ಮೊನ್ನೆ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಎಂದೇ ಕರೆಸಿಕೊಳ್ಳುವ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಮುಖ್ಯ ಚುನಾವಣಾ ಆಯುಕ್ತರು ಪ್ರಕಟಿಸುತ್ತಿದ್ದಂತೆಯೇ ಆ ಸುದ್ದಿಯ ಜೊತೆ ಜೊತೆಗೇ “ಇನ್ನು ಮುಂದೆ ವಾಟ್ಸಪ್ ಮೂಲಕ ಚುನಾವಣೆಗೆ ಸಂಬಂಧಿಸಿದ ಸಂದೇಶಗಳನ್ನೇ ಕಳಿಸಬಾರದು, ಫೇಸ್ಬುಕ್ನಲ್ಲಿ ಪಕ್ಷಗಳಿಗೆ/ಅಭ್ಯರ್ಥಿಗಳಿಗೆ ಸಂಬಂಧಿಸಿದ ಪೋಸ್ಟ್ಗಳನ್ನೇ ಹಾಕಬಾರದು, ಟ್ವಿಟರ್ನಲ್ಲಿ ರಾಜಕೀಯ ಸಂಬಂಧಿತ ಸುದ್ದಿಗಳನ್ನೇ ಟ್ವೀಟ್ ಮಾಡಬಾರದು” ಎನ್ನುವ ರೀತಿಯಲ್ಲಿ ಈ ದೇಶದ ಜನಸಾಮಾನ್ಯರನ್ನು ಗಾಬರಿಗೆ ತಳ್ಳುವ ಇನ್ನೊಂದು ಸುದ್ದಿಯನ್ನೂ ಹಲವಾರು ಮಾಧ್ಯಮಗಳು ಬಿತ್ತರಿಸಿದವು. ಹಾಗೊಂದು ವೇಳೆ ವಾಟ್ಸಪ್ನಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಸಂದೇಶಗಳನ್ನು ಹರಡಿದರೆ ಗ್ರೂಪಿನ ಅಡ್ಮಿನ್ಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಸುವ ರೀತಿಯ ಸುದ್ದಿಗಳು ಕೂಡಾ ಪ್ರಸಾರವಾದವು.
ಈ ಸುದ್ದಿಗಳಿಂದ ಕಂಗಾಲಾದ ಅದೆಷ್ಟೋ ಜನರು ವಾಟ್ಸಪ್ ಗ್ರೂಪ್ಗಳ ಅಡ್ಮಿನ್ ಪದವಿಯಿಂದ ಹೊರಬಂದರು. ಅದೆಷ್ಟೋ ಅಡ್ಮಿನ್ಗಳು ತಮ್ಮ ಗ್ರೂಪಿನಲ್ಲಿ ಬೇರೆಯವರು ಸಂದೇಶಗಳನ್ನೇ ಹಾಕದಂತೆ ನಿರ್ಬಂಧಿಸಿದರು. ಇನ್ನೆಷ್ಟೋ ಜನರು ವಿನಾಕಾರಣ ತಮ್ಮನ್ನು ಜೈಲಿಗೆ ಕಳಿಸಬಹುದಾದ ಇದರ ಸಹವಾಸವೇ ಬೇಡವೆಂದು ದೂರ ಸರಿದರು. ಹಲವರ ಟ್ವಿಟರ್ ಖಾತೆಗಳು, ಫೇಸ್ಬುಕ್ ಖಾತೆಗಳು ಭಯದಿಂದ ಮೌನಕ್ಕೆ ಶರಣಾದವು.
ಸುಳ್ಳು ಸುದ್ದಿಗಳನ್ನು, ಮಾನಹಾನಿಕರ ಬರಹಗಳನ್ನು, ತಿರುಚಿದ ಫೋಟೋಗಳನ್ನು, ಕೋಮು ದ್ವೇಷ ಹರಡುವ ಮತ್ತಿತರ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುವುದು ಹಿಂದೆಯೂ ಶಿಕ್ಷಾರ್ಹ ಅಪರಾಧವಾಗಿತ್ತು, ಈಗಲೂ ಶಿಕ್ಷಾರ್ಹ ಅಪರಾಧವೇ ಆಗಿದೆ ಮತ್ತು ಮುಂದೆಯೂ ಶಿಕ್ಷಾರ್ಹ ಅಪರಾಧವೇ ಆಗಿರಲಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಿಚಾರಗಳನ್ನು, ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕರು ಹಂಚಿಕೊಳ್ಳುವುದೇ ಅಪರಾಧ ಎನ್ನುವ ಸುದ್ದಿಯನ್ನು ಮಾತ್ರ ನಂಬಲು ಕಷ್ಟಸಾಧ್ಯ. ಆದರೆ ಸಾಕಷ್ಟು ಜನರು ನಿಜಕ್ಕೂ ಚುನಾವಣಾ ಆಯೋಗ ಅಂತಹದ್ದೊಂದು ಸೂಚನೆಯನ್ನು ನೀಡಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರಾಮರ್ಶಿಸಲು ಹೋಗಲೇ ಇಲ್ಲ. ಏನೊಂದೂ ಪರಾಮರ್ಶಿಸದೇ ಮೌನಕ್ಕೆ ಶರಣಾಗುವ ಭಾರತೀಯರ ಈ ರೀತಿಯ ಭಯವನ್ನೇ ಬಂಡವಾಳ ಮಾಡಿಕೊಂಡು ಕಾಣದ ಕೈ ಒಂದು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿರಬಹುದೇ ಎನ್ನುವುದು ಇದೀಗ ಜನಸಾಮಾನ್ಯರ ಮುಂದಿರುವ ಅನುಮಾನ.
ಒಂದು ವೇಳೆ ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿಯವರು ಈ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇನಾದರೂ ಈ ರೀತಿಯ ಸುದ್ದಿ ಕೇಳಿಬಂದಿದ್ದರೆ ಅದನ್ನು ಹಿಂದೆ ಮುಂದೆ ಯೋಚಿಸದೇ ಒಪ್ಪಿಕೊಳ್ಳಬಹುದಿತ್ತು. ಆದರೆ ಸಾರ್ವಜನಿಕರು ಪರಸ್ಪರ ತಮ್ಮ ತಮ್ಮಲ್ಲಿ ಅಭಿಪ್ರಾಯವನ್ನೇ ಹಂಚಿಕೊಳ್ಳದಂತೆ ತಡೆಯಲು ಈ ಲೋಕಸಭಾ ಚುನಾವಣೆಯೇನೂ ಎಮರ್ಜೆನ್ಸಿಯಲ್ಲ. ಅಷ್ಟಕ್ಕೂ ನೀತಿ ಸಂಹಿತೆ ಹೆಚ್ಚು ಅನ್ವಯವಾಗುವುದು ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಿಗೇ ಹೊರತೂ ಸಾರ್ವಜನಿಕರಿಗಲ್ಲ.
ಬಹುಶಃ ಕಳೆದ ಲೋಕಸಭಾ ಚುನಾವಣೆಯೇ ಸಾಮಾಜಿಕ ಮಾಧ್ಯಮಗಳು ಪ್ರಭಾವ ಹೆಚ್ಚಿದ ನಂತರದ ನಡೆದ ಮೊದಲ ಚುನಾವಣೆ. ಇದೀಗ ಸಾಮಾಜಿಕ ಮಾಧ್ಯಮಗಳ ಪ್ರಭಾವ ಕಳೆದ ಬಾರಿಗಿಂತಲೂ ದ್ವಿಗುಣಗೊಂಡಿದೆ. ಕಾಲದ ಓಟಕ್ಕೆ ಸರಿಯಾಗಿ ಎಲ್ಲವೂ ಬದಲಾಗಲೇ ಬೇಕು. ಸ್ವತಃ ಸಂವಿಧಾನ ಕೂಡಾ ಬದಲಾದ ಕಾಲಕ್ಕೆ ತಕ್ಕಂತೆ ಹಲವಾರು ಬಾರಿ ತಿದ್ದುಪಡಿಯಾಗಿದ್ದು ತಿಳಿದೇ ಇದೆ. ಹಾಗಿರುವಾಗ ಚುನಾವಣಾ ಆಯೋಗ ಕೂಡಾ ಒಂದಷ್ಟು ಬದಲಾವಣೆ ತಂದಿರುವುದು ಸತ್ಯ. ಇದುವರೆಗೂ ಜಾಹೀರಾತೆಂದರೆ ಕೇವಲ ಪತ್ರಿಕೆಗಳು, ಟೀವಿಗಳು, ಮತ್ತು ರೇಡಿಯೋವನ್ನೇ ಅವಲಂಬಿಸಬೇಕಿತ್ತು. ಇದೀಗ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಹಣ ಕೊಟ್ಟು ಜಾಹೀರಾತು ಪ್ರಸಾರ ಮಾಡುವ ಅವಕಾಶವಿದೆ. ಲೈವ್ ವೀಡಿಯೊ ಮೂಲಕ ಜನರನ್ನು ತಲುಪಬಹುದಾಗಿದೆ. ಆದ್ದರಿಂದ ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಖಾತೆ ಹೊಂದಿದ್ದರೆ ಅದರ ವಿವರಗಳನ್ನು ಕೂಡಾ ನೀಡುವಂತೆ ಆಯೋಗ ಸೂಚನೆ ನೀಡಿದೆ. ಅಭ್ಯರ್ಥಿಗಳ ಖರ್ಚು ವೆಚ್ಚಗಳನ್ನು, ಇತರ ಚಟುವಟಿಕೆಗಳನ್ನು ಗಮನಿಸಲು ಅದು ಅನುಕೂಲವಾಗಲಿದೆ ಎನ್ನುವುದು ಆಯೋಗದ ಯೋಚನೆಯಾಗಿದೆ.
ಆದರೆ ಈ ಸುದ್ದಿಯನ್ನೇ ಮುಂದಿಟ್ಟುಕೊಂಡು ಸಾರ್ವಜನಿಕರೂ ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನೂ ಬರೆಯಬಾರದು ಎನ್ನುವ ಸುಳ್ಳು ಸುದ್ದಿಯನ್ನು ಹರಡಿ ಭಯದ ಕಡಲಲ್ಲಿ ಮುಳುಗಿಸಿದ ಆ ಕೈ ಗಳ ಉದ್ದೇಶ ಏನಿರಬಹುದು ಎಂದು ಯೋಚಿಸಿದರೆ ಬೇರೆಯದ್ದೇ ಅನುಮಾನ ಎದ್ದು ಕಾಣುತ್ತದೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಅತ್ಯಂತ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಿ ಗೆದ್ದಿದ್ದು ಮೋದಿ ಸರ್ಕಾರ. ಇಂದಿಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪುವಲ್ಲಿ ಭಾರತೀಯ ಜನತಾ ಪಕ್ಷವೇ ಎಲ್ಲರಿಗಿಂತ ಮುಂದಿದೆ. ಏಕೆಂದರೆ ಭಾರತೀಯ ಜನತಾ ಪಕ್ಷಕ್ಕೆ ಮತ ಚಲಾಯಿಸುವವರಲ್ಲಿ ವಿದ್ಯಾವಂತರೇ ಅಧಿಕ. “ವಿದ್ಯಾವಂತರು ಅಧಿಕ ಸಂಖ್ಯೆಯಲ್ಲಿ ಮತದಾನ ಮಾಡಿದ್ದೇ ನಮ್ಮ ಸೋಲಿಗೆ ಕಾರಣವಾಯಿತು” ಎಂದು ಈ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಹೀಗಿರುವಾಗ ಈ ಚುನಾವಣೆ ಮುಗಿಯುವ ವರೆಗೆ ಸಾಮಾಜಿಕ ಜಾಲತಾಣಗಳ ಮೂಲಕ ರಾಜಕೀಯ ವಿಚಾರಗಳು ವಿದ್ಯಾವಂತರ ನಡುವೆ ಹರಿದಾಡದಂತೆ ತಡೆದು, ಅವರಿಗೆ ಯಾವುದೇ ಮಾಹಿತಿಗಳೂ ದೊರೆಯದಂತೆ ಮಾಡಿ, ಆ ಮೂಲಕ ಭಾರತೀಯ ಜನತಾ ಪಕ್ಷವನ್ನು ಹಾಗೂ ಮೋದಿಯವರನ್ನು ಕೊಂಚ ಮಟ್ಟಿಗೆ ಹಿಮ್ಮೆಟ್ಟಿಸುವ ಪ್ರಯತ್ನವೇ ಈ ಸುಳ್ಳು ಸುದ್ದಿ ಹರಡುವಿಕೆಯ ಹಿಂದಿನ ನಿಜವಾದ ಉದ್ದೇಶವಿರಬಹುದೇ ಎನ್ನುವುದು ಇದೀಗ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನ.
ಯಾವುದಕ್ಕೂ ಚುನಾವಣಾ ಆಯೋಗವೇ ಆದಷ್ಟು ಬೇಗ ಈ ಬಗ್ಗೆ ಸಾರ್ವಜನಿಕರಿಗೆ ಅಧಿಕೃತ ಸ್ಪಷ್ಟನೆ ನೀಡಿದರೆ ಮಾತ್ರ ಈ ಅನುಮಾನ ಬಗೆಹರಿಯಲು ಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.