ದೇಶದ ಅತೀವೇಗದ ಟ್ರೈನ್ 18 ಅನ್ನು ನಿರ್ಮಿಸಿದ ಖ್ಯಾತಿಗೆ ಪಾತ್ರವಾಗಿರುವ ಚೆನ್ನೈ ಮೂಲದ ರೈಲು ಕೋಚ್ ಉತ್ಪಾದಕ ಸಂಸ್ಥೆ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ’ಯು ಈಗ ಚೀನಾವನ್ನು ಹಿಂದಿಕ್ಕಿ, ವಿಶ್ವದ ಅತೀವೇಗದ ರೈಲು ಕೋಚ್ ಉತ್ಪಾದಕ ಎಂಬ ಕೀರ್ತಿಗೆ ಪಾತ್ರವಾಗಿದೆ.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು ಭಾರತೀಯ ರೈಲ್ವೇಯ ಮೂರು ಕೋಚ್ ಉತ್ಪಾದನಾ ಫೆಸಿಲಿಟಿಗಳಲ್ಲಿ ಒಂದು. ರೈಲ್ ಕೋಚ್ ಫ್ಯಾಕ್ಟರಿ ಕಪುರ್ತಾಲ ಮತ್ತು ಮಾಡರ್ನ್ ಕೋಚ್ ಫ್ಯಾಕ್ಟರಿ ರಾಯ್ ಬರೇಲಿ ಮತ್ತೆರಡು ಫೆಸಿಲಿಟಿಗಳಾಗಿವೆ. ಭಾರತೀಯ ರೈಲ್ವೇಯ ಚೆನ್ನೈ ಉತ್ಪಾದನಾ ಫೆಸಿಲಿಟಿಯು 2018ರ ಎಪ್ರಿಲ್ನಿಂದ 2019ರ ಫೆಬ್ರವರಿಯವರೆಗೆ 2,919 ಕೋಚುಗಳನ್ನು ಉತ್ಪಾದನೆ ಮಾಡಿದೆ. ಚೀನಾವು ಈ ಅವಧಿಯಲ್ಲಿ 2,600 ಕೋಚುಗಳನ್ನು ಉತ್ಪಾದನೆ ಮಾಡಿದೆ. 2019ರ ಹಣಕಾಸು ವರ್ಷದಲ್ಲಿ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು 3,200 ಕೋಚುಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಇಂಟಿಗ್ರಲ್ ಕೋಚ್ ಪ್ಯಾಕ್ಟರಿಯು 301 ಕೋಚುಗಳನ್ನು ಉತ್ಪಾದನೆ ಮಾಡಿದೆ. ಹೀಗಾಗಿ ಹಣಕಾಸು ವರ್ಷದ ಅಂತ್ಯಕ್ಕೆ ಅದು ಆರಾಮದಾಯಕವಾಗಿ 3,200 ಕೋಚುಗಳನ್ನು ಉತ್ಪಾದನೆ ಮಾಡುವ ನಿರೀಕ್ಷೆ ಇದೆ. ಈ ವರ್ಷ ನಿರ್ಮಾಣ ಮಾಡಿದ ಕೋಚುಗಳ ಪ್ರಮಾಣ ಕಳೆದ ವರ್ಷದ ಇದೇ ಅವಧಿಗಿಂತ ಶೇ.40ರಷ್ಟು ಹೆಚ್ಚಾಗಿದೆ. ಇದು ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ ಚೀನಾವನ್ನು ಹಿಂದಿಕ್ಕಲು ನೆರವಾಗಿದೆ.
“ತಮಿಳುನಾಡಿನ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿನ ಎಂಜಿನಿಯರ್ಗಳ ಮತ್ತು ತಂಡಗಳ ಅವಿರತ ಪರಿಶ್ರಮ ಮತ್ತು ಶ್ರದ್ಧೆಯ ಫಲವಾಗಿ ನಾವು ಚೀನಾವನ್ನು ಹಿಂದಿಕ್ಕಿ ದೇಶದ ಅತೀದೊಡ್ಡ ರೈಲು ಕೋಚು ಉತ್ಪಾದಕರಾಗಿ ಹೊರಹೊಮ್ಮಿದ್ದೇವೆ”ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
With the sheer dedication and hard work of all the engineers and the entire team of Integral Coach Factory at Chennai, Tamil Nadu, we have now surpassed top Chinese manufacturers to become the largest rail coach maker in the world. pic.twitter.com/zSbqFdTPlL
— Chowkidar Piyush Goyal (@PiyushGoyal) March 15, 2019
ಅಲ್ಟ್ರಾ ಮಾಡರ್ನ್ ‘ಟ್ರೈನ್ 18’ ಎಂಜಿನ್ಲೆಸ್ ಆಗಿದ್ದು, ಮೆಟ್ರೋದಂತೆಯೇ ಸ್ವಯಂಚಾಲಿತ ಕೋಚುಗಳನ್ನು ಹೊಂದಿದೆ. ಸಂಪೂರ್ಣ ಸ್ವದೇಶಿಯವಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಡಿಜಿಟಲ್ ಪ್ಲಾಟ್ಫಾರ್ಮ್, ವೈ-ಫೈ ಸೇವೆ, ಶ್ರೇಷ್ಠ ಒಳಾಂಗಣ ವಿನ್ಯಾಸ ಇತ್ಯಾದಿಗಳನ್ನು ಇದು ಒಳಗೊಂಡಿದೆ. ಈ ಅತ್ಯಾಧುನಿಕ ರೈಲನ್ನು ಭಾರತದಲ್ಲೇ ನಿರ್ಮಾಣ ಮಾಡಿರುವುದರಿಂದ ಇದರ ಆಮದು ವೆಚ್ಚ ಅರ್ಧದಷ್ಟು ಕಡಿಮೆಯಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನವೂ ಸಿಕ್ಕಂತಾಗಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಬುಲೆಟ್ ರೈಲುಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಎಂದೂ ಇದನ್ನು ಬಣ್ಣಿಸಲಾಗಿದೆ. ಇದು ಭಾರತೀಯ ರೈಲ್ವೇಗೆ ಗೇಮ್ ಚೇಂಜರ್ ಕೂಡ ಆಗಲಿದೆ ಎಂದು ಐಸಿಎಫ್ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಟ್ರೈನ್ 18 ಖರೀದಿಗೆ ಹಲವಾರು ದೇಶಗಳು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ. ಐಸಿಎಫ್ನಲ್ಲಿ ಉತ್ಪಾದನೆ ಮಾಡಲಾದ ಟ್ರೈನ್ 18 ಅಲ್ಟ್ರಾ ಮಾಡರ್ನ್ ರೈಲಿನಿಂದಾಗಿ ಭಾರತವು ಶೀಘ್ರದಲ್ಲೇ ಕೋಚ್ ಮತ್ತು ವ್ಯಾಗೋನ್ ಉತ್ಪಾದನೆಯಲ್ಲಿ 200 ಬಿಲಿಯನ್ ಡಾಲರ್ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಜಾಗತಿಕ ಮಾರುಕಟ್ಟೆಗಿಂತ ಅರ್ಧದಷ್ಟು ಕಡಿಮೆ ಬೆಲೆಗೆ ಸೆಮಿ ಸ್ಪೀಡ್ ಟ್ರೈನ್ ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದ್ದು ನರೇಂದ್ರ ಮೋದಿ ಸರ್ಕಾರದ ಕಾರ್ಯಕ್ರಮದ ಅತೀದೊಡ್ಡ ಯಶಸ್ಸಾಗಿದೆ. ಈ ಹಿಂದೆ, ಫ್ರೆಂಚ್ನ ಬಹುರಾಷ್ಟ್ರೀಯ ರೈಲ್ ಟ್ರಾನ್ಸ್ಪೋರ್ಟ್ ಸಂಸ್ಥೆ ಅಲ್ಸ್ಟೋಮ್ ಎಸ್ಎ ಸಿಡ್ನಿ ಮೆಟ್ರೋಗೆ 22 ಮೆಟ್ರೋ ಟ್ರೈನ್ಗಳನ್ನು ರಫ್ತು ಮಾಡಿದೆ. ಇದರ ಆರು ಕಾರ್ ಟ್ರೈನ್ಗಳು ಸಂಪೂರ್ಣವಾಗಿ ವಿನ್ಯಾಸಗೊಂಡಿದ್ದು ಮತ್ತು ಉತ್ಪಾದನೆಗೊಂಡಿದ್ದು ಆಂಧ್ರಪ್ರದೇಶದಲ್ಲಿನ ಕಂಪನಿಯ ಶ್ರೀ ಸಿಟಿ ಪ್ಲಾಂಟ್ನಲ್ಲಿ. ‘ಇದು ನಮಗೆ ಅತ್ಯಂತ ಮೈಲಿಗಲ್ಲಾಗಿದೆ, ಯಾಕೆಂದರೆ ಸಿಡ್ನಿ ಮೆಟ್ರೋ ಪ್ರಾಜೆಕ್ಟ್ ಭಾರತದಿಂದ ಸಂಪೂರ್ಣ ಡೆಲಿವರಿಯನ್ನು ಕಂಡ ಮೊದಲ ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಆಗಿದೆ’ ಎಂದು ಅಲ್ಸ್ಟೋಮ್ ಸೌತ್ ಏಷ್ಯಾ ಮುಖ್ಯಸ್ಥ ಲಿಂಗ್ ಫಂಗ್ ಅಭಿಪ್ರಾಯಿಸಿದ್ದಾರೆ.
ರಾಯ್ ಬರೇಲಿಯಲ್ಲಿನ ಮಾಡರ್ನ್ ಕೋಚ್ ಫ್ಯಾಕ್ಟರಿ (ಎಂಸಿಎಫ್) 1st AC, 2nd AC ಮತ್ತು ಇತರ ಕೋಚುಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತದೆ. ಇದೇ ಮೊದಲ ಬಾರಿಗೆ ಎಂಸಿಎಫ್ 90 ಕೋಚುಗಳನ್ನು ರಾಯ್ ಬರೇಲಿಯಲ್ಲಿನ ಭಾರತೀಯ ರೈಲ್ವೇಯ ಫೆಸಿಲಿಟಿಯಿಂದ ಆಫ್ರಿಕಾ ದೇಶ, ಮೊಂಜಾಬಿಕ್ಗಳಿಗೆ ರವಾನೆ ಮಾಡುತ್ತಿದೆ.
ಎಂಸಿಎಫ್ 2018-19ರ ಮೊದಲ 4 ತಿಂಗಳುಗಳಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಳಗೊಳಿಸಿ 368 ಕೋಚುಗಳನ್ನು ನಿರ್ಮಾಣ ಮಾಡಿದೆ. ಇದು ಅದರ ಹಿಂದಿನ ನಾಲ್ಕು ವರ್ಷಗಳ ಮೊದಲ ನಾಲ್ಕು ತಿಂಗಳುಗಳಲ್ಲಿ ಅದು ತಯಾರಿಸಿ ಕೋಚುಗಳ ಸಂಖ್ಯೆಗೆ ಸಮವಾಗಿದೆ ಮತ್ತು ಕಳೆದ ವರ್ಷ ಇದೇ ಅವಧಿಯಲ್ಲಿ ಉತ್ಪಾದನೆಗೊಂಡ ಕೋಚುಗಳ ಸಂಖ್ಯೆಗಿಂತ ದುಪ್ಪಟ್ಟಾಗಿದೆ. ಎಂಸಿಎಫ್ ಕೋಚುಗಳನ್ನು ತಯಾರಿಸಲು ಆಧುನಿಕ ರೊಬೊಟಿಕ್ಸ್ ಟೆಕ್ನಾಲಜಿಯನ್ನು ಬಳಸುತ್ತಿದೆ. ಮೋದಿ ಸರ್ಕಾರವು 2018-19ರ ಬಜೆಟ್ನಲ್ಲಿ ರಾಯ್ ಬರೇಲಿಯಲ್ಲಿನ ಕೋಚ್ ಫ್ಯಾಕ್ಟರಿಯನ್ನು ಆಧುನೀಕರಿಸಲು ಮತ್ತು ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 1,000 ದಿಂದ 3,000 ದವರೆಗೆ ಹೆಚ್ಚಿಸಲು ರೂ. 480 ಕೋಟಿಗಳನ್ನು ನೀಡಿದೆ.
ಭಾರತದಲ್ಲಿನ ಕ್ರಿಯಾಶೀಲ ಹೂಡಿಕೆ ವಾತಾವರಣವನ್ನು ಜಗತ್ತು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ವಿಶ್ವದ ಅತೀದೊಡ್ಡ ಟೆಕ್ ದಿಗ್ಗಜರು ಮತ್ತು ಉದ್ಯಮಿಗಳು ಈಗಾಗಲೇ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ವಿಶ್ವದಾದ್ಯಂತದ ಹೂಡಿಕೆದಾರರು ಭಾರತದ ಮೇಲೆ ಅಮೋಘ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ, ಇದು ಭಾರತೀಯ ಆರ್ಥಿಕತೆಯ ಅಗತ್ಯವನ್ನು ಈಡೇರಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಉತ್ತೇಜನ ನೀಡಲಿದೆ. ಇದರ ಯಶಸ್ಸಿನ ಶ್ರೇಯಸ್ಸು ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾಗಳಿಗೆ ಸಲ್ಲುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.