ವಾಷಿಂಗ್ಟನ್: ಜಾಗತಿಕ ಭಯೋತ್ಪಾದಕ ಎಂದು ಪರಿಗಣಿಸಲ್ಪಡುವ ಎಲ್ಲಾ ಲಕ್ಷಣಗಳನ್ನು ಮಸೂದ್ ಅಝರ್ ಹೊಂದಿದ್ದಾನೆ, ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡದೇ ಇರುವುದು ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಮಾರಕವಾಗುತ್ತದೆ ಎಂದು ಅಮೆರಿಕಾ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಹತ್ವದ ಸಭೆಗೆ ಒಂದು ದಿನ ಮುಂಚಿತವಾಗಿ ಅಮೆರಿಕಾ ಈ ಹೇಳಿಕೆ ನೀಡಿದ್ದು ಮಹತ್ವ ಪಡೆದುಕೊಂಡಿದೆ.
ಮಸೂದ್ ಅಝರ್, ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದನಾ ದಾಳಿಗಳಿಗೆ ಕಾರಣೀಕರ್ತವಾದ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ. ಸಂಸತ್ತು ದಾಳಿ, ಪಠಾನ್ಕೋಟ್ ವಾಯುನೆಲೆ ಮೇಲೆ ದಾಳಿ, ಜಮ್ಮು ಮತ್ತು ಉರಿಯಲ್ಲಿ ಸೇನಾ ಶೀಬಿರಗಳ ಮೇಲೆ ದಾಳಿ ಇತ್ಯಾದಿಗಳನ್ನು ಆತ ನಡೆಸಿದ್ದಾನೆ. ಪುಲ್ವಾಮದಲ್ಲಿ 40 ಯೋಧರನ್ನು ಬಲಿತೆಗೆದುಕೊಂಡ ಕೃತ್ಯವನ್ನೂ ನಾವೇ ಮಾಡಿರುವುದಾಗಿ ಜೈಶೇ ಹೇಳಿಕೊಂಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ಮೂರು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಮಸೂದ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡುವಂತೆ ಪ್ರಸ್ತಾವಣೆಯನ್ನು ಸಲ್ಲಿಸಲು ಮುಂದಾಗಿದೆ. ರಷ್ಯಾ ಇದಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ. ಈ ಹಿಂದೆಯೂ ಈ ದೇಶಗಳು ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ನಡೆಸಿದ್ದವು, ಆದರೆ ಚೀನಾ ಇದಕ್ಕೆ ಅಡ್ಡಿಪಡಿಸಿತ್ತು.
ಭದ್ರತಾ ಮಂಡಳಿಯಲ್ಲಿ ವೀಟೋ ಅಧಿಕಾರ ಹೊಂದಿರುವ ಐದು ದೇಶಗಳ ಪೈಕಿ ಚೀನಾವೂ ಒಂದಾಗಿದೆ, ಆತನ ವಿರುದ್ಧ ಸಮರ್ಪಕವಾದ ಸಾಕ್ಷಿಗಳಿಲ್ಲ ಎಂಬುದು ಅದರ ವಾದವಾಗಿದೆ.
ಪುಲ್ವಾಮದಲ್ಲಿ ನಡೆದ ಹೇಯ ಕೃತ್ಯದ ಬಳಿಕ ಚೀನಾ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಯಾವುದೇ ಅಡ್ಡಿಯುಂಟು ಮಾಡುವುದಿಲ್ಲ ಎಂದು ನಂಬಿರುವುದಾಗಿ ಅಮೆರಿಕಾ, ಫ್ರಾನ್ಸ್ ಮತ್ತು ಬ್ರಿಟನ್ ಭರವಸೆ ವ್ಯಕ್ತಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.