ಉಡುಪಿ : ಭೂತಕೋಲದ ಮೂಲಕ ನಂಬಿದ ದೈವಗಳನ್ನು ಸಂತುಷ್ಟಗೊಳಿಸೋದು ಕರಾವಳಿಯ ಸಂಪ್ರದಾಯ. ಉಡುಪಿ ಜಿಲ್ಲೆ ಕೊಡವೂರಿನಲ್ಲಿ ವಿಶಿಷ್ಟ ರೀತಿಯ ಭೂತಕೋಲ ನಡೆಯಿತು. ಸಾಂಪ್ರದಾಯಿಕ ಕೋಲದ ವೈಭವವನ್ನು ಮರುಸ್ಥಾಪಿಸುವ ದೃಷ್ಟಿಯಿಂದ ಇಲ್ಲಿ ಕೇವಲ ದೊಂದಿಯ ಬೆಳಕಿನಲ್ಲಿ ದೈವಗಳ ನರ್ತನ ನಡೆಯಿತು.
ದೇವರಿಗಿಂತಲೂ ದೈವಗಳ ಬಗ್ಗೆ ತುಳುನಾಡಿನ ಜನರಿಗೆ ವಿಶೇಷ ಶೃದ್ಧೆ. ಗ್ರಾಮದ ಏಳಿಗೆಗಾಗಿ ಭೂತಕೋಲ ನಡೆಸುವ ಸಂಪ್ರದಾಯ ಶತಮಾನಗಳಿಂದ ನಡೆದುಬಂದಿದೆ. ಇಡೀರಾತ್ರಿ ನಡೆಯುವ ಈ ಭೂತಕೋಲ, ಹಲವು ನಿಗೂಢತೆಗಳ ಒಂದು ವಿಶಿಷ್ಟ ಆಚರಣೆ. ಉಡುಪಿಯ ಕೊಡವೂರು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ವಿಶಿಷ್ಟವಾದ ದೈವಾರಾಧನೆ ನಡೆಯಿತು. ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಡೆದ ಈ ಭೂತಕೋಲದಲ್ಲಿ ಯಾವುದೇ ಆಧುನಿಕ ಬೆಳಕು-ಅಲಂಕಾರದ ವ್ಯವಸ್ಥೆ ಇರಲಿಲ್ಲ. ಬದಲಿಗೆ ಪೂರ್ವಿಕರು ನಡೆಸಿದಂತೆ ಕೇವಲ ದೊಂದಿ ಬೆಳಕಿನ ಮಿನುಗಿನಲ್ಲಿ ದೈವಗಳ ನರ್ತನ ನಡೆಯಿತು.
ದೈವಸ್ಥಾನದ ಆವರಣದ ಸುತ್ತಲೂ ಮುನ್ನೂರಕ್ಕೂ ಅಧಿಕ ದೊಂದಿಗಳನ್ನು ಇರಿಸಲಾಗಿತ್ತು. ಇನ್ನು ಅಡಿಕೆ, ತೆಂಗು, ತಾಳಿಬೊಂಡ ಹೀಗೆ ಅಲಂಕಾರಕ್ಕೂ ಪ್ರಾಕೃತಿಕ ವಸ್ತುಗಳನ್ನು ಮಾತ್ರ ಬಳಸಲಾಗಿತ್ತು. ಶತಮಾನದ ಹಿಂದೆ ದೊಂದಿ ಬೆಳಕಲ್ಲೇ ದೈವಕೋಲ ನಡೆಯುತ್ತಿತ್ತು. ಆದರೆ ಈ ತಲೆಮಾರಿನ ಯಾರೊಬ್ಬರೂ ಅದನ್ನು ನೋಡಿರಲು ಸಾಧ್ಯವಿಲ್ಲ. ಹಾಗಾಗಿ ಮೂಲ ಸ್ವರೂಪದಲ್ಲೇ ಮತ್ತೆ ದೈವಾರಾಧನೆ ನಡೆದದ್ದು ವಿಶೇಷ. ಈ ಮಂದ ಬೆಳಕಿನ ದೊಂದಿಕೋಲ ವಾತಾವರಣದ ದೈವಿಕತೆಯನ್ನು ಮತ್ತಷ್ಟು ಹೆಚ್ಚಿಸಿತು. ದೊಂದಿ ಬೆಳಕಿನ ಕೋಲ ನೋಡೋದಕ್ಕೆ ಸಾವಿರಾರು ಜನರು ಭಾಗವಹಿಸಿದ್ದರು.
ದೈವಗಳು ಸಂತುಷ್ಟವಾಗಿದ್ದರೆ ಊರಿಗೂ ನೆಮ್ಮದಿ ಅನ್ನೋದು ಜನರ ನಂಬಿಕೆ. ಆಚರಣೆಗೆ ಸಾಂಪ್ರದಾಯಿಕತೆಯೆ ಮೆರುಗು ನೀಡಿ ದೈವಗಳ ಜೊತೆಗೆ ಜನರನ್ನೂ ಖುಷಿ ಪಡಿಸಿದ್ದು ಈ ಆಚರಣೆಯ ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.