ನವದೆಹಲಿ: ‘ಮಿಶನ್ ಶಕ್ತಿ’ಯನ್ನು ನಡೆಸಿ ಭೂಮಿಯಿಂದ 300 ಕಿಲೋ ಮೀಟರ್ ಎತ್ತರದಲ್ಲಿದ್ದ ಸ್ಯಾಟಲೈಟ್ ಅನ್ನು ಹೊಡೆದುರುಳಿಸಿರುವ ಭಾರತ ಜಗತ್ತಿನ ನಾಲ್ಕನೆಯ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಇದೀಗ ಎ-ಸ್ಯಾಟ್-ಉಪಗ್ರಹ ವಿರೋಧಿ ಕ್ಷಿಪಣಿ ವ್ಯವಸ್ಥೆಯನ್ನು ಮುಂಬರುವ ದಿನಗಳಲ್ಲಿ ಯಾವ ರೀತಿಯಾಗಿ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಅಳವವಡಿಸಿಕೊಳ್ಳುವತ್ತ ನರೇಂದ್ರ ಮೋದಿ ಸರ್ಕಾರ ಚಿತ್ತ ಹರಿಸಿದೆ. ಈ ಜವಾಬ್ದಾರಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಹೆಗಲಿಗೇರಿಸಲಾಗಿದೆ.
ಭವಿಷ್ಯದಲ್ಲಿ ಭಾರತದ ಉಪಗ್ರಹಗಳಿಗೆ ಅಡ್ಡಿಪಡಿಸಲು, ಭಾರತದ ಉಪಗ್ರಹಗಳನ್ನು ಹೊಡೆದುರುಳಿಸಲು ಯಾವುದಾದರೂ ರಾಷ್ಟ್ರ ಪ್ರಯತ್ನಪಟ್ಟರೆ ಅದಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡಬೇಕು ಎಂಬ ಬಗ್ಗೆ, ಈ ತಂತ್ರಜ್ಞಾನವನ್ನು ರಕ್ಷಣೆಯ ಭಾಗವಾಗಿ ಯಾವ ರೀತಿ ಬಳಸಿಕೊಳ್ಳಬೇಕು, ಎ-ಸ್ಯಾಟ್ ಉಡಾವಣೆಗೆ ಅನುಸರಿಸಬೇಕಾದ ವಿಧಿವಿಧಾನಗಳು, ಶಿಷ್ಟಾಚಾರಗಳು, ನಿಯಮಗಳು ಹೇಗಿರಬೇಕು ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗುತ್ತದೆ.
ಭಾರತ ಅಣ್ವಸ್ತ್ರ ಶಕ್ತಿಯಾಗಿ ಹೊರಹೊಮ್ಮಿದ ವೇಳೆ, ‘ತಾನು ಮೊದಲು ಬಳಕೆ ಮಾಡುವುದಿಲ್ಲ’ ಎಂಬ ಸ್ವಯಂ ನಿರ್ಬಂಧವನ್ನು ವಿಧಿಸಿಕೊಂಡಿದೆ. ಇದೇ ರೀತಿ ಎ-ಸ್ಯಾಟ್ ವಿಷಯದಲ್ಲೂ ಭಾರತ ಮೊದಲು ಬಳಕೆ ಮಾಡದಿರುವ ಸ್ವಯಂ ನಿರ್ಬಂಧವನ್ನು ವಿಧಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹಲವಾರು ಮಂದಿ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಣ್ವಸ್ತ್ರ ನಿರ್ವಹಣೆಗಾಗಿ ರೂಪಿಸಲಾದ ‘ಅಣುಶಕ್ತಿ ನಿರ್ವಹಣಾ ಪ್ರಾಧಿಕಾರ’ದ ಮಾದರಿಯಲ್ಲೇ, ‘ಎ-ಸ್ಯಾಟ್ ನಿರ್ವಹಣಾ ಪ್ರಾಧಿಕಾರ’ವನ್ನು ರಚನೆ ಮಾಡಬೇಕು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ ಎನ್ನಲಾಗಿದೆ.
ಎ-ಸ್ಯಾಟ್ ಸಾಮರ್ಥ್ಯವನ್ನು ಪಡೆದುಕೊಂಡಿರುವ ಭಾರತ, ಶತ್ರು ದೇಶದ ಗಡಿಯನ್ನೇ ದಾಟದೆ ಆ ದೇಶದ ಸಂವಹನ, ಮಿಲಿಟರಿ ಇಂಟೆಲಿಜೆನ್ಸ್, ಷೇರು ಮಾರುಕಟ್ಟೆ, ಸಂಪರ್ಕ ಸಾಧನ, ಹವಮಾನ ಮುನ್ಸೂಚನೆ ಇತ್ಯಾದಿಗಳನ್ನು ಹಾಳುಗೆಡವಬಲ್ಲದು. ಈ ಸಂಪರ್ಕ ವ್ಯವಸ್ಥೆಗಳು ಉಪಗ್ರಹಗಳನ್ನು ಆಧರಿಸಿದೆ, ಎ-ಸ್ಯಾಟ್ ಕ್ಷಿಪಣಿಯ ಮೂಲಕ ಆ ಉಪಗ್ರಹವನ್ನು ಹಾಳುಗೆಡವಿದರೆ ಆ ದೇಶದ ಎಲ್ಲಾ ಉಪಗ್ರಹ ಆಧಾರಿತ ವ್ಯವಸ್ಥೆಗಳು ಹಾಳಾಗುತ್ತವೆ. ಹೀಗಾಗಿ ಭಾರತ ತನ್ನ ಎ-ಸ್ಯಾಟ್ ಅಸ್ತ್ರವನ್ನು ಮುಂಬರುವ ದಿನಗಳಲ್ಲಿ ಯಾವ ರೀತಿ ಪ್ರಯೋಗ ಮಾಡುತ್ತದೆ ಎಂಬುದರ ಮೇಲೆ ಇಡೀ ವಿಶ್ವದ ಚಿತ್ತ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.