ಈ ವರ್ಷದ ಜೈಪುರ ಸಾಹಿತ್ಯ ಉತ್ಸವದಲ್ಲಿ ನಾನು ಭೇಟಿಯಾದ ಯುವತಿಯೊಬ್ಬಳು, ಭಾಷಣಕಾರರ ಮತ್ತು ವಿಷಯಗಳ ಆಯ್ಕೆಯಲ್ಲಿ ಎಡ ಪ್ರಭಾವ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂಬುದನ್ನು ಉಲ್ಲೇಖಿಸಿದ್ದಳು. ಆಕೆ ತನ್ನ ಟೀಮ್ ಲೀಡರ್, ಸ್ವಯಂ ಘೋಷಿತ ಎಡ ಹೋರಾಟಗಾರನ ಜೊತೆ ನಡೆಸಿದ ಸಂವಾದದ ಬಗ್ಗೆಯೂ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಳು. ಖ್ಯಾತ ಗೀತೆ ರಚನೆಗಾರ ಪ್ರಸೂನ್ ಜೋಶಿ ಅವರು ಮನಿಕರ್ಣಿಕಾ ಸಿನಿಮಾಗೆ ಬರೆದ ಸಾಹಿತ್ಯದಿಂದ ಅವರು ಬಲಪಂಥೀಯರಾಗಿದ್ದಾರೆ ಎಂಬುದು ಸ್ಪಷ್ಟವಾದ ಕಾರಣ ಅವರನ್ನು ಜೈಪುರ ಸಾಹಿತ್ಯ ಉತ್ಸವಕ್ಕೆ ಆಯ್ಕೆ ಮಾಡಲಾಗಿಲ್ಲ, ಸಾಹಿತ್ಯೋತ್ಸವ ಕ್ರಾಂತಿಯನ್ನು ಹುಟ್ಟು ಹಾಕಲು ಮತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ನಿಲುವು ತೆಗೆದುಕೊಳ್ಳಲು ಎಡಪಂಥೀಯರಿಗೆ ಅಸ್ತ್ರ ಎಂದು ಎಂದು ಲೀಡರ್ ಆಕೆಗೆ ಹೇಳಿದ್ದರು.
ಈಗ, ಯಾರಿಗೆ ಆಹ್ವಾನಗಳನ್ನು ನೀಡಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಸಂಘಟಕರದ್ದಾಗಿರುತ್ತದೆ. ಎರಡು ವರ್ಷಗಳ ಹಿಂದೆ, ದತ್ತಾತ್ರೇಯ ಹೊಸಬಾಳೆ ಮತ್ತು ನಾನು ಉತ್ಸವದಲ್ಲಿ ಮಾತನಾಡುತ್ತಿರುವುದಕ್ಕೆ ಭಾರೀ ವಿರೋಧಗಳು ವ್ಯಕ್ತವಾದರೂ ಆಯೋಜಕರು ನಮಗೆ ನೀಡಿದ್ದ ಆಹ್ವಾನವನ್ನು ಹಿಂಪಡೆಯದಿರಲು ನಿರ್ಧರಿಸಿದ್ದರು. ಈ ವರ್ಷ ಅವರು, ರಮೇಶ್ ಪತಂಗೆ ಅವರಿಗೆ ಆಹ್ವಾನ ನೀಡಿದ್ದಾರೆ, ಇದು ಅತ್ಯಂತ ಸಕಾರಾತ್ಮಕ ಹೆಜ್ಜೆ ಎಂದು ನನಗನಿಸುತ್ತದೆ. ಈ ಬಾರಿ ಅವರು ಪ್ರಸೂನ್ ಜೋಶಿ ಅವರನ್ನು ಆಹ್ವಾನಿಸಿದ್ದಾರೆ, ಆದರೆ ಅನಾರೋಗ್ಯದ ಕಾರಣದಿಂದಾಗಿ ಅವರಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಯುವತಿಯ ಯುವ ಹೋರಾಟಗಾರರ ಬಗೆಗಿನ ದೃಷ್ಟಿಕೋನವೂ ಇದೇ ಸನ್ನಿವೇಶದ್ದಾಗಿದೆ.
ಎಡಪಂಥೀಯರ ಬೂಟಾಟಿಕೆಯ ಮೇಲೆ ಬೆಳಕು ಚೆಲ್ಲುವುದು ಈ ವೇಳೆ ಅಗತ್ಯ. ಒಂದು ಕಡೆ, ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಯಂ ಘೋಷಿತ ಹೋರಾಟಗಾರರು, ಪ್ರಾಮಾಣಿಕ ಟೀಕೆಯನ್ನೂ ಇವರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದೇ ಪರಿಗಣಿಸುತ್ತಾರೆ. ಮತ್ತೊಂದು ಕಡೆ, ತಮ್ಮ ಇಷ್ಟಕ್ಕೆ ವಿರುದ್ಧವಾದ ಯಾವುದೇ ಅಭಿಪ್ರಾಯವನ್ನು ಇವರು ಹತ್ತಿಕ್ಕುತ್ತಾರೆ. ಇದರಿಂದಾಗಿ, ಆರ್ಎಸ್ಎಸ್ ವಕ್ತಾರರನ್ನು ಜೈಪುರ ಸಾಹಿತ್ಯ ಉತ್ಸವಕ್ಕೆ ಆಹ್ವಾನಿಸಿದಾಗ ಅದಕ್ಕೆ ಇವರುಗಳು ತೋರಿಸಿದ ವಿರೋಧ ಆಶ್ಚರ್ಯದಾಯಕವೇನಲ್ಲ. ಹಿರಿಯ ಕಮ್ಯೂನಿಸ್ಟ್ ನಾಯಕ ಸೀತಾರಾಮನ್ ಯೆಚೂರಿಯವರು ಈ ಉತ್ಸವವನ್ನೇ ಬಹಿಷ್ಕರಿಸಿದರು. ಆರ್ಎಸ್ಎಸ್ ತಳಮಟ್ಟದ ಸಂಘಟನೆಯಾಗಿದ್ದು, ಸರ್ಕಾರಗಳ ಗಂಭೀರ ವಿರೋಧದ ನಡುವೆಯೂ ಅದು ಉಳಿದುಕೊಂಡಿದೆ. ಯಾಕೆಂದರೆ ಅದು ಭಾರತೀಯರ ಬೆಂಬಲವನ್ನು ಹೊಂದಿದೆ. ಸಂಘದೊಂದಿಗೆ ದೃಢವಾಗಿ ನಿಂತಿರುವ ಭಾರತದ ಜನರಿಗೆ ಧನ್ಯವಾದಗಳು, ಕಾಲದಿಂದ ಕಾಲಕ್ಕೆ ಸಂಘದ ಬೇರು ಗಟ್ಟಿಗೊಳ್ಳುತ್ತಲೇ ಬಂದಿದೆ. ಇನ್ನೊಂದು ಕಡೆ, ಎಡಪಂಥೀಯತೆ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಇಂದು, ಎಡಪಂಥೀಯರ ಪ್ರಭಾವ ಕೇವಲ ದಕ್ಷಿಣದ ಒಂದು ರಾಜ್ಯಕ್ಕೆ ಸೀಮಿತಗೊಂಡಿದೆ.
ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ತಮ್ಮ ಪುಸ್ತಕ ‘ಅರ್ಬನ್ ನಕ್ಸಲ್ಸ್’ನಲ್ಲಿ ಪ್ರಗತಿಪರ ಎಡಪಂಥೀಯರ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 2016ರಲ್ಲಿ ಹೇಗೆ ತಾನು ಮತ್ತು ತನ್ನ ತಂಡ ಜಾಧವ್ಪುರ ವಿಶ್ವವಿದ್ಯಾಲಯದಲ್ಲಿ ಮಹಿಳಾ ವಿದ್ಯಾರ್ಥಿಗಳಿಂದ ದೈಹಿಕವಾಗಿ ಹಲ್ಲೆಗೊಳಗಾಯಿತು ಎಂಬುದನ್ನು ಅವರು ವಿವರಿಸುತ್ತಾರೆ. ಹೋರಾಟಗಾರರು ಅಗ್ನಿಹೋತ್ರಿಯವರ ’ಬುದ್ಧ ಇನ್ ಅ ಟ್ರಾಫಿಕ್ ಜಾಮ್’ ಸಿನಿಮಾ ಸ್ಕ್ರೀನಿಂಗ್ ನಿಲ್ಲಿಸಲು ಬಯಸಿದ್ದರು. ಅಗ್ನಿಹೋತ್ರಿ ಅವರಿಗೆ, ನಾನು ಕೇವಲ ಇಲ್ಲಿ ಸಿನಿಮಾ ಸ್ಕ್ರೀನಿಂಗ್ ಮಾಡುತ್ತಿದ್ದೇನೆ, ನೀವು ಇದನ್ನು ನೋಡಬೇಕೆಂದೇನಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದರು. ಆದರೆ ಇಲ್ಲಿ ಯಾವುದೆ ಸ್ಕ್ರೀನಿಂಗ್ ನಡೆಸಬಾರದು ಎಂಬುದು ಅವರ ಪ್ರತ್ಯುತ್ತರವಾಗಿತ್ತು.
ಪ್ರಸೂನ್ ಜೋಶಿಯವರ ಮನಿಕರ್ಣಿಕಾ ಸಿನಿಮಾ ಸಾಹಿತ್ಯಕ್ಕೆ ಟೀಮ್ ಲೀಡರ್ನ ವಿರೋಧದ ವಿಷಯಕ್ಕೆ ಬರೋಣ. ಈ ಸಿನಿಮಾದ ಹಾಡು ‘ಮೇ ರಹೂ ಯಾ ನಾ ರಹೂ, ಭಾರತ್ ರೆಹ್ನಾ ಚಾಯಿಯೇ(ನಾನು ಇರಲಿ ಅಥವಾ ಬಿಡಲಿ, ಭಾರತ ಇರಬೇಕು) ಎಂಬ ಸಾಹಿತ್ಯಕ್ಕೆ ಟೀಮ್ ಲೀಡರ್ನ ವಿರೋಧವಾಗಿತ್ತು. ಆದರೆ ಈ ಸಾಹಿತ್ಯದಲ್ಲಿ ವಿರೋಧಿಸುವಂತಹುದು ಏನಿದು ಎಂಬುದು ಎಲ್ಲರೂ ಆಶ್ಚರ್ಯಪಟ್ಟುಕೊಳ್ಳುವಂತಹ ವಿಷಯ. ಕೆಲವೊಂದು ಧರ್ಮಗಳಂತೆ ಎಡಪಂಥಿಯರೂ ಒಂದು ಬದಿಯ ಸತ್ಯವನ್ನು ಮಾತ್ರ ಹೇಳುತ್ತಾರೆ. ಬೇರೆ ಯಾವ ಅಭಿಪ್ರಾಯಗಳೂ ಇರಬಾರದು ಎಂಬುದು ಅವರ ಧೋರಣೆ. ಯಾರಾದರು ಈ ಧೋರಣೆಯನ್ನು ಮುರಿದರೆ, ಆಕೆ ಮಾತನಾಡುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಮಾತ್ರವಲ್ಲ, ಬದುಕುವ ಹಕ್ಕನ್ನೂ ಕಳೆದುಕೊಳ್ಳುತ್ತಾಳೆ. ಎಡ ಸಿದ್ಧಾಂತ ಜಗತ್ತಿನ ಅತೀ ಕೆಟ್ಟ ಅಪರಾಧ ರಾಜಕೀಯಗಳಿಗೆ ಜವಾಬ್ದಾರನಾಗಿದೆ. ಭಾರತದಲ್ಲೂ, ಎಡ ಭದ್ರಕೋಟೆಗಳಾದ ಪಶ್ಚಿಮಬಂಗಾಳ ಮತ್ತು ಕೇರಳ ರಾಜಕೀಯ ಹತ್ಯೆಗಳಿಗೆ ಕುಖ್ಯಾತಿಯನ್ನು ಪಡೆದುಕೊಂಡಿದೆ.
ಇಂತಹ ಅಸಹಿಷ್ಣುತೆಗಳು ಭಾರತದ ಸ್ಪೂರ್ತಿ ಮತ್ತು ಹಿಂದೂ ಧರ್ಮಕ್ಕೆ ವಿರುದ್ಧವಾದುವುಗಳಾಗಿವೆ. ಭಾರತೀಯ ಸಮಾಜದ ಆಧ್ಯಾತ್ಮಿಕ ಉನ್ನತಿ, ಸ್ವತಂತ್ರ ಚಿಂತನೆ, ಅಭಿವ್ಯಕ್ತಿಗಳು ಹಿಂದೂ ಚಿಂತನೆಯಲ್ಲೇ ಇವೆ. ವಿವಿಧ ಸಮಾಜಿಕ, ರಾಜಕೀಯ ನಿಲುವುಗಳನ್ನು ಶಾಂತಿಯುತವಾಗಿ ಸ್ವೀಕರಿಸುವ ಅವಕಾಶವನ್ನು ಹಿಂದೂ ಧರ್ಮ ಜನರಿಗೆ ನೀಡಿದೆ.
ನಾನು ಸ್ವಾಮಿ ವಿವೇಕಾನಂದರ ಕಥೆಯನ್ನು ನೆನಪಿಸಿಕೊಳ್ಳಬಯಸುತ್ತೇನೆ. ಭಾರತ ಮತ್ತು ಹಿಂದೂ ಧರ್ಮದ ಶ್ರೀಮಂತ ಪರಂಪರೆಯನ್ನು ಪಾಶ್ಚಿಮಾತ್ಯರಿಗೆ ತೋರಿಸಿದ ಬಳಿಕ, ಲಂಡನ್ನಿಂದ ಭಾರತಕ್ಕೆ ವಾಪಾಸ್ಸಾಗಲು ವಿವೇಕಾನಂದರು ಸಜ್ಜಾಗುತ್ತಿದ್ದರು. 1897ರ ವರ್ಷ. ಅವರ ಬ್ರಿಟಿಷ್ ಸ್ನೇಹಿತನೊಬ್ಬ ಅವರನ್ನು ಕೇಳಿದ, ‘ನಾಲ್ಕು ವರ್ಷಗಳ ಕಾಲ ಭವ್ಯ, ವೈಭವೋಪೇತ, ಶಕ್ತಿಶಾಲಿ ಲಂಡನ್ನಲ್ಲಿದ್ದ ನೀವು, ಹೇಗೆ ನಿಮ್ಮ ತಾಯ್ನಾಡನ್ನು ಪ್ರೀತಿಸಲು ಸಾಧ್ಯ?, ಸ್ವಾಮೀಜಿ ಉತ್ತರಿಸಿದರು, ’ಇಲ್ಲಿಗೆ ಬರುವುದಕ್ಕೆ ಮುನ್ನ ನಾನು ಭಾರತವನ್ನು ಪ್ರೀತಿಸುತ್ತಿದ್ದೆ, ಆದರೀಗ ಇಲ್ಲಿಗೆ ಬಂದ ಮೇಲೆ ತಿಳಿಯಿತು ಭಾರತದ ಕಣ ಕಣವೂ ಪವಿತ್ರ ಎಂದು. ಈಗ ಅದು ನನಗೆ ಪವಿತ್ರ ಭೂಮಿ, ತೀರ್ಥ ಕ್ಷೇತ್ರ’ ಎಂದರು.
ಅವರ ಹಡಗು ಭಾರತದ ತೀರವನ್ನು ಸಮೀಪಿಸುತ್ತಿದ್ದಂತೆ, ಸ್ವಾಮೀಜಿ ಭಾವುಕತೆಯಿಂದ ಹೊರಬಂದರು, ಕರಗಳನ್ನು ಮಡಚಿ, ಕಣ್ಣ ಹನಿಯನ್ನು ಒರಸಿ ಭಾರತ ಮಾತೆಯನ್ನೇ ನೋಡುತ್ತಿರುವಂತೆ ಕಡಲತೀರವನ್ನು ನೋಡಿದರು. ಹಡಗು ಬಂದರಿನಲ್ಲಿ ಬಂದು ನಿಲ್ಲುತ್ತಿದ್ದಂತೆ, ಕೆಳಕ್ಕಿಳಿದು ಮೊಣಕಾಲೂರಿ ಭೂಮಿಗೆ ತಲೆಯಿಟ್ಟು, ‘ನನ್ನೆಲ್ಲಾ ಚಿಂತೆಗಳು ನನ್ನ ತಾಯಿಯ ಮಡಿಲಿನಲ್ಲಿ ಕರಗಿಹೋಗುತ್ತಿದೆ’ ಎಂದು ಉದ್ಘರಿಸಿದರು.
ಈ ಭೂಮಿಯಲ್ಲಿ ಹುಟ್ಟಿದವರು, ಈ ಭೂಮಿಯ ಆಹಾರ ತಿಂದು, ನೀರು ಕುಡಿದು, ಗಾಳಿಯನ್ನು ಸೇವಿಸಿ ಬೆಳೆದವರು, ಇಲ್ಲಿನ ತೆರಿಗೆದಾರರ ದುಡ್ಡಿನಲ್ಲಿ ಶಿಕ್ಷಣ ಪಡೆದವರು ’ಭಾರತ್ ತೇರಾ ತುಕ್ಡೆ ಗ್ಯಾಂಗ್’ಗೆ ಬೆಂಬಲ ಕೊಡಲು ಹೇಗೆ ಸಾಧ್ಯ? ತಮ್ಮ ಹಿತಾಸಕ್ತಿಗಾಗಿ, ಎಡಪಂಥೀಯ ಗುಂಪುಗಳಿಗೆ ತಮ್ಮ ಬೌದ್ಧಿಕ ಪ್ರಭಾವವನ್ನು ಗುತ್ತಿಗೆ ನೀಡುವುದಕ್ಕಾಗಿ ಇಂತಹ ಮಾನಸಿಕತೆಯನ್ನು ಪೋಷಣೆ ಮಾಡಿದವರು ತಮ್ಮ ಸೈದ್ಧಾಂತಿಕತೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲವಾದರೆ, ದೇಶಪ್ರೇಮಿ ಸಮುದಾಯ ಅನಿವಾರ್ಯವಾಗಿ ಈ ಕಾರ್ಯವನ್ನು ಮಾಡಿಸಬೇಕಾಗುತ್ತದೆ.
ಮೂಲ ಲೇಖನ: ಮನಮೋಹನ್ ವೈದ್ಯ
ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.