ಭಾರತೀಯ ರೈಲ್ವೆಯು ಮತ್ತೊಂದು ಮಹತ್ವವಾದ ಸಾಧನೆಯನ್ನು ಮಾಡಿದೆ. 2018- 19 ರ ಸಾಲಿನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ರೈಲ್ವೆ ಅಪಘಾತ ಸಂಭವಿಸಿದ್ದು, ಇದು ರೈಲ್ವೇ ಸುರಕ್ಷತೆಯ ವಿಷಯದಲ್ಲಿ ಅತ್ಯುತ್ತಮ ವರ್ಷವಾಗಿ ಹೊರಹೊಮ್ಮಿದೆ.
ರೈಲ್ವೇ ಸುರಕ್ಷತಾ ಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಆ ಮೂಲಕ ರೈಲ್ವೆ ಅಪಘಾತಗಳನ್ನು ಗಣನೀಯವಾಗಿ ತಗ್ಗಿಸಿದ ಶ್ರೇಯಸ್ಸು ಸಚಿವ ಪಿಯೂಷ್ ಗೋಯಲ್ ನೇತೃತ್ವದ ರೈಲ್ವೆ ಸಚಿವಾಲಯಕ್ಕೆ ಸಲ್ಲಬೇಕು. ಸುರಕ್ಷತಾ ವಲಯದಲ್ಲಿ ರೈಲ್ವೆ ಸಚಿವಾಲಯ ಈ ವರ್ಷ ಅತ್ಯುನ್ನತವಾದ ಸಾಧನೆಯನ್ನೇ ಮಾಡಿದೆ. ಭಾರತೀಯ ರೈಲ್ವೇಯ ಅಂಕಿ ಅಂಶಗಳ ಪ್ರಕಾರ, 2018-19ರ ಸಾಲಿನಲ್ಲಿ ಇತಿಹಾಸದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ರೈಲ್ವೆ ಅಪಘಾತಗಳು ಸಂಭವಿಸಿದೆ. 1980 -81 ರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದರೆ 1130 ಅಪಘಾತಗಳು ಸಂಭವಿಸಿದ್ದವು, ಈ ಪ್ರಮಾಣವು 2018 -19ರ ವೇಳೆಗೆ 59ಕ್ಕೆ ಇಳಿಮುಖವಾಗಿದೆ, ಅಂದರೆ ಶೇ. 94.7 ರಸ್ತೆ ಅಪಘಾತ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ, ಈ ವರ್ಷವನ್ನು ರೈಲ್ವೆ ಸಂಚಾರ ವಿಷಯದಲ್ಲಿ ಅತ್ಯಂತ ಸುರಕ್ಷತಾ ವರ್ಷ ಎಂದು ಪರಿಗಣಿಸಲಾಗಿದೆ.
ಭಾರತೀಯ ರೈಲ್ವೆ ನಟೋರಿಯಸ್ ಅಪಘಾತ ಇತಿಹಾಸವನ್ನು ಹೊಂದಿದೆ. ರೈಲ್ವೆ ಅಪಘಾತಕ್ಕೆ ಒಳಗಾಗಿ ನಮ್ಮ ದೇಶದಲ್ಲಿ ಅಪಾರ ಸಾವು-ನೋವುಗಳು ಸಂಭವಿಸಿದೆ. ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇದ್ದುದೇ ಇದಕ್ಕೆ ಕಾರಣ. ರೈಲ್ವೆ ಅಂಕಿ ಅಂಶಗಳ ಪ್ರಕಾರ, 1981- 82ರ ಸಾಲಿನಲ್ಲಿ ದೇಶದಲ್ಲಿ ರೈಲು ಅಪಘಾತಕ್ಕೆ ಒಳಗಾಗಿ 158 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಸಂಖ್ಯೆ 2018-19ರ ಸಾಲಿಗೆ ಇಳಿಮುಖವಾಗಿದೆ. ಅಂದರೆ ಸಾವಿನ ಪ್ರಮಾಣ ಶೇ. 94 ರಷ್ಟು ಕಡಿಮೆಯಾಗಿದೆ. ರೈಲು ಅಪಘಾತದಲ್ಲಿ ಗಾಯಾಳುಗಳಾದವರ ಸಂಖ್ಯೆಯೂ 1981- 82ರ ಸಾಲಿನಲ್ಲಿ 1144 ಇತ್ತು. ಇದು 2018-19ರ ಸಾಲಿಗೆ 108ಕ್ಕೆ ಇಳಿಕೆ ಆಗಿದೆ. ಅಂದರೆ ಗಾಯಾಳುಗಳ ಪ್ರಮಾಣ ಶೇಕಡ 90 ರಷ್ಟು ಕಡಿಮೆಯಾಗಿದೆ. ಜಾಗತಿಕವಾಗಿ ಪರಿಗಣಿಸಲ್ಪಟ್ಟ ಸುರಕ್ಷತಾ ಕ್ರಮಗಳ ಅನ್ವಯ 2018-19 ರ ಸಾಲಿನಲ್ಲಿ ಪ್ರತಿ ಮಿಲಿಯನ್ ಟ್ರೈನ್ ಕಿಲೋಮೀಟರ್ಸ್ಗಳ ಅಪಘಾತ ಪ್ರಮಾಣದಲ್ಲಿ ಮಹತ್ವದ ಸುಧಾರಣೆ ಕಂಡಿದೆ. ಈ ವರ್ಷ ಪ್ರತಿ ಮಿಲಿಯನ್ ಟ್ರೈನ್ ಕಿಲೋಮೀಟರ್ಗಳಿಗೆ ಸಂಭವಿಸಿದ ಅಪಘಾತಗಳ ಪ್ರಮಾಣ 0.06, ಇದು ಸಾರ್ವಕಾಲಿಕ ಕುಸಿತವಾಗಿದೆ. 1981-82 ರ ಸಾಲಿನಲ್ಲಿ ಈ ಪ್ರಮಾಣ 2.20ರಷ್ಟು ಇತ್ತು.
2017-18 ರ ವರ್ಷವೂ ರೈಲು ಅಪಘಾತಗಳ ವಿಷಯದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ. ಆದರೆ ಈಗಿನ ವರ್ಷ ಭಾರತೀಯ ರೈಲ್ವೆ ಮತ್ತು ಕೇಂದ್ರ ಸರ್ಕಾರದ ಪ್ರಯತ್ನದ ಫಲವಾಗಿ ಈ ಸಾಧನೆ ದುಪ್ಪಟ್ಟು ಫಲವನ್ನು ನೀಡಿದೆ. ಸುರಕ್ಷತಾ ಸುಧಾರಣೆಗಳಲ್ಲಿ ಸಕ್ರಿಯ ಪ್ರಯತ್ನದಿಂದಾಗಿ ಭವಿಷ್ಯದಲ್ಲಿ ಭಾರತೀಯ ರೈಲ್ವೆಯು ಅತ್ಯಂತ ಸುರಕ್ಷಿತ ಎಂಬ ಸೂಚನೆ ಸಿಗುತ್ತಿದೆ. 2017-18ಕ್ಕೆ ಹೋಲಿಸಿದರೆ ಸುರಕ್ಷತೆಯ ವಿಷಯದಲ್ಲಿ 2018-19 ಅತ್ಯುತ್ತಮ ವರ್ಷವಾಗಿದೆ. 2017 -18 ರ ಸಾಲಿನಲ್ಲಿ 79 ರೈಲು ಅಪಘಾತಗಳು ಸಂಭವಿಸಿದ್ದವು, ಅದು 2018-19 ರ ಸಾಲಿಗೆ 59ಕ್ಕೆ ಇಳಿಕೆಯಾಗಿದೆ. 2017-18 ರ ಸಾಲಿನಲ್ಲಿ ರೈಲು ಅಪಘಾತದಲ್ಲಿ 197 ಮಂದಿ ಗಾಯಗೊಂಡಿದ್ದರು. ಆದರೆ ಈ ಬಾರಿ ಸಂಖ್ಯೆ 108ಕ್ಕೆ ಇಳಿಕೆಯಾಗಿದೆ. ಪ್ರತಿ ಕಿಲೋಮೀಟರ್ಗೆ ಸಂಭವಿಸುವ ಅಪಘಾತದ ಪ್ರಮಾಣವು 0.09 ರಿಂದ 0.06ಕ್ಕೆ ಇಳಿಕೆಯಾಗಿದೆ.
ಭಾರತೀಯ ರೈಲ್ವೆಯು ಪ್ರಯೋಜನಕಾರಿ ಎಂಬುದಕ್ಕಿಂತ ಹೆಚ್ಚಾಗಿ ಅಪಾಯಕಾರಿ ಎಂದು ಪರಿಗಣಿಸಲ್ಪಡುತ್ತಿದ್ದ ಕಾಲವೊಂದಿತ್ತು. ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭು, ಇಂದಿನ ಪಿಯುಶ್ ಗೋಯಲ್ ಅವರ ನಾಯಕತ್ವದ ಅಡಿಯಲ್ಲಿ ರೈಲ್ವೆಯು ಶ್ರೇಷ್ಠಮಟ್ಟದ ಬದಲಾವಣೆಯನ್ನು ಕಾಣುತ್ತಿದೆ. ಅಪಾಯಕಾರಿ ಎಂಬ ಹಣೆಪಟ್ಟಿಯನ್ನು ಕಳಚುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.