ಬೇರೆಲ್ಲ ಕ್ಷೇತ್ರಗಳಲ್ಲಿ 60 ದಾಟಿದ ಬಳಿಕ ನಿವೃತ್ತಿ ಎನ್ನುವುದಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ನಿವೃತ್ತಿಗೆ ವಯೋಮಿತಿಯೇ ಇಲ್ಲದಿರುವುದು ಸಂವಿಧಾನದ ದೊಡ್ಡ ಕೊರತೆ. ಭಾರತೀಯ ಸಂವಿಧಾನದ 84 (ಬಿ) ಪರಿಚ್ಛೇದದ ಅಡಿಯಲ್ಲಿ ಲೋಕಸಭಾ ಚುನಾವಣೆಗೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ ವಯೋಮಿತಿ 25 ವರ್ಷಗಳಾಗಿರಬೇಕು ಎಂದು ನಿಯಮವಿದೆ. ಆದರೆ ಸಂವಿಧಾನದ ಯಾವುದೇ ಪರಿಚ್ಛೇದವನ್ನು ತಡಕಾಡಿದರೂ ಲೋಕಸಭೆ, ರಾಜ್ಯಸಭೆ ಅಥವಾ ವಿಧಾನಸಭೆಯ ಸದಸ್ಯರಾಗಿರುವವರಿಗೆ ನಿವೃತ್ತಿಯ ವಯೋಮಿತಿಯನ್ನು ನಿಗದಿಪಡಿಸಿರುವುದು ಕಂಡುಬರುತ್ತಿಲ್ಲ. ವಯಸ್ಸಾದಂತೆ ರಾಜಕಾರಣಿಗಳು ಪ್ರಬುದ್ಧಕ್ಕೆ ಪಕ್ವತೆ ಬೆಳೆಸಿಕೊಳ್ಳುವುದರಿಂದ ಅವರು ತಾವಾಗಿಯೇ ರಾಜಕಾರಣಕ್ಕೆ ವಿದಾಯ ಹೇಳಿ ಕಿರಿಯರಿಗೆ ದಾರಿ ಮಾಡಿಕೊಡುವ ಸೌಜನ್ಯ ಮೆರೆಯುತ್ತಾರೆ ಎಂದು ಸಂವಿಧಾನ ಕರ್ತೃಗಳು ಭಾವಿಸಿದ್ದಿರಬಹುದು. ಹಾಗಾಗಿಯೇ ಅವರು ಲೋಕಸಭೆ ಸದಸ್ಯರಾಗಲು ಗರಿಷ್ಠ ವಯೋಮಿತಿಯನ್ನು ಸಂವಿಧಾನದಲ್ಲಿ ನಮೂದಿಸದೆ ಇದ್ದಿರಬಹುದು.
ಆದರೆ ಸಂವಿಧಾನ ಕರ್ತೃಗಳ ಈ ಸೌಜನ್ಯಶೀಲ ವರ್ತನೆಯನ್ನೇ ಕೆಲವು ರಾಜಕಾರಣಿಗಳು ಇಂದು ದುರುಪಯೋಗಪಡಿಸಿಕೊಂಡಿರುವುದು ಹಗಲಿನಷ್ಟು ನಿಚ್ಚಳ. ಕೆಲವರು ಮಾತ್ರ 75 ದಾಟಿದ ಬಳಿಕ ತಾವಾಗಿಯೇ ನಿವೃತ್ತರಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರಿಗೀಗ 91 ವರ್ಷ ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಸತತ 6 ಬಾರಿ ಆಯ್ಕೆಯಾಗಿ ದೇಶದ ಉಪ ಪ್ರಧಾನಿಯೂ ಆಗಿದ್ದರು. ಈ ಬಾರಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿಲ್ಲ. ‘ ವಯಸ್ಸಿನ ಕಾರಣದಿಂದಾಗಿ ತಾನು ಸ್ಪರ್ಧಿಸುತ್ತಿಲ್ಲ. ತನ್ನ ಪುತ್ರ ಅಥವಾ ಪುತ್ರಿಯೂ ನನ್ನ ಪರವಾಗಿ ಸ್ಪರ್ಧಿಸುತ್ತಿಲ್ಲ’ ಎಂದು ಅಡ್ವಾಣಿ ಘೋಷಿಸಿ ಇಡೀ ದೇಶಕ್ಕೆ ಎರಡು ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. ಒಂದು : ವಯಸ್ಸಾದ ಬಳಿಕ ರಾಜಕಾರಣಿಗಳು ಸಕ್ರಿಯ ರಾಜಕಾರಣದಿಂದ ತಾವಾಗಿಯೇ ಹಿಂದೆ ಸರಿಯಬೇಕು. ಎರಡು : ಕುಟುಂಬ ರಾಜಕಾರಣಕ್ಕೆ ಎಂದಿಗೂ ಅವಕಾಶ ನೀಡಬಾರದು. ಅಡ್ವಾಣಿಯವರಿಗೆ ನೀವು ಈ ಬಾರಿ ಸ್ಪರ್ಧಿಸುವುದು ಬೇಡ ಎಂದು ಪಕ್ಷದ ಪ್ರಮುಖರಾಗಲೀ ಪ್ರಧಾನಿ ಮೋದಿಯವರಾಗಲೀ ಸೂಚಿಸಿರಲಿಲ್ಲ. ಆಡ್ವಾಣಿ ಬದಲಿಗೆ ಅವರ ಪುತ್ರ ಅಥವಾ ಪುತ್ರಿ ಸ್ಪರ್ಧಿಸುವುದನ್ನು ಪಕ್ಷದಲ್ಲಿ ಯಾರೂ ಆಕ್ಷೇಪಿಸುತ್ತಿರಲಿಲ್ಲ ಎಂದಿದ್ದರೂ ಅಡ್ವಾಣಿ ಹಿರಿಯರಾಗಿ ಪಕ್ಷಕ್ಕೆ ತಾನು ಸ್ಪರ್ಧಿಸದೆ ತಮ್ಮ ಕುಟುಂಬದ ಸದಸ್ಯರನ್ನೂ ಸ್ಪರ್ಧಿಗಿಳಿಸದೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಆದರೆ ಈ ಮೇಲ್ಪಂಕ್ತಿಯನ್ನು ಅನುಸರಿಸುವವರು ಎಷ್ಟು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ !
ಹಿರಿಯ ನಾಯಕ ಎಲ್. ಕೆ. ಅಡ್ವಾಣಿ (91) ಚುನಾವಣಾ ರಾಜಕಾರಣದಿಂದ ಗೌರವಯುತವಾಗಿ ನಿರ್ಗಮಿಸಿದ ಬೆನ್ನಲ್ಲೇ ಪಕ್ಷದಲ್ಲಿ 75 ವರ್ಷ ದಾಟಿದ ಬಹುತೇಕ ನಾಯಕರು ಚುನಾವಣೆಯಿಂದ ‘ಸ್ವಯಂ ನಿವೃತ್ತಿ’ ಘೋಷಿಸಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಉತ್ತರಪ್ರದೇಶದ ಡಿಯೋರಿಯಾ ಕ್ಷೇತ್ರದ ಕಲ್ ರಾಜ್ ಮಿಶ್ರಾ (77) ಅಭ್ಯರ್ಥಿಗಳ ಆಯ್ಕೆಗೆ ಮುನ್ನವೇ ಈ ಸಲ ತನ್ನ ಸ್ಪರ್ಧೆ ಇಲ್ಲ ಎಂದು ಘೋಷಿಸಿದ್ದಾರೆ . ನೈನಿತಾಲ್ ನ ಉಧಮ್ ಸಿಂಗ್ ನಗರದ ಸಂಸದ ಭಗತ್ ಸಿಂಗ್ ಕೋಶಿಯಾರಿ (76), ಪುರಿಯ ಬಿ.ಸಿ. ಖಂಡೂರಿ (85), ಕಾಂಗ್ರಾದ ಶಾಂತಕುಮಾರ್ (84) ಜಾರ್ಖಂಡ್ ನ ಬೊಂತಿ ಕ್ಷೇತ್ರದ ಕರಿಯ ಮೂಡ (82), ಬಿಹಾರದ ಕೃಷ್ಣದೇವ್ ನಾರಾಯಣ್ ಯಾದವ್ (75) ತಾವಾಗಿಯೇ ‘ಚುನಾವಣೆಗೆ ಸ್ಪರ್ಧಿಸೋಲ್ಲ’ ಎಂದು ಘೋಷಿಸಿದ್ದಾರೆ. ಕಾನ್ಪುರದ ಸಂಸದ, ಬಿಜೆಪಿಯ ಇನ್ನೊಬ್ಬ ಹಿರಿಯ ಮುಖಂಡ ಡಾ. ಮುರಳಿ ಮನೋಹರ ಜೋಶಿ ತಾನಾಗಿಯೇ ಸ್ಪರ್ಧಿಸುವುದಿಲ್ಲ ಎಂದು ಹೇಳದ್ದರೂ ಪಕ್ಷದ ಸೂಚನೆಯಂತೆ ತಾನು ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ. ಅವರಾಗಿಯೇ ಹೇಳಿದಿದ್ದರೆ ಅವರ ಗೌರವ ಇನ್ನಷ್ಟು ಹೆಚ್ಚಿರುತ್ತಿತ್ತು.
ಬಿಜೆಪಿ ಯುವಕರಿಗೆ ಅವಕಾಶದ ಬಾಗಿಲು ತೆರೆಯಲು ಹಿರಿಯರು ತಾವಾಗಿಯೇ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದು ಸೂಕ್ತ ಎಂದು ಮೌಖಿಕವಾಗಿ ತಿಳಿಸಿದ್ದಂತೆ ಹೌದು. ಆ ಕಾರಣದಿಂದಾಗಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ (77) ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಸಕ್ರಿಯ ರಾಜಕಾರಣದಿಂದ ದೂರ ಸರಿಯದೇ ರಾಜ್ಯಪಾಲರಾದರು! ಬಿಜೆಪಿಯ ಈ ಮೌಖಿಕ ಸೂಚನೆಯ ಉದ್ದೇಶ ಪಕ್ಷದ ಹಿರಿಯರನ್ನು ಅವಮಾನಿಸಬೇಕು ಎಂಬುದಾಗಿರಲಿಲ್ಲ. ಯುವ ನಾಯಕರಿಗೆ ಅವಕಾಶ ಮಾಡಿಕೊಡಬೇಕು. ತನ್ಮೂಲಕ ರಾಜಕಾರಣಕ್ಕೆ ಬಿಸಿರಕ್ತ ಹರಿಸಬೇಕು ಎನ್ನುವ ಆಶಯ ಮಾತ್ರ ಆಗಿತ್ತು.
ಹಿರಿಯ ನಾಯಕರಾದ ಮುರಳಿ ಮನೋಹರ ಜೋಶಿ (86) ಅವರಿಗೆ ಕಳೆದ ಬಾರಿ ತಮ್ಮ ವಾರಾಣಸಿ ಕ್ಷೇತ್ರ ಕೈ ತಪ್ಪಿದ್ದಕ್ಕೆ ಸಾಕಷ್ಟು ಅಸಮಾಧಾನ ಆಗಿತ್ತು. ನರೇಂದ್ರ ಮೋದಿಯವರಿಗೆ ಆ ಕ್ಷೇತ್ರ ಬಿಟ್ಟು ಕೊಡುವುದರಿಂದ ಇಡೀ ಉತ್ತರ ಪ್ರದೇಶದಾದ್ಯಂತ ಬಿಜೆಪಿಯ ಅತ್ಯದ್ಭುತ ಗೆಲುವಿಗೆ ನಾಂದಿಯಾಗಲಿದೆ ಎಂಬ ದೂರದೃಷ್ಟಿ ಅವರಲ್ಲಿ ಮೂಡಲೇ ಇಲ್ಲ. ವಾರಾಣಸಿ ಬದಲು ಕಾನ್ಪುರದಿಂದ ಸ್ಪರ್ಧಿಸಲು ಬಿಜೆಪಿ ಅವರಿಗೆ ಅವಕಾಶ ಕಲ್ಪಿಸಿತ್ತು. ಆಡ್ವಾಣಿ ಅವರಂತೆ ಅವರು ಈ ಬಾರಿ ತಾನು ಸ್ಪರ್ಧಿಸುವುದಿಲ್ಲ ಎಂದಿದ್ದರೆ ಆ ಮಾತಿನ ಪರಿಣಾಮವೇ ಬೇರೆ ಇರುತ್ತಿತ್ತು !
ಇಂದೋರ್ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ, ಲೋಕಸಭಾ ಸ್ಪೀಕರ್ ಆಗಿದ್ದ ಸುಮಿತ್ರಾ ಮಹಾಜನ್ (76) ಅವರ ಸ್ಪರ್ಧೆಗೆ ಮಧ್ಯಪ್ರದೇಶದ ಪಕ್ಷದ ಪ್ರಮುಖರಿಂದಲೇ ಈ ಬಾರಿ ವಿರೋಧ ವ್ಯಕ್ತವಾಗಿದೆ. 1989 ರಿಂದ ಸ್ಪರ್ಧಿಸುತ್ತಿರುವ ಸುಮಿತ್ರಾ ಮಹಾಜನ್ ಅವರಿಗೆ ಈ ಬಾರಿಯೂ ಟಿಕೆಟ್ ನೀಡಿದರೆ 8 ನೇ ಅವಧಿಯಾಗುತ್ತದೆ. ಒಂದು ವೇಳೆ ಅವರಿಗೆ ಟಿಕೆಟ್ ನೀಡಿದ್ದೇ ಆದರೆ, ಸ್ವತಂತ್ರ ಅಭ್ಯರ್ಥಿಯಾಗಿ ತಾನೇ ಅವರ ವಿರುದ್ಧ ಕಣಕ್ಕಿಳಿಯುವುದಾಗಿ ಪಕ್ಷದ ಹಿರಿಯ ನಾಯಕ ಸತ್ಯನಾರಾಯಣ (79) ಬೆದರಿಕೆ ಹಾಕಿದ್ದರು. ತಾನು ಸ್ಪರ್ಧಿಸುವುದಿಲ್ಲವೆಂದು ಸುಮಿತ್ರಾ ಮಹಾಜನ್ ಅವರೇ ಘೋಷಿಸಿದ್ದಿದ್ದರೆ ಅವರ ಘನತೆ ಹೆಚ್ಚುತ್ತಿತ್ತು.
75 ದಾಟಿದವರಿಗೆ ಚುನಾವಣಾ ನಿವೃತ್ತಿ ಎಂಬ ಲಕ್ಷ್ಮಣ ರೇಖೆಯನ್ನು ಬಿಜೆಪಿಯೇನೋ ಎಳೆದಿದೆ. ಆದರೆ ಉಳಿದ ಪಕ್ಷಗಳಲ್ಲಿ ಈ ವಿಷಯದ ಕುರಿತು ಸದ್ದೇ ಇಲ್ಲದಿರುವುದು ಆಶ್ಚರ್ಯ. 85 ರ ಹರೆಯದ ದೇವೇಗೌಡರು ಪ್ರತಿ ಬಾರಿ ಸ್ಪರ್ಧಿಸಿದಾಗಲೂ ‘ಇದೇ ನನ್ನ ಕೊನೇ ಚುನಾವಣೆ. ಇನ್ನು ಸ್ಪರ್ಧಿಸುವುದಿಲ್ಲ’ ಎನ್ನುತ್ತಲೆ ಇರುತ್ತಾರೆ. ಈ ಬಾರಿಯೂ ಅದೇ ಡೈಲಾಗನ್ನು ಪುನರುಚ್ಚರಿಸಿದ್ದಾರೆ. ಈ ಬಾರಿ ಹಾಸನದಿಂದ ಸ್ಪರ್ಧಿಸದೆ ತುಮಕೂರಿನಿಂದ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದೊಂದೇ ಆಗಿರುವ ಸಣ್ಣ ವ್ಯತ್ಯಾಸ. ಕುಟುಂಬ ರಾಜಕಾರಣದ ಮುಂದುವರಿಕೆಗಾಗಿ ಕುಟುಂಬದ ಹೊಸ ತಲೆಮಾರಿನ ಕುಡಿ ಪ್ರಜ್ವಲ್ಗೆ ಹಾಸನ ಬಿಟ್ಟುಕೊಟ್ಟು ‘ತ್ಯಾಗ’ ಮಾಡಿದ್ದಾರೆ ! ಶ್ರೀನಗರದಿಂದ ಡಾ. ಫಾರೂಕ್ ಅಬ್ದುಲ್ಲಾ (81), ಗ್ವಾಲಿಯರ್ ನಿಂದ ದಿಗ್ವಿಜಯ್ ಸಿಂಗ್ (72), ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ (72), ಕಲಬುರ್ಗಿಯಿಂದ ಮಲ್ಲಿಕಾರ್ಜುನ ಖರ್ಗೆ (76) ಮುಂತಾದ ವಯೋವೃದ್ಧರು (ಜ್ಞಾನವೃದ್ಧರಂತೂ ಖಂಡಿತಾ ಅಲ್ಲ !) ಈ ಬಾರಿಯೂ ಸ್ಪರ್ಧಿಸುತ್ತಿದ್ದಾರೆ. ದಾವಣಗೆರೆಯಿಂದ ಟಿಕೆಟ್ ಬಯಸದಿದ್ದರೂ ಕಾಂಗ್ರೆಸ್ ನ 87 ರ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಅವರನ್ನು ಬಿಟ್ಟರೆ ಸೂಕ್ತ ಅಭ್ಯರ್ಥಿಯೇ ಆ ಪಕ್ಷಕ್ಕೆ ದೊರೆಯದಿರುವುದು ಪಕ್ಷದ ಸಂಘಟನೆ, ಯುವಕರಿಗೆ ಅವಕಾಶ ಕೊಡುವ ವಿಷಯದಲ್ಲಿ ಅದೆಂತಹ ತಾತ್ಸಾರ ಭಾವನೆ ಅಡಗಿದೆ ಎಂಬುದಕ್ಕೆ ಇದೊಂದು ದಿವ್ಯ ನಿದರ್ಶನ.
ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ (67) ಹಾಗೂ ಉಮಾಭಾರತಿ (60) ಆರೋಗ್ಯ ಸಮಸ್ಯೆ ಕಾರಣ ನೀಡಿ ಕೆಲವು ತಿಂಗಳ ಹಿಂದೆಯೇ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಆರೋಗ್ಯ ಸಮಸ್ಯೆ ಕಾಡುತ್ತಿದ್ದರೂ ಅವರಾಗಿ ಬಯಸಿದ್ದರೆ ವರಿಷ್ಠರು ಟಿಕೆಟ್ ಕೊಡದೆ ಇರುತ್ತಿರಲಿಲ್ಲ . ಆದರೆ ಅವರಾಗಿಯೇ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿರುವುದು ಒಂದು ಆರೋಗ್ಯಕರ ಬೆಳವಣಿಗೆ. ನಿಜ ಹೇಳಬೇಕೆಂದರೆ ಖರ್ಗೆಯವರ ಆರೋಗ್ಯವು ಚೆನ್ನಾಗಿಲ್ಲ. ಸೋನಿಯಾ ಗಾಂಧಿಯವರಿಗೂ ಅನಾರೋಗ್ಯ ಕಾಡುತ್ತಿದೆ. ಫಾರೂಕ್ ಅಬ್ದುಲ್ಲಾ, ಗುಲಾಂ ನಬಿ ಆಜಾದ್, ದಿಗ್ವಿಜಯ್ ಸಿಂಗ್ ಅವರೆಲ್ಲರ ಆರೋಗ್ಯವೂ ಅಷ್ಟಕ್ಕಷ್ಟೇ. ಹಾಗೆ ನೋಡಿದರೆ, ಇವರೆಲ್ಲರಿಗಿಂತ 91 ರ ಅಡ್ವಾಣಿಯವರೇ ಆರೋಗ್ಯವಂತರಾಗಿದ್ದಾರೆ ! ಆರೋಗ್ಯ ಚೆನ್ನಾಗಿಲ್ಲದಿರುವಾಗ, ಕುಳಿತರೆ ನಿಲ್ಲಲಾಗದ, ನಿಂತರೆ ಕುಳಿತುಕೊಳ್ಳಲಾಗದ, ಇನ್ನೊಬ್ಬರ ಆಸರೆ ಇಲ್ಲದೆ ಹೆಜ್ಜೆಯನ್ನೂ ಹಾಕಲಾಗದ ಸ್ಥಿತಿ ತಲುಪಿರುವವರಿಗೆ ಚುನಾವಣಾ ರಾಜಕೀಯ ಬೇಕೇ ?
ಸಂವಿಧಾನದಲ್ಲಿ ಉಲ್ಲೇಖಿಸಿಲ್ಲದಿರಬಹುದು. ಆದರೆ ಅದನ್ನೇ ಸ್ವಾರ್ಥಕ್ಕೆ ಬಳಸಿಕೊಂಡು 75 ದಾಟಿದರೂ ಯುವಕರಿಗೆ ಅವಕಾಶ ಮಾಡಿಕೊಡದೆ ತಾನೇ ಚುನಾವಣೆಗೆ ಸ್ಪರ್ಧಿಸುವ ವಯೋವೃದ್ಧ ರಾಜಕಾರಣಿಗಳಿಗೆ ತಾವು ತಪ್ಪು ಮಾಡುತ್ತಿದ್ದೇವೆ ಎಂಬ ಅಪರಾಧ ಪ್ರಜ್ಞೆ ಏಕೆ ಕಾಡುವುದಿಲ್ಲ ? ವಯೋವೃದ್ಧ ರಾಜಕಾರಣಿಗಳು ಪಾರ್ಲಿಮೆಂಟಿಗೆ ಆರಿಸಿ ಹೋಗದಿದ್ದರೆ ಪಾರ್ಲಿಮೆಂಟ್ ಭವನವೇನೂ ಕುಸಿದು ಬೀಳುವುದಿಲ್ಲ. ದೇಶದ ಭವಿಷ್ಯವೇನು ಪಾತಾಳಕ್ಕೆ ಇಳಿಯುವುದಿಲ್ಲ . ಆದರೆ ಶರೀರಕ್ಕೆ ವಯಸ್ಸಾಗಿದ್ದರೂ ಬುದ್ಧಿಗೆ ವಯಸ್ಸಾದ ಹಿರಿ ತಲೆಗಳಿಗೆ ಇದು ಅರ್ಥವಾಗುವುದೆಂತು ?
ವೃದ್ಧರ ರಾಜಕಾರಣ, ಕುಟುಂಬ ರಾಜಕಾರಣಿಗಳಿಂದ ಪ್ರಜಾತಂತ್ರ ವ್ಯವಸ್ಥೆಗಂತೂ ಯಾವ ಪ್ರಯೋಜನವೂ ಇಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.