ಲೋಕಸಭಾ ಚುನಾವಣೆ ಈಗ ಎಲ್ಲರ ಮನೆಯ ಬಾಗಿಲಿಗೇ ಬಂದಿರುವುದರಿಂದ ಈ ಪ್ರಶ್ನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಇಡೀ ದೇಶದ ಆಡಳಿತದ ಆಗುಹೋಗುಗಳನ್ನು ನಿರ್ವಹಿಸುವ, ನಿಯಂತ್ರಿಸುವ, ಸಮರ್ಥವಾಗಿ ಮುನ್ನಡೆಸುವ ಕೇಂದ್ರ ಸರ್ಕಾರ ಯಾರ ನೇತೃತ್ವದ, ಯಾವ ಪಕ್ಷದ ಸುರಕ್ಷಿತ ಕೈಗಳಿಗೆ ಒಪ್ಪಿಸಬೇಕು ಎಂಬ ಮಹತ್ವದ ಅಂಶ ಈ ಪ್ರಶ್ನೆಯಲ್ಲಡಗಿದೆ. ಹಾಗಾಗಿ ಇದೇನೂ ಸಾಧಾರಣವಾದ ಪ್ರಶ್ನೆಯಲ್ಲ. ‘ಅಯ್ಯೋ, ಚುನಾವಣೆ ಬರುತ್ತೆ, ಹೋಗುತ್ತೆ, ಅದನ್ನು ಕಟ್ಕೊಂಡು ನಮಗೇನು ? ಕೇಂದ್ರದಲ್ಲಿ ಯಾರು ಬಂದರೂ ರಾಗಿ ಬೀಸೋದು ತಪ್ಪುತ್ತಾ ?’ ಎಂದು ಸಿನಿಕತನದ ಪ್ರಶ್ನೆಗಳನ್ನು ಹಲವರು ಕೇಳುವುದು ಸಹಜ.
ಆದರೆ ದೇಶದ ಚುನಾವಣಾ ಇತಿಹಾಸ ಮತ್ತು ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ದೇಶವು ಸಾಗಿರುವ ಅಭಿವೃದ್ಧಿ ಪಥದ ಏರಿಳಿತಗಳತ್ತ ಒಂದು ಒಳನೋಟ ಹರಿಸಿದಾಗ ನಾವೇಕೆ ತಪ್ಪದೆ ಓಟು ಹಾಕಬೇಕು, ತಪ್ಪದೆ ಓಟು ಹಾಕುವುದರಿಂದ ಆಗುವ ಮಹತ್ತರ ಬದಲಾವಣೆಯಾದರೂ ಏನು ಎಂಬುದು ವೇದ್ಯವಾಗದೆ ಇರದು.
ಸ್ವಾತಂತ್ರ್ಯ ಬಂದ ಬಳಿಕ ಮೊಟ್ಟ ಮೊದಲ ಲೋಕಸಭಾ ಚುನಾವಣೆ ಜರುಗಿದ್ದು 1952 ರಲ್ಲಿ. ಸ್ಪರ್ಧಿಸಿದ್ದ ಪಕ್ಷಗಳು ಒಟ್ಟು 53. ಒಟ್ಟು 489 ಲೋಕಸಭಾ ಕ್ಷೇತ್ರಗಳ ಪೈಕಿ 364 ಕ್ಷೇತ್ರಗಳನ್ನು ಶೇ. 45 ಮತ ಹಂಚಿಕೆಯೊಂದಿಗೆ ಕಾಂಗ್ರೆಸ್ ಭರ್ಜರಿಯಾಗಿ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿತ್ತು. ಆದರೆ ಮತದಾನದ ಪ್ರಮಾಣ ಮಾತ್ರ ಕೇವಲ ಶೇ. 45.7 ಆಗಿತ್ತು. 1957 ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ 494 ರಲ್ಲಿ 371 ಸ್ಥಾನ ಗಳಿಸಿ ಅಧಿಕಾರಕ್ಕೇರಿತು. ಆಗಲೂ ಮತದಾನದ ಪ್ರಮಾಣ ಶೇ. 47.8. 1962 ರಲ್ಲಿ ಮಾತ್ರ ಮತದಾನ ಪ್ರಮಾಣ ಶೇ. 55.88 ಕ್ಕೇರಿತು. 1996 ಹಾಗೂ 1998 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಮತದಾನದ ಪ್ರಮಾಣದಲ್ಲಿ ಕುಸಿತ. 2009 ರಲ್ಲಿ ಕೊಂಚ ಏರುಗತಿ ಕಂಡ ಮತದಾನ ಪ್ರಮಾಣವು ದಾಖಲೆ ಹಂತಕ್ಕೇರಿದ್ದು 2014 ರ ಚುನಾವಣೆಯಲ್ಲಿ. ಶೇ. 66.3 ಮತದಾನ ಪ್ರಮಾಣದೊಂದಿಗೆ ಅದು ಸಾರ್ವತ್ರಿಕ ದಾಖಲೆ ಎನಿಸಿತ್ತು. 16 ಬಾರಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 10 ಬಾರಿ ಶೇ. 60 ಕ್ಕಿಂತಲೂ ಕಡಿಮೆ ಮತದಾನ ಪ್ರಮಾಣ. ಕೇವಲ 6 ಬಾರಿ ಮಾತ್ರ ಶೇ. 60 ಕ್ಕಿಂತ ಹೆಚ್ಚಿನ ಮತದಾನ. ಈ ಅಂಕಿ-ಅಂಶಗಳು ಹೇಳುವುದಾದರೂ ಏನನ್ನು ?
ನಮ್ಮ ದೇಶದ ಸುಮಾರು ಶೇ. 30 ರಿಂದ 40 ರಷ್ಟು ಮತದಾರರು ಲೋಕಸಭಾ ಚುನಾವಣೆಯಲ್ಲಿ ಅರಿತೋ ಅರಿಯದೆಯೇ ಮತ ಚಲಾಯಿಸಿಲ್ಲ ಎಂಬುದು 16 ಬಾರಿ ನಡೆದ ಈ ಪಾರ್ಲಿಮೆಂಟ್ ಚುನಾವಣೆಗೆಳ ಫಲಿತಾಂಶದಿಂದ ಸ್ಪಷ್ಟ. ದೇಶಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಶಕಗಳಲ್ಲಿ ಮತದಾರರಿಗೆ ಮತದಾನದ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ ಎಂದು ಒಪ್ಪಿಕೊಳ್ಳಬಹುದಾದರೂ 70 ರ ದಶಕದ ನಂತರವೂ ಮತದಾನ ಪ್ರಮಾಣ ಮಂದಗತಿಯಲ್ಲೇ ಇದೆಯಾದರೆ ಮತದಾರರ ದಿವ್ಯ ನಿರ್ಲಕ್ಷ್ಯದಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲವೆಂದು ಅರ್ಥವಲ್ಲವೇ ?
ಗಮನಿಸಬೇಕಾದ ಅಂಶವೆಂದರೆ, ಸಾಮಾನ್ಯ, ಅಶಿಕ್ಷಿತ ವರ್ಗದ ಮತದಾರರ ಮತದಾನ ಪ್ರಮಾಣದಲ್ಲಿ ಕುಸಿತವಾಗಿಲ್ಲ. ಅದು ಪ್ರತಿ ಚುನಾವಣೆಯಲ್ಲೂ ಏರಿಕೆಯಾಗುತ್ತಲೇ ಇದೆ. ಆದರೆ ಇಳಿಕೆಯಾಗಿರುವುದು ವಿದ್ಯಾವಂತರೆನಿಸಿಕೊಂಡ ವರ್ಗದವರ ಮತದಾನ ಪ್ರಮಾಣದಲ್ಲಿ. ಪ್ರಜ್ಞಾವಂತರೆನಿಸಿಕೊಂಡ ವಿದ್ಯಾವಂತರು ದೇಶದ ಬಗ್ಗೆ ಕಾಳಜಿಯ ಮಾತುಗಳನ್ನು ಯಥೇಚ್ಛವಾಗಿ ಆಡುತ್ತಾರೆ. ಪ್ರಧಾನಿ ಹಾಗೆ ಮಾಡಬೇಕಿತ್ತು, ಹೀಗೆ ವ್ಯವಹರಿಸಬೇಕಿತ್ತು, ಇಂತಹ ಕಾನೂನು ತರಬೇಕಿತ್ತು, ಮುಂತಾದ ದಿವ್ಯ, ಗಂಭೀರ ಸಲಹೆಗಳನ್ನು ಆಗಾಗ ನೀಡುತ್ತಲೇ ಇರುತ್ತಾರೆ. ಆದರೆ ಮತದಾನದ ದಿನ ಸಮೀಪದ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದನ್ನು ಮಾತ್ರ ಸಂಪೂರ್ಣ ನಿರ್ಲಕ್ಷಿಸುತ್ತಾರೆ. ನೀವೇಕೆ ಮತ ಚಲಾಯಿಸಲಿಲ್ಲ ಎಂದು ಕೇಳಿದರೆ, ‘ಅಯ್ಯೋ, ನನ್ನ ಮೊಮ್ಮಗನನ್ನು ಆಡಿಸುತ್ತಿದ್ದೆ ಮರೆತೇ ಹೋಯಿತು’ ಎಂದು ‘ನನಗೆ ಬೂತ್ ನಂಬರ್ ವಿವರ ಇತ್ಯಾದಿ ಯಾರೂ ತಿಳಿಸಲೇ ಇಲ್ಲವೆಂದು’ ಸಬೂಬು ಹೇಳುವವರೇ ಹೆಚ್ಚು. ಕೆಲವು ವಿದ್ಯಾವಂತರು ಮತದಾನಕ್ಕೂ ಮೊದಲು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಪರಿಶೀಲಿಸುವ ಗೊಡವೆಗೆ ಹೋಗದೆ ಮತದಾನದಂದು ಮತಗಟ್ಟೆಗೆ ಹೋಗಿ ಅಲ್ಲಿ ತಮ್ಮ ಹೆಸರಿಲ್ಲವೆಂದು ಗೊತ್ತಾಗಿ ಹಿಡಿಶಾಪ ಹಾಕುತ್ತಾರೆ. ಚುನಾವಣಾ ವ್ಯವಸ್ಥೆಯೇ ಸರಿಯಿಲ್ಲವೆಂದು ಬೊಬ್ಬೆ ಹೊಡೆಯುತ್ತಾರೆ. ಈಗಂತೂ ಮನೆಯಲ್ಲೇ ಕುಳಿತು ಆನ್ಲೈನ್ ವ್ಯವಸ್ಥೆ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಇರುವ/ಇಲ್ಲದಿರುವ ಸಂಗತಿಯನ್ನು ಮೊದಲೇ ಖಚಿತ ಪಡಿಸಿಕೊಳ್ಳಲು ಸಾಧ್ಯವಿದೆ. ಹೀಗಿದ್ದರೂ ವಿದ್ಯಾವಂತ ವರ್ಗದ್ದು ಮತದಾನದ ಬಗ್ಗೆ ದಿವ್ಯ ನಿರ್ಲಕ್ಷ್ಯ. ಮತದಾನ ಮಾಡದೇ ಮನೆಯಲ್ಲೇ ಕಾಲಹರಣ ಮಾಡಿದರೂ, ಆರಿಸಿ ಬಂದ ಪ್ರತಿನಿಧಿಯ ಬಗ್ಗೆ ಮುಂದೆ 5 ವರ್ಷ ಯರ್ರಾಬಿರ್ರಿ ಟೀಕೆ ಟಿಪ್ಪಣಿ ಮಾಡುವುದನ್ನು ಈ ಮಂದಿ ಬಿಡಲಾರರು ! ಈ ಮಂದಿಯ ಇಂತಹ ದಿವ್ಯ ನಿರ್ಲಕ್ಷ್ಯದ ಪರಿಣಾಮವಾಗಿ ನಿಗದಿತ ಪ್ರಮಾಣದ ಮತದಾನ ನಡೆಯದೆ ಶೇಕಡ 50 ಕ್ಕಿಂತಲೂ ಕಡಿಮೆ ಮತ ಪಡೆದ ಅಯೋಗ್ಯ ಅಭ್ಯರ್ಥಿಯೊಬ್ಬ ಆರಿಸಿ ಬರುತ್ತಾನೆ. ಅಯೋಗ್ಯರೇ ಆರಿಸಿ ಬಂದರೆ ಸಮರ್ಥ ಸದೃಢ ಸರ್ಕಾರದ ಸ್ಥಾಪನೆಯಾದರೂ ಹೇಗೆ ಸಾಧ್ಯ ?
ಇನ್ನು ಮತದಾನದಂದು ಸರ್ಕಾರಿ ರಜೆ ಇರುವುದರಿಂದ ಪಿಕ್ನಿಕ್ಕಿಗೆ ಹೋಗುವವರಿಗೂ ಕೊರತೆಯಿಲ್ಲ. ಈ ಬಾರಿ ಕರ್ನಾಟಕದಲ್ಲಿ ಏಪ್ರಿಲ್ 18 ರಂದು ಮೊದಲ ಸುತ್ತಿನ ಮತದಾನ. ಏಪ್ರಿಲ್ 17 ರಂದು ಮಹಾವೀರ ಜಯಂತಿ ಪ್ರಯುಕ್ತ ಸಾರ್ವಜನಿಕ ರಜೆ. ಏಪ್ರಿಲ್ 19 ರಂದು ಗುಡ್ ಫ್ರೈಡೆ ರಜೆ, ಏಪ್ರಿಲ್ 20 ರಂದು ಶನಿವಾರ ರಜೆ, ಏಪ್ರಿಲ್ 21 ಭಾನುವಾರ ಹೇಗೂ ರಜೆ. ಹೀಗೆ ಸಾಲು ಸಾಲು ರಜೆಯ ಸೌಭಾಗ್ಯವನ್ನು ಸರ್ಕಾರಿ ನೌಕರರು ಬಳಸದೆ ಬಿಟ್ಟಾರೆಯೇ ? ಸಾಲು ಸಾಲು ರಜೆ ಇರಲಿ, ಆದರೆ ನಾನು ಮತದಾನದ ದಿನ ತಪ್ಪದೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಿಯೇ ಸಿದ್ಧ ಎನ್ನುವವರು ಎಷ್ಟು ಮಂದಿ ? ಎಲ್ಲ ವಿದ್ಯಾವಂತರು ಹೀಗೆಯೇ ಎಂದು ನನ್ನ ಮಾತಿನ ಅರ್ಥವಲ್ಲ. ಪವಿತ್ರ ಮತ ಚಲಾಯಿಸಲೆಂದೇ ಸ್ವಂತ ಹಣ ಖರ್ಚು ಮಾಡಿಕೊಂಡು ದೂರದ ವಿದೇಶದಿಂದ ಊರಿಗೆ ಬಂದು ಮತದಾನ ಮಾಡುವವರು ಇದ್ದಾರೆ. ನನ್ನ ತಂಗಿಯ ಮಗಳು ಮುಂಬೈನಿಂದ ಶಿವಮೊಗ್ಗೆಗೆ ಮತ ಚಲಾಯಿಸಲೆಂದೇ ರಜೆ ಹಾಕಿ ಬರಬೇಕೆಂದಿದ್ದಾಳೆ. ನಿಜವಾದ ಪ್ರಜ್ಞಾವಂತಿಕೆ ಎಂದರೆ ಇಂಥವರದ್ದು.
ಯಾರಿಗೆ ಓಟು ಹಾಕಬೇಕು ? ಎಂಬ ಪ್ರಶ್ನೆ ಎದುರಾದಾಗ ನಮ್ಮ ವಿವೇಚನೆಯನ್ನು ಸೂಕ್ತವಾಗಿ ಬಳಸಬೇಕಾಗಿದೆ. ಅಯ್ಯೋ, ಯಾರೋ ಒಬ್ಬರಿಗೆ ಹಾಕಿದರಾಯಿತು ಎಂಬ ಉಡಾಫೆ ವರ್ತನೆ ಮತ್ತೆ ಅಯೋಗ್ಯರೇ ಆರಿಸಿ ಬರುವುದಕ್ಕೆ ದಾರಿ ಮಾಡಿಕೊಡುತ್ತದೆ. ಮನೆಗೆ ತರಕಾರಿ ತರಬೇಕಾದರೂ ನಾವು ಮಾರುಕಟ್ಟೆಯಿಂದ ಹಾಗೆಯೇ ಚೀಲಕ್ಕೆ ಸುರಿದು ತರುವುದಿಲ್ಲ ತರಕಾರಿ ಕೊಳೆತಿದೆಯಾ, ಒಣಗಿದೆಯಾ, ಹಸಿಯಾಗಿದೆಯಾ, ಫ್ರೆಶ್ ಆಗಿದೆಯಾ ಎಂದೆಲ್ಲಾ ಪರಿಶೀಲಿಸಿಯೇ ತರುತ್ತೇವೆ. ಮನೆಗೊಬ್ಬ ಕನ್ಯೆಯನ್ನು ತರಬೇಕಾದರೂ ಹೆಣ್ಣಿನ ಮನೆಯ ಕುಲಗೋತ್ರ, ನಡತೆ, ಸ್ವಭಾವಗಳನ್ನೆಲ್ಲಾ ಜಾಲಾಡಿ ಅಳೆದು ಸುರಿದು ನೂರು ಬಾರಿ ಆಲೋಚಿಸಿ ನಿರ್ಧರಿಸುತ್ತೇವೆ. ನಮ್ಮ ಕೌಟುಂಬಿಕ ಸುರಕ್ಷತೆ ನೆಲೆಯಲ್ಲಿ ಇಷ್ಟೆಲ್ಲಾ ಜಾಗರೂಕತೆ ವಹಿಸುವ ನಾವು ದೇಶದ ಹಣೆಬರಹವನ್ನು ನಿರ್ಧರಿಸುವ ಚುನಾವಣೆಯಲ್ಲಿ ಮಾತ್ರ ಏಕೆ ನಿಷ್ಕಾಳಜಿಯಿಂದ ವರ್ತಿಸುತ್ತೇವೆ ? ಹಣದ ಆಮಿಷಕ್ಕೆ, ಜಾತಿಯ ಕಾರಣಕ್ಕೆ ಏಕೆ ಎಂತೆಂಥ ಅಯೋಗ್ಯರನ್ನು ಆರಿಸಿ ನಾವಾಗಿಯೇ ನಮ್ಮ ದೇಶದ ಭವಿಷ್ಯವನ್ನು ಛಿದ್ರಗೊಳಿಸುತ್ತೇವೆ ? ಈ ಬಗ್ಗೆ ಪ್ರಜ್ಞಾವಂತರೆನಿಸಿಕೊಂಡ ನಾವು ಎಂದಾದರೂ ಒಂದು ದಿನ ತಣ್ಣಗೆ ಕುಳಿತು ಆಲೋಚಿಸಿದ್ದೇವೆಯೇ ?
ಇದುವರೆಗೆ ನಡೆದ ಒಟ್ಟು 16 ಸಾರ್ವತ್ರಿಕ ಚುನಾವಣೆಗಳ ಪೈಕಿ ಅತಿ ಹೆಚ್ಚು ಮತದಾನವಾಗಿದ್ದು 2014 ರಲ್ಲಿ (ಶೇ. 63.3) ಎಂಬುದನ್ನು ಎಲ್ಲರೂ ಗಮನಿಸಬೇಕು. ಈ ದಾಖಲೆಯ ಮತದಾನ ಪ್ರಮಾಣದಿಂದಾಗಿ ಒಂದು ಸದೃಢ, ಸಮರ್ಥ ಸರಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಲ್ಲದೆ, ಕಳಂಕ ರಹಿತ, ದಕ್ಷ ಆಡಳಿತ ನಡೆಸಿದ್ದನ್ನು ವಿಪಕ್ಷ ಕಾಂಗ್ರೆಸ್ನ ಕೆಲವು ಹಿರಿಯ ಮುಖಂಡರೇ ಈಗ ಮನಸಾರೆ ಒಪ್ಪಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಇನ್ನುಳಿದ ಎರಡು ಅವಧಿಗೆ ಮೋದಿಯೇ ಪ್ರಧಾನಿಯಾಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಭವಿಷ್ಯ ನುಡಿದಿದ್ದಾರೆ !
ಈ ಭವಿಷ್ಯದ ಮಾತು ಹಾಗಿರಲಿ, 2019 ರ ಚುನಾವಣೆ ದೇಶದ ಜನಕೋಟಿಗೆ ಎರಡು ಮಹತ್ವದ ಸಂದೇಶಗಳನ್ನು ರವಾನಿಸಿದೆ. ಒಂದು : 2014 ರ ಮತದಾನದ ಪ್ರಮಾಣಕ್ಕಿಂತಲೂ ಹೆಚ್ಚು ಮತದಾನ ಈ ಬಾರಿಯಾದಲ್ಲಿ 2014 ರಂತೆ ಈ ಬಾರಿಯೂ ಸದೃಢ ನಾಯಕತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಎರಡು : ದೇಶವೀಗ ಎದುರಿಸುತ್ತಿರುವ ಕ್ಲಿಷ್ಟ, ಸೂಕ್ಷ್ಮ ಸವಾಲುಗಳನ್ನು ದಿಟ್ಟತನದಿಂದ ಎದುರಿಸಲು ಎಂಟೆದೆಯ ಬಂಟನೇ ಅಧಿಕಾರ ಸೂತ್ರಗಳನ್ನು ಕೈಗೆತ್ತಿಕೊಳ್ಳಬೇಕು.
ಹಾಗಾಗಬೇಕಾದರೆ ನಾವು- ನೀವೆಲ್ಲರೂ ಮತದಾನದ ದಿನ ತಪ್ಪದೇ ಮತಗಟ್ಟೆಗೆ ಹೋಗಿ ಸಮರ್ಥ ನಾಯಕತ್ವ ಹೊಂದಿರುವ ಪಕ್ಷದ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಯೋಗ್ಯರು ಯಾರೂ ಕಾಣುತ್ತಿಲ್ಲವೆಂದು ನೋಟಾ ಗುಂಡಿ ಒತ್ತುವ ತಪ್ಪನ್ನು ಮಾತ್ರ ಮಾಡಬೇಡಿ. ಯಾಕೆಂದರೆ ನೋಟಾ ಮತಗಳ ಸಂಖ್ಯೆ ಹೆಚ್ಚಿದಷ್ಟು ಅತ್ಯಂತ ಕೆಟ್ಟ ಅಭ್ಯರ್ಥಿಯೊಬ್ಬನ ಆಯ್ಕೆಗೆ ಅದು ಅವಕಾಶ ಮಾಡಿಕೊಡುತ್ತದೆ. ಅತ್ಯಂತ ಕೆಟ್ಟ ಅಭ್ಯರ್ಥಿ ಆಯ್ಕೆಯಾಗುವುದಕ್ಕಿಂತ ಇರುವುದರಲ್ಲೇ ಸ್ವಲ್ಪವಾದರೂ ಅರ್ಹತೆ ಇರುವ ಅಭ್ಯರ್ಥಿಯನ್ನು ಆರಿಸುವುದು ಉತ್ತಮ ನಡೆಯಲ್ಲವೇ?
ನಿಮಗೆ ನೆನಪಿರಲಿ : ಯಾವುದೇ ಕಾರಣಕ್ಕೆ ನಾವು ಓಟು ಮಾಡುವುದೇ ಇಲ್ಲ ಎನ್ನುವ ಮತದಾರರು ಖಂಡಿತ ಬೇಜವಾಬ್ದಾರಿ ಪ್ರಜೆಗಳು. ಪ್ರಜಾತಂತ್ರ ವ್ಯವಸ್ಥೆಗೆ ಸಮಾಧಿ ಕಟ್ಟುವವರು. ಅಂಥವರು ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ನೈತಿಕವಾಗಿ ಖಂಡಿತ ಅರ್ಹರಲ್ಲ. ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಗರ್ಭಿಣಿ -ಹೆರಿಗೆ ಭತ್ಯೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಹಿರಿಯ ನಾಗರಿಕ ಸೌಲಭ್ಯ, ಇತ್ಯಾದಿ ಯಾವುದನ್ನು ಪಡೆಯುವುದಕ್ಕೂ ಅರ್ಹರಲ್ಲ ಎಂಬ ಭಾವನೆ ತಾನಾಗಿಯೇ ಮೂಡಿ ಬರುವಂತಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಓಟು ಹಾಕುವುದು ಪ್ರಜಾತಂತ್ರ ವ್ಯವಸ್ಥೆಯ ಒಳಿತಿಗೆ ನಾವು ಸಲ್ಲಿಸಬಹುದಾದ ಒಂದು ಪವಿತ್ರ ಕಾರ್ಯ ಎಂಬುದನ್ನು ಮರೆಯದಿರೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.