ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ, ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಮತ್ತು ರಾಜ್ಯವನ್ನು ಮುನ್ನಡೆಸಲು ಸರ್ಕಾರವನ್ನು ರಚಿಸುವ ಸಲುವಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿರುವ ಜವಾಬ್ದಾರಿಯಾಗಿರುತ್ತದೆ. ದುರಾದೃಷ್ಟವಶಾತ್, ಸ್ವಾತಂತ್ರ್ಯ ಸಿಕ್ಕು 7 ದಶಕಗಳು ಸಂದರೂ ಮತ್ತು ಇದುವರೆಗೆ ಅಪಾರ ಸಂಖ್ಯೆಯ ಚುನಾವಣೆಗಳು ನಡೆದರೂ, ಚುನಾವಣಾ ಆಯೋಗ, ಸರ್ಕಾರಗಳು, ಸೆಲೆಬ್ರಿಟಿಗಳು ನಾನಾ ರೀತಿಯಲ್ಲಿ ಮನವಿಯನ್ನು ಮಾಡಿಕೊಂಡರೂ ಹಲವಾರು ಮಂದಿಗೆ ಮತದಾನ ಕಡಿಮೆ ಆದ್ಯತೆಯ ವಿಷಯವಾಗಿದೆ. ಚುನಾವಣೆಗಾಗಿ ತೆರಿಗೆದಾರರ ಅಪಾರ ಪ್ರಮಾಣದ ಹಣ ಪೋಲಾಗುತ್ತದೆ, ಸರ್ಕಾರಿ ಅಧಿಕಾರಿಗಳು ಅವಿರತ ಪ್ರಯತ್ನಪಡುತ್ತಾರೆ, ಮತದಾನ ಪ್ರತಿಯೊಬ್ಬರ ಜೀವನದ ಮೇಲೆ ಪ್ರಭಾವ ಬೀರಿದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸರ್ಕಾರವನ್ನು ಆರಿಸುವುದು ಅತೀ ಮಹತ್ವದ ಪ್ರಜಾಪ್ರಭುತ್ವದ ಚಟುವಟಿಕೆಯಾಗಿದೆ ಮತ್ತು ಮತದಾನ ಮಾಡಲು ಜನರ ನಿರುತ್ಸಾಹ ದೇಶಕ್ಕೆ ಅತ್ಯಂತ ದಿಗಿಲು ಹುಟ್ಟಿಸುವ ಸಂಗತಿ.
ಆಡಳಿತದ ಸಂಕೀರ್ಣತೆ, ಹೆಚ್ಚಿನ ಮಹತ್ವಾಕಾಂಕ್ಷೆ-ಜನಸಾಮಾನ್ಯರ ಸೂಚ್ಯಂಕ, ತಾಂತ್ರಿಕ ಪ್ರಗತಿಗಳು, ತೀವ್ರ ಅಂತರರಾಷ್ಟ್ರೀಯ ಹಿನ್ನಡೆ ಮತ್ತು ಒತ್ತಡಗಳು, ಒಪ್ಪಂದಗಳು ಮತ್ತು ಒಪ್ಪಂದಗಳಿಗೆ ಸಂಬಂಧಿಸಿದಂತೆ ರಾಷ್ಟ್ರಗಳ ರಾಜತಾಂತ್ರಿಕ ಸ್ಥಾನಮಾನ, ಸಾಮಾಜಿಕ ಮೌಲ್ಯಗಳ ರೂಪಾಂತರ, ಆಗಾಗ ಸಂಭವಿಸುವ ನೈಸರ್ಗಿಕ ವಿಕೋಪಗಳು, ಕಡಿಮೆ ತೀವ್ರತೆಯ ಯುದ್ಧಗಳು ಇತ್ಯಾದಿಗಳು ಮತದಾನ ಮಾಡುವುದನ್ನು ಕೇವಲ ಅತ್ಯಗತ್ಯವನ್ನಾಗಿಸಿಲ್ಲ, ಅನಿವಾರ್ಯವಾಗಿಸಿದೆ. ಪ್ರತಿ ಮತದಾರರೂ ಎಲ್ಲಾ ರೀತಿಯ ಪ್ರಕ್ಷುಬ್ಧತೆಯ ಮಧ್ಯೆ ದೇಶವನ್ನು ಮುನ್ನಡೆಸಲು ಜವಾಬ್ದಾರಿಯುತ, ಮತ್ತು ವಿಶ್ವಾಸಾರ್ಹ ಸರ್ಕಾರವನ್ನು ಆಯ್ಕೆ ಮಾಡಲು ತನ್ನ ಮತದಾನದ ಹಕ್ಕನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ದೇಶದ ಒಳಗೆ ಮತ್ತು ಹೊರಗಿನ ಈ ಬೆಳವಣಿಗೆಗಳ ದೃಷ್ಟಿಯಿಂದ ಚುನಾವಣೆಗೆ ಯಾವುದೇ ಉದಾಸೀನತೆ ಅಥವಾ ನಿರ್ಲಕ್ಷ್ಯ ರಾಷ್ಟ್ರ ವಿರೋಧಿ ಧೋರಣೆಯಾಗುತ್ತದೆ.
ಕಾನೂನಿನ ಪ್ರಕಾರ ಮತಗಳನ್ನು ಕಡ್ಡಾಯಗೊಳಿಸುವ ಕಲ್ಪನೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಕಲ್ಪನೆಯಾಗಿದೆ. ನಿಖರ ವೋಟರ್ ಐಡಿಯನ್ನು ಹೊಂದಿರುವ ಎಲ್ಲ ಅರ್ಹ ಮತದಾರರು ತಮ್ಮ ಮತಗಳನ್ನು ಕಡ್ಡಾಯವಾಗಿ ಚಲಾಯಿಸಬೇಕು. ಯಾವುದೇ ಅನಿವಾರ್ಯ ಕಾರಣಕ್ಕಾಗಿ ಮತಗಟ್ಟೆಗೆ ಭೇಟಿ ನೀಡಲು ಸಾಧ್ಯವಾಗದವರಿಗೆ, ಡಿಜಿಟಲ್ ರೂಪದಲ್ಲಿ ಮತ ಚಲಾಯಿಸಲು ಅವಕಾಶ ನೀಡಬೇಕು. ಹೌದು, ಸಾಕಷ್ಟು ಸಂಖ್ಯೆಯ ಮತದಾರರು ತಮ್ಮ ಗೊತ್ತುಪಡಿಸಿದ ವಿಳಾಸಗಳಲ್ಲಿ ಗೊತ್ತುಪಡಿಸಿದ ದಿನ ಮತದಾನ ಮಾಡಲು ಲಭ್ಯವಾಗದಿರಬಹುದು ಎಂಬ ನಿಟ್ಟಿನಲ್ಲಿ ಡಿಜಿಟಲ್ ಮತದಾನಕ್ಕೆ ನಿಬಂಧನೆಗಳನ್ನು ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯು ಪ್ರಚಾರವನ್ನು ನಡೆಸಿದೆ ಮತ್ತು ಇದಕ್ಕೆ ಪ್ರತಿಕ್ರಿಯೆಯು ಸಾಕಷ್ಟು ಸಕಾರಾತ್ಮಕವಾಗಿ ಕಂಡುಬಂದಿದೆ. ತಮ್ಮ ಮತಗಳನ್ನು ಚಲಾಯಿಸಲು ನಿರಾಕರಿಸುವ ಅಥವಾ ವಿಫಲವಾದವರ ಮೇಲೆ ದಂಡ ವಿಧಿಸಬೇಕು ಮತ್ತು ನೇರ ಲಾಭದ ವರ್ಗಾವಣೆ ಪ್ರಯೋಜನದಿಂದ ಅವರನ್ನು ಹೊರಗಿಡಬೇಕು, ಅವರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗಳಿಂದ ಸ್ವಯಂಚಾಲಿತವಾಗಿ ಹಣವನ್ನು ಕಡಿತಗೊಳಿಸುವಂತಹ ನಿಯಮಗಳನ್ನು ಜಾರಿಗೆ ತರಬೇಕು.
ಕಡ್ಡಾಯ ಮತದಾನದ ಐಡಿಯಾವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ನಂತರ, ಶೇ. 50 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮತಗಳನ್ನು ಪಡೆದು ಅಭ್ಯರ್ಥಿಗಳು ಸಂಸತ್ತಿಗೆ ಪ್ರವೇಶ ಪಡೆಯುವ ಸಮಸ್ಯೆಯನ್ನು ಹೋಗಲಾಡಿಸಬೇಕು. ಈ ಸಮಸ್ಯೆಯ ಮುಖ್ಯ ಕಾರಣ ಬಹು ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದು. ಜೆ. ಧರತಿಪಕಡ ಎಂಬ ವ್ಯಕ್ತಿ ಪ್ರತಿವರ್ಷ ರಾಷ್ಟ್ರಪತಿ ಚುನಾವಣೆಗೆ ನಿಲ್ಲುತ್ತಿದ್ದುದ್ದನ್ನು ಇತಿಹಾಸ ನೋಡಿದೆ. ರಾಷ್ಟ್ರಪತಿ ಹುದ್ದೆಗೆ ಅರ್ಹ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದರೂ, ಈ ವ್ಯಕ್ತಿಯ ಸ್ಪರ್ಧೆಯಿಂದಾಗಿ ಚುನಾವಣೆಯನ್ನು ನಡೆಸುವ ಅನಿವಾರ್ಯತೆ ಎದುರಾಗುತ್ತಿತ್ತು. ಇದರಿಂದ ಸರ್ಕಾರ ರಾಷ್ಟ್ರಪತಿ ಚುನಾವಣೆ ನೀತಿ ಮತ್ತು ನಿಯಮವನ್ನು ರೂಪಿಸುವುದನ್ನು ಅನಿವಾರ್ಯ ಮಾಡಿತು. ಪ್ರಾದೇಶಿಕ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡಿದ ಮತ್ತು ಸ್ಥಳಿಯ ನಾಯಕರಿಗೆ ಸ್ಥಾನಮಾನ ನೀಡದ ಇಂದಿರಾ ಗಾಂಧಿ ಅವರ ಧೋರಣೆಯಿಂದಾಗಿ ಅಪಾರ ಸಂಖ್ಯೆ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡವು. ಆಂಧ್ರದ ಟಿ.ಅಂಜಯ್ಯ, ಯುಪಿಯ ಎಚ್ ಎನ್ ಬಹುಗುಣ್ ಇದಕ್ಕೆ ಉದಾಹರಣೆ. ಅಂಜಯ್ಯ ಅವರಿಗಾದ ಅವಮಾನ ಎನ್ ಟಿ ರಾಮ ರಾವ್ ಅವರನ್ನು ತೆಲುಗು ದೇಶಂ ಪಕ್ಷ ಸ್ಥಾಪನೆ ಮಾಡುವಂತೆ ಮಾಡಿತು. ಕಾಂಗ್ರೆಸ್ ಪಕ್ಷ ಒಡೆದು ಆಳುವ ನೀತಿಯನ್ನು ಅನುಸರಿಸಿದ ಕಾರಣ, ತೆಲುಗು ಅಸ್ಮಿತೆಯನ್ನು ಉಳಿಸಲು ಟಿಡಿಪಿ ಪಕ್ಷ ಕಟ್ಟಲಾಯಿತು. ಪ್ರಧಾನಿ ಕಛೇರಿಯ ಹೊರಗಡೆ ಮನವಿ ಪತ್ರ ಹಿಡಿದು ಗಂಟೆಗಟ್ಟಲೆ ಕ್ಯೂ ನಿಂತು ಅವಮಾನ ಮಾಡಿಸಿಕೊಂಡವರು ತಮ್ಮ ಪ್ರಾದೇಶಿಕ ಹಿತಾಸಕ್ತಿಗಾಗಿ ಪಕ್ಷಗಳನ್ನು ಕಟ್ಟಬೇಕಾಯಿತು. ಆದರೆ ಬಿಜೆಪಿ ಪ್ರಾದೇಶಿಕ ಹಿತಾಸಕ್ತಿಗಳನ್ನು ಈಡೇರಿಸುವಲ್ಲಿ ಸರ್ವ ಪ್ರಯತ್ನಗಳನ್ನು ಮಾಡಿದೆ, ರಾಜ್ಯಗಳ ಸ್ವಾಭಿಮಾನವನ್ನು ಉಳಿಸಿದೆ, ಆದರೆ ಕೆಲವು ಕೀಳು ಬುದ್ಧಿಯ ಪಕ್ಷಗಳು ಈಗ ತಮ್ಮ ಸ್ವ-ಹಿತಾಸಕ್ತಿಯನ್ನು ಉಳಿಸಿಕೊಳ್ಳಲು ವಾಮ ಮಾರ್ಗದ ರಾಜಕಾರಣವನ್ನು ಮಾಡುತ್ತಿವೆ. ಆದರೆ ಪ್ರಬುದ್ಧ ಪ್ರಜಾಪ್ರಭುತ್ವದ ಮತದಾರರು ಎರಡು ಮತ್ತು ಮೂರು ರಾಷ್ಟ್ರೀಯತೆಯ ನಿಲುವುಳ್ಳ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕು.
ನಾವು ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ NOTA. ನಕ್ಸಲ್ ವಾದದಂತೆಯೇ, ಚುನಾವಣೆಗಳನ್ನು ನಾಶಮಾಡುವ ಮತ್ತು ಅರಾಜಕತೆಯನ್ನು ತರುವ ಏಕೈಕ ಉದ್ದೇಶದಿಂದ ನೋಟಾವನ್ನು ತರಲಾಗಿದೆ ಎಂದು ಡಾ. ಸುಬ್ರಮಣ್ಯಂ ಸ್ವಾಮಿ ಅವರು ಹೇಳುತ್ತಾರೆ. ಆರ್ ಎಸ್ ಎಸ್ ಮುಖ್ಯಸ್ಥರು ಕೂಡಾ ವಿಗ್ಯಾನ್ ಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ ತೀವ್ರವಾಗಿ ನೋಟಾವನ್ನು ಖಂಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಗಳಲ್ಲಿ, ನೋಟಾದ ವಿರುದ್ಧ ಮನೆ ಮನೆ ಪ್ರಚಾರವನ್ನು ನಡೆಸಲು ಆರ್ ಎಸ್ ಎಸ್ ನಿರ್ಧರಿಸಿದೆ. ನಮ್ಮ ಚುನಾವಣಾ ಪ್ರಕ್ರಿಯೆಯನ್ನು ನೋಟಾ ದುರ್ಬಲಗೊಳಿಸುವ ಲಕ್ಷಣ ಗೋಚರಿಸುತ್ತಿದೆ, ಅದು ಕ್ರಿಮಿನಲ್ಗಳನ್ನು ಸಹ ಸಂಸತ್ತಿಗೆ ಪ್ರವೇಶಿಸಲು ಅನುಮತಿಸುತ್ತದೆ ಮತ್ತು ಕಾನೂನಿನ ಮೂಲಕ ಅದನ್ನು ರದ್ದುಗೊಳಿಸಬೇಕು.
ದೇಶದ ಕಡ್ಡಾಯ ಮತದಾನ ಸಿದ್ಧಾಂತಕ್ಕೆ ಹೊಸದೇನಲ್ಲ. ಗುಜರಾತ್ ಲೋಕಲ್ ಅಥಾರಿಟೀಸ್ ಲಾ (ತಿದ್ದುಪಡಿ) ಕಾಯ್ದೆ, 2009 ರಾಜ್ಯದಲ್ಲಿ ಪುರಸಭೆ ಮತ್ತು ಪಂಚಾಯತ್ ಮಟ್ಟದಲ್ಲಿ ‘ಆಬ್ಲಿಕೇಷನ್ ಟು ವೋಟ್’ ಅನ್ನು ಪರಿಚಯಿಸಿತು. ಮತ ಚಲಾಯಿಸಲು ವೈಫಲ್ಯವಾದ ಆಧಾರದ ಮೇಲೆ ಮತದಾರರಿಗೆ ನೋಟಿಸ್ ನೀಡಲು ಆ್ಯಕ್ಟ್ ಚುನಾವಣಾಧಿಕಾರಿಗೆ ಅಧಿಕಾರ ನೀಡಿತು. ಅಂತಹ ಮತದಾರರು ಒಂದು ತಿಂಗಳ ಅವಧಿಯೊಳಗೆ ಮತ ಚಲಾಯಿಸಲು ವಿಫಲವಾದ ನಂಬಲರ್ಹವಾದ ಕಾರಣವನ್ನು ಸಲ್ಲಿಸಬೇಕು ಎಂದು ಸೂಚಿಸಲಾಯಿತು. ಅದು ಮತದಾರನನ್ನು “ಡಿಫಾಲ್ಟರ್” ಎಂದು ಘೋಷಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ಡಿಫಾಲ್ಟರ್-ವೋಟರ್ ಗೊತ್ತುಪಡಿಸಿದ ಅಧಿಕಾರಿಗೆ ಮೇಲ್ಮನವಿಯನ್ನು ಸಲ್ಲಿಸುವ ಅವಕಾಶವನ್ನು ಹೊಂದಿರುತ್ತಾರೆ ಮತ್ತು ಅಧಿಕಾರಿಯ ತೀರ್ಮಾನವು ಅಂತಿಮ ಮತ್ತು ಕಡ್ಡಾಯವಾಗಿರುತ್ತದೆ. ವ್ಯಕ್ತಿಗಳು ಅನಾರೋಗ್ಯದಿಂದ ಮತದಾನ ಮಾಡಲು ಅಸಮರ್ಥರಾಗಿದ್ದರೆ, ಮತದಾನದ ದಿನ ಗುಜರಾತಿನ ಹೊರಗಿದ್ದರೆ ವಿನಾಯಿತಿ ನೀಡುತ್ತಾರೆ. ಹಲವು ವಿದೇಶಗಳು ಅವರ ನಾಗರಿಕರಿಗೆ ಕಡ್ಡಾಯ ಮತದಾನವನ್ನು ಪರಿಚಯಿಸಿವೆ. ಆಸ್ಟ್ರೇಲಿಯಾ (ಕ್ವೀನ್ಸ್ ಲ್ಯಾಂಡಿನಲ್ಲಿ 1915 ರಲ್ಲಿ ಪ್ರಾರಂಭವಾಯಿತು), 1894 ರಲ್ಲಿ ಬೆಲ್ಜಿಯಂ, ಬ್ರೆಜಿಲ್, 1936 ರಲ್ಲಿ ಈಕ್ವೆಡಾರ್, ಲಿಚ್ಟೆನ್ಸ್ಟೀನ್, ಲಕ್ಸೆಂಬರ್ಗ್, ಉತ್ತರ ಕೊರಿಯ, 1965 ರಲ್ಲಿ ನೌರು, 1933 ರಲ್ಲಿ ಪೆರು, ಸಿಂಗಾಪುರ್, 1934ರಲ್ಲಿ ಉರುಗ್ವೆ, 1974ರಲ್ಲಿ ಸ್ವಿಜರ್ಲ್ಯಾಂಡ್ ಮತ್ತು ಸ್ಲೋವಾಕಿಯಾದಲ್ಲಿ ಕಡ್ಡಾಯ ಮತದಾನವನ್ನು ಪರಿಚಯಿಸಲಾಗಿದೆ.
ಜನರು ಕಾನೂನಿನ ಕಡ್ಡಾಯವಿಲ್ಲದಿದ್ದರೂ ಕಡ್ಡಾಯವಾಗಿ ಮತದಾನ ಮಾಡುತ್ತಾರೆಂದರೆ ಅದು ನಿಜಕ್ಕೂ ಗ್ರೇಟ್ ಎನಿಸುತ್ತದೆ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ತಡವಾಗಿಯಾದರೂ ನಾವು ಕಡ್ಡಾಯ ಮತದಾನ ನಿಯಮವನ್ನು ತರಲೇ ಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.