಗಾಲೋಟದಲ್ಲಿ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ. ಆರ್ಥಿಕ ಬೆಳವಣಿಗೆಗಳು ಮತ್ತು ಸರ್ಕಾರ ತೆಗೆದುಕೊಂಡ ಕ್ರಮಗಳನ್ನೂ ಅವರು ಒತ್ತಿ ಹೇಳಿದ್ದಾರೆ. ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರವು 5 ಟ್ರಿಲಿಯನ್ ಆರ್ಥಿಕತೆಗೆ ಮಾರ್ಗಸೂಚಿಯಾಗಿದೆ ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ.
1. ತೆರಿಗೆ ದರವನ್ನು ತಗ್ಗಿಸುವ ಮತ್ತು ತೊಡಕುಗಳನ್ನು ಸುಧಾರಿಸುವ ತತ್ತ್ವದೊಂದಿಗೆ ತೆರಿಗೆ ಮೂಲವನ್ನು ವಿಸ್ತರಿಸುವುದು; ತೆರಿಗೆ ದರವನ್ನು ತಗ್ಗಿಸುವುದರಿಂದಾಗಿ ಪ್ರಾಮಾಣಿಕ ತೆರಿಗೆದಾರರಿಗೆ ಲಾಭದಾಯಕವಾಗುತ್ತದೆ ಮತ್ತು ತೊಡಕುಗಳು ಸುಧಾರಿಸುತ್ತದೆ. ಮುಂದಿನ ಅವಧಿಯಲ್ಲೂ ಸರ್ಕಾರವು ಇದೇ ರೀತಿಯ ನೀತಿಯೊಂದಿಗೆ ಮುಂದುವರಿಯುವ ಬದ್ಧತೆಯನ್ನು ತೋರಿಸಿದೆ.
2. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯು ಒಟ್ಟಾರೆ ತೆರಿಗೆ ದರಗಳನ್ನು ಕಡಿತ ಮಾಡಿದೆ ಮತ್ತು ಆದಾಯ ಸಂಗ್ರಹವನ್ನು ಹೆಚ್ಚಿಸಿದೆ, ಅರದಲ್ಲೂ ವಿಶೇಷವಾಗಿ ರಾಜ್ಯಗಳಿಗೆ ತೆರಿಗೆ ದರ ಕಡಿಮೆಯಾಗಿದೆ. ಮೂರು ವರ್ಷಗಳಲ್ಲಿ ಎಲ್ಲ ರಾಜ್ಯಗಳ ಆದಾಯ ಸಂಗ್ರಹವು ಶೇ.50ರಷ್ಟು ಹೆಚ್ಚಾಗಿದೆ. ಎಲ್ಲಾ ಸಂಬಂಧಪಟ್ಟವರೊಂದಿಗೂ ಮಾತುಕತೆಯನ್ನು ನಡೆಸುವುದರ ಮೂಲಕ GST ಪ್ರಕ್ರಿಯೆಯ ಸರಳೀಕರಣ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆಯನ್ನು ನೀಡಲಾಗಿದೆ.
3. ಬಡವರ ಮತ್ತು ರೈತರಿಗೆ ಸಾಮಾಜಿಕ ಭದ್ರತೆ ವಿಸ್ತರಣೆ, ಇದರೊಂದಿಗೆ ಬಿಜೆಪಿಯು ದೇಶದಲ್ಲಿ ಬಂಡವಾಳ ಹೂಡಿಕೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. 2024 ರ ಹೊತ್ತಿಗೆ ಭಾರತವು ಮೂಲಭೂತ ಸೌಕರ್ಯದಲ್ಲಿ 100 ಲಕ್ಷ ಕೋಟಿ ರೂ.ಗಳಷ್ಟು ಹೂಡಿಕೆಯನ್ನು ಮಾಡಲಿದೆ. ಇದು ಕೇವಲ ಮೂಲಸೌಕರ್ಯ ಹೂಡಿಕೆಗೆ ಸಹಾಯ ಮಾಡುವುದು ಮಾತ್ರವಲ್ಲ, ವಿಸ್ತಾರವಾದ ಆರ್ಥಿಕತೆಯಲ್ಲಿ ಬಂಡವಾಳ ಹೂಡಿಕೆಗೆ ಸಹಾಯ ಮಾಡಲಿದೆ. ಹೀಗಾಗಿ, ಹೊಸ ಭಾರತವನ್ನು ಹೂಡಿಕೆ ಚಾಲಿತ ಬೆಳವಣಿಗೆಯ ಆಧಾರದ ಮೇಲೆ ನಿರ್ಮಿಸಲಾಗುತ್ತದೆ.
4. ಭಾರತವನ್ನು ಜ್ಞಾನ ಆಧಾರಿತ, ಕೌಶಲ್ಯದ ಮತ್ತು ತಂತ್ರಜ್ಞಾನದ ಚಾಲಿತ ಸಮಾಜವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ, ‘ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಸರ್ಕಾರ ಪ್ರಾರಂಭಿಸಿದೆ. ವೇಗದ ಮತ್ತು ಅಂತರ್ಗತ ಬೆಳವಣಿಗೆಯನ್ನು ತರಲು, ಸುಲಲಿತ ವ್ಯಾಪಾರವನ್ನು ಸುಧಾರಣೆ ಮಾಡುವ ಉದ್ದೇಶದಿಂದ ಅನಿಯಂತ್ರಣ ಮತ್ತು ಪರವಾನಗಿ ರದ್ದು ಮುಂತಾದ ವಿಷಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಸುಧಾರಣೆಗಳನ್ನು ಮಾಡಲಾಗಿದೆ. ಶೇ.90ಕ್ಕಿಂತ ಹೆಚ್ಚು FDI ಅನುಮೋದನೆಗಳು ಈಗ ಸ್ವಯಂಚಾಲಿತ ಮಾರ್ಗದಲ್ಲಿವೆ. ಕಳೆದ ಐದು ವರ್ಷಗಳಲ್ಲಿ FDI ಶೇ.50ರಷ್ಟು ಹೆಚ್ಚಾಗಿದೆ.
5. ಕಾನೂನಿನ ಅಂಗೀಕಾರವನ್ನು ಉತ್ತೇಜಿಸಲು ಮತ್ತು ಸುಲಲಿತ ವ್ಯಾಪಾರ ಮಾಡುವುದಕ್ಕಾಗಿ, ಬಿಜೆಪಿಯು ಕಂಪೆನೀಸ್ ಕಾಯ್ದೆಯನ್ನು ತಿದ್ದುಪಡಿ ಮಾಡಲಿದೆ. ತಾಂತ್ರಿಕ ಮತ್ತು ಕಾರ್ಯವಿಧಾನದ ಡೀಫಾಲ್ಟ್ಗಳಿಗೆ ನಾಗರಿಕ ಹೊಣೆಗಾರಿಕೆಯನ್ನು ವಿಧಿಸಲು ತಿದ್ದುಪಡಿ ಮಾಡಲಾಗುತ್ತದೆ. ಇದರಿಂದ ನ್ಯಾಯಾಲಯಗಳಿಂದ ಹೆಚ್ಚಿನ ಪ್ರಕರಣಗಳು ಹೊರಹೋಗುತ್ತದೆ. MSME ಸೆಕ್ಟರ್ಗಳನ್ನು ಉತ್ತೇಜಿಸುವ ಸಲುವಾಗಿ ಉತ್ಪಾದನಾ ಮತ್ತು ಸೇವೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಹೊಸ ಕೈಗಾರಿಕಾ ನೀತಿಗಳನ್ನು ತರಲಾಗುತ್ತದೆ.
6. ಎಂಎಸ್ಎಂಇ ವಲಯದಲ್ಲಿ ತಂತ್ರಜ್ಞಾನದ ಲಭ್ಯತೆ ಮತ್ತು ಅಪ್ಗ್ರೇಡೇಶನ್ ಪ್ರಮುಖ ಅಂಶಗಳಾಗಿವೆ. ಮೋದಿ ನೇತೃತ್ವದ ಸರ್ಕಾರವು ‘ತಂತ್ರಜ್ಞಾನ ಕೇಂದ್ರಗಳನ್ನು’ ವಿಸ್ತರಿಸುವಲ್ಲಿ ಮಹತ್ತರ ಹೆಜ್ಜೆಯನ್ನು ಇಟ್ಟಿದೆ ಮತ್ತು 2024 ರ ವೇಳೆಗೆ ದೇಶದಾದ್ಯಂತ 150 ಕ್ಕಿಂತಲೂ ಹೆಚ್ಚು ಇಂತಹ ಕೇಂದ್ರಗಳನ್ನು ರಚಿಸುವ ಗುರಿಯನ್ನು ಹೊಂದಿದೆ. “ಈ ತಂತ್ರಜ್ಞಾನ ಕೇಂದ್ರಗಳು MSME ಗಳ ಕೌಶಲ್ಯ ಮತ್ತು ಮೂಲಮಾದರಿಗಳನ್ನು ಮಾನಿಟರಿಂಗ್ ಮಾಡಲು ಸಹಾಯ ಮಾಡುತ್ತವೆ. ಇವುಗಳು MSME ಗಳನ್ನು ಕೃತಕ ಬುದ್ಧಿಮತ್ತೆ, ರೋಬಾಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ವರ್ಚುವಲ್ ರಿಯಾಲಿಟಿ, ಬ್ಲಾಕ್ ಚೈನ್ ತಂತ್ರಜ್ಞಾನ ಮತ್ತು ಝೀರೋ ಡಿಫೆಕ್ಟ್ ಝೀರೊ ಎಫೆಕ್ಟ್ಗೆ ತೆರೆಯುತ್ತದೆ” ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
7. ಯುವಕರಲ್ಲಿ ಉದ್ಯಮಶೀಲತೆಯ ಉತ್ಸಾಹವನ್ನು ಪ್ರೋತ್ಸಾಹಿಸಲು, ಉದ್ಯಮಿಗಳಿಗೆ ರೂ. 50 ಲಕ್ಷದವರೆಗೆ ಜಾಮೀನು ರಹಿತ ಸಾಲವನ್ನು ಒದಗಿಸಲು ಪಕ್ಷವು ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಲಿದೆ. ಸಾಲದ ಶೇ. 50ರಷ್ಟು ಪ್ರಮಾಣ ಮಹಿಳಾ ಉದ್ಯಮಿಗಳಿಗೆ ಮತ್ತು ಶೇ. 25% ಸಾಲದ ಮೊತ್ತವನ್ನು ಪುರುಷರಿಗೆ ಇದು ಖಾತರಿಪಡಿಸುತ್ತದೆ.
8. ಮುಂಬರುವ ಅವಧಿಯಲ್ಲೂ, ರೂ. 20,000 ಕೋಟಿಗಳ “ಸೀಡ್ ಸ್ಟಾರ್ಟ್ ಆಫ್ ಫಂಡ್” ಅನ್ನು ರಚನೆ ಮಾಡುವ ಮೂಲಕ ಸ್ಟಾರ್ಟ್-ಅಪ್ಗಳನ್ನು ಪ್ರೋತ್ಸಾಹಿಸುವುದನ್ನು ಮತ್ತು ಪ್ರಚುರಪಡಿಸುವುದನ್ನು ಪಕ್ಷ ಮುಂದುವರೆಸಲಿದೆ.
9. ಪ್ರಾಮಾಣಿಕ ತೆರಿಗೆದಾರರು ಮತ್ತು ದೇಶದ ಬಡವರಿಗೆ ಪ್ರಯೋಜನವಾಗಿಸುವ ಸಲುವಾಗಿ ಬೇನಾಮಿ ಆಸ್ತಿಗಳನ್ನು ಮತ್ತು ಅಕ್ರಮ ವಿದೇಶಿ ಬ್ಯಾಂಕ್ ಖಾತೆಗಳನ್ನು ನಿರ್ಮೂಲನೆ ಮಾಡುವ ಕಾರ್ಯವನ್ನು ಮುಂದುವರೆಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಮರಳಿ ತರಲು ಕ್ರಮ ಮತ್ತು ಅವರ ಅಪರಾಧಗಳಿಗೆ ಶಿಕ್ಷೆ ನೀಡುವ ಉದ್ದೇಶವನ್ನು ಹೊಂದಲಾಗಿದೆ.
10. ಕ್ಲಿಯರೆನ್ಸ್ ಪ್ರಕ್ರಿಯೆಗಳ ಮೂಲಕ ಅಂತಾರಾಷ್ಟ್ರೀಯ ಸರಕುಗಳ ತ್ವರಿತ ಕಸ್ಟಮ್ಸ್ ಕ್ಲಿಯರೆನ್ಸ್ ಅನ್ನು ಖಚಿತಪಡಿಸುವುದು, ಸ್ವಯಂ ಘೋಷಣೆಯನ್ನು ಪರಿಚಯಿಸುವುದು ಮತ್ತು ಹೊಸ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ನೂತನ ಸರ್ಕಾರದ ಗುರಿಯಾಗಲಿದೆ. “ನಾವು ರಫ್ತುದಾರರಿಗೆ ಮತ್ತು ರಫ್ತು ಸಂಸ್ಥೆಗಳಿಗೆ ಸಾಕಷ್ಟು ಆರ್ಥಿಕ ಮತ್ತು ಸಾಂಸ್ಥಿಕ ಬೆಂಬಲವನ್ನು ನೀಡಿ, ಅವರ ಸಾಮರ್ಥ್ಯ ವೃದ್ಧಿ ಮಾಡಲಿದ್ದೇವೆ ಮತ್ತು ತೊಡಕುಗಳನ್ನು ನಿವಾರಿಸಲು ಸರಿಯಾದ ಮಾಹಿತಿಗಳನ್ನು ಒದಗಿಸಲಿದ್ದೇವೆ” ಎಂದು ಪ್ರಕಟನೆಯಲ್ಲೂ ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.