ನವದೆಹಲಿ: ಸ್ಮೃತಿ ಇರಾನಿ ನವ ಭಾರತದ ಪ್ರತಿನಿಧಿ, ವಂಶಾಡಳಿತಕ್ಕೆ ಕಟ್ಟುಬಿದ್ದವರಲ್ಲ. ಹಾಗೆಯೇ, ಭಾರತ ಶ್ರಮ ಆಧಾರಿತ ಪ್ರತಿಫಲವನ್ನು ಬಯಸುತ್ತಿದೆಯೇ ಹೊರತು ಹುಟ್ಟಿನ ಆಧಾರದಿಂದಲ್ಲ.
ಕಳೆದ ವಾರ, ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ಅಮೇಥಿ ಕ್ಷೇತ್ರಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು ಪಕ್ಷ ನಿಲ್ಲಿಸಿತ್ತು. ಇದು ನಿರೀಕ್ಷಿತವೇ ಆಗಿತ್ತು. ಗಾಂಧಿ ಪರಿವಾರದ ಭದ್ರಕೋಟೆ ಎಂದೇ ಕರೆಯಲ್ಪಡುವ ಅಮೇಥಿಯಲ್ಲಿ ಸ್ಮೃತಿ ಪ್ರಬಲ ಅಭ್ಯರ್ಥಿಯೇ ಆಗಿದ್ದಾರೆ.
ಎರಡನೇ ಬಾರಿಗೆ ಸ್ಮೃತಿ ಅವರು ಅಮೇಥಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. 2014ರಲ್ಲಿ ಆಕೆ ಆ ಕ್ಷೇತ್ರದ ಹೊರಗಿನ ದಿಟ್ಟ ಅಭ್ಯರ್ಥಿಯಾಗಿದ್ದರು, ಉತ್ತರಪ್ರದೇಶದ ರಾಜಕೀಯದಲ್ಲಿ ದೃಢ ಅಡಿಪಾಯ ಇಲ್ಲದವರಾಗಿದ್ದರು. ಎಲ್ಲದಕ್ಕೂ ಮಿಗಿಲಾಗಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ರಾಹುಲ್ ಗಾಂಧಿ ಅವರನ್ನು ಅವರು ಎದುರಿಸಿದ್ದರು. ಆದರೂ ಸ್ಮೃತಿ ಸೋತಿದ್ದು ಕೇವಲ 1 ಲಕ್ಷ ಮತಗಳಿಂದ. ಇಲ್ಲಿ ಅವರು ಗಾಂಧಿಗೆ ಕಠಿಣ ಸವಾಲು ಒಡ್ಡಿದ್ದರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ವಿಜಯದ ಅಂತರವನ್ನು 2 ಲಕ್ಷ ಮತಗಳಷ್ಟು ಅವರು ಕುಗ್ಗಿಸಿದ್ದರು ಎಂಬುದು ಗಮನಾರ್ಹ.
ಅಮೇಥಿ ಗಾಂಧಿಗಳ ಭದ್ರಕೋಟೆ. 1980ರಲ್ಲಿ ಮೊದಲ ಬಾರಿಗೆ ಸಂಜಯ್ ಗಾಂಧಿ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸಂಜಯ್ ಗಾಂಧಿ ಅವರ ಸಾವಿನ ಬಳಿಕ, ಅವರ ಸಹೋದರ ರಾಜೀವ್ ಗಾಂಧಿ ಈ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಬಂದಿದ್ದರು.
ರಾಜೀವ್ ಗಾಂಧಿ ಅವರ ಸಾವಿನ ಬಳಿಕ, ಅವರ ಆಪ್ತ ಸ್ನೇಹಿತ ಸತೀಶ್ ಶರ್ಮಾ ಅವರು ಇಲ್ಲಿಂದ ಆರಿಸಿ ಬಂದರು. 1999ರಲ್ಲಿ ಸೋನಿಯಾ ಗಾಂಧಿ ಅಮೇಥಿಯಿಂದ ಜಯಿಸಿ ಬಂದರು. ಬಳಿಕ ತಮ್ಮ ಮಗನಿಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟು, ಅವರು ತಮ್ಮ ಅತ್ತೆ ಇಂದಿರಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಯತ್ತ ಮುಖ ಮಾಡಿದರು. ರಾಹುಲ್ ಗಾಂಧಿ 2004 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಅಮೇಥಿ ಕ್ಷೇತ್ರ ಕಳೆದ ನಾಲ್ಕು ದಶಕಗಳಿಂದ ಗಾಂಧಿ ಕುಟುಂಬದ ಸುರಕ್ಷಿತ ನೆಲೆ ಎಂಬುದು ಇದರಿಂದ ತಿಳಿದು ಬರುತ್ತದೆ. ಆದರೆ 2014 ರಲ್ಲಿ ಈ ಸುರಕ್ಷಿತ ನೆಲೆ ಅಲುಗಾಡಿದೆ, ಇಲ್ಲಿನ ರಾಜಕೀಯ ನೆಲೆ ಸ್ವಯಂ ರಚಿತ ಮೊದಲ ಪೀಳಿಗೆಯ ರಾಜಕಾರಣಿ ಸ್ಮೃತಿ ಇರಾನಿ ಅವರತ್ತ ಹೊರಳುವ ಸೂಚನೆಯನ್ನು ನೀಡಿದೆ.
2014ರಲ್ಲಿ ರಾಹುಲ್ ಗಾಂಧಿ ವಿರುದ್ಧ ಅವರನ್ನು ಕಣಕ್ಕಿಳಿಸಿದಾಗ, ಹಲವಾರು ಮಂದಿ ಅವರಿಗೆ ಅವಕಾಶ ನೀಡಿಲ್ಲ. ಯಾಕೆಂದರೆ, ಆಕೆಗೆ ಬೆಂಬಲಿಗರ ಪಡೆ ಕಮ್ಮಿಯಿತ್ತು, ನಿಗದಿತ ಕ್ಷೇತ್ರವಿರಲಿಲ್ಲ. ಅಲ್ಲದೇ ಅವರು ತಮ್ಮ ಮೊದಲ ಚುನಾವಣೆಯನ್ನು ಚಾಂದಿನಿ ಚೌಕ್ನಲ್ಲಿ ಕಪಿಲ್ ಸಿಬಲ್ ಅವರ ವಿರುದ್ಧ ಸೋತಿದ್ದರು.
ಉತ್ತರಪ್ರದೇಶ ಅತ್ಯಂತ ಸಂಕೀರ್ಣ ರಾಜ್ಯ. ಅಲ್ಲಿ ಜಾತಿ ಮತ್ತು ಸಮುದಾಯ ರಾಜಕೀಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅಮೇಥಿಯಿಂದ ಸ್ಪರ್ಧೆಗಿಳಿಯಲು ಒಪ್ಪಿಕೊಳ್ಳುವ ಮೂಲಕ ಸ್ಮೃತಿ ಅಸಾಧಾರಣ ಹೋರಾಟ ಸ್ಫೂರ್ತಿಯನ್ನು ತೋರಿಸಿದ್ದರು. 2014ರಲ್ಲಿ ಅಲ್ಲಿ ಅವರು ಸೋತಿರಬಹುದು, ಆದರೆ ತಮ್ಮ ಅಮೋಘ ಮಾತುಗಾರಿಕಾ ಕೌಶಲ್ಯ, ವ್ಯಕ್ತಿತ್ವಗಳ ಮೂಲಕ ಅವರು ಮತದಾರರ ಗಮನವನ್ನು ಸೆಳೆದಿದ್ದಾರೆ.
ಚುನಾವಣೆಯ ನಂತರ ಸ್ಮೃತಿ ಅಮೇಥಿಯನ್ನು ಮರೆತು ಬಿಡುತ್ತಾರೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ. ಹಲವಾರು ಬಾರಿ ಅಲ್ಲಿಗೆ ಭೇಟಿ ಕೊಡುವ ಮೂಲಕ ಅಲ್ಲಿನ ಪ್ರಗತಿಗೆ ಶ್ರಮಿಸಿದರು. ರಾಹುಲ್ ಅಮೇಥಿಯನ್ನು ಸುಲಭವಾಗಿ ಪರಿಗಣಿಸಿದ್ದಾರೆ, ಆದರೆ ಸ್ಮೃತಿ 2019ರ ಚುನಾವಣೆಗೆ ಅಲ್ಲಿಂದಲೇ ಸ್ಪರ್ಧಿಸಲು ಹಲವಾರು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ದಶಕಗಳಿಂದ ಗಾಂಧಿಗಳು ಪ್ರತಿನಿಧಿಸಿದರೂ ಅಭಿವೃದ್ಧಿಯಲ್ಲಿ ಕ್ಷೇತ್ರ ಹಿಂದೆ ಬಿದ್ದಿದೆ ಎಂಬುದರ ಮೇಲೆ ಅವರು ಬೆಳಕು ಚೆಲ್ಲಿದರು.
ಗಾಂಧಿಗಳೇ ಪ್ರತಿನಿಧಿಸುತ್ತಾ ಬಂದಿರುವ ಅಮೇಥಿಯಲ್ಲಿ, ಒಳ್ಳೆಯ ರಸ್ತೆ, ನಿರಂತರ ವಿದ್ಯುತ್ ಪೂರೈಕೆಯಂತಹ ಮೂಲ ಸೌಕರ್ಯಗಳೇ ಇಲ್ಲ. ಅಮೇಥಿಯಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಆದರೆ ಅವುಗಳು ಚಾಲನೆಯನ್ನೇ ಕಂಡಿಲ್ಲ. ಆದರೆ ಸ್ಮೃತಿ ಅಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವಂತಹ ಹಲವಾರು ಯೋಜನೆಗಳನ್ನು ಆರಂಭಿಸಿದ್ದಾರೆ. ಉಪ್ಪಿನಕಾಯಿ ಸಂಸ್ಥೆಯಿಂದ ಹಿಡಿದು ಶಸ್ತ್ರಾಸ್ತ್ರ ಉತ್ಪಾದನಾ ಕೈಗಾರಿಕೆಗಳನ್ನೂ ಕಳೆದ ಐದು ವರ್ಷಗಳಿಂದ ಅಮೇಥಿ ಕಂಡಿದೆ. ಎಲ್ಲದರ ಉಸ್ತುವಾರಿಯನ್ನೂ ಸ್ಮೃತಿ ನೋಡಿಕೊಂಡಿದ್ದಾರೆ.
ಇದೆಲ್ಲದರ ಫಲಿತಾಂಶವನ್ನು ನಾವು ಈಗಾಗಲೇ ಕಂಡಿದ್ದೇವೆ. ರಾಹುಲ್ ಗಾಂಧಿ ಮುಂಬರುವ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಸೂಚನೆ ನೀಡಿದೆ. ಒಂದು ಅಮೇಥಿಯಿಂದ, ಮತ್ತೊಂದು ಕೇರಳದ ಸುರಕ್ಷಿತ ನೆಲೆ ‘ವಯನಾಡ್’ನಿಂದ. ಸ್ಮೃತಿ ಬಗ್ಗೆ ಕಾಂಗ್ರೆಸ್ ಭಯಗೊಂಡಿದೆ ಎಂಬುದು ಇದರಿಂದ ಸ್ಪಷ್ಟ. ಆಕೆ ನವ ಭಾರತವನ್ನು ಪ್ರತಿನಿಧಿಸುತ್ತಾಳೆ, ಭಾರತಕ್ಕೀಗ ಶ್ರಮ ಆಧಾರಿತ ಪ್ರತಿಫಲಗಳ ಅಗತ್ಯವಿದೆಯೇ ಹೊರತು, ಹುಟ್ಟು ಆಧಾರಿತವಾದ ಪ್ರತಿಫಲವಲ್ಲ.
ಎಲ್ಲಾ ವಿಧದಲ್ಲೂ, ಸ್ಮೃತಿ ಮತ್ತು ರಾಹುಲ್ ನಡುವಣ ಸ್ಪರ್ಧೆ ನವ ಭಾರತ ಹಾಗೂ ಹಳೆಯ ಭಾರತದ ನಡುವಣ ಸ್ಪರ್ಧೆಯಾಗಿದೆ. ರಾಹುಲ್ ಹಳೆಯದ್ದನ್ನು ಪ್ರತಿನಿಧಿಸುತ್ತಾರೆ, ಕೇವಲ ತನ್ನ ಕುಟುಂಬದ ಹೆಸರು ಮತ್ತು ಕೊನೆಯ ಹೆಸರಿನ ಬಲದಿಂದಲೇ ಇಂದು ರಾಹುಲ್ ಸ್ಥಾನ ಪಡೆದುಕೊಂಡಿರುವುದು. ವಂಶಾಡಳಿತದ ಕುಡಿ ಎಂಬ ಕಾರಣದಿಂದ ಸುಲಭವಾಗಿ ರಾಜಕಾರಣಿಯಾಗಿ ರಾಹುಲ್ ಹೊರಹೊಮ್ಮಿದ್ದಾರೆ.
ಇರಾನಿಯವರು ಮೊದಲ ಪೀಳಿಗೆಯ ರಾಜಕಾರಣಿ, ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದವರು. ನಟಿಯಾಗಿ ವೃತ್ತಿ ಜೀವನ ಆರಂಭಿಸಿ ಅಮೋಘ ಯಶಸ್ಸನ್ನೂ ಕಂಡವರು. ಬಳಿಕ ರಾಜಕೀಯಕ್ಕೆ ಪ್ರವೇಶ ಪಡೆದವರು. ಬಿಜೆಪಿಯಲ್ಲಿ ಕೆಳಸ್ಥರದಿಂದ ಹಿಡಿದು ಮೇಲ್ ಸ್ಥರದವರೆಗೂ ಅವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ತನ್ನ ಪ್ರತಿಸ್ಪರ್ಧಿ ರಾಹುಲ್ ಅವರಿಗಿಂತ ಸ್ಮೃತಿ ಇರಾನಿ 6 ವರ್ಷ ಕಿರಿಯರು. ಆದರೂ ಪ್ರಮುಖ ಸಚಿವ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಸಂಜಯ್ ನಿರುಪಮ್, ತೆಹ್ಸೀನ್ ಪೂನಾವಲ್ಲಾಹ ಮುಂತಾದವರು ಅವರ ವಿರುದ್ಧ ಕೆಟ್ಟ ಪದಗಳ ಟೀಕೆಯನ್ನು ಕೇಳಿದರೂ ಸ್ಮೃತಿ ಎಲ್ಲದಕ್ಕೂ ಗೌರವಯುತವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ, ರಾಹುಲ್ ಗಾಂಧಿ ಅವರಿಗೆ 50 ವರ್ಷಗಳಾಗುತ್ತಾ ಬರುತ್ತಿದೆ. ಆದರೂ ಅವರನ್ನು ಕೆಲ ಪತ್ರಕರ್ತರು ಯುವ ನಾಯಕ ಎಂದು ಕರೆಯುತ್ತಾರೆ. ಇವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆರಂಭಿಸಿದರು. ಸರ್ಕಾರದಲ್ಲಿ ಯಾವುದೇ ಸಚಿವ ಹುದ್ದೆಯನ್ನು ಇವರು ನಿಭಾಯಿಸಿಲ್ಲ ಮತ್ತು ಸಂಸದನಾಗಿ ಇವರ ರೆಕಾರ್ಡ್ ಬಹುತೇಕ ಶೂನ್ಯ. ಅವರ ಕೊನೆಯ ಹೆಸರೇ ಅವರ ಬಲ.
ರಾಹುಲ್ ಗಾಂಧಿ ಅವರು ಭಾರತದ ಉಳಿಗಮಾನ್ಯ ಪಿತೃ ಪ್ರಾಧಾನ್ಯತೆ ಮನಸ್ಥಿತಿಯ ದ್ಯೋತಕವಾಗಿದ್ದಾರೆ. ಆದರೆ ಸ್ಮೃತಿ ದಿಟ್ಟ ಸವಾಲುಗಾರ್ತಿ, ಸಣ್ಣ ನಗರದ ಸ್ವಯಂ ರಚಿತ ಮಹಿಳಾ ರಾಜಕಾರಣಿ.
ಮುಂಬರುವ ಚುನಾವಣೆಯ ಫಲಿತಾಂಶ, ಹಳೆಯ ಮನಸ್ಥಿತಿ, ಶ್ರೀಮಂತ ಪರಂಪರೆ ಗೆಲ್ಲುತ್ತದೋ ಅಥವಾ ನವ ಭಾರತ ಗೆಲ್ಲುತ್ತದೆಯೋ ಎಂಬುದನ್ನು ನಿಶ್ಚಿಯಿಸುತ್ತದೆ. ಅಲ್ಲಿಯವರೆಗೆ ಅಮೇಥಿಯತ್ತ ನಮ್ಮ ಗಮನ ಸದಾ ಇರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.