ಹೆಚ್.ದೇವೀರಪ್ಪ ರವರು ಬರೆದ ‘ಬೆಳುವಲದ ಮಡಿಲಲ್ಲಿ’ ಕಥೆ ಆಧಾರಿತ ಸಿನಿಮಾವನ್ನು 1975 ರಲ್ಲಿ ಗೀತಪ್ರಿಯ ರವರು ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ. ಟಿ.ವಿ.ಬಾಲು ರವರ ಛಾಯಾಗ್ರಹಣ, ರಾಜನ್-ನಾಗೇಂದ್ರ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜೇಶ್, ಕಲ್ಪನಾ,ಬಾಲಕೃಷ್ಣ, ಆದವಾನಿ ಲಕ್ಷ್ಮಮ್ಮ, ವೆಂಕಟರಾವ್ ತಾಳಗೇರಿ, ಮಾಸ್ಟರ್ ನಟರಾಜ್, ಗಿರಿಜಾ ಲೋಕೇಶ್ ಹಾಗೂ ಚಂದ್ರಶೇಖರ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಥೆ:
ಒಂದೂರಲ್ಲಿ ಮಾದ ಎಂಬ ಅನಾಥ ಹುಡುಗನೊಬ್ಬ ಇರುತ್ತಾನೆ. ಅಷ್ಟೇ ಅಲ್ಲದೇ, ಆ ಹುಡುಗ ಊರಿನ ಎಲ್ಲಾ ಮನೆಗಳ ಕೆಲಸಗಳನ್ನು ಮಾಡುತ್ತಾನೆ. ಅವರೆಲ್ಲರ ಪ್ರೀತಿಗೆ ಪಾತ್ರನಾಗಿರುತ್ತಾನೆ ಹಾಗಾಗಿ ಆತನಿಗೆ ಊರಿನವರೇ ಊಟ – ವಸತಿ ನೀಡುತ್ತಿರುತ್ತಾರೆ. ಆತನ ತಂದೆ ಮಾಡಿದ್ದ ಸಾಲಕ್ಕಾಗಿ ಆತನ ಮನೆಯನ್ನು ಜಪ್ತಿ ಮಾಡಿಕೊಂಡ ಸಾಹುಕಾರ (ಬಾಲಕೃಷ್ಣ) ಆತನ ಮನೆಯ ಕೆಲಸಗಳನ್ನು ಮಾಡಲು ಜೀತದಾಳದಂತೆ ದುಡಿಸಿಕೊಳ್ಳುತ್ತಿರುತ್ತಾನೆ. ಮಾದ (ರಾಜೇಶ್) ಬೆಳೆದು ದೊಡ್ಡವನಾದರೂ, ಊರಿನವರ ಎಲ್ಲಾ ಕೆಲಸಗಳನ್ನು ಮಾಡುತ್ತಲೇ ಇರುತ್ತಾನೆ. ಅದೇ ಊರಿನ ಸ್ಫುರದ್ರೂಪಿ ಯುವತಿ (ಕಲ್ಪನಾ) ಕೂಡ ಮಾದನನ್ನು ಪ್ರೀತಿಸುತ್ತಾಳೆ. ಊರಿನ ಹಿರಿಯರು ಸೇರಿ ಮದುವೆ ಕೂಡ ಮಾಡುತ್ತಾರೆ. ಮದುವೆ ನಂತರ ಜೀವನೋಪಾಯಕ್ಕಾಗಿ ವ್ಯವಸಾಯ ಮಾಡಲು ಊರಿನ ಸಾಹುಕಾರನ ಬಳಿ ತನ್ನ ತಂದೆಯ ಜಮೀನು ಬಿಟ್ಟುಕೊಡಲು ಬೇಡಿಕೊಳ್ಳುತ್ತಾನೆ. ಆದರೆ ಸಾಹುಕಾರ ಸುತಾರಾಂ ಒಪ್ಪುವುದಿಲ್ಲ. ಆಗ ಶಾನುಭೋಗರ ಸಹಾಯದಿಂದ ಊರಿನ ಪಾಳು ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡು, ಗಂಡ-ಹೆಂಡತಿ ಇಬ್ಬರೂ ಬೆವರು ಸುರಿಸಿ ದುಡಿಯುತ್ತಾರೆ. ಒಳ್ಳೆ ಬೆಳೆ ಬೆಳೆದು, ಜಪ್ತಿಯಾಗಿದ್ದ ತನ್ನ ತಂದೆ ಕಟ್ಟಿಸಿದ ಮನೆಯನ್ನು ಬಿಡಿಸಿಕೊಂಡು ಮನೆಯಲ್ಲಿ ವಾಸ ಮಾಡುತ್ತಾರೆ. ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನ ತಂದೆ-ತಾಯಿಯಾಗಿ ಸುಖ ಸಂಸಾರ ಸಾಗಿಸುತ್ತಿರುತ್ತಾರೆ.
ಮಕ್ಕಳು ಬೆಳೆದು ದೊಡ್ಡವರಾದ ಮೇಲೆ, ವಿದ್ಯೆಯ ಬೆಲೆಯೇನು ಎಂದರಿತ ಅವಿದ್ಯಾವಂತನಾದ ಮಾದ, ತನ್ನ ಮಕ್ಕಳಿಬ್ಬರನ್ನೂ ಪಟ್ಟಣಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾನೆ. ಮಕ್ಕಳೇನೋ ಪಟ್ಟಣ ಸೇರಿ ಓದಿ ವಿದ್ಯಾವಂತರಾಗುತ್ತಾರೆ. ಹಿರಿಮಗ ತನ್ನಿಷ್ಟದ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಳ್ಳುವುದಾಗಿ, ಅದಕ್ಕೆ ತಂದೆ-ತಾಯಿಯರನ್ನು ಹುಡುಗಿಯನ್ನು ನೋಡಿ, ಒಪ್ಪಿ, ಮದುವೆ ಮಾಡಿಕೊಡಲು ಕೇಳುತ್ತಾನೆ. ಹಳ್ಳಿಯವರಾದ ಮಾದ ಮತ್ತು ಆತನ ಹೆಂಡತಿಗೆ ಪಟ್ಟಣದ ಹುಡುಗಿ ಅಷ್ಟಾಗಿ ಹಿಡಿಸುವುದಿಲ್ಲ. ಆದರೂ ಮಗನ ಇಚ್ಛೆ ಪೂರೈಸಲು ಮದುವೆಗೆ ಒಪ್ಪಿಗೆ ಸೂಚಿಸಿ, ಮದುವೆ ಕಾರ್ಯ ಮುಗಿಸುತ್ತಾರೆ. ಮದುವೆಯಾದ ಮೇಲೆ ಮಗ, ಹೆಂಡತಿಯ ಮಾತಿನಂತೆ, ಪಟ್ಟಣ ಸೇರುತ್ತಾನೆ. ತನ್ನ ಹೆಂಡತಿಯ ಮನೆಯವರೇ ಆತನಿಗೆ ಹೆಚ್ಚಾಗಿರುತ್ತಾರೆ. ತನ್ನ ಹೆತ್ತ ತಂದೆ-ತಾಯಿಯರನ್ನು ಕಡೆಗಣಿಸುತ್ತಾನೆ. ಇದರಿಂದಾಗಿ ಮಾದ ಮತ್ತು ಆತನ ಹೆಂಡತಿ ತುಂಬಾ ನೊಂದುಕೊಳ್ಳುತ್ತಾರೆ. ಒಮ್ಮೆ ಹೆಂಡತಿಯ ಸಲಹೆಯಂತೆ ಮಾದನ ಮಗ ತನ್ನ ತಂದೆಯ ಬಳಿ ಬಂದು ಆಸ್ತಿಯ ಹಕ್ಕಿನ ಕುರಿತು ಮಾತನಾಡುತ್ತಾನೆ. ಆಗ ರೊಚ್ಚಿಗೆದ್ದ ಮಾದ, “ನಾನೂ ನನ್ನ ಹೆಂಡತಿ ಬೆವರು ಸುರಿಸಿ ಸಂಪಾದಿಸಿದ, ಬೆಳೆಸಿದ ಆಸ್ತಿ, ಭೂಮಿ ಇದು. ಇದರಲ್ಲಿ ಮಗನಾದ ನೀನೂ ಬೆವರು ಸುರಿಸಿದ್ದಲ್ಲಿ ಮಾತ್ರ ಆಸ್ತಿಯ ಪಾಲಿನಲ್ಲಿ ನಿನಗೆ ಹಕ್ಕು ಇರುತ್ತದೆ” ಎಂದು ಹೇಳಿ ಆಸ್ತಿಯಲ್ಲಿ ಪಾಲು ನೀಡಲು ಒಪ್ಪುವುದಿಲ್ಲ. ಮಗ ಆಸ್ತಿಯಲ್ಲಿ ಪಾಲು ಕೇಳಲು ಮಾತ್ರ ಬಂದನಲ್ಲ ಎಂದು ಆತನಿಗೆ ಮನಸಿಗೆ ತುಂಬಾ ನೋವಾಗಿ, ತನ್ನದೇ ಜಮೀನಿನಲ್ಲಿ ರಾತ್ರಿ ಒಂದು ಹೊತ್ತಲ್ಲಿ, ಖಾಯಿಲೆಯಿಂದ ಜರ್ಝರಿತನಾದರೂ, ಅಲ್ಲಿಗೆ ಹೋಗಿ, ಮಗುವಂತೆ ಮಗಲಿ, ತನ್ನದೇ ಭೂಮಿಯನ್ನು ತಬ್ಬಿ ಕಣ್ಣೀರು ಹಾಕುತ್ತಾ, ಪ್ರಾಣ ಬಿಡುತ್ತಾನೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ.
ಮದುವೆಯ ನಂತರ ರಕ್ತಸಂಬಂಧಗಳು ತಮ್ಮ ಬೆಲೆ ಉಳಿಸಿಕೊಳ್ಳಲು ಹೆಣಗಾಡುತ್ತವೆ. ಇತ್ತೀಚಿನ ದಿನಗಳಲಂತೂ ಇದು ತುಂಬಾ ಸಾಮಾನ್ಯ ವಿಷಯವಾಗಿದೆ. ಆಸ್ತಿ ಇದ್ದಲ್ಲಿ ಮಾತ್ರ ತಂದೆ-ತಾಯಿಗೊಂದು ಬೆಲೆ ಎನ್ನುವಂತಾಗಿದೆ. ಮದುವೆಯ ನಂತರ ತಮ್ಮ ವೈಯುಕ್ತಿಕ ಹಿತಕ್ಕಾಗಿ ತಮಗಾಗಿ ಬೆವರು ಸುರಿಸಿ, ಸಾಕಿ ಸಲಹಿದ ತಂದೆ-ತಾಯಿಯನ್ನು ದೂರ ಮಾಡಿಕೊಂಡ ಮಕ್ಕಳು ಇಂಥಾ ಸಿನಿಮಾಗಳನ್ನು ನೋಡಬೇಕು. ಪ್ರಭಾವಿತರಾಗಿ ತಮ್ಮ ತಂದೆ-ತಾಯಿಯನ್ನು ಸೇರಿ, ಅವರು ಬದುಕಿರುವಷ್ಟು ಕಾಲ ಜೊತೆಯಾಗಿ ಸಂತೋಷವಾಗಿ ನೋಡಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ.
ಈ ಸಿನಿಮಾದ ನಿರ್ದೇಶಕರಾಗಿ ಗೀತಪ್ರಿಯರವರು ಮೂಲತಃ ಚಿತ್ರಸಾಹಿತಿಗಳು. ಅವರೇ ಬರೆದಿರುವ “ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ, ಒಂದೊಂದು ಬೆವರ ಹನಿ ಮುತ್ತಾಯ್ತದೋ, ರಾಗಿಯ ಜ್ವಾಳದ ತೆನೆಯಾಯ್ತದೋ” ಎಂಬ ಗೀತೆಯಂತೂ ರೈತಗೀತೆಯಾಗಿ ಮನೆಮನ ಸೇರಿದೆ. ಅಷ್ಟೆ ಅಲ್ಲದೇ, ಇದೇ ಸಿನಿಮಾಗಿ ಅವರು ಬರೆದ ನಾಲ್ಕು ಹಾಡುಗಳು ಸಹ ಅತ್ಯುತ್ತಮ ಗೀತೆಗಳಾಗಿವೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಮದುವೆ ನಂತರ ರಕ್ತಸಂಬಂಧಗಳು ತಮ್ಮ ಬೆಲೆ ಉಳಿಸಿಕೊಳ್ಳಲು ಹೆಣಗಾಡುವ ಕುರಿತು ತಿಳಿಯಲು.
2. ತಂದೆ-ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾಗದು ಎಂಬ ಸತ್ಯ ತಿಳಿಯಲು.
3. ಅವಿರತ ಶ್ರಮ ಹಾಗೂ ದುಡಿಮೆ ಜೀವನದಲ್ಲಿ ಯಶಸ್ಸು ತಂದು ಕೊಟ್ಟೆ ಕೊಡುತ್ತದೆ. ಅದು ಹೇಗೆ ಎಂದು ತಿಳಿಯಲು.
4. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.